ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Plane Crash: ಟೇಕ್‌ ಆಫ್‌ ಆದ ಬೆನ್ನಲ್ಲೇ ನೆಲಕ್ಕುರುಳಿ ಸುಟ್ಟು ಭಸ್ಮವಾದ ವಿಮಾನ; ಅಹಮದಾಬಾದ್‌ ದುರಂತ ಮರೆಯುವ ಮುನ್ನ ಮತ್ತೊಂದು ಅವಘಡ

Viral Video: ವೆನೆಜುವೆಲಾದ ತಾಚಿರಾ ರಾಜ್ಯದ ಪಾರಾಮಿಲ್ಲೊ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆದ ಪಿಎ-31ಟಿ1 ಲಘು ವಿಮಾನ ಕೆಲವೇ ಕ್ಷಣಗಳಲ್ಲಿ ನೆಲಕ್ಕುರುಳಿದ್ದು, ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿದೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಟೇಕ್‌ ಆಫ್‌ ಆದ ಬೆನ್ನಲ್ಲೇ ನೆಲಕ್ಕುರುಳಿದ ವಿಮಾನ; ವಿಡಿಯೊ ವೈರಲ್‌

-

Ramesh B Ramesh B Oct 25, 2025 4:42 PM

ಕ್ಯಾರಕಾಸ್, ಅ. 25: ಜೂನ್‌ 12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಅವಘಡ ನಡೆದಿದೆ. ವೆನೆಜುವೆಲಾದ (Venezuela) ತಾಚಿರಾ ರಾಜ್ಯದ ಪಾರಾಮಿಲ್ಲೊ ವಿಮಾನ ನಿಲ್ದಾಣದಿಂದ (Paramillo Airport) ಟೇಕ್‌ ಆಫ್‌ ಆದ ಪಿಎ-31ಟಿ1 (PA-31T1) ಲಘು ವಿಮಾನ ಕೆಲವೇ ಕ್ಷಣಗಳಲ್ಲಿ ನೆಲಕ್ಕುರುಳಿದ್ದು, ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (Viral Video) ಆಗಿದೆ.

ಅವಳಿ ಎಂಜಿನ್ ಹೊಂದಿರುವ ಪೈಪರ್ ಪಿಎ-31ಟಿ1 ಅಕ್ಟೋಬರ್‌ 22ರ ಬೆಳಗ್ಗೆ 9:52ರ ಸುಮಾರಿಗೆ ಟೇಕ್‌ ಆಫ್‌ ಆದ ಸ್ವಲ್ಪ ಸಮಯದ ನಂತರ ನಿಯಂತ್ರಣ ಕಳೆದುಕೊಂಡು ರನ್‌ವೇಗೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿತು. ಘಟನೆ ವೇಳೆ ವಿಮಾನದಲ್ಲಿ ಇಂಧನ ಭರ್ತಿ ಇದ್ದ ಕಾರಣ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಪತನದ ದೃಶ್ಯ ಇಲ್ಲಿದೆ:



ದುರಂತಕ್ಕೀಡಾದ ವಿಮಾನದಲ್ಲಿ ಇಬ್ಬರೇ ಇದ್ದರು. ಇಬ್ಬರೂ ಮೃತಪಟ್ಟಿದ್ದು, ಅವರನ್ನು ಟೋನಿ ಬೊರ್ಟೋನ್ ಮತ್ತು ಜುವಾನ್ ಮಾಲ್ಡೊನಾಡೊ ಎಂದು ಗುರುತಿಸಲಾಗಿದೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: ಸಾವನ್ನೇ ಗೆದ್ದ ರಮೇಶ್‌ ಎಂಬ ದೇವರ ಮಗ: ಅಹಮದಾಬಾದ್‌ ವಿಮಾನ ದುರಂತದಲ್ಲಿ ಬದುಕುಳಿದಿದ್ದೇ ಪವಾಡ; ಪಾರಾಗಿದ್ದು ಹೇಗೆ?

ಅಪಘಾತದ ದೃಶ್ಯ ಸೆರೆ

ಟೇಕ್‌ ಆಫ್‌ ಬೆನ್ನಲ್ಲೇ ವಿಮಾನ ನಿಯಂತ್ರಣ ಕಳೆದುಕೊಂಡು ಉಲ್ಟಾ ಆಗಿದೆ. ಬಳಿಕ ರನ್‌ ವೇಗೆ ಅಪ್ಪಳಿಸಿದೆ. ವಿಮಾನ ಪತನನವಾಗುತ್ತಿದ್ದಂತೆ ಬೆಂಕಿ ಹತ್ತಿಕೊಂಡಿದೆ. ವಿಮಾನ ಬೆಂಕಿಯುಂಡೆಯಾಗಿ ಬದಲಾಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ತುರ್ತು ಮತ್ತು ಅಗ್ನಿಶಾಮಕ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಕ್ರಮ ಕೈಗೊಂಡವು ಎಂದು ರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (INAC) ತಿಳಿಸಿದೆ. ಅಪಘಾತಕ್ಕೆ ಕಾರಣವೇನು ಎನ್ನುವ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ತನಿಖೆ ನಡೆಸಲು ಜುಂಟಾ ಇನ್ವೆಸ್ಟಿಗಡೋರಾ ಡಿ ಆಕ್ಸಿಡೆಂಟೆಸ್ ಡಿ ಅವಿಯಾಸಿಯನ್ ಸಿವಿಲ್ (Junta Investigadora de Accidentes de Aviacion Civil-JIAAC) ಅನ್ನು ಸಕ್ರಿಯಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈರಲ್‌ ಆಗಿರುವ ವಿಡಿಯೊದಲ್ಲಿ ವಿಮಾನವು ಸ್ವಲ್ಪ ಎತ್ತರಕ್ಕೆ ಏರಿ ನಂತರ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿರುವುದು ಕಂಡು ಬಂದಿದೆ. ಪ್ರಾಥಮಿಕ ಮೂಲಗಳ ಪ್ರಕಾರ ಟೇಕ್ ಆಫ್ ಸಮಯದಲ್ಲಿ ಟೈರ್ ಸ್ಫೋಟಗೊಂಡಿರುವ ಕಾರಣ ಅಪಘಾತವಾಗಿರುವ ಸಾಧ್ಯತೆ ಇದೆ. ನಿಖರ ಕಾರಣ ತನಿಖೆಯ ಬಳಿಕವಷ್ಟೇ ತಿಳಿದು ಬರಲಿದೆ.

ಫ್ಲೈಟ್-ಟ್ರ್ಯಾಕಿಂಗ್ ಸೈಟ್ ಫ್ಲೈಟ್‌ರಾಡರ್ 24 ಪ್ರಕಾರ, ಅಪಘಾತಕ್ಕೀಡಾದ ಜೆಟ್‌ ವೆನೆಜುವೆಲಾದೊಳಗೆ ಸಾಕಷ್ಟು ಬಾರಿ ಹಾರಾಟ ನಡೆಸಿತ್ತು ಮತ್ತು ಇತ್ತೀಚೆಗೆ ಪನಾಮ ಮತ್ತು ಕ್ಯೂಬಾಗೆ ತೆರಳಿ ಯಸಸ್ವಿಯಾಗಿ ಮರಳಿತ್ತು.

ಕೆಲವೇ ದಿನಗಳ ಅಂತರದಲ್ಲಿ 2ನೇ ಅಪಘಾತ

ವೆನೆಜುವೆಲಾದಲ್ಲಿ ಕೆಲವೇ ದಿನಗಳ ಅಂತರದಲ್ಲಿ ಸಂಭವಿಸಿದ 2ನೇ ವಿಮಾನ ಅಪಘಾತ ಇದಾಗಿದೆ. ಕೆಲವೇ ವಾರಗಳ ಹಿಂದೆ ಕ್ಯಾರಕಾಸ್‌ನ ಹೊರ ವಲಯದ ಸೈಮನ್ ಬೊಲಿವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಲಿಯರ್‌ ಜೆಟ್ 55 ಅಪಘಾತಕ್ಕೀಡಾಗಿತ್ತು. ಪ್ರತಿಕೂಲ ಹವಾಮಾನ ಮತ್ತು ಬಲವಾದ ಗಾಳಿಯಿಂದಾಗಿ ನಿಯಂತ್ರಣ ಕಳೆದುಕೊಂಡಾಗ ಖಾಸಗಿ ಜೆಟ್ ನೆಲಕ್ಕುಳಿತ್ತು. ಆ ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದರು.