ಸೌದಿ ಅರೇಬಿಯಾದ ರಿಯಾದ್ ಪಿಐಎಫ್ ಟವರ್ ಮೇಲೆ ಹೌತಿ ಉಗ್ರರ ದಾಳಿ; ಇಬ್ಬರು ಭಾರತೀಯರು ಸೇರಿ 11 ಜನರಿಗೆ ಗಾಯ
Houthi Attack On Riyadh: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನ ಕಿಂಗ್ ಅಬ್ದುಲ್ಲಾ ಹಣಕಾಸು ಜಿಲ್ಲೆಯಲ್ಲಿರುವ ಪಿಐಎಫ್ ಟವರ್ ಮೇಲೆ ಹೌತಿ ಬಂಡುಕೋರರು ನಡೆಸಿದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಮಂಗಳವಾರ ನಡೆದ ಈ ದಾಳಿಯಲ್ಲಿ ಇಬ್ಬರು ಭಾರತೀಯರು ಸೇರಿ ಒಟ್ಟು 11 ಮಂದಿ ಗಾಯಗೊಂಡಿದ್ದು, ಸೌದಿಯ ನಾಗರಿಕ, ಆರ್ಥಿಕ ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ತಕ್ಷಣವೇ ನಿಲ್ಲಿಸುವಂತೆ ವಿದೇಶಾಂಗ ಸಚಿವಾಲಯ ಆಗ್ರಹಿಸಿದೆ.
ಸೌದಿ ಅರೇಬಿಯಾದ ಪಿಐಎಫ್ ಟವರ್ ಮೇಲೆ ದಾಳಿ -
ರಿಯಾದ್, ನ. 25: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನ ಕಿಂಗ್ ಅಬ್ದುಲ್ಲಾ ಹಣಕಾಸು ಜಿಲ್ಲೆ (KAFD)ಯಲ್ಲಿರುವ ಪಿಐಎಫ್ ಟವರ್ (PIF Tower) ಮೇಲೆ ಹೌತಿ ಬಂಡುಕೋರರು ನಡೆಸಿದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಮಂಗಳವಾರ (ನವೆಂಬರ್ 24) ನಡೆದ ಈ ದಾಳಿಯಲ್ಲಿ ಇಬ್ಬರು ಭಾರತೀಯ ಪ್ರಜೆಗಳು ಸೇರಿ ಒಟ್ಟು 11 ಮಂದಿ ಗಾಯಗೊಂಡಿರುವುದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ದೃಢಪಡಿಸಿದೆ.
ಸೌದಿ ಅರೇಬಿಯಾದ ನಾಗರಿಕ, ಆರ್ಥಿಕ ಮತ್ತು ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ನಡೆಯುತ್ತಿರುವ ದಾಳಿಗಳನ್ನು ತಕ್ಷಣವೇ ನಿಲ್ಲಿಸುವಂತೆ ಭಾರತ ಆಗ್ರಹಿಸಿದೆ. ಇದೇ ವೇಳೆ, ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆಯ ನಡುವೆಯೂ ಸೌದಿ ಅರೇಬಿಯಾ ಸರ್ಕಾರ ಮತ್ತು ಜನತೆಗೆ ಭಾರತ ತನ್ನ ದೃಢವಾದ ಬೆಂಬಲವನ್ನು ಪುನರುಚ್ಚರಿಸಿದೆ.
ಪಿಐಎಫ್ ಟವರ್ ಮೇಲೆ ದಾಳಿಯ ವಿಡಿಯೊ:
🇸🇦🇾🇪 BREAKING: Saudi Civil Defense says a Houthi attack on a tower in Riyadh’s financial district injured 11 people. The injured include two Saudis, two Indians, three Nepalese and four Egyptians. The Saudi led coalition called it a terrorist attack and is investigating. Witnesses said the Public Investment Fund Tower in King Abdullah Financial District was targeted.
— TridentX (@TridentX26) November 24, 2026
ಪಿಐಎಫ್ ಟವರ್ ಮೇಲೆ ದಾಳಿ ಭಾರತೀಯರಿಗೆ ನೆರವು
ರಿಯಾದ್ನ ಪ್ರಮುಖ ವಾಣಿಜ್ಯ ಚಟುವಟಿಕೆಯ ಕೇಂದ್ರ ಜಿಲ್ಲೆಯಾದ ಕೆಎಎಫ್ಡಿಯ ಪಿಐಎಫ್ ಟವರ್ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು ಗಾಯಗೊಂಡಿದ್ದಾರೆ. ಗಾಯಾಳುಗಳು ಮತ್ತು ಅವರ ಕುಟುಂಬಸ್ಥರಿಗೆ ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಧ್ಯವಿರುವ ಎಲ್ಲ ರೀತಿಯ ನೆರವು ಹಾಗೂ ವೈದ್ಯಕೀಯ ಸಹಕಾರ ಒದಗಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಸೌದಿ ನಾಗರಿಕ ರಕ್ಷಣಾ ಪಡೆಯ ಮಾಹಿತಿಯಂತೆ ಈ ದಾಳಿಯಲ್ಲಿ ಇಬ್ಬರು ಭಾರತೀಯರು, ಇಬ್ಬರು ಸೌದಿ ಪ್ರಜೆಗಳು, ಮೂವರು ನೇಪಾಳ ಹಾಗೂ ನಾಲ್ವರು ಈಜಿಪ್ಟ್ ಪ್ರಜೆಗಳು ಸೇರಿ ಒಟ್ಟು 11 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಆರೋಗ್ಯ ಸ್ಥಿತಿಯ ಮೇಲೆ ಭಾರತೀಯ ರಾಯಭಾರ ಕಚೇರಿ ನಿರಂತರ ನಿಗಾ ಇರಿಸಿದೆ.
ನವೆಂಬರ್ 30ರ ತನಕ ಸೌದಿ ಅರೇಬಿಯಾದ 4 ನಗರಗಳಿಗೆ ವಿಮಾನ ರದ್ದುಗೊಳಿಸಿದ ಇಂಡಿಗೋ
ಸಾರ್ವಭೌಮತ್ವ ಉಲ್ಲಂಘನೆ ಮತ್ತು ಭದ್ರತೆಗೆ ಧಕ್ಕೆ
"ಮಂಗಳವಾರ ರಿಯಾದ್ನ ಕಿಂಗ್ ಅಬ್ದುಲ್ಲಾ ಹಣಕಾಸು ಜಿಲ್ಲೆಯಲ್ಲಿರುವ ಪಿಐಎಫ್ ಟವರ್ ಮೇಲೆ ನಡೆದ ದಾಳಿ ಹಾಗೂ ಸೌದಿ ಅರೇಬಿಯಾ ಸಾಮ್ರಾಜ್ಯದ ನಾಗರಿಕ, ಆರ್ಥಿಕ ಮತ್ತು ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಆಕ್ರಮಣಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇಂತಹ ದಾಳಿಗಳು ಅಮಾಯಕ ನಾಗರಿಕರ ಜೀವಕ್ಕೆ ಗಂಭೀರ ಅಪಾಯವನ್ನುಂಟು ಮಾಡುವುದಲ್ಲದೆ, ಸೌದಿ ಅರೇಬಿಯಾದ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತವೆ ಹಾಗೂ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯನ್ನು ದುರ್ಬಲಗೊಳಿಸುತ್ತವೆ. ಆದ್ದರಿಂದ ಇಂತಹ ಕೃತ್ಯಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಭಾರತ ಒತ್ತಾಯಿಸಿದೆ.
Our statement on the Houthi attack on Riyadh Financial District Tower ⬇️ 🔗 https://t.co/JczR8ZAEta https://t.co/orX07MfiHO
— Randhir Jaiswal (@MEAIndia) November 25, 2026
ಸೌದಿ ಅರೇಬಿಯಾಕ್ಕೆ ಭಾರತದ ಬೆಂಬಲ
ರಿಯಾದ್ಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿರುವ ಸಚಿವಾಲಯ, "ಸೌದಿ ಅರೇಬಿಯಾ ಸಾಮ್ರಾಜ್ಯದ ಜನತೆ ಮತ್ತು ಸರ್ಕಾರದೊಂದಿಗೆ ನಮ್ಮ ದೃಢವಾದ ಒಗ್ಗಟ್ಟನ್ನು ಮತ್ತೊಮ್ಮೆ ವ್ಯಕ್ತಪಡಿಸುತ್ತೇವೆ. ತನ್ನ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಹಾಗೂ ನಾಗರಿಕರು ಮತ್ತು ನಿವಾಸಿಗಳ ಭದ್ರತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವಲ್ಲಿ ಆ ಸಾಮ್ರಾಜ್ಯಕ್ಕೆ ನಮ್ಮ ಅಚಲ ಬೆಂಬಲವಿದೆ" ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಮಧ್ಯಪ್ರಾಚ್ಯ ಹಾಗೂ ಗಲ್ಫ್ ಪ್ರದೇಶದಲ್ಲಿ ಆದಷ್ಟು ಶೀಘ್ರ ಶಾಂತಿ ಮತ್ತು ಸಹಜ ಸ್ಥಿತಿ ಮರಳಲಿದೆ ಎಂದು ಭಾರತ ಪ್ರಾಮಾಣಿಕವಾಗಿ ಆಶಿಸಿದೆ ಎಂದು ಹೇಳಿದೆ.