ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೆನ್ರಿ ಕಾಗನ್, ಕೆನ್ಸೋ ಸೋಯಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

Nobel Prize In Chemistry 2026: ಅಸಿಮೆಟ್ರಿಕ್ ಆರ್ಗ್ಯಾನಿಕ್ ಸಿಂಥೆಸಿಸ್‌ನಲ್ಲಿ ನಾನ್-ಲೀನಿಯರ್ ಎಫೆಕ್ಟ್ ಹಾಗೂ ಆಟೋಕ್ಯಾಟಲಿಸಿಸ್ ಕುರಿತ ಮಹತ್ವದ ಸಂಶೋಧನೆಗಾಗಿ ಹೆನ್ರಿ ಬಿ. ಕಗನ್ ಮತ್ತು ಜಪಾನ್‌ನ ಕೆನ್ಸೊ ಸೊವೈ ಅವರಿಗೆ 2026ನೇ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಜಂಟಿಯಾಗಿ ಘೋಷಿಸಲಾಗಿದೆ. ಇವರ ಸಂಶೋಧನೆ ಆರ್ಗ್ಯಾನಿಕ್ ಸಂಯುಕ್ತಗಳ ಅಸಿಮೆಟ್ರಿಕ್ ಸಂಶ್ಲೇಷಣೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ.

ಹೆನ್ರಿ ಕಾಗನ್, ಕೆನ್ಸೋ ಸೋಯಿಗೆ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ

ನೊಬೆಲ್ ಪ್ರಶಸ್ತಿ ವಿಜೇತರಾದ ಹೆನ್ರಿ ಕಾಗನ್, ಕೆನ್ಸೋ ಸೋಯಿ -

Profile
Sushmitha Jain Oct 7, 2026 6:36 PM

ಸ್ಟಾಕ್‌ಹೋಮ್, ಅ. 7: ಅಸಿಮೆಟ್ರಿಕ್ ಆರ್ಗ್ಯಾನಿಕ್ ಸಿಂಥೆಸಿಸ್‌ನಲ್ಲಿ ನಾನ್-ಲೀನಿಯರ್ ಎಫೆಕ್ಟ್ ಹಾಗೂ ಆಟೋಕ್ಯಾಟಲಿಸಿಸ್ ಕುರಿತ ಮಹತ್ವದ ಸಂಶೋಧನೆಗಾಗಿ ವಿಜ್ಞಾನಿಗಳಾದ ಫ್ರಾನ್ಸ್‌ನ ಹೆನ್ರಿ ಕಾಗನ್ (Henri B. Kagan) ಮತ್ತು ಜಪಾನ್‌ನ ಕೆನ್ಸೋ ಸೋಯಿ (Kenzo Soai) ಅವರಿಗೆ 2026ನೇ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು (Nobel Prize In Chemistry 2026) ಜಂಟಿಯಾಗಿ ಘೋಷಿಸಲಾಗಿದೆ.

ಸ್ವೀಡನ್‌ನ ಸ್ಟಾಕ್‌ಹೋಮ್‌ನ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಬುಧವಾರʻ ಪ್ರಶಸ್ತಿ ವಿಜೇತರ ಹೆಸರನ್ನು ಪ್ರಕಟಿಸಿದ್ದು, ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಇವರ ಸಂಶೋಧನೆ ಆರ್ಗ್ಯಾನಿಕ್ ಸಂಯುಕ್ತಗಳ ಅಸಿಮೆಟ್ರಿಕ್ ಸಂಶ್ಲೇಷಣೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ ಎಂಬ ಹೇಳಿದೆ.

2025ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಮೆಟಲ್-ಆರ್ಗ್ಯಾನಿಕ್ ಫ್ರೇಮ್‌ವರ್ಕ್‌ಗಳ (MOFs) ಅಭಿವೃದ್ಧಿಗಾಗಿ ಸುಸುಮು ಕಿತಗಾವಾ, ರಿಚರ್ಡ್ ರಾಬ್ಸನ್ ಮತ್ತು ಒಮರ್ ಎಂ. ಯಾಘಿ ಅವರಿಗೆ ನೀಡಲಾಗಿತ್ತು.

ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ:



ಆಲ್ಫ್ರೆಡ್ ನೊಬೆಲ್ ಅವರ ಉಯಿಲಿನಿಂದ ಆರಂಭ

ಸ್ವೀಡನ್‌ನ ವಿಜ್ಞಾನಿ ಹಾಗೂ ಉದ್ಯಮಿ ಆಲ್ಫ್ರೆಡ್ ನೊಬೆಲ್ ಬರೆದಿದ್ದ ಉಯಿಲಿನ ಆಧಾರದ ಮೇಲೆ ನೊಬೆಲ್ ಪ್ರಶಸ್ತಿಯ ಪಯಣ ಆರಂಭವಾಗಿದ್ದು, ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಕ್ಷೇತ್ರಗಳಲ್ಲಿ ಮಾನವಕುಲಕ್ಕೆ ಮಹತ್ವದ ಕೊಡುಗೆ ನೀಡಿದವರನ್ನು ಗೌರವಿಸುವ ಉದ್ದೇಶದಿಂದ 1901ರಿಂದ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ವಿಶ್ವ ಯುದ್ಧಗಳ ಅವಧಿಯಲ್ಲಿ ಕೆಲವೊಂದು ವರ್ಷಗಳನ್ನು ಹೊರತುಪಡಿಸಿದರೆ ಪ್ರಶಸ್ತಿ ಪ್ರದಾನ ನಿರಂತರವಾಗಿ ನಡೆದುಕೊಂಡು ಬಂದಿದೆ.

ವೃತ್ತಿಯಲ್ಲಿ ರಸಾಯನಶಾಸ್ತ್ರಜ್ಞರಾಗಿದ್ದ ಆಲ್ಫ್ರೆಡ್ ನೊಬೆಲ್ 19ನೇ ಶತಮಾನದಲ್ಲಿ ಹಲವು ಆವಿಷ್ಕಾರಗಳ ಮೂಲಕ ಅಪಾರ ಸಂಪತ್ತು ಗಳಿಸಿದ್ದರು. ಯುದ್ಧೋಪಕರಣಗಳಿಗೆ ಸಂಬಂಧಿಸಿದ ಆವಿಷ್ಕಾರಗಳಲ್ಲಿ, ವಿಶೇಷವಾಗಿ ಡೈನಮೈಟ್ ಅವರ ಪ್ರಮುಖ ಆವಿಷ್ಕಾರವಾಗಿತ್ತು. ನೊಬೆಲ್ ಪ್ರಶಸ್ತಿಗಳ ಪೈಕಿ ಅರ್ಥಶಾಸ್ತ್ರದ ಪ್ರಶಸ್ತಿ ಮಾತ್ರ ನಂತರ ಸೇರ್ಪಡೆಯಾಗಿದ್ದು, ಇದಕ್ಕೆ ಸ್ವೀಡನ್‌ನ ಕೇಂದ್ರ ಬ್ಯಾಂಕ್‌ ಹಣಕಾಸು ನೆರವು ನೀಡುತ್ತದೆ.

ಮಹತ್ವದ ವೈಜ್ಞಾನಿಕ ಆವಿಷ್ಕಾರಗಳಿಗೆ ಗೌರವ

ಭೌತಶಾಸ್ತ್ರ, ಸಾಹಿತ್ಯ ಮತ್ತು ಶಾಂತಿ ಕ್ಷೇತ್ರಗಳ ಕೆಲವು ಪ್ರಸಿದ್ಧ ಪ್ರಶಸ್ತಿ ವಿಜೇತರ ನೆರಳಿನಲ್ಲಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಕೆಲವೊಮ್ಮೆ ಕಡಿಮೆ ಗಮನ ಸೆಳೆದರೂ, ಈ ವಿಭಾಗವು ಹಲವು ಮಹತ್ವದ ವೈಜ್ಞಾನಿಕ ಆವಿಷ್ಕಾರಗಳನ್ನು ಗುರುತಿಸಿದೆ. ಅಣು ವಿಭಜನೆ (ನ್ಯೂಕ್ಲಿಯರ್ ಫಿಷನ್) ಮತ್ತು ಆನುವಂಶಿಕ ಅನುಕ್ರಮಣಿಕೆ (ಜೆನೆಟಿಕ್ ಸೀಕ್ವೆನ್ಸಿಂಗ್) ಸೇರಿದಂತೆ ವಿಜ್ಞಾನ ಕ್ಷೇತ್ರದ ಪ್ರಮುಖ ಬೆಳವಣಿಗೆಗಳಿಗೆ ಈ ಪ್ರಶಸ್ತಿ ಸಂದಿದೆ.

ಬೆಂಗಳೂರಿನ ಗಣಿತಶಾಸ್ತ್ರಜ್ಞ ಮಹೇಶ್ ಕಾಕ್ಡೆಗೆ 2026ರ ರಾಮಾನುಜನ್ ಪ್ರಶಸ್ತಿ

2025ರ ನೊಬೆಲ್ ಪ್ರಶಸ್ತಿ

2025ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಸುಸುಮು ಕಿತಗಾವಾ, ರಿಚರ್ಡ್ ರಾಬ್ಸನ್ ಮತ್ತು ಒಮರ್ ಯಾಘಿ ಅವರಿಗೆ ನೀಡಲಾಗಿತ್ತು. ಲೋಹ-ಸಾವಯವ ಚೌಕಟ್ಟುಗಳು (Metal-Organic Frameworks) ಎಂದು ಕರೆಯಲ್ಪಡುವ ವಿಶೇಷ ಅಣು ರಚನೆಗಳ ಅಭಿವೃದ್ಧಿಗಾಗಿ ಅವರಿಗೆ ಈ ಗೌರವ ಸಂದಿತ್ತು. ಹವಾಮಾನ ಬದಲಾವಣೆ ಮತ್ತು ಕುಡಿಯುವ ನೀರಿನ ಕೊರತೆಯಂತಹ ಜಾಗತಿಕ ಸವಾಲುಗಳನ್ನು ಎದುರಿಸಲು ಈ ಅಣು ರಚನೆಗಳು ಸಹಕಾರಿಯಾಗುವ ಸಾಧ್ಯತೆಯಿದೆ.

ಡಿಸೆಂಬರ್ 10ರಂದು ಪ್ರಶಸ್ತಿ ಪ್ರದಾನ

2026ರ ನೊಬೆಲ್ ಪ್ರಶಸ್ತಿ ವಿಜೇತರಿಗೆ ಡಿಸೆಂಬರ್ 10ರಂದು ಸ್ಟಾಕ್‌ಹೋಮ್‌ನಲ್ಲಿ ಸ್ವೀಡನ್‌ನ ರಾಜ ಕಾರ್ಲ್ XVI ಗುಸ್ತಾಫ್ ಪದಕಗಳನ್ನು ಪ್ರದಾನ ಮಾಡಲಿದ್ದಾರೆ. ಆಲ್ಫ್ರೆಡ್ ನೊಬೆಲ್ ನಿಧನರಾದ ದಿನವಾದ ಡಿಸೆಂಬರ್ 10ರಂದು ಪ್ರತಿವರ್ಷ ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಸ್ಟಾಕ್‌ಹೋಮ್ ಸಿಟಿ ಹಾಲ್‌ನಲ್ಲಿ ಅದ್ದೂರಿ ಔತಣಕೂಟ ಆಯೋಜಿಸಲಾಗುತ್ತದೆ. ಪ್ರಶಸ್ತಿ ವಿಜೇತರು ಒಟ್ಟಾಗಿ 1.2 ಕೋಟಿ ಸ್ವೀಡಿಷ್ ಕ್ರೋನರ್‌ (ಸುಮಾರು 1.2 ಮಿಲಿಯನ್ ಅಮೆರಿಕನ್ ಡಾಲರ್) ಮೊತ್ತದ ಬಹುಮಾನವನ್ನು ಹಂಚಿಕೊಳ್ಳಲಿದ್ದಾರೆ.

ನೊಬೆಲ್ ಪ್ರಶಸ್ತಿಗಳ ಪೈಕಿ ಶಾಂತಿ ಪ್ರಶಸ್ತಿಯನ್ನು ಮಾತ್ರ ಸ್ವೀಡನ್‌ನಲ್ಲಿ ನೀಡಲಾಗುವುದಿಲ್ಲ. ಅದನ್ನು ಪ್ರತ್ಯೇಕವಾಗಿ ನಾರ್ವೆಯ ಓಸ್ಲೋದಲ್ಲಿ ಪ್ರದಾನ ಮಾಡಲಾಗುತ್ತದೆ.