ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಛಲವಾದಿ ನಾರಾಯಣಸ್ವಾಮಿಯನ್ನು ನಾಯಿಗೆ ಹೋಲಿಸಿದ ಶಾಸಕ ಅಶೋಕ್ ರೈ; ದೂರು ದಾಖಲು

ಪುತ್ತೂರು ಶಾಸಕ ಅಶೋಕ್‌ ಕುಮಾ‌ರ್ ರೈ ಅವರು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿರುವ ಛಲವಾದಿ ಟಿ. ನಾರಾಯಣಸ್ವಾಮಿಯವರನ್ನು ನಿಂದಿಸಿದ್ದಾರೆ. ಛಲವಾದಿ ಸಮುದಾಯವನ್ನು ನಿಂದಿಸಿ, ಸಮುದಾಯಗಳ ನಡುವೆ ದ್ವೇಷ ಭಾವನೆ ಬರುವ ರೀತಿ ಮಾತನಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ಬಿಜೆಪಿ ಎಸ್‌ಸಿ ಮೋರ್ಚಾ ಆಗ್ರಹಿಸಿದೆ.

ಛಲವಾದಿ ನಾರಾಯಣಸ್ವಾಮಿಯನ್ನು ನಾಯಿಗೆ ಹೋಲಿಸಿದ ಶಾಸಕ ಅಶೋಕ್ ರೈ

ಶಾಸಕ ಅಶೋಕ್‌ ಕುಮಾರ್‌ ರೈ ಮತ್ತು ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ. -

Prabhakara R
Prabhakara R Feb 16, 2026 10:47 PM

ಪುತ್ತೂರು: ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಯನ್ನು ನಾಯಿಗೆ ಹೋಲಿಸಿದ ಶಾಸಕ ಅಶೋಕ್ ರೈ ವಿರುದ್ಧ ಪುತ್ತೂರು ಬಿಜೆಪಿ ಎಸ್‌ಸಿ ಮೋರ್ಚಾದಿಂದ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ತಮ್ಮ ಕಾರ್ಯವೈಖರಿ ಬಗ್ಗೆ ಟೀಕೆ ಮಾಡಿದ್ದಕ್ಕೆ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಪುತ್ತೂರು ಶಾಸಕ ಶಾಸಕ ಅಶೋಕ್ ರೈ ಆಕ್ರೋಶ ಹೊರಹಾಕಿ, ಬಿಜೆಪಿ ನಾಯಕನನ್ನು ನಾಯಿಗೆ ಹೋಲಿಸಿದ್ದರಿಂದ ದೂರು ಸಲ್ಲಿಕೆಯಾಗಿದೆ.

ಪುತ್ತೂರು ಕ್ಷೇತ್ರದ ಶಾಸಕ ಅಶೋಕ್‌ ಕುಮಾ‌ರ್ ರೈ ಅವರು ರಾಜ್ಯ ವಿಧಾನ ಪರಿಷತ್‌ ಸದಸ್ಯ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿರುವ ಛಲವಾದಿ ಟಿ. ನಾರಾಯಣಸ್ವಾಮಿಯವರನ್ನು ನಿಂದಿಸಿದ್ದಾರೆ. ಪರಿಶಿಷ್ಟ ಜಾತಿ ಸಮುದಾಯವಾದ ಛಲವಾದಿ ಸಮುದಾಯವನ್ನು ನಿಂದಿಸಿ, ಸಮುದಾಯಗಳ ನಡುವೆ ದ್ವೇಷ ಭಾವನೆ ಬರುವ ರೀತಿ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಹೀಗಾಗಿ ಶಾಸಕ ಅಶೋಕ್‌ ಕುಮಾರ್ ರೈ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಮಾತನಾಡಿ, "ವಿಬಿ ಜಿರಾಮ್‌ಜಿ ಕಾರ್ಯಕ್ರಮದ ಬಗ್ಗೆ ಅಪಪ್ರಚಾರ ಮಾಡಿ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲಿ ಪಾದಯಾತ್ರೆಗಳು ನಡೆದ ಸಂದರ್ಭದಲ್ಲಿ ಬಿಜೆಪಿ ವತಿಯಿಂದ ಉಪ್ಪಿನಂಗಡಿಯಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು. ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿಯವರು ಆ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಅವರು ಮಾತನಾಡಿರುವುದನ್ನು ಶಾಸಕರು ಅಪಾರ್ಥ ಮಾಡಿಕೊಂಡು, ಅವರ ಕುರಿತು ಅಗೌರವಯುತವಾಗಿ ಮಾತನಾಡಿದ್ದಾರೆ ಎಂದು ಟೀಕಿಸಿದರು.

Puttur News

ಶಾಸಕರು ಅವರದೇ ಪಕ್ಷದ ಸರಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳು ಇರುವಾಗ ಅವರಿಗೆ ತಿಳಿಹೇಳುವುದನ್ನು ಬಿಟ್ಟು ಪೊಲೀಸರು, ಸರಕಾರಿ ಅಧಿಕಾರಿಗಳನ್ನು ನಿಂದಿಸುವ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಇದೀಗ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ದೇವಸ್ಥಾನಕ್ಕೆ ಬರುವಾಗ ರಾಜಕೀಯವನ್ನು ಚಪ್ಪಲಿಯಂತೆ ಹೊರಗಿಟ್ಟು ಬನ್ನಿ ಎಂದವರೇ ಅಲ್ಲಿ ನಿಂತು ರಾಜಕೀಯ ಮಾತನಾಡಿದರು. ಇದನ್ನು ಬಿಜೆಪಿ ಖಂಡಿಸುತ್ತದೆ.

ಶಾಸಕರಾಗಿ ಅವರು ಎರಡೂವರೆ ವರ್ಷದಲ್ಲಿ ಅವರ ಕೆಲಸ ಸರಿಯಾಗಿ ಮಾಡುತ್ತಿದ್ದಾರೆ. ಆದರೆ ಅವರ ಕೆಲಸಗಳು ಈ ರೀತಿಯ ಕೆಟ್ಟ ಪದಗಳ ಪ್ರಯೋಗದಿಂದಾಗಿ ಗೋಡೆಯ ಬಣ್ಣವನ್ನು ಮಸಿ ನುಂಗಿದಂತೆ ಆಗುತ್ತಿದೆ. ಅವರು ಬಹುಮತದಿಂದ ಆಯ್ಕೆಯಾಗಿರುವ ಶಾಸಕರಲ್ಲ. ಅವರ ವಿರುದ್ಧ 1 ಲಕ್ಷ ಹಿಂದೂ ಮತಗಳಿವೆ ಎನ್ನುವುದನ್ನು ಗಮನಿಸಿಕೊಂಡು ಕೆಲಸ ಮಾಡಬೇಕು. ಶಾಸಕರ ಇಂತಹ ವರ್ತನೆಯಿಂದ ಪುತ್ತೂರಿನ ಇತಿಹಾಸಕ್ಕೂ ಕಳಂಕ ಬರುತ್ತದೆ. ಅವರು ಮಾಡಿರುವ ತಪ್ಪನ್ನು ಸರಿಪಡಿಸುವ ಕೆಲಸವನ್ನು ಅವರೇ ಮಾಡಬೇಕು. ಈ ಹಿನ್ನೆಲೆಯಲ್ಲಿ ಎಸ್‌ಸಿ ಮೋರ್ಚಾದ ವತಿಯಿಂದ ಪೊಲೀಸರಿಗೆ ದೂರು ನೀಡುತ್ತಿದ್ದೇವೆ ಎಂದು ಹೇಳಿದರು.

ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು ಮಾತನಾಡಿ, ಕೇಂದ್ರ ಸರಕಾರದ ವಿಬಿ-ಜಿರಾಮ್‌ಜಿ ಯೋಜನೆಯ ಬಗ್ಗೆ ರಾಜ್ಯ ಸರಕಾರ ಜನರಿಗೆ ತಪ್ಪು ಮಾಹಿತಿಯನ್ನು ನೀಡುವ ಕೆಟ್ಟ ಪ್ರವೃತ್ತಿಯನ್ನು ಮಾಡುತ್ತಿರುವುದನ್ನು ಗಮನಿಸುತ್ತಿದ್ದೇವೆ. ಈ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡುವ ನಿಟ್ಟಿನಲ್ಲಿ ಛಲವಾದಿ ನಾರಾಯಣಸ್ವಾಮಿಯವರನ್ನು ಆಹ್ವಾನಿಸಿ ಉಪ್ಪಿನಂಗಡಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದೆವು. ಈ ವೇಳೆ ನಾರಾಯಣ ಸ್ವಾಮಿಯವರು ನಿಮಗೆ ತಾಕತ್ತಿದ್ದರೆ ನಮ್ಮೊಂದಿಗೆ ವೇದಿಕೆ ಹಂಚಿಕೊಳ್ಳಿ. ನಿಮ್ಮ ಸುಳ್ಳಿನ ಬಟ್ಟೆಯನ್ನು ಬಿಚ್ಚಿ ಸತ್ಯವನ್ನು ಜನರಿಗೆ ತಿಳಿಸುತ್ತೇನೆ ಎನ್ನುವ ಮಾತನ್ನು ಅಲ್ಲಿ ಉಲ್ಲೇಖ ಮಾಡಿದ್ದರು. ಆದರೆ ಅವರ ಕುರಿತು ಪುತ್ತೂರು ಶಾಸಕರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದರು.

ನಮ್ಮ ಸಂಬಂಧ ಹಾಳು ಮಾಡಲು ಬರಬೇಡಿ ಎಂದು ಹೇಳಿದ್ದಾರೆ. ಅವರೊಂದಿಗೆ ಯಾವ ಬಿಜೆಪಿಯವರು ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಹೇಳಲಿ. ನಮ್ಮ ನಾಯಕರ ಬಗ್ಗೆ ಈ ರೀತಿಯ ಹೇಳಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಯಾವ ರೀತಿ ಉತ್ತರ ನೀಡಬೇಕು ಎನ್ನುವ ಬಗ್ಗೆ ತೀರ್ಮಾನಿಸುತ್ತೇವೆ. ನಮ್ಮೊಳಗೆ ಹುಳಿ ಹಿಂಡಲು ಇವರಿಗೆ ನಾವು ಅವಕಾಶ ಕೊಡುವುದಿಲ್ಲ. ಶಾಸಕರು ಬೇಷರತ್ ಕ್ಷಮೆಯಾಚನೆ ಮಾಡದಿದ್ದರೆ ಮುಂದಕ್ಕೆ ಹೇಗೆ ಹೋರಾಟ ಮಾಡಬೇಕು, ಮತ್ತು ನಮ್ಮ ನಾಯಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಠಾಣೆಗೆ ದೂರು ನೀಡಿದ್ದೇವೆ” ಎಂದು ಹೇಳಿದರು.

ದಲಿತ ಮುಖಂಡ ಅಣ್ಣಪ್ಪ ಕಾರೆಕ್ಕಾಡು ಮಾತನಾಡಿ, “ಪರಿಶಿಷ್ಟ ಜಾತಿಗೆ ಸೇರಿದ ನಾಯಕನನ್ನು ಪ್ರಾಣಿಗೆ ಹೋಲಿಸಿ ಶಾಸಕರು ಮಾತನಾಡಿದ್ದಾರೆ. ಇದು ಸಮುದಾಯಕ್ಕೆ ಸಲ್ಲದ ಮಾತು. ಬಿಜೆಪಿ-ಕಾಂಗ್ರೆಸ್‌ನವರು ರಾಜಕೀಯಕ್ಕೆ ಸಂಬಂಧಿಸಿದಂತೆ ಅವರು ಮಾತನಾಡಿಕೊಳ್ಳಬಹುದು. ಆದರೆ ಶಾಸಕರ ಈ ಹೇಳಿಕೆ ಇಡೀ ಪರಿಶಿಷ್ಟ ಜಾತಿಗೆ ಅನ್ವಯವಾಗುತ್ತದೆ. ಇದರಿಂದ ಇಡೀ ಸಮುದಾಯಕ್ಕೆ ನೋವಾಗಿದೆ” ಎಂದು ಹೇಳಿದರು.

ಪುತ್ತೂರು ಕಾಲೇಜು ಸ್ಥಳಾಂತರ ವಿಚಾರಕ್ಕೆ ಶಾಸಕನಿಗೇ ಲೇಡಿ ಪ್ರಿನ್ಸಿಪಾಲ್‌ ಕ್ಲಾಸ್‌; ತಬ್ಬಿಬ್ಬಾದ ಅಶೋಕ್ ರೈ!

ಮಾಜಿ ಶಾಸಕ ಸಂಜೀವ ಮಠಂದೂರು, ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಲೋಕೇಶ್ ಚಾಕೊಟೆ, ನಗರ ಸಭಾ ಮಾಜಿ ಅಧ್ಯಕ್ಷೆ ಲೀಲಾವತಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾ‌ರ್, ಕಾರ್ಯದರ್ಶಿಗಳಾದ ಯುವರಾಜ ಪೆರಿಯತ್ತೋಡಿ, ಮಣಿಕಂಠ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಎಸ್‌ಸಿ ಮೋರ್ಚಾ ಅಧ್ಯಕ್ಷ ಲೋಹಿತ್ ಅಮ್ಮಿನಡ್ಕ, ವಸಂತ ಲಕ್ಷ್ಮೀ, ವಿದ್ಯಾಧರ ಜೈನ್,ದೀಕ್ಷಾ ಪೈ, ಸುನೀಲ್ ದಡ್ಡು, ಮುಖಂಡರಾದ ಸಾಜ ರಾಧಾಕೃಷ್ಣ ಆಳ್ವ, ಚಂದ್ರಶೇಖ‌ರ್ ರಾವ್ ಬಪ್ಪಳಿಗೆ, ಪುರುಷೋತ್ತಮ್ ಮುಂಗ್ಲಿಮನೆ, ನಿತೀಶ್ ಶಾಂತಿವನ, ವಿರೂಪಾಕ್ಷ ಭಟ್ ಮಚ್ಚಿಮಲೆ, ನಾಗೇಶ್ ಟಿ.ಎಸ್., ರಫೀಕ್ ದರ್ಬೆ, ಅಭಿಜಿತ್ ಮೊದಲಾದವರು ಉಪಸ್ಥಿತರಿದ್ದರು.