ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟ್ಟೊಗೆ ಮಿಸ್ ಯೂನಿವರ್ಸ್ 2026 ಕಿರೀಟ; ಟಾಪ್ 30ರಲ್ಲೇ ಮುಗಿದ ಭಾರತದ ಪಯಣ
Miss Universe 2026: ಸ್ಯಾನ್ ಜುವಾನ್‌ನಲ್ಲಿ ನಡೆದ 75ನೇ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟ್ಟೊ ಕಿರೀಟವನ್ನು ಮುಡಿಗೇರಿಸಿಕೊಂಡರು. ಸಂಶೋಧನಾ ಮನೋವಿಜ್ಞಾನದಲ್ಲಿ ಉನ್ನತ ಪದವಿ ಪಡೆದಿರುವ ಜೆನಿಫರ್ ಬರೇಟೋ, ಸಮಾಜ ಸೇವೆ ಮತ್ತು ರಕ್ಷಣಾ ಇಲಾಖೆಯಲ್ಲೂ ಕೆಲಸ ಮಾಡಿದ್ದಾರೆ. ಭಾರತದ ಕಜಿಯಾ ಲಿಜ್ ಮೆಜೊ ಟಾಪ್ 30ರಲ್ಲಿ ಸ್ಥಾನ ಗಳಿಸಿದ್ದರು.
ಮಿಸ್ ಯೂನಿವರ್ಸ್ 2026 ಜೆನ್ನಿಫರ್ ಬ್ಯಾರೆಟ್ಟೊ -
ಸ್ಯಾನ್ ಜುವಾನ್, ನ. 25: 75ನೇ ಆವೃತ್ತಿಯ ಮಿಸ್ ಯೂನಿವರ್ಸ್ 2026 (Miss Universe 2026) ಸೌಂದರ್ಯ ಸ್ಪರ್ಧೆಯಲ್ಲಿ ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟ್ಟೊ ವಿಜೇತರಾಗಿ ಹೊರಹೊಮ್ಮಿದ್ದಾರೆ. ನವೆಂಬರ್ 24ರಂದು ನಡೆದ ಭವ್ಯ ಫಿನಾಲೆಯಲ್ಲಿ ಇವರು ಕಿರೀಟ ಧರಿಸಿದ್ದು, ಮಿಸ್ ಯೂನಿವರ್ಸ್ ಇತಿಹಾಸದಲ್ಲಿ ಪ್ರಶಸ್ತಿ ಗೆದ್ದ ಮೊದಲ ತಾಯಿ ಮತ್ತು ವಿವಾಹಿತ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ
116 ಸ್ಪರ್ಧಿಗಳ ನಡುವೆ ನಡೆದ ಈ ಸ್ಪರ್ಧೆಯಲ್ಲಿ ವೆನೆಜುವೆಲಾದ ಕ್ಲಾರಾ ಗೋಯೆಟ್ಜ್ ಮತ್ತು ಡೊಮಿನಿಕನ್ ರಿಪಬ್ಲಿಕ್‌ನ ಮೆಲಿಸ್ಸಾ ನುನೆಜ್ ಅಂತಿಮ ಸುತ್ತಿನ ಪ್ರಬಲ ಸ್ಪರ್ಧಿಗಳಾಗಿದ್ದರು. ಭಾರತವನ್ನು ಪ್ರತಿನಿಧಿಸಿದ್ದ ಕೇರಳಂನ ಕಾನೂನು ವಿದ್ಯಾರ್ಥಿನಿ ಕಜಿಯಾ ಲಿಜ್ ಮೆಜೊ ಟಾಪ್ 30ರವರೆಗೆ ತಲುಪಿದರೂ, ಟಾಪ್ 12 ಸುತ್ತಿಗೆ ಪ್ರವೇಶ ಪಡೆಯುವಲ್ಲಿ ವಿಫಲರಾದರು.
ಜೆನ್ನಿಫರ್ ಬ್ಯಾರೆಟ್ಟೊಗೆ ಮಿಸ್ ಯೂನಿವರ್ಸ್ ಪಟ್ಟ ವಿಡಿಯೋ ನೋಡಿ:
¡Llegó la SEXTA! 👑 Emotiva la coronación de nuestra soberana Jennifer Barreto como nueva embajadora universal. 💎 https://t.co/Czppai4U1p
— Miss Universe Puerto Rico (@muniversepr) November 25, 2026
ಮಿಸ್ ಯೂನಿವರ್ಸ್ ಮುಡಿಗೇರಿಸಿಕೊಂಡ ಮೊದಲ ತಾಯಿ
ಮಿಸ್ ಯೂನಿವರ್ಸ್ ಸ್ಪರ್ಧೆಯ ಇತಿಹಾಸದಲ್ಲೇ ತಾಯಿಯೊಬ್ಬರು ಕಿರೀಟ ಗೆದ್ದಿರುವುದು ಇದೇ ಮೊದಲು. 2023ರಲ್ಲಿ ವಿವಾಹಿತ ಮಹಿಳೆಯರು ಮತ್ತು ತಾಯಂದಿರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ ಬಳಿಕ ನಡೆದ ಬದಲಾವಣೆಯ ಮಹತ್ವದ ಮೈಲಿಗಲ್ಲಾಗಿ ಜೆನ್ನಿಫರ್ ಗೆಲುವು ಗುರುತಿಸಿಕೊಂಡಿದೆ. 27 ವರ್ಷದ ಜೆನ್ನಿಫರ್ ಬ್ಯಾರೆಟ್ಟೊ ಅವರಿಗೆ ಏಳು ವರ್ಷದ ಪೆನೆಲೋಪ್ ಎಂಬ ಮಗಳಿದ್ದಾಳೆ.
ಸುಂದರ ಪ್ರಯಾಣದ ನೆನಪು ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ
ಯಾರು ಜೆನ್ನಿಫರ್ ಬ್ಯಾರೆಟೊ ?
ಜೆನ್ನಿಫರ್ ಬ್ಯಾರೆಟ್ಟೊ ಕೇವಲ ರೂಪದರ್ಶಿಯಷ್ಟೇ ಅಲ್ಲದೆ, ಮನೋವಿಜ್ಞಾನ ಮತ್ತು ಕ್ಲಿನಿಕಲ್ ಸೋಶಿಯಲ್ ವರ್ಕ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2021ರಲ್ಲಿ ಟೆಕ್ಸಾಸ್‌ನ ಫೋರ್ಟ್ ಹುಡ್‌ನಲ್ಲಿ ಅಮೆರಿಕ ರಕ್ಷಣಾ ಇಲಾಖೆಯ ಅಡಿಯಲ್ಲಿ ಫ್ಯಾಮಿಲಿ ಅಡ್ವೊಕಸಿ ಪ್ರೋಗ್ರಾಂನಲ್ಲಿ ಶಿಕ್ಷಕಿ ಮತ್ತು ಬಿಕ್ಕಟ್ಟು ಸ್ಪಂದಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಸೇನಾ ಕುಟುಂಬಗಳಲ್ಲಿ ಕೌಟುಂಬಿಕ ಹಿಂಸೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ ಹಾಗೂ ಸಮುದಾಯದ ಯೋಗಕ್ಷೇಮಕ್ಕಾಗಿ ತಡೆಗಟ್ಟುವಿಕೆ ತಜ್ಞೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಲ್ ಆರ್. ಡಾರ್ನಾಲ್ ಆರ್ಮಿ ಮೆಡಿಕಲ್ ಸೆಂಟರ್‌ನಲ್ಲಿ ಸ್ವಯಂಸೇವಕಿಯಾಗಿಯೂ ಸೇವೆ ಸಲ್ಲಿಸಿದ್ದು, ಸೇನಾ ಸಮುದಾಯದ ಜತೆಗಿನ ಅವರ ನಂಟು ವಿಶೇಷವಾಗಿದೆ.
ಪೋರ್ಟೊ ರಿಕೊಗೆ 20 ವರ್ಷಗಳ ಬಳಿಕ ಕಿರೀಟ
ತವರು ನೆಲ ಸ್ಯಾನ್ ಜುವಾನ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಜೆನ್ನಿಫರ್ ಗೆಲುವು ಸಾಧಿಸಿದ್ದು, ಪೋರ್ಟೊ ರಿಕೊಗೆ ಒಲಿದ ಆರನೇ ಮಿಸ್ ಯೂನಿವರ್ಸ್ ಕಿರೀಟ ಇದಾಗಿದೆ. 2006ರಲ್ಲಿ ಝುಲೆಯ್ಕಾ ರಿವೆರಾ ಗೆದ್ದ ನಂತರ 20 ವರ್ಷಗಳ ಬಳಿಕ ಪೋರ್ಟೊ ರಿಕೊಗೆ ಈ ಗೌರವ ಲಭಿಸಿದೆ. 2001ರಲ್ಲಿ ಡೆನಿಸ್ ಕ್ವಿನೋನೆಸ್ ನಂತರ ತವರಿನ ಪ್ರೇಕ್ಷಕರ ಎದುರು ಪ್ರಶಸ್ತಿ ಗೆದ್ದ ಎರಡನೇ ಪೋರ್ಟೊ ರಿಕನ್ ಸುಂದರಿ ಎಂಬ ಹೆಗ್ಗಳಿಕೆಗೂ ಜೆನ್ನಿಫರ್ ಪಾತ್ರರಾಗಿದ್ದಾರೆ. ನಿರ್ಗಮಿತ ಮಿಸ್ ಯೂನಿವರ್ಸ್ ಮೆಕ್ಸಿಕೊದ ಫಾತಿಮಾ ಬಾಷ್ ಜೆನ್ನಿಫರ್‌ಗೆ ಕಿರೀಟ ತೊಡಿಸಿದರು.
ಥಾಯ್ಲೆಂಡ್‌ನ ಓಪಲ್ ಸುಚಾಟಾ ಚಯವಾಂಗ್ಸ್ರಿಗೆ ವಿಶ್ವ ಸುಂದರಿ ಪಟ್ಟ
2021ರಲ್ಲಿ ವಿಶ್ವ ಸುಂದರಿ ಪಟ್ಟ ಗೆದ್ದಿದ್ದ ಭಾರತ
2021ರಲ್ಲಿ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ ಕಿರೀಟ ಗೆದ್ದ ನಂತರ ಭಾರತವು ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ಸತತ ಐದು ವರ್ಷಗಳಿಂದ ಕಾಯುತ್ತಿದೆ. ಇದಕ್ಕೂ ಮೊದಲು 1994ರಲ್ಲಿ ಸುಶ್ಮಿತಾ ಸೇನ್ ಮತ್ತು 2000ರಲ್ಲಿ ಲಾರಾ ದತ್ತ ಭಾರತಕ್ಕೆ ವಿಶ್ವ ಸುಂದರಿ ಕಿರೀಟವನ್ನು ತಂದುಕೊಟ್ಟಿದ್ದರು.