ಅಮೆರಿಕದೊಂದಿಗೆ ಮಾತುಕತೆ ವಿಫಲ; ಮುಂದುವರಿಯಲಿದೆ ಹೊರ್ಮುಜ್ ಜಲ ಮಾರ್ಗದ ನಿರ್ಬಂಧ
ಇಸ್ಲಾಮಾಬಾದ್ ನಲ್ಲಿ ಅಮೆರಿಕ ಮತ್ತು ಇರಾನ್ ಅಧಿಕಾರಿಗಳು ಕದನ ವಿರಾಮ ಮಾತುಕತೆಯನ್ನು ಯಾವುದೇ ನಿರ್ಣಯ ಕೈಗೊಳ್ಳದೆ ಸ್ಥಗಿತಗೊಳಿಸಿದೆ. ಇದರಬಳಿಕ ಹೊರ್ಮುಜ್ ಜಲಸಂಧಿಯ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಟೆಹರಾನ್ ಸ್ಪಷ್ಟಪಡಿಸಿದೆ. ಅಮೆರಿಕದೊಂದಿಗೆ ಮಾತುಕತೆ ಮುಂದುವರಿಸಲಾಗುವುದು. ಒಪ್ಪಂದಕ್ಕೆ ಬರುವವರೆಗೆ ಜಲ ಮಾರ್ಗದ ನಿರ್ಬಂಧ ತೆರವುಗೊಳಿಸಲಾಗುವುದಿಲ್ಲ ಎಂದು ತಿಳಿಸಿದೆ.
ಸಂಗ್ರಹ ಚಿತ್ರ -
ಟೆಹರಾನ್: ಇರಾನ್ (Iran) ಮತ್ತು ಯುಎಸ್ (US) ಅಧಿಕಾರಿಗಳ ನಡುವೆ ಇಸ್ಲಾಮಾಬಾದ್ (Islamabad) ನಲ್ಲಿ ನಡೆಯುತ್ತಿರುವ ಯುದ್ಧ ವಿರಾಮಕ್ಕೆ (ceasefire talks) ಸಂಬಂಧಿಸಿದ ಮಾತುಕತೆಯು ಯಾವುದೇ ಒಪ್ಪಂದ ಮಾಡಿಕೊಳ್ಳದೆ ಸ್ಥಗಿತಗೊಳಿಸಲಾಗಿದೆ. ಇದರ ಬಳಿಕ ಪ್ರತಿಕ್ರಿಯಿಸಿರುವ ಇರಾನ್, ಹೊರ್ಮುಜ್ ಜಲಸಂಧಿಯ (Strait Of Hormuz) ವಿಚಾರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದರಲ್ಲಿ ಯಾವುದೇ ಅವಸರವಿಲ್ಲ. ಕದನ ವಿರಾಮಕ್ಕೆ ಸಂಬಂಧಿಸಿ ಅಮೆರಿಕದೊಂದಿಗೆ ಮಾತುಕತೆಯನ್ನು ಮುಂದುವರಿಸಲಾಗುವುದು. ಅಂತಿಮ ನಿರ್ಣಯಕ್ಕೆ ಬರುವವರೆಗೆ ಜಲ ಮಾರ್ಗದ ನಿರ್ಬಂಧ ತೆರವುಗೊಳಿಸಲಾಗುವುದಿಲ್ಲ ಎಂದು ಟೆಹರಾನ್ (Tehran) ತಿಳಿಸಿದೆ.
ಇಸ್ಲಾಮಾಬಾದ್ ನಲ್ಲಿ ಇರಾನ್ ಮತ್ತು ಯುಎಸ್ ನಡುವೆ ನಡೆದ ಮಾತುಕತೆಯ ಬಳಿಕ ಇರಾನ್ ನ ಅಧಿಕೃತ ಮಾಧ್ಯಮವೊಂದು ಈ ಕುರಿತು ವರದಿ ಮಾಡಿದ್ದು, ಅಮೆರಿಕದೊಂದಿಗೆ ಮಾತುಕತೆಗಳನ್ನು ಮುಂದುವರಿಸಲು ಇರಾನ್ ಗೆ ಯಾವುದೇ ರೀತಿಯ ಅವಸರವಿಲ್ಲ. ಕದನ ವಿರಾಮಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳು ಅಮೆರಿಕದ ಅಂಗಳದಲ್ಲಿದೆ. ವಾಷಿಂಗ್ಟನ್ ಸಮಂಜಸ ಒಪ್ಪಂದಕ್ಕೆ ಒಪ್ಪುವವರೆಗೆ ಹೊರ್ಮುಜ್ ಜಲಸಂಧಿಯ ವಿಚಾರದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಇರಾನ್ ಹೇಳಿದೆ.
ಮುಟ್ಟುಗೋಲು ಹಾಕಿರುವ ಇರಾನ್ ಆಸ್ತಿಗಳನ್ನು ಬಿಡಲು ಅಮೆರಿಕ ಒಪ್ಪಿಗೆ!
ಯುಎಸ್ ಮುಂದಿನ ಸುತ್ತಿನ ಮಾತುಕತೆಗಳಿಗೆ ದಿನಾಂಕ ಅಥವಾ ಸ್ಥಳವನ್ನು ನಿಗದಿಪಡಿಸಿಲ್ಲ. ಹೀಗಾಗಿ ಅದು ತಪ್ಪು ಲೆಕ್ಕಾಚಾರಗಳನ್ನು ಮಾಡಿದೆ. ಸದ್ಯ ಇರಾನ್ ಮತ್ತು ಯುಎಸ್ ನಡುವಿನ ಮಾತುಕತೆಗಳು ಸ್ಥಗಿತಗೊಂಡಿವೆ. ಈಗಾಗಲೇ ನಾವು ನೀಡಿರುವ ಪ್ರಸ್ತಾಪಗಳಿಗೆ ಪ್ರತಿಕ್ರಿಯಿಸುವ ಜವಾಬ್ದಾರಿ ವಾಷಿಂಗ್ಟನ್‌ನ ಮೇಲಿದೆ ಎಂದು ತಿಳಿಸಿದೆ.
ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ಪ್ರಾರಂಭವಾಗಿದ್ದು, ಇದರ ಬಳಿಕ ಹೊರ್ಮುಜ್ ಜಲ ಮಾರ್ಗ ಜಾಗತಿಕ ಸರಕು ಸಾಗಾಟಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕದನ ವಿರಾಮ ಒಪ್ಪಂದದಲ್ಲಿ ಇದು ಪ್ರಮುಖ ವಿಷಯವಾಗಿ ಚರ್ಚೆಯಲ್ಲಿದೆ.
ಈ ಕುರಿತು ಇರಾನ್ ನಿರ್ಣಯವನ್ನು ಯುಎಸ್ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಜಲ ಮಾರ್ಗದ ಸ್ಥಿತಿ ಈಗ ಇರುವಂತೆ ಮುಂದುವರಿಯಲಿದೆ. ಈ ಜಲ ಮಾರ್ಗವು ಜಾಗತಿಕ ತೈಲ ಸಾಗಣೆಗೆ ಪ್ರಮುಖ ದಾರಿಯಾಗಿದೆ. ಹೀಗಾಗಿ ಇಲ್ಲಿ ಉದ್ವಿಗ್ನತೆ ಅತ್ಯಧಿಕವಾಗಿದೆ. ಭೌಗೋಳಿಕ ರಾಜಕೀಯ ಒತ್ತಡದ ನಡುವೆಯೂ ಟೆಹರಾನ್ ಈ ಕುರಿತು ಮಾತುಕತೆಗೆ ಬರಲು ಸಿದ್ಧವಾಗಿದೆ. ಇದಕ್ಕೆ ಅಮೆರಿಕ ಯಾವ ರೀತಿ ಪ್ರತಿಕ್ರಿಯುಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.