ಜಾಗತಿಕವಾಗಿ ಸ್ಥಗಿತಗೊಂಡ ಎಕ್ಸ್: ಲಕ್ಷಾಂತರ ಬಳಕೆದಾರರ ಪರದಾಟ
ಸಾಮಾಜಿಕ ಜಾಲತಾಣ X ವಿಶ್ವವ್ಯಾಪಿ ತಾಂತ್ರಿಕ ದೋಷಕ್ಕೆ ಒಳಗಾಗಿದೆ. ಸಾವಿರಾರು ಬಳಕೆದಾರರು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವರದಿ ಮಾಡಿದ್ದಾರೆ. ಲಾಗಿನ್ ಸಮಸ್ಯೆ, ಪೋಸ್ಟ್‌ಗಳು ಲೋಡ್ ಆಗದಿರುವುದು, ಟೈಮ್‌ಲೈನ್ ರಿಫ್ರೆಶ್ ಆಗದಿರುವುದು ಸೇರಿದಂತೆ ಹಲವು ತೊಂದರೆಗಳನ್ನು ಬಳಕೆದಾರರು ಎದುರಿಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ. -
ನವದೆಹಲಿ, ಫೆ. 16: ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಯಾದ (Social media platform) ಎಕ್ಸ್ (ಈ ಹಿಂದಿನ ಟ್ವಿಟರ್) ಸೋಮವಾರ (ಫೆಬ್ರವರಿ 16) ಜಾಗತಿಕವಾಗಿ ತಾಂತ್ರಿಕ ಸಮಸ್ಯೆಯನ್ನು ಎದುರಿಸಿದೆ. ಅಮೆರಿಕ (America), ಬ್ರಿಟನ್ (Britain) ಮತ್ತು ಭಾರತ (India) ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಸಾವಿರಾರು ಬಳಕೆದಾರರು ಎಕ್ಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿರುವುದಾಗಿ ವರದಿ ಮಾಡಿದ್ದಾರೆ.
ವೆಬ್‌ಸೈಟ್‌ಗಳ ಸ್ಥಿತಿಗತಿಯನ್ನು ಪತ್ತೆಹಚ್ಚುವ ಡೌನ್‌ಡಿಟೆಕ್ಟರ್ (Downdetector) ಮಾಹಿತಿ ನೀಡಿದಂತೆ, ಭಾರತೀಯ ಕಾಲಮಾನ ಸಂಜೆ ಸುಮಾರು 6:30ರ ಹೊತ್ತಿಗೆ ಈ ಸಮಸ್ಯೆ ಬಗ್ಗೆ 25,000ಕ್ಕೂ ಹೆಚ್ಚು ದೂರುಗಳು ಬಂದಿದ್ದವು.
ಎಕ್ಸ್ ಪ್ಲಾಟ್‌ಫಾರ್ಮ್ ಪ್ರವೇಶಿಸಲು ಸಾಧ್ಯವಾಗದಿರುವುದು, ಹೊಸ ಪೋಸ್ಟ್‌ಗಳು ಅಥವಾ ಫೀಡ್‌ಗಳು ಲೋಡ್ ಆಗದೇ ಇರುವುದು, ಲಾಗಿನ್ ಮಾಡುವಲ್ಲಿ ತೊಂದರೆ ಮತ್ತು ಆಪ್ ರಿಫ್ರೆಶ್ ಆಗದಿರುವುದು ಸೇರಿದಂತೆ ಅನೇಕ ತೊಂದರೆಗಳನ್ನು ಬಳಕೆದಾರರು ಎದರಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಸ್ಥಗಿತ:
BREAKING: X experienced a massive service disruption early Monday morning, with tens of thousands of users reporting total blackouts. pic.twitter.com/IYyB07vkmv
— Mujabi26 (@RubongoyaMuja) February 16, 2026
ಈ ಸ್ಥಗಿತಕ್ಕೆ ನಿಖರವಾದ ಕಾರಣವೇನು ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಎಕ್ಸ್ ಸಂಸ್ಥೆ ಕೂಡ ಈ ಸಮಸ್ಯೆಯ ಬಗ್ಗೆ ತಕ್ಷಣಕ್ಕೆ ಯಾವುದೇ ಅಧಿಕೃತ ಉತ್ತರವನ್ನು ನೀಡಿಲ್ಲ.
ಭಾರತದ AI ಕ್ರಾಂತಿಗೆ ಪ್ರಧಾನಿ ಮೋದಿ ಇಂದು ಚಾಲನೆ; ಟೆಕ್ ದೈತ್ಯರು ಸೇರಿ ಜಾಗತಿಕ ನಾಯಕರು ಭಾಗಿ
ವಿವಿಧ ದೇಶಗಳಲ್ಲಿ ಏಕಕಾಲಕ್ಕೆ ಸಮಸ್ಯೆ
ಈ ತಾಂತ್ರಿಕ ಅಡಚಣೆಯು ಕೇವಲ ಒಂದು ದೇಶಕ್ಕೆ ಸೀಮಿತವಾಗಿರದೆ, ಹಲವು ದೇಶಗಳಲ್ಲಿ ಏಕಕಾಲಕ್ಕೆ ಕಂಡುಬಂದಿದೆ. ಇದು ಈ ಸಮಸ್ಯೆಯ ವ್ಯಾಪ್ತಿ ಎಷ್ಟು ದೊಡ್ಡದಿದೆ ಎಂಬುದನ್ನು ಸೂಚಿಸುತ್ತದೆ. ಮೊಬೈಲ್ ಅಪ್ಲಿಕೇಶನ್ ಮತ್ತು ಡೆಸ್ಕ್‌ಟಾಪ್ ಎರಡರಲ್ಲೂ ಬಳಕೆದಾರರು ಸಮಸ್ಯೆಯನ್ನು ಎದುರಿಸಿದ್ದಾರೆ. ಡೌನ್‌ಡಿಟೆಕ್ಟರ್‌ನ ಲೈವ್ ಟ್ರ್ಯಾಕಿಂಗ್‌ನಲ್ಲಿ ದೂರುಗಳ ಸಂಖ್ಯೆ ದಿಢೀರನೆ ಏರಿಕೆಯಾಗಿರುವುದು ದೊಡ್ಡ ಮಟ್ಟದ ಸೇವಾ ವ್ಯತ್ಯಯವನ್ನು ಖಚಿತಪಡಿಸಿದೆ.
ಈ ಹಿಂದೆಯೇ ಆಗಿತ್ತು
ಎಕ್ಸ್ ಪ್ಲಾಟ್‌ಫಾರ್ಮ್ ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಮಾರ್ಚ್‌ನಲ್ಲಿ ಇಂತಹುದೇ ದೊಡ್ಡ ಮಟ್ಟದ ಸ್ಥಗಿತ ಸಂಭವಿಸಿತ್ತು. ಇನ್ನು ಕಳೆದ ನವೆಂಬರ್‌ನಲ್ಲಿ ಕ್ಲೌಡ್‌ಫ್ಲೇರ್ (Cloudflare) ಸೇವೆಯಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಎಕ್ಸ್ ಸೇರಿದಂತೆ ಹಲವು ವೆಬ್‌ಸೈಟ್‌ಗಳು ಸ್ಥಗಿತಗೊಂಡಿದ್ದವು. ಸದ್ಯಕ್ಕೆ ಸೇವೆಗಳು ಕ್ರಮೇಣವಾಗಿ ಚೇತರಿಸಿಕೊಳ್ಳುತ್ತಿರುವಂತೆ ಕಂಡುಬರುತ್ತಿದ್ದರೂ, ಕಂಪನಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಇನ್ನು ಲಭ್ಯವಾಗಿಲ್ಲ. ಈ ಸ್ಥಗಿತವು ಬಳಕೆದಾರರಲ್ಲಿ ಗೊಂದಲ ಮೂಡಿಸಿದ್ದು, ಅನೇಕರು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.