ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೇಪಾಳದಲ್ಲಿ ಮತ್ತೆ ರುದ್ರ ತಾಂಡವವಾಡಲಿದೆ ಪ್ರವಾಹ; ಹಾನಿಗೊಳಗಾದ ಪ್ರದೇಶದಲ್ಲಿ ಎಚ್ಚರಿಕೆ ವಹಿಸುವಂತೆ ಐಸಿಐಎಂಒಡಿ ಸೂಚನೆ

ಹಠಾತ್ ಪ್ರವಾಹ ಉಂಟಾಗಿ ಸುಮಾರು 165 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ನಾಪತ್ತೆಯಾಗಿರುವ ನೇಪಾಳದ ಪ್ರದೇಶಗಳಲ್ಲಿ ಮತ್ತೊಮ್ಮೆ ಪ್ರವಾಹ ಉಂಟಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಹಾನಿಗೊಳಗಾದ ಪ್ರದೇಶದಲ್ಲಿ ಪ್ರವಾಹದ ಎರಡನೇ ಅಲೆ ಬರುವ ಸಾಧ್ಯತೆ ಇದೆ ಕಠ್ಮಂಡು ಮೂಲದ ಅಂತರ ಸರ್ಕಾರಿ ಸಂಸ್ಥೆಯಾದ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್‌ಮೆಂಟ್ (ICIMOD) ತಿಳಿಸಿದೆ.

ಮತ್ತೆ ಪ್ರವಾಹ: ನೇಪಾಳದಲ್ಲಿ ಎಚ್ಚರಿಕೆ

ಸಂಗ್ರಹ ಚಿತ್ರ -

ಕಠ್ಮಂಡು: ಈಗಾಗಲೇ ಪ್ರವಾಹಕ್ಕೆ (Flood) ತತ್ತರಿಸಿರುವ ನೇಪಾಳದಲ್ಲಿ (Nepal flood) ಮತ್ತೊಂದು ಭೀಕರ ಪ್ರವಾಹ ಬರಲಿದೆ ಎಂದು ಕಠ್ಮಂಡು ಮೂಲದ ಅಂತರ ಸರ್ಕಾರಿ ಸಂಸ್ಥೆಯಾದ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್‌ಮೆಂಟ್ (ICIMOD) ಎಚ್ಚರಿಕೆ ನೀಡಿದೆ. ಪ್ರವಾಹ ಉಂಟಾಗಿದ್ದ ರಸುವಾ, ಧಾಡಿಂಗ್, ನುವಾಕೋಟ್, ಚಿತಾವಾನ್, ಗೂರ್ಖಾ, ತನಹು ಮತ್ತು ನವಲ್ಪರಾಸಿಯಲ್ಲಿ ಮತ್ತೊಮ್ಮೆ ಇದೇ ರೀತಿಯ ಪ್ರವಾಹ ಉಂಟಾಗಲಿದೆ. ರಕ್ಷಣಾ ಕಾರ್ಯಾಚರಣೆಯನ್ನು ಇಲ್ಲಿ ಪ್ರಾರಂಭಿಸಲಾಗಿದ್ದು, ಪ್ರವಾಹದ ಅವಶೇಷಗಳು ಅಡ್ಡಿಯಾಗಿವೆ. ಈ ನಡುವೆ ರಕ್ಷಣಾ ಕಾರ್ಯಕ್ಕೆ ಎರಡನೇ ಪ್ರವಾಹದ ಭೀತಿಯೂ ಎದುರಾಗಿದೆ.

ಹಿಂದೂ ಕುಶ್ ಹಿಮಾಲಯ ಪ್ರದೇಶದ ಎಂಟು ದೇಶಗಳಾದ ಭಾರತ, ನೇಪಾಳ, ಭೂತಾನ್, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಅಫ್ಘಾನಿಸ್ತಾನಗಳಿಗೆ ಸಂಬಂಧಿಸಿ ಹಿಮಾಲಯದಾದ್ಯಂತ ಇರುವ ಪರ್ವತ ಪರಿಸರಗಳು, ಹಿಮ ನದಿಗಳು, ಹವಾಮಾನ ಬದಲಾವಣೆ ಮತ್ತು ವಿಪತ್ತು ಅಪಾಯಗಳನ್ನು ಅಧ್ಯಯನ ಮಾಡುವ ಪ್ರಮುಖ ವೈಜ್ಞಾನಿಕ ಸಂಸ್ಥೆಯಾದ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್‌ಮೆಂಟ್ 1983ರಲ್ಲಿ ಸ್ಥಾಪನೆಯಾಗಿತ್ತು.

ಪ್ರವಾಹಪೀಡಿತ ನೇಪಾಳಕ್ಕೆ ಭಾರತದ ಸಹಾಯ ಹಸ್ತ: ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ವಾಯುಪಡೆ ಸಜ್ಜು; ನಿಮ್ಮೊಂದಿಗೆ ನಾವಿದ್ದೇವೆ ಎಂದು ನರೇಂದ್ರ ಮೋದಿ ಭರವಸೆ

ಆಗಸ್ಟ್ 26ರಂದು ಉಂಟಾದ ಪ್ರವಾಹದ ಬಳಿಕ ಸಂಸ್ಥೆಯ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಈ ದುರಂತಕ್ಕೆ ಕಾರಣವೇನು ಮತ್ತು ಮುಂದೆ ಹೆಚ್ಚಿನ ಅಪಾಯವಿದೆಯೇ ಎನ್ನುವುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಇದೀಗ ಈ ಎಚ್ಚರಿಕೆಯನ್ನು ನೀಡಿದ್ದಾರೆ.

ಇಂಟರ್ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್‌ಮೆಂಟ್ ನ ಮುಖ್ಯಸ್ಥ ಕಿಯಾಂಗ್‌ಗಾಂಗ್ ಜಾಂಗ್ ಅವರು ನೀಡಿರುವ ಮಾಹಿತಿ ಪ್ರಕಾರ ಕಳೆದ ವರ್ಷದ ರಸುವಾದಲ್ಲಿ ಪ್ರವಾಹ ಉಂಟಾಗಿತ್ತು. ಈಗ ಅದೇ ಸ್ಥಳದಲ್ಲಿ ಮತ್ತೊಮ್ಮೆ ಪ್ರವಾಹ ಉಂಟಾಗಿದೆ. ಲೆಂಡೆ ನದಿಯಲ್ಲಿ ಉಂಟಾಗಿರುವ ಹಿಮಪಾತವು ಇದಕ್ಕೆ ಕಾರಣವಾಗಿರಬಹುದು. ಆದರೆ ಇದು ದೃಢೀಕರಣಗೊಂಡಿಲ್ಲ. ನೇಪಾಳ ಮತ್ತು ಚೀನಾ ಗಡಿಯಲ್ಲಿ ಮೇಲ್ಭಾಗದಲ್ಲಿಪ್ರವಾಹ ನೀರಿನ ಹರಿವಿಗೆ ಅಡ್ಡಿ ಉಂಟಾಗಿರುವುದರಿಂದ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಬಹುದು. ಎಂದು ತಿಳಿಸಿದ್ದಾರೆ.

ಕಳೆದ ವರ್ಷಕೂಡ ಇಲ್ಲಿ ಇದೇ ರೀತಿಯ ವಿಪತ್ತು ಉಂಟಾಗಿತ್ತು. 2024ರಲ್ಲಿ ತೀವ್ರ ಪ್ರವಾಹವನ್ನು ಅನುಭವಿಸಿದ ಜಲಾನಯನ ಪ್ರದೇಶದ ಭಾಗದಲ್ಲಿ ಮತ್ತೊಮ್ಮೆ ಆತಂಕ ಉಂಟಾಗಿದೆ. ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳಲ್ಲಿ ಪ್ರವಾಹದಿಂದ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇರುವುದರಿಂದ ನಿಗಾ ಇರಿಸಲಾಗಿದೆ ಎಂದು ಅವರು ಹೇಳಿದರು.

ಬುಧವಾರ ಸ್ಥಳೀಯ ಸಮಯ ಬೆಳಗ್ಗೆ 9 ಗಂಟೆ ಸುಮಾರಿಗೆ ಪ್ರವಾಹ ಪ್ರಾರಂಭವಾಗಿದ್ದು, ಭೋಟೆ ಕೋಶಿ ಜಲಾನಯನ ಪ್ರದೇಶದಲ್ಲಿ ನೀರಿನ ಮಟ್ಟ ವೇಗವಾಗಿ ಹೆಚ್ಚಳವಾಗಿದೆ. ಭೋಟೆ ಕೋಶಿ ನದಿಯ ಮೂಲಕ ಪ್ರವಾಹದ ನೀರು ತ್ರಿಶೂಲಿ ನದಿಗೆ ಹರಿಯಿತು. ಗಲ್ಚಿಯಲ್ಲಿ ತ್ರಿಶೂಲಿ ನದಿ ನೀರಿನ ಮಟ್ಟವು ಕೇವಲ 30 ನಿಮಿಷಗಳಲ್ಲಿ ಒಂಬತ್ತು ಮೀಟರ್‌ಗಳಷ್ಟು ಏರಿದೆ. ಮಲೇಖುನಲ್ಲಿ ಏಳು ಮೀಟರ್‌ಗಳಷ್ಟು ಏರಿತು. ಇಂತಹ ತ್ವರಿತ ಏರಿಕೆ ಅಗಾಧ ಪ್ರಮಾಣದ ನೀರು ಮತ್ತು ಶಿಲಾಖಂಡರಾಶಿಗಳ ಕುಸಿತದಿಂದ ಉಂಟಾಗುತ್ತದೆ ಎಂದು ಅವರು ತಿಳಿಸಿದರು.

ಪರ್ವತಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಮಪಾತವಾಗಿದೆ ಎಂಬುದು ಒಂದು ಊಹೆಯಾಗಿದೆ. ಭೋಟೆ ಕೋಶಿ ನದಿಯ ಉಪನದಿಯಾದ ಲೆಂಡೆ ಖೋಲಾಕ್ಕೆ ಬೃಹತ್ ಪ್ರಮಾಣದ ಮಂಜುಗಡ್ಡೆ ಮತ್ತು ಕಲ್ಲಿನ ಅವಶೇಷಗಳು ಬಂದು ಬಿದ್ದಿರಬಹುದು. ಇದರಿಂದ ಹೆಚ್ಚಿನ ಪ್ರಮಾಣ ನೀರು ಪ್ರಬಲವಾದ ಅಲೆಯನ್ನು ಉಂಟುಮಾಡಿರಬಹುದು. ಅಲ್ಲದೇ ತಾತ್ಕಾಲಿಕ ಭೂಕುಸಿತ ಅಣೆಕಟ್ಟು ರಚನೆಯಿಂದ ನದಿ ನೀರನ್ನು ನಿರ್ಬಂಧಿಸಿರಬಹುದು ಎನ್ನುತ್ತಾರೆ ತಜ್ಞರು.

ಈ ರೀತಿ ಸಂಗ್ರಹವಾದ ನೀರು ಅಪಾಯಕಾರಿ ನೈಸರ್ಗಿಕ ಅಣೆಕಟ್ಟನ್ನು ಸೃಷ್ಟಿಸಬಹುದು. ಇದು ಇದ್ದಕ್ಕಿದ್ದಂತೆ ಒಡೆದರೆ ಪ್ರಬಲವಾದ ದ್ವಿತೀಯ ಪ್ರವಾಹ ಅಲೆಯನ್ನು ಉಂಟುಮಾಡಬಹುದು. ಕೆಲವು ಅಡಚಣೆಗಳು ಇನ್ನೂ ಸ್ಥಳದಲ್ಲಿಯೇ ಇರಬಹುದು ಎಂದು ಅಧಿಕಾರಿಗಳು ನಂಬಿರುವುದರಿಂದ ಈ ಸಾಧ್ಯತೆಯು ತಕ್ಷಣದ ಕಾಳಜಿಯ ಕೇಂದ್ರಬಿಂದುವಾಗಿದೆ.

ನೇಪಾಳ ಪ್ರವಾಹ: ಸಂಕಷ್ಟದಲ್ಲಿರುವ ಭಾರತೀಯರಿಗೆ ತುರ್ತು ಸಹಾಯವಾಣಿ ಆರಂಭ; ನೆರವಿಗಾಗಿ ಕರೆ ಮಾಡಲು ಪ್ರಿಯಾಂಕ್‌ ಖರ್ಗೆ ಮನವಿ

ಭೂಕಂಪನದ ಸಾಧ್ಯತೆ ಕುರಿತು ವಿಶ್ಲೇಷಣೆ ನಡೆಸಿರುವ ವಿಜ್ಞಾನಿಗಳು ಪ್ರವಾಹ ಪೀಡಿತ ಪ್ರದೇಶಗಳಿಂದ ಸುಮಾರು 12 ಕಿಲೋಮೀಟರ್ ದೂರದ ಜಿಲೋಂಗ್‌ ಮತ್ತು ಜಾಂಗ್ಮುನಲ್ಲಿ ಭೂಕಂಪನದ ಸಾಧ್ಯತೆಯನ್ನು ಗುರುತಿಸಲಾಗಿದೆ. ಆದರೆ ಇದಕ್ಕೂ ಪ್ರವಾಹಕ್ಕೂ ನೇರ ಸಂಬಂಧ ಸಾಧ್ಯತೆ ಕಡಿಮೆ ಎನ್ನುತ್ತಾರೆ ಅಧಿಕಾರಿಗಳು.