Donald Trump: ಭಾರತಕ್ಕೆ ಎಂಟ್ರಿ ಕೊಡಲು ಟೆಸ್ಲಾ ಸಿದ್ಧತೆ; ಎಲಾನ್ ಮಸ್ಕ್ ನಿರ್ಧಾರ ಅನ್ಯಾಯ ಎಂದ ಡೊನಾಲ್ಡ್ ಟ್ರಂಪ್
ಅಮೆರಿಕದ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯು ಭಾರತಕ್ಕೆ ಪ್ರವೇಶಿಸಲು ಮುಂದಾಗಿದ್ದು, ಉದ್ಯೋಗಿಗಳ ನೇಮಕಕ್ಕೆ ಸಜ್ಜಾಗಿದೆ. ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಹೆಚ್ಚುವರಿ ಸುಂಕಗಳನ್ನು ತಪ್ಪಿಸಲು ಭಾರತದಲ್ಲಿ ಕಾರ್ಖಾನೆಯನ್ನು ನಿರ್ಮಿಸುವ ಟೆಸ್ಲಾದ ಯಾವುದೇ ಸಂಭಾವ್ಯ ಯೋಜನೆಗಳನ್ನು 'ಅನ್ಯಾಯ' ಎಂದು ಕರೆದಿದ್ದಾರೆ.

ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್.

ವಾಷಿಂಗ್ಟನ್: ಅಮೆರಿಕದ ಎಲಾನ್ ಮಸ್ಕ್ (Elon Musk) ಒಡೆತನದ ಟೆಸ್ಲಾ (Tesla) ಕಂಪನಿಯು ಭಾರತಕ್ಕೆ ಪ್ರವೇಶಿಸಲು ಮುಂದಾಗಿದ್ದು, ಉದ್ಯೋಗಿಗಳ ನೇಮಕಕ್ಕೆ ಸಜ್ಜಾಗಿದೆ. ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದ ಹೆಚ್ಚುವರಿ ಸುಂಕಗಳನ್ನು ತಪ್ಪಿಸಲು ಭಾರತದಲ್ಲಿ ಕಾರ್ಖಾನೆಯನ್ನು ನಿರ್ಮಿಸುವ ಟೆಸ್ಲಾದ ಯಾವುದೇ ಸಂಭಾವ್ಯ ಯೋಜನೆಗಳನ್ನು 'ತುಂಬಾ ಅನ್ಯಾಯ' ಎಂದು ಕರೆದಿದ್ದಾರೆ. ಎಲಾನ್ ಮಸ್ಕ್ ಅವರೊಂದಿಗಿನ ಜಂಟಿ ಸಂದರ್ಶನದ ವೇಳೆ ಟ್ರಂಪ್ ಅವರು ಕಳೆದ ವಾರ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ನೀಡಿದ ಸಂದರ್ಭದಲ್ಲಿ ಕಾರುಗಳ ಮೇಲಿನ ಭಾರತದ ಹೆಚ್ಚಿನ ಸುಂಕವನ್ನು ಚರ್ಚಿಸಲಾಗಿದೆ ಎನ್ನುವುದನ್ನು ನೆನಪಿಸಿಕೊಂಡರು. ಆದಾಗ್ಯೂ ಎರಡೂ ದೇಶಗಳು ಶೀಘ್ರ ವ್ಯಾಪಾರ ಒಪ್ಪಂದಕ್ಕಾಗಿ ಕೆಲಸ ಮಾಡಲು ಮತ್ತು ಸುಂಕಗಳ ಮೇಲಿನ ಬಿಕ್ಕಟ್ಟನ್ನು ಪರಿಹರಿಸಲು ಒಪ್ಪಿಕೊಂಡಿವೆ ಎಂದು ಅವರು ಹೇಳಿದ್ದಾರೆ.
"ಆರಂಭಿಕ ವ್ಯಾಪಾರ ಒಪ್ಪಂದಕ್ಕೆ ಪೂರಕವಾಗಿ ಕೆಲಸ ಮಾಡಲು ಮತ್ತು ಸುಂಕಗಳ ಬಗೆಗಿನ ಬಿಕ್ಕಟ್ಟನ್ನು ಪರಿಹರಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಂಡಿದ್ದಾರೆ. ಆದರೆ ಈ ನಿಟ್ಟಿನಲ್ಲಿಉಭಯ ದೇಶಗಳು ಸಾಗಬೇಕಾದ ದಾರಿ ಇನ್ನೂ ದೂರವಿದೆ" ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಎಲಾನ್ ಮಸ್ಕ್ ಭಾರತದಲ್ಲಿ ಕಾರು ಮಾರಾಟ ಮಾಡುವುದು ಅಸಾಧ್ಯ ಎಂದು ಟ್ರಂಪ್ ಹೇಳಿದ್ದಾರೆ. ಭಾರತದ ಹೆಚ್ಚು ಸುಂಕಗಳು ಮತ್ತು ಅಲ್ಲಿನ ಸ್ಥಳೀಯ ಆಟೋಮೊಬೈಲ್ ಉದ್ಯಮವನ್ನು ಎದುರಿಸಿ ಕಾರು ಮಾರಾಟ ಮಾಡುವುದು ಮಸ್ಕ್ ಅವರಿಗೆ ಅಷ್ಟು ಸುಲಭದ ಮಾತಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದಾಗ್ಯೂ ಭಾರತ ಸರ್ಕಾರ ಕಳೆದ ಮಾರ್ಚ್‌ನಲ್ಲಿ ತನ್ನ ಹೊಸ ಇವಿ ನೀತಿಯನ್ನು ಜಾರಿಗೊಳಿಸಿದೆ. ಇದರ ಮೂಲಕ ಜಾಗತಿಕ ಇವಿ ಕಾರು ತಯಾರಕರು ಭಾರತದಲ್ಲಿ ಕನಿಷ್ಠ 500 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದರೆ ಮತ್ತು ಕಾರ್ಖಾನೆಯನ್ನು ಸ್ಥಾಪಿಸಿದರೆ ಆಮದು ತೆರಿಗೆಗಳನ್ನು ಶೇ. 15ರಷ್ಟಕ್ಕೆ ಇಳಿಸುವ ವಾಗ್ದಾನ ನೀಡಿದೆ. ʼʼಎಲಾನ್ ಮಸ್ಕ್ ಭಾರತದಲ್ಲಿ ಕಾರ್ಖಾನೆಯನ್ನು ನಿರ್ಮಿಸಲು ನಿರ್ಧರಿಸಿದರೆ ಅದು ಅಮೆರಿಕಕ್ಕೆ ಅನ್ಯಾಯ ಎಸಗಿದಂತಾಗುತ್ತದೆʼʼ ಎಂದು ಟ್ರಂಪ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Modi In US : ಬ್ಲೇರ್ ಹೌಸ್‌ನಲ್ಲಿ ಎಲಾನ್ ಮಸ್ಕ್ , ವಿವೇಕ್ ರಾಮಸ್ವಾಮಿಯನ್ನು ಭೇಟಿ ಮಾಡಿದ ಮೋದಿ
ಭಾರತಕ್ಕೆ ಟೆಸ್ಲಾ ಎಂಟ್ರಿ ಯಾವಾಗ?
ಎಲಾನ್ ಮಸ್ಕ್ ಅವರ ಟೆಸ್ಲಾ ಈ ವರ್ಷದ ಏಪ್ರಿಲ್ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಟೆಸ್ಲಾ ಭಾರತದ ನಗರಗಳಾದ ದಿಲ್ಲಿ ಮತ್ತು ಮುಂಬೈಯಲ್ಲಿ ಕಾರ್ಖಾನೆ ಆರಂಭಕ್ಕೆ ಸ್ಥಳ ಆಯ್ಕೆ ಮಾಡಿಕೊಂಡಿದೆ. ಸದ್ಯ ಟೆಸ್ಲಾ ಭಾರತದಲ್ಲಿ ಯಾವುದೇ ವಾಹನಗಳನ್ನು ತಯಾರಿಸುತ್ತಿಲ್ಲ.
ಟೆಸ್ಲಾ ಭಾರತದ ಎಲೆಕ್ಟ್ರಿಕ್ ವಾಹನ (EV) ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂದು ಬಹಳ ಹಿಂದಿನಿಂದಲೂ ವದಂತಿಗಳಿವೆ. ಆದರೆ ಸ್ಥಳೀಯ ಕಾರ್ಖಾನೆ ಹೂಡಿಕೆಗಳು, ನಿಯಮಗಳು ಮತ್ತು ಹೆಚ್ಚಿನ ತೆರಿಗೆಗಳಿಗೆ ಸಂಬಂಧಿಸಿದ ಹಲವು ಅಡೆತಡೆಗಳನ್ನು ಅಡ್ಡಲಾಗಿ ನಿಂತಿದೆ. ಟೆಸ್ಲಾ ಈ ಹಿಂದೆ ಕಡಿಮೆ ಆಮದು ಸುಂಕಕ್ಕಾಗಿ ಮನವಿ ಸಲ್ಲಿಸಿತ್ತು.