ಬೀಜಿಂಗ್ ತೊರೆಯುವ ಮುನ್ನ ಚೀನಾ ಉಡುಗೊರೆಗಳನ್ನು ಎಲ್ಲರೆದುರೇ ಕಸದ ಬುಟ್ಟಿಗೆ ಎಸೆದ ಡೊನಾಲ್ಡ್ ಟ್ರಂಪ್: ಕಾರಣವೇನು?
Donald Trump: ಚೀನಾ ಅಧಿಕಾರಿಗಳು ಗೌರವಪೂರ್ವಕವಾಗಿ ನೀಡಿದ್ದ ಎಲ್ಲ ಅಧಿಕೃತ ಉಡುಗೊರೆಗಳು, ಬ್ಯಾಡ್ಜ್‌ಗಳು, ಸ್ಮರಣಿಕೆಗಳು ಮತ್ತು ಬರ್ನರ್ ಫೋನ್‌ಗಳನ್ನು ಟ್ರಂಪ್ ವಿಮಾನ ನಿಲ್ದಾಣದ ಮೆಟ್ಟಿಲುಗಳ ಬಳಿಯೇ ನೇರವಾಗಿ ಕಸದ ಬುಟ್ಟಿಗೆ ಎಸೆದಿದ್ದಾರೆ. ಸದ್ಯ ಈ ಕ್ರಮ ವಿಶ್ವದೆಲ್ಲೆಡೆ ಚರ್ಚೆಗೆ ಕಾರಣವಾಗಿದೆ.
ಡೊನಾಲ್ಡ್ ಟ್ರಂಪ್ ಮತ್ತು ಶಿ ಜಿನ್‌ಪಿಂಗ್ -
ಬೀಜಿಂಗ್, ಮೇ 16: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಮತ್ತು ಅವರ ಉನ್ನತ ಮಟ್ಟದ ನಿಯೋಗವು ಎರಡು ದಿನಗಳ ಚೀನಾ ಪ್ರವಾಸ ಮುಗಿಸಿ ಬೀಜಿಂಗ್‌ನಿಂದ ನಿರ್ಗಮಿಸಿದೆ. ಅಚ್ಚರಿ ಎಂದರೆ ಚೀನಾ ಅಧಿಕಾರಿಗಳು ಗೌರವಪೂರ್ವಕವಾಗಿ ನೀಡಿದ್ದ ಎಲ್ಲ ಅಧಿಕೃತ ಉಡುಗೊರೆಗಳು, ಬ್ಯಾಡ್ಜ್‌ಗಳು, ಸ್ಮರಣಿಕೆಗಳು ಮತ್ತು ಬರ್ನರ್ ಫೋನ್‌ಗಳನ್ನು ಟ್ರಂಪ್ ವಿಮಾನ ನಿಲ್ದಾಣದ ಮೆಟ್ಟಿಲುಗಳ ಬಳಿಯೇ ನೇರವಾಗಿ ಕಸದ ಬುಟ್ಟಿಗೆ ಎಸೆದಿದ್ದಾರೆ. ಶ್ವೇತಭವನದ ವಿಶೇಷ ಭದ್ರತಾ ಸಿಬ್ಬಂದಿ ಮತ್ತು ಸೀಕ್ರೆಟ್ ಸರ್ವೀಸ್ ಅಧಿಕಾರಿಗಳು ಏರ್ ಫೋರ್ಸ್ ಒನ್ ವಿಮಾನದೊಳಗೆ ಚೀನಾ ಮೂಲದ ಯಾವುದೇ ವಸ್ತುವನ್ನು ಕೊಂಡೊಯ್ಯದಂತೆ ಕಟ್ಟುನಿಟ್ಟಿನ ಸಂಪೂರ್ಣ ಆದೇಶ ಜಾರಿಗೊಳಿಸಿದ್ದರು. ಚೀನಾದ ಸಂಭಾವ್ಯ ಅತ್ಯಾಧುನಿಕ ಗೂಢಚರ್ಯ, ಹ್ಯಾಕಿಂಗ್ ಮತ್ತು ಡಿಜಿಟಲ್ ಟ್ರ್ಯಾಕಿಂಗ್ ತಂತ್ರಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಈ ಕಠಿಣ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ವಾಸ್ತವವಾಗಿ, ಈ ಕಟ್ಟುನಿಟ್ಟಾದ ಭದ್ರತಾ ಶಿಷ್ಟಾಚಾರವು ಅಮೆರಿಕ ನಿಯೋಗಗಳಿಗೆ ಹೊಸದೇನಲ್ಲ. ಆದರೆ ಈ ಬಾರಿ ಸಾರ್ವಜನಿಕರ ಕಣ್ಣೆದುರೇ ಇದು ಬಹಿರಂಗವಾಗಿ ಸಂಭವಿಸಿದೆ. ಚೀನಾ ಪ್ರವಾಸದ ವೇಳೆ ಟ್ರಂಪ್, ಎಲಾನ್ ಮಸ್ಕ್ ಮತ್ತು ಜೆನ್ಸನ್ ಹುವಾಂಗ್ ಸೇರಿದಂತೆ ಇಡೀ ನಿಯೋಗವು ತಮ್ಮ ವೈಯಕ್ತಿಕ ಎಲೆಕ್ಟ್ರಾನಿಕ್ ಸಾಧನಗಳನ್ನು ಅಮೆರಿಕದಲ್ಲೇ ಬಿಟ್ಟು ಬಂದಿತ್ತು.
ಚೀನಾದ ಉಡುಗೊರೆ ಕಸದ ಬುಟ್ಟಿಗೆ ಎಸೆದ ಡೊನಾಲ್ಡ್ ಟ್ರಂಪ್:
⚫️ Just now...
— Mr. M (@The_M_Doctrine) May 15, 2026
As the presidential plane boarded to depart China, the entire American delegation threw all the gifts they had received from the Chinese side into a large trash can (gifts, badges, pins, souvenirs, cell phones).
Nothing Chinese was allowed on the plane. pic.twitter.com/gVDhyqIqKg
ಪ್ರವಾಸದ ಸಮಯದಲ್ಲಿ ಪ್ರಮುಖ ಡೇಟಾ ಹ್ಯಾಕ್ ಆಗದಂತೆ ತಡೆಯಲು ಜಿಪಿಎಸ್ ಮತ್ತು ವೈಫೈ ಸಿಗ್ನಲ್‌ಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವ ವಿಶೇಷ 'ಫ್ಯಾರಡೆ ಬ್ಯಾಗ್'ಗಳಲ್ಲಿ ಮೊಬೈಲ್‌ಗಳನ್ನು ಸುರಕ್ಷಿತವಾಗಿ ಇಡಲಾಗಿತ್ತು. ಪ್ರವಾಸದುದ್ದಕ್ಕೂ ಕೇವಲ ತಾತ್ಕಾಲಿಕ ಬರ್ನರ್ ಫೋನ್‌ಗಳು ಮತ್ತು ಇಮೇಲ್‌ಗಳನ್ನು ಮಾತ್ರ ಬಳಸಲಾಗಿತ್ತು. ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ನಾವು ಕೂಡ ಅವರ ಮೇಲೆ ತೀವ್ರ ನಿಗಾ ಇಟ್ಟಿರುತ್ತೇವೆ" ಎಂದು ಮುಕ್ತವಾಗಿ ಒಪ್ಪಿಕೊಂಡರು.
ಶಾಂತಿ ಮಾತುಕತೆಗಾಗಿ ಪಾಕಿಸ್ತಾನಕ್ಕೆ ಅಮೆರಿಕ ನಿಯೋಗ ಕಳಿಸಲ್ಲ ಎಂದ ಡೊನಾಲ್ಡ್ ಟ್ರಂಪ್
ಚೀನಾ ಉಡುಗೊರೆಗಳಲ್ಲಿ ರಹಸ್ಯ ಆಲಿಸುವ ಸಾಧನಗಳನ್ನು ಇರಿಸುವ ಇತಿಹಾಸವಿರುವುದರಿಂದ ಈ ಮುನ್ನೆಚ್ಚರಿಕೆ ವಹಿಸಲಾಗಿದೆ. ಉದಾಹರಣೆಗೆ 2023ರಲ್ಲಿ ಬೀಜಿಂಗ್‌ನ ಬ್ರಿಟಿಷ್ ರಾಯಭಾರ ಕಚೇರಿಯ ಸಿಬ್ಬಂದಿಗೆ ನೀಡಲಾಗಿದ್ದ ಸಾಂಪ್ರದಾಯಿಕ ಟೀಪಾಟ್‌ನಲ್ಲಿ ಇಂತಹದ್ದೇ ಒಂದು ರಹಸ್ಯ ಸಾಧನ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಟ್ರಂಪ್ ಮತ್ತು ಚಿನಾ ಅಧ್ಯಕ್ಷ ಶಿ ಜಿನ್‌ಪಿಂಗ್ ಆಪ್ತರಂತೆ ಕಂಡರೂ, ತೆರೆಯ ಮರೆಯಲ್ಲಿ ಅಮೆರಿಕದ ಭದ್ರತಾ ಏಜೆಂಟರು ಮತ್ತು ಚೀನಾ ಅಧಿಕಾರಿಗಳ ನಡುವೆ ತೀವ್ರ ಘರ್ಷಣೆಗಳು ನಡೆಯುತ್ತಲೇ ಇವೆ.
ಬೀಜಿಂಗ್‌ನ ಟೆಂಪಲ್ ಆಫ್ ಹೆವನ್‌ನಲ್ಲಿ ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್ ಬಂದೂಕು ಕೊಂಡೊಯ್ಯುವುದಕ್ಕೆ ಚೀನಾ ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಮತ್ತೊಂದೆಡೆ, ಚೀನಾ ವರದಿಗಾರರ ನೂಕುನುಗ್ಗಲಿನಲ್ಲಿ ಶ್ವೇತಭವನದ ಸಹಾಯಕಿಯೊಬ್ಬರು ತಳ್ಳಲ್ಪಟ್ಟು ತೀವ್ರವಾಗಿ ಗಾಯಗೊಂಡರು. ಒಟ್ಟಾರೆಯಾಗಿ, ಟ್ರಂಪ್ ಅವರ ಈ ಎರಡನೇ ಅವಧಿಯ ಮೊದಲ ಚೀನಾ ಪ್ರವಾಸವು ಯಾವುದೇ ಮಹತ್ವದ ಒಪ್ಪಂದಗಳಿಲ್ಲದೆ ಮುಕ್ತಾಯಗೊಂಡಿತು.