ʻವೈಭವ್ ಸೂರ್ಯವಂಶಿಗೆ 300 ರನ್ ಹೊಡೆಯುವ ತಾಕತ್ತಿದೆʼ: ಬಾಲ್ಯದ ಕೋಚ್ ಮನೀಶ್ ಓಜಾ ಭವಿಷ್ಯ!
ಯುಎಇ ವಿರುದ್ಧ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿ ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ ಒಂದು ದಿನ ತ್ರಿಶತಕವನ್ನೂ ಬಾರಿಸಲಿದ್ದಾರೆ ಎಂದು ಅವರ ಬಾಲ್ಯದ ಕೋಚ್ ಮನೀಶ್ ಓಜಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವೈಭವ್ ಅವರ ದಾಖಲೆಗಳನ್ನು ಮುರಿಯಲು ಅವರಿಂದ ಮಾತ್ರ ಸಾಧ್ಯ ಎಂದಿದ್ದಾರೆ.
ವೈಭವ್ ಸೂರ್ಯವಂಶಿ 300 ರನ್ ಹೊಡೆಯಬಲ್ಲರು ಎಂದ ಬಾಲ್ಯದ ಕೋಚ್. -
ನವದೆಹಲಿ: ದೋಹಾದಲ್ಲಿ ಮಂಗಳವಾರ ವೈಭವ್ ಸೂರ್ಯವಂಶಿ (Vaibhav Sooryavanshi) ಸೃಷ್ಟಿಸಿದ ದಾಖಲೆಗಳು ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದೆ. ಅದರಂತೆ ಅವರ ಬಾಲ್ಯದ ಕೋಚ್ ಮನೀಶ್ ಓಜಾ (Manish Ojha) ಕೂಡ ತಮ್ಮ ಶಿಷ್ಯ ವೈಭವ್ ಬಗ್ಗೆ ನುಡಿದಿದ್ದ ಭವಿಷ್ಯ ಇದೀಗ ನಿಜವಾಗಿದೆ. 15ರ ವಯಸ್ಸಿನ ಈ ಯುವ ಆಟಗಾರನ ಕ್ರಿಕೆಟ್ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸಿರುವ ಕೋಚ್, ಎರಡು ವರ್ಷಗಳ ಹಿಂದೆಯೇ ವೈಭವ್ ಒಂದು ದಿನ ದ್ವಿಶತಕ ಸಿಡಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಆದರೆ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಯಲ್ಲಿ ಯುಎಇ ವಿರುದ್ಧ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿ ತಮ್ಮ ಕೋಚ್ ಭವಿಷ್ಯವನ್ನು ನಿಜವಾಗಿಸಿದ್ದಾರೆ.
ಇಂಡಿಯಾ ಟುಡೇ ಸಂದರ್ಶನದಲ್ಲಿ ಮಾತನಾಡಿದ ಮನೀಶ್ ಓಜಾ, "ನನಗೆ ನಿಜವಾಗಿಯೂ ನಂಬಿಕೆಯಿದೆ. ಒಂದು ದಿನ ವೈಭವ್ ಸೂರ್ಯವಂಶಿ ತ್ರಿಶತಕವನ್ನೂ ಬಾರಿಸಬಹುದು. ಇಂದಿನ ಅವರ ಪ್ರದರ್ಶನ ಅದ್ಭುತವಾಗಿತ್ತು. ಆಕ್ರಮಣಕಾರಿ, ಮನರಂಜನಾತ್ಮಕ ಹಾಗೂ ಅತ್ಯುತ್ತಮ ಬ್ಯಾಟಿಂಗ್‌ನ ಸಂಪೂರ್ಣ ಪ್ಯಾಕೇಜ್ ಇದಾಗಿತ್ತು," ಎಂದು ಅವರು ಶ್ಲಾಘಿಸಿದ್ದಾರೆ.
ಸೂರ್ಯವಂಶಿ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ದ್ವಿಶತಕ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೇವಲ 52 ಎಸೆತಗಳಲ್ಲಿ 200 ರನ್‌ಗಳ ಗಡಿ ದಾಟಿದ ಅವರು, ಈ ಹಿಂದಿನ ದಾಖಲೆಯನ್ನು ಬರೋಬ್ಬರಿ 51 ಎಸೆತಗಳಿಂದ ಹಿಂದಿಕ್ಕಿದ್ದಾರೆ. 2024ರಲ್ಲಿ ನ್ಯೂಜಿಲೆಂಡ್‌ನ ಚಾಡ್ ಬೋವ್ಸ್ 103 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದು ಈ ಹಿಂದಿನ ವಿಶ್ವ ದಾಖಲೆಯಾಗಿತ್ತು.
ಯುಎಇ ವಿರುದ್ಧ ವೈಭವ್ ನಡೆಸಿದ ಬ್ಯಾಟಿಂಗ್ ಅಬ್ಬರ ನಿಜಕ್ಕೂ ಅದ್ಭುತವಾಗಿತ್ತು. ಕೇವಲ 28 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕದ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಅಲ್ಲದೆ, ಒಂದೇ ಇನಿಂಗ್ಸ್‌ನಲ್ಲಿ 28 ಸಿಕ್ಸರ್‌ಗಳನ್ನು ಸಿಡಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದರು. ಅವರು ಎದುರಿಸಿದ 53 ಎಸೆತಗಳಲ್ಲಿ 35 ಎಸೆತಗಳು ಬೌಂಡರಿ ಗೆರೆ ದಾಟಿದವು. ಅವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡ ಕೇವಲ 14.3 ಓವರ್‌ಗಳಲ್ಲಿ 250 ರನ್‌ಗಳ ಗುರಿಯನ್ನು ಬೆನ್ನಟ್ಟಿ ಐತಿಹಾಸಿಕ ಗೆಲುವು ದಾಖಲಿಸಿತು.
"ಒಂದು ರೀತಿಯಲ್ಲಿ ಅವರು ಏಕದಿನ ಕ್ರಿಕೆಟ್ ಅನ್ನು ನೋಡುವ ನಮ್ಮ ದೃಷ್ಟಿಕೋನವನ್ನು ಬದಲಿಸುತ್ತಿದ್ದಾರೆ. ಇಷ್ಟು ಆಕ್ರಮಣಕಾರಿ ರೀತಿಯಲ್ಲಿ ರನ್ ಗಳಿಸಿ 14 ಅಥವಾ 15 ಓವರ್‌ಗಳಲ್ಲೇ ಪಂದ್ಯ ಗೆಲ್ಲಬಹುದು ಎಂದಾದರೆ, ಇದೇ ಮನಸ್ಥಿತಿಯೊಂದಿಗೆ ತಂಡವೊಂದು 50 ಓವರ್‌ಗಳ ಕಾಲ ಬ್ಯಾಟ್ ಮಾಡಿದರೆ ಏನೆಲ್ಲಾ ಸಾಧಿಸಬಹುದು ಎಂಬುದನ್ನು ಊಹಿಸಿ," ಎಂದು ಕೋಚ್ ಅಭಿಪ್ರಾಯಪಟ್ಟಿದ್ದಾರೆ.
ದಾಖಲೆಗಳನ್ನು ಮುರಿಯುವುದು ವೈಭವ್ ಸೂರ್ಯವಂಶಿಗೆ ಈಗ ಅಭ್ಯಾಸವಾಗಿ ಬಿಟ್ಟಿದೆ. ತಮ್ಮ ಚೊಚ್ಚಲ ಐಪಿಎಲ್ ಋತುವಿನಲ್ಲೇ ರಾಜಸ್ಥಾನ್ ರಾಯಲ್ಸ್ ಪರ ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸಿ, ಐಪಿಎಲ್‌ನಲ್ಲಿ ಭಾರತೀಯ ಆಟಗಾರನೊಬ್ಬ ದಾಖಲಿಸಿದ ಅತ್ಯಂತ ವೇಗದ ಶತಕದ ದಾಖಲೆ ನಿರ್ಮಿಸಿದ್ದರು. 2026ರ ಐಪಿಎಲ್ ಋತುವಿನಲ್ಲಿ ಒಟ್ಟು 776 ರನ್ ಗಳಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಅಲ್ಲದೆ, 65 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಐಪಿಎಲ್‌ನ ಒಂದು ಆವೃತ್ತಿಯಲ್ಲಿ ಕ್ರಿಸ್ ಗೇಲ್ ದಾಖಲಿಸಿದ್ದ 59 ಸಿಕ್ಸರ್‌ಗಳ ದಾಖಲೆಯನ್ನೂ ಹಿಂದಿಕ್ಕಿದ್ದರು.
Never in doubt! 🏅 Vaibhav Sooryavanshi is the Player of the Match for an innings we will remember for a very long time! 👏🙌 Scorecard ▶️ https://t.co/6Vwvc5BnWQ #TeamIndia | #RisingStarsAsiaCup | #INDAvUAE https://t.co/TbYuy7mjam
— BCCI (@BCCI) November 24, 2026
ಐಪಿಎಲ್‌ಗೆ ಮಾತ್ರ ವೈಭವ್ ಅವರ ಅಬ್ಬರ ಸೀಮಿತವಾಗಿಲ್ಲ. ಕಳೆದ ಡಿಸೆಂಬರ್‌ನಲ್ಲಿ ಭಾರತದ ದೇಶಿ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಹಾರ ತಂಡದ ಪರ ಕೇವಲ 84 ಎಸೆತಗಳಲ್ಲಿ 190 ರನ್ ಸಿಡಿಸಿದ್ದರು. ಈ ವರ್ಷದ ಆರಂಭದಲ್ಲಿ ನಡೆದ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175 ರನ್ ಗಳಿಸಿ ತಮ್ಮ ತಂಡವನ್ನು ಗೆಲ್ಲಿಸಿದ್ದರು.
"ಸದ್ಯಕ್ಕೆ ವೈಭವ್ ನಿರ್ಮಿಸಿರುವ ಈ ದಾಖಲೆಗಳನ್ನು ಮುರಿಯುವ ಸಾಮರ್ಥ್ಯ ಯಾರಲ್ಲಿಯೂ ಕಾಣುತ್ತಿಲ್ಲ. ಇದಕ್ಕಾಗಿ ಬಹುಶಃ ಕ್ರಿಸ್ ಗೇಲ್ ಮತ್ತೆ ಕ್ರಿಕೆಟ್‌ಗೆ ಮರಳಬೇಕಾಗಬಹುದು! ವೈಭವ್ ಅವರ ದಾಖಲೆಗಳನ್ನು ಮುರಿಯಲು ಸಾಧ್ಯವಿರುವುದು ವೈಭವ್ ಒಬ್ಬರಿಗೇ," ಎಂದು ಮನೀಶ್ ಓಜಾ ಹೇಳಿದ್ದಾರೆ.
ಕೇವಲ 28 ಎಸೆತಗಳಲ್ಲಿ ಲಿಸ್ಟ್ ಎ ಶತಕ; ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ!
ವೈಭವ್ ದಾಖಲೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ
"ಅವರು ದಾಖಲೆಗಳನ್ನು ಅಥವಾ ಅಂಕಿಅಂಶಗಳನ್ನು ನೋಡುವುದಿಲ್ಲ. ಅವರ ಗಮನ ಇರುವುದು ಚೆಂಡಿನ ಮೇಲೆ ಮಾತ್ರ. ಚೆಂಡು ತಮ್ಮ ಹೊಡೆತದ ವ್ಯಾಪ್ತಿಗೆ ಬಂದರೆ ಅದನ್ನು ಹೊಡೆಯಬೇಕು ಎಂಬ ಒಂದೇ ಒಂದು ವಿಷಯ ಅವರಿಗೆ ಗೊತ್ತು. ಎದುರಾಳಿ ಯಾರೇ ಇರಲಿ, ಪರಿಸ್ಥಿತಿ ಏನೇ ಇರಲಿ, ಚೆಂಡು ಹೊಡೆಯುವ ವ್ಯಾಪ್ತಿಯಲ್ಲಿದ್ದರೆ ಅವರು ಹೊಡೆದೇ ತೀರುತ್ತಾರೆ," ಎಂದು ಕೋಚ್ ಮನೀಶ್ ಓಜಾ ತಿಳಿಸಿದ್ದಾರೆ.