ಕೆನಡಾದ ಕವಿಯಿತ್ರಿ ಆ್ಯನ್ ಕಾರ್ಸನ್‌ಗೆ 2026ರ ಸಾಹಿತ್ಯ ನೊಬೆಲ್ ಪ್ರಶಸ್ತಿ ಘೋಷಣೆ
Nobel Prize in Literature 2026: ಕೆನಡಾದ ಕವಿಯಿತ್ರಿ ಮತ್ತು ಬರಹಗಾರ್ತಿ ಆ್ಯನ್ ಕಾರ್ಸನ್ 2026ರ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆ್ಯನ್ ಕಾರ್ಸನ್ ಶಾಸ್ತ್ರೀಯ ಗ್ರೀಕ್ ಸಾಹಿತ್ಯದ ಅನುವಾದಗಳಿಗೆ ಹೆಚ್ಚು ಪ್ರಸಿದ್ಧರಾಗಿದ್ದಾರೆ. ಶಾಸ್ತ್ರೀಯ ಗ್ರೀಕ್ ಸಾಹಿತ್ಯವು ಅವರ ಬರಹಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ.
ಕೆನಡಾದ ಕವಿಯಿತ್ರಿ ಆ್ಯನ್ ಕಾರ್ಸನ್‌ಗೆ ನೊಬೆಲ್ ಪ್ರಶಸ್ತಿ -
ಒಟ್ಟಾವಾ, ಅ.8: ಕೆನಡಾದ ಕವಿಯಿತ್ರಿ ಮತ್ತು ಬರಹಗಾರ್ತಿ ಆ್ಯನ್ ಕಾರ್ಸನ್ (Anne Carson) ಅವರು 2026ರ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು (Nobel Prize) ಗೆದ್ದಿದ್ದಾರೆ. ಹಳೆಯ ಸಾಹಿತ್ಯ ಪರಂಪರೆಯಿಂದ ಸ್ಫೂರ್ತಿ ಪಡೆದು, ಅದನ್ನು ಆಧುನಿಕ ಮತ್ತು ಹೊಸ ರೀತಿಯಲ್ಲಿ ಬರೆದಿದ್ದಕ್ಕಾಗಿ ಆ್ಯನ್ ಕಾರ್ಸನ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿಯನ್ನು ಸ್ವೀಡಿಷ್ ಅಕಾಡೆಮಿ ನೀಡುತ್ತದೆ. ಪ್ರಶಸ್ತಿಯ ಮೊತ್ತ 1.2 ಕೋಟಿ ಸ್ವೀಡಿಷ್ ಕ್ರೋನರ್ (ಸುಮಾರು 1.2 ಮಿಲಿಯನ್ ಡಾಲರ್) ಆಗಿದೆ.
ಕೆನಡಾದ ಕವಯಿತ್ರಿ ಮತ್ತು ಪ್ರಬಂಧಕಾರ್ತಿ ಆ್ಯನ್ ಕಾರ್ಸನ್ ಅವರ ಕೃತಿಗಳು ಪದ್ಯ, ಗದ್ಯ, ಸಂಭಾಷಣೆ ಮತ್ತು ಅನುವಾದವನ್ನು ಒಂದೇ ಬರಹದಲ್ಲಿ ಸಂಯೋಜಿಸುತ್ತವೆ. ಸಾಹಿತ್ಯದ ಸಾಂಪ್ರದಾಯಿಕ ಪ್ರಕಾರಗಳ ಗಡಿಗಳನ್ನು ಮೀರುವ ವಿಭಿನ್ನ ಶೈಲಿಯಲ್ಲಿ ಅವರು ತಮ್ಮ ಕೃತಿಗಳನ್ನು ರಚಿಸಿದ್ದಾರೆ.
ಆ್ಯನ್ ಕಾರ್ಸನ್ ಮುಡಿಗೆ ನೊಬೆಲ್ ಪ್ರಶಸ್ತಿ:
BREAKING NEWS The 2026 #NobelPrize in Literature is awarded to the Canadian author Anne Carson, “for her bold and inventive oeuvre that, in playful dialogue with the classical tradition, has created new forms for contemporary literature.” https://t.co/YRvlRghlGG
— The Nobel Prize (@NobelPrize) October 8, 2026
ಆ್ಯನ್ ಕಾರ್ಸನ್ ಶಾಸ್ತ್ರೀಯ ಗ್ರೀಕ್ ಸಾಹಿತ್ಯದ ಅನುವಾದಗಳಿಗೆ ಹೆಚ್ಚು ಪ್ರಸಿದ್ಧರಾಗಿದ್ದಾರೆ. ಶಾಸ್ತ್ರೀಯ ಗ್ರೀಕ್ ಸಾಹಿತ್ಯವು ಅವರ ಬರಹಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಅವರ ಸಾಹಿತ್ಯ ಕೃತಿಗಳ ವ್ಯಾಪ್ತಿ ಒಪೆರಾ ನಾಟಕಗಳಿಗಾಗಿ ಬರೆಯುವ ಸಾಹಿತ್ಯದಿಂದ ಹಿಡಿದು ಸಾಹಿತ್ಯ ವಿಮರ್ಶೆ ಹಾಗೂ 1998ರಲ್ಲಿ ಪ್ರಕಟವಾದ ಆಟೋಬಯಾಗ್ರಫಿ ಆಫ್ ರೆಡ್‌ನಂತಹ ಪದ್ಯರೂಪದ ಕಾದಂಬರಿಗಳವರೆಗೆ ವ್ಯಾಪಿಸಿದೆ.
ಹೆನ್ರಿ ಕಾಗನ್, ಕೆನ್ಸೋ ಸೋಯಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ
2019ರಲ್ಲಿ ಬಿಡುಗಡೆಯಾದ ನಾರ್ಮಾ ಜೀನ್ ಬೇಕರ್ ಆಫ್ ಟ್ರಾಯ್ ಕೃತಿಯಲ್ಲಿ ಅವರ ವಿಭಿನ್ನ ಬರವಣಿಗೆಯ ಶೈಲಿಯನ್ನು ಉದಾಹರಿಸಲಾಗಿದೆ. ಇದು ಯೂರಿಪಿಡೀಸ್ ಅವರ ಹೆಲೆನ್ ನಾಟಕದಲ್ಲಿನ ಟ್ರಾಯ್‌ನ ಹೆಲೆನ್ ಕಥೆ ಮತ್ತು ಖ್ಯಾತ ನಟಿ ಮೆರ್ಲಿನ್ ಮನ್ರೋ ಅವರ ಕಥೆಯನ್ನು ಒಂದೇ ಕೃತಿಯಲ್ಲಿ ಬೆರೆಸಲಾಗಿದೆ.
ಈ ಪ್ರಶಸ್ತಿಯನ್ನು ಪಡೆದಿರುವ ಖ್ಯಾತ ಸಾಹಿತಿಗಳಾದ ಅಲೆಕ್ಸಾಂಡರ್ ಸೊಲ್ಜೆನಿಟ್ಸಿನ್, ಆಲಿಸ್ ಮನ್ರೋ ಮತ್ತು ಅರ್ನೆಸ್ಟ್ ಹೆಮಿಂಗ್ವೇ ಅವರ ಸಾಲಿಗೆ ಈಗ ಆ್ಯನ್ ಕಾರ್ಸನ್ ಕೂಡ ಸೇರ್ಪಡೆಯಾಗಿದ್ದಾರೆ. ಆದರೆ ಕಳೆದ 120 ವರ್ಷಗಳ ಸಾಹಿತ್ಯ ಲೋಕದ ದಿಗ್ಗಜರಾದ ಲಿಯೋ ಟಾಲ್‌ಸ್ಟಾಯ್, ವರ್ಜೀನಿಯಾ ವೂಲ್ಫ್ ಮತ್ತು ಜಾರ್ಜ್ ಲೂಯಿಸ್ ಬೋರ್ಗೆಸ್‌ರನ್ನು ನಿರ್ಲಕ್ಷಿಸಿದ್ದಕ್ಕಾಗಿ ಅಕಾಡೆಮಿಯನ್ನು ಟೀಕಿಸಲಾಗಿದೆ. 2016 ರಲ್ಲಿ ಗಾಯಕ-ಗೀತರಚನೆಕಾರ ಬಾಬ್ ಡೈಲನ್‌ಗೆ ಪ್ರಶಸ್ತಿ ನೀಡಿದ್ದರೂ, ಅಮೆರಿಕದ ಲೇಖಕರನ್ನು ಕಡೆಗಣಿಸಿದ್ದಕ್ಕಾಗಿ ಟೀಕಿಸಲಾಗಿದೆ.
ಸ್ವೀಡನ್‌ನ ಡೈನಮೈಟ್ ಸಂಶೋಧಕ ಹಾಗೂ ಉದ್ಯಮಿ ಆಲ್ಫ್ರೆಡ್ ನೊಬೆಲ್ ಅವರ ಉಯಿಲಿನ ಆಧಾರದ ಮೇಲೆ ಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು ಸಾಹಿತ್ಯ, ವಿಜ್ಞಾನ ಮತ್ತು ಶಾಂತಿ ಕ್ಷೇತ್ರಗಳಲ್ಲಿನ ಸಾಧನೆಗಳಿಗಾಗಿ 1901ರಿಂದ ನೀಡಲಾಗುತ್ತಿದೆ.