Gulf War: ಸುಸ್ತಾಗಿ ಸಂಧಾನಕ್ಕೆ ಮುಂದಾದ ಟ್ರಂಪ್, ತಾತ್ಕಾಲಿಕ ಯುದ್ಧ ವಿರಾಮಕ್ಕೆ ಪ್ರಸ್ತಾವನೆ, ಇರಾನ್ ಮುಂದೆ 15 ಅಂಶಗಳ ಯೋಜನೆ
ಇಸ್ರೇಲ್‌ನ ಚಾನೆಲ್ 12 ವರದಿ ಪ್ರಕಾರ, ಟ್ರಂಪ್ ಆಡಳಿತವು ಇರಾನ್‌ಗೆ 15 ಅಂಶಗಳ ಪ್ರಸ್ತಾವನೆ ಕಳುಹಿಸಿದೆ. ಈ ಪ್ರಸ್ತಾವನೆಯಲ್ಲಿ ಯುರೇನಿಯಂ ಸಮೃದ್ಧೀಕರಣವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಮತ್ತು ಪ್ರಮುಖ ಸಮುದ್ರ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಮತ್ತೆ ಮುಕ್ತಗೊಳಿಸುವುದು ಪ್ರಮುಖ ಅಂಶಗಳಾಗಿವೆ.
ಮೊಜ್ತಬಾ ಖಮೇನಿ, ಡೊನಾಲ್ಡ್ ಟ್ರಂಪ್ -
ವಾಷಿಂಗ್ಟನ್, ಮಾ.25: ಮಧ್ಯಪ್ರಾಚ್ಯದಲ್ಲಿ ಬಿಗಡಾಯಿಸಿರುವ ಯುದ್ಧ (Gulf War) ಸನ್ನಿವೇಶವನ್ನು ತಿಳಿಗೊಳಿಸಲು ಇರಾನ್‌ನೊಂದಿಗೆ (iran) ಮಹತ್ವದ ಮಾತುಕತೆಗಳು ನಡೆಯುತ್ತಿವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ. “ಒಪ್ಪಂದ ಮಾಡಲು ಬಹಳ ಆಸಕ್ತಿ ಹೊಂದಿರುವ ಸರಿಯಾದ ವ್ಯಕ್ತಿಗಳೊಂದಿಗೆ ನಾವು ಮಾತನಾಡುತ್ತಿದ್ದೇವೆ. ಎರಡೂ ದೇಶಗಳು ಈಗ ಮಾತುಕತೆಯಲ್ಲಿ ತೊಡಗಿವೆ” ಎಂದು ಟ್ರಂಪ್ ತಿಳಿಸಿದ್ದಾರೆ. ಮೂರು ವಾರಗಳಿಂದ ಮುಂದುವರಿದಿರುವ ಯುದ್ಧವನ್ನು ನಿಲ್ಲಿಸುವ ದಿಕ್ಕಿನಲ್ಲಿ ಈ ಮಾತುಕತೆಗಳು ನಡೆಯುತ್ತಿವೆ ಎಂದು ವರದಿಗಳು ಸೂಚಿಸಿವೆ.
ಇಸ್ರೇಲ್‌ನ ಚಾನೆಲ್ 12 ವರದಿ ಪ್ರಕಾರ, ಟ್ರಂಪ್ ಆಡಳಿತವು ಇರಾನ್‌ಗೆ 15 ಅಂಶಗಳ ಪ್ರಸ್ತಾವನೆ ಕಳುಹಿಸಿದೆ. ಈ ಪ್ರಸ್ತಾವನೆಯಲ್ಲಿ ಯುರೇನಿಯಂ ಸಮೃದ್ಧೀಕರಣವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಮತ್ತು ಪ್ರಮುಖ ಸಮುದ್ರ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಮತ್ತೆ ಮುಕ್ತಗೊಳಿಸುವುದು ಪ್ರಮುಖ ಅಂಶಗಳಾಗಿವೆ.
ಈ ಯೋಜನೆ ಅಮೆರಿಕಾ ಮತ್ತು ಇಸ್ರೇಲ್‌ನ ಯುದ್ಧ ಗುರಿಗಳನ್ನು ಒಳಗೊಂಡಂತೆ ಕಾಣುತ್ತಿದ್ದರೂ, ತ್ವರಿತವಾಗಿ “ಪ್ರಾಥಮಿಕ ಒಪ್ಪಂದ”ಕ್ಕೆ ಟ್ರಂಪ್ ಒತ್ತಾಯಿಸುತ್ತಿದ್ದಾರೆ ಎಂಬ ಆತಂಕ ಇಸ್ರೇಲ್‌ನಲ್ಲಿ ವ್ಯಕ್ತವಾಗಿದೆ. ಟ್ರಂಪ್ ಅವರ ವಿಶೇಷ ದೂತ ಸ್ಟೀವ್ ವಿಟ್ಕಾಫ್ ಮತ್ತು ಅಳಿಯ ಜರೇಡ್ ಕುಶ್ನರ್ ಈ ಪ್ರಕ್ರಿಯೆಯನ್ನು ರೂಪಿಸಿದ್ದು, ಒಂದು ತಿಂಗಳ ಯುದ್ಧ ವಿರಾಮ ಘೋಷಣೆ ಮಾಡಿ, ಆ ಅವಧಿಯಲ್ಲಿ 15 ಅಂಶಗಳ ಒಪ್ಪಂದದ ಬಗ್ಗೆ ಮಾತುಕತೆ ನಡೆಸುವ ಯೋಜನೆ ಇದೆ ಎಂದು ಮೂಲಗಳು ತಿಳಿಸಿವೆ.
ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಈ ಪ್ರಸ್ತಾವನೆಯನ್ನು ಪಾಕಿಸ್ತಾನದ ಮೂಲಕ ಇರಾನ್‌ಗೆ ಕಳುಹಿಸಲಾಗಿದೆ. ಪಾಕಿಸ್ತಾನ ಮಧ್ಯವರ್ತಿತ್ವ ವಹಿಸಲು ಮುಂದಾಗಿದೆ. ವರದಿ ಪ್ರಕಾರ, 15 ಅಂಶಗಳಲ್ಲಿ 14 ಅಂಶಗಳ ವಿವರ ಬಹಿರಂಗವಾಗಿದೆ.
ಟ್ರಂಪ್ ಪ್ರಸ್ತಾಪಿಸಿದ ಪ್ರಮುಖ ಷರತ್ತುಗಳು
- ಇರಾನ್ ತನ್ನ ಪ್ರಸ್ತುತ ಅಣು ಸಾಮರ್ಥ್ಯವನ್ನು ಸಂಪೂರ್ಣವಾಗಿ ವಿಸರ್ಜಿಸಬೇಕು
- ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ಬದ್ಧತೆ ತೋರಬೇಕು
- ಇರಾನ್ ಭೂಭಾಗದಲ್ಲಿ ಯುರೇನಿಯಂ ಸಮೃದ್ಧೀಕರಣ ನಿಷೇಧ
- ಸುಮಾರು 60% ಶುದ್ಧತೆಯ 450 ಕೆಜಿ ಯುರೇನಿಯಂ ಸಂಗ್ರಹವನ್ನು International Atomic Energy Agency (IAEA)ಗೆ ಹಸ್ತಾಂತರಿಸಬೇಕು
- ನತಾಂಜ್, ಇಸ್ಫಹಾನ್ ಮತ್ತು ಫೋರ್ಡೋ ಅಣು ಕೇಂದ್ರಗಳನ್ನು ಸಂಪೂರ್ಣವಾಗಿ ಮುಚ್ಚಬೇಕು
- IAEAಗೆ ಸಂಪೂರ್ಣ ಪ್ರವೇಶ ಮತ್ತು ಮೇಲ್ವಿಚಾರಣೆಯ ಅವಕಾಶ ನೀಡಬೇಕು
- ಪ್ರಾದೇಶಿಕ ಪ್ರತಿನಿಧಿ ಸಂಘಟನೆಗಳ ಮೂಲಕ ನಡೆಯುವ ಪ್ರಭಾವವನ್ನು ತ್ಯಜಿಸಬೇಕು
- ಪ್ರಾಕ್ಸಿಗಳಿಗೆ ಹಣಕಾಸು ಮತ್ತು ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಬೇಕು
- ಹಾರ್ಮುಜ್ ಕಣಿವೆಯನ್ನು ಮುಕ್ತ ಸಮುದ್ರ ಮಾರ್ಗವಾಗಿ ನಿರ್ವಹಿಸಬೇಕು
- ಕ್ಷಿಪಣಿ ಕಾರ್ಯಕ್ರಮದ ವ್ಯಾಪ್ತಿ ಮತ್ತು ಪ್ರಮಾಣವನ್ನು ಮಿತಿಗೊಳಿಸಬೇಕು
- ಭವಿಷ್ಯದಲ್ಲಿ ಕ್ಷಿಪಣಿಗಳನ್ನು ಸ್ವಯಂ ರಕ್ಷಣೆಗೆ ಮಾತ್ರ ಬಳಸಬೇಕು
ಇರಾನ್‌ಗೇನು ಲಾಭ?
ಈ ಷರತ್ತುಗಳಿಗೆ ಬದಲಿ, ಇರಾನ್‌ಗೆ ಕೆಲವು ಪ್ರಮುಖ ಸೌಲಭ್ಯಗಳನ್ನು ನೀಡುವ ಸಾಧ್ಯತೆ ಇದೆ:
- ಅಂತರರಾಷ್ಟ್ರೀಯ ಸಮುದಾಯ ವಿಧಿಸಿರುವ ಎಲ್ಲಾ ಆರ್ಥಿಕ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದು
- ಅಮೆರಿಕಾ ಸಹಾಯದಿಂದ ನಾಗರಿಕ ಅಣು ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಲು ಅವಕಾಶ
ಬುಷೆಹರ್ ಅಣು ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆಗೆ ಸಹಾಯ
- ಒಪ್ಪಂದ ಉಲ್ಲಂಘನೆಗೆ ಮತ್ತೆ ನಿರ್ಬಂಧ ಹೇರಲು ಬಳಸುವ “ಸ್ನ್ಯಾಪ್‌ಬ್ಯಾಕ್” ವ್ಯವಸ್ಥೆಯನ್ನು ತೆಗೆದುಹಾಕುವುದು
ಇಸ್ರೇಲ್ ಆತಂಕ, ಇರಾನ್ ನಿರಾಕರಣೆ
ಈ ಪ್ರಸ್ತಾವನೆ ಬಗ್ಗೆ ಇಸ್ರೇಲ್ ಆತಂಕ ವ್ಯಕ್ತಪಡಿಸಿದ್ದು, ಪೂರ್ಣ ಷರತ್ತುಗಳನ್ನು ಜಾರಿಗೆ ತರದೆ ಯುದ್ಧವನ್ನು ನಿಲ್ಲಿಸಿದರೆ ಇರಾನ್‌ಗೆ ಹೆಚ್ಚು ಲಾಭವಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಇನ್ನೊಂದೆಡೆ, ತಾನು ಟ್ರಂಪ್ ಜೊತೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ಇರಾನ್ ನಿರಾಕರಿಸಿದೆ. ಅಮೆರಿಕಾ ಮತ್ತು ಇಸ್ರೇಲ್ ದಾಳಿಗಳನ್ನು ಮುಂದುವರಿಸಿದರೆ, ಗಲ್ಪ್ ಪ್ರದೇಶದ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ಹೆಚ್ಚಿಸುವುದಾಗಿ ಎಚ್ಚರಿಕೆ ನೀಡಿದೆ. ಇದರ ನಡುವೆ, ಇಸ್ರೇಲ್ ಪಾಕಿಸ್ತಾನದಲ್ಲಿ ನಡೆಯಲಿರುವ ಯಾವುದೇ ಮಾತುಕತೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಇರಾನ್‌ನ ಸೈನಿಕ ಗುರಿಗಳ ಮೇಲೆ ದಾಳಿ ಮುಂದುವರಿಸುವುದಾಗಿ ತಿಳಿಸಿದೆ.