ರಿಯಾದ್ ವಿಮಾನ ನಿಲ್ದಾಣ, ಸೌದಿ ಅರೇಬಿಯಾ ಮೇಲೆ ಹೌತಿ ಬಂಡುಕೋರರ ದಾಳಿ: ಮೂವರು ಬಲಿ
Houthi Rebels Attack Riyadh Airport: ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸೌದಿಯಾ ಏರ್‌ಲೈನ್ಸ್‌ನ ವಿಮಾನವನ್ನು ಗುರಿಯಾಗಿಸಿಕೊಂಡು ಹೌತಿ ಬಂಡುಕೋರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸೌದಿ ಅರೇಬಿಯಾದ ಪೈಲಟ್ ಸೇರಿ ಮೂವರು ಮೃತಪಟ್ಟಿದ್ದಾರೆ.
ಸೌದಿ ಅರೇಬಿಯಾ ಮೇಲೆ ಹೌತಿ ಬಂಡುಕೋರರ ದಾಳಿ -
ರಿಯಾದ್, ಅ. 9: ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸೌದಿಯಾ ಏರ್‌ಲೈನ್ಸ್‌ನ ವಿಮಾನವನ್ನು ಗುರಿಯಾಗಿಸಿಕೊಂಡು ಹೌತಿ ಬಂಡುಕೋರರು ನಡೆಸಿದ ದಾಳಿಯಲ್ಲಿ (Houthi rebels attack) ತಮ್ಮ ದೇಶದ ಮೂವರು ನಾಗರಿಕರು ಮೃತಪಟ್ಟಿರುವುದನ್ನು ಸೌದಿ ಅರೇಬಿಯಾ ದೃಢಪಡಿಸಿದೆ. ಮೃತಪಟ್ಟವರಲ್ಲಿ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಪೈಲಟ್ ಕೂಡ ಒಬ್ಬರು. ಅವರನ್ನು ಹಮೌದ್ ಅಲಿ ಅಲ್ಕಲ್ತಮಿ ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ವಿವಿಧ ದೇಶಗಳ ಹಲವರು ಗಾಯಗೊಂಡಿದ್ದಾರೆ ಎಂದು ಸೌದಿ ಅರೇಬಿಯಾದ (Saudi Arabia) ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
ಸೌದಿ ನೇತೃತ್ವದ ಮೈತ್ರಿಕೂಟ ಮತ್ತು ಯೆಮನ್‌ನ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಸರ್ಕಾರವು ಹೌತಿ ಬಂಡುಕೋರರ ವಿರುದ್ಧ ಪ್ರತಿದಾಳಿ ಆರಂಭಿಸಿ, ಅವರ ವಶದಲ್ಲಿರುವ ಯೆಮನ್‌ನ ಕೆಲವು ಪ್ರದೇಶಗಳು ಹಾಗೂ ಕೆಂಪು ಸಮುದ್ರದ ಸುತ್ತಮುತ್ತಲಿನ ಭಾಗಗಳನ್ನು ಮರಳಿ ವಶಪಡಿಸಿಕೊಳ್ಳಲು ಪ್ರಯತ್ನಿಸಿದ ಬಳಿಕ, ಸೌದಿ ಅರೇಬಿಯಾದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.
ಈ ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಇನ್ನು ಹಲವರಿಗೆ ಗಂಭೀರ ಗಾಯಗಳಾಗಿವೆ. ದಾಳಿಯ ಬಳಿಕ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ವಿಮಾನ ಸಂಚಾರ ಸಹಜ ಸ್ಥಿತಿಗೆ ಮರಳಿದೆ. ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಮಹಾ ಪ್ರಾಧಿಕಾರದ ಹೇಳಿಕೆಯ ಪ್ರಕಾರ, ಹೌತಿಗಳು ಗುರುವಾರ (ಅ. 8) ಎರಡು ದಾಳಿಗಳನ್ನು ನಡೆಸಿದ್ದಾರೆ.
ಅಕ್ಟೋಬರ್ 10ರವರೆಗೆ ರಿಯಾದ್ ಟ್ರಿಪ್ ರದ್ದುಗೊಳಿಸಿದ ಏರ್ ಇಂಡಿಯಾ, ಇಂಡಿಗೋ
ಮೊದಲ ದಾಳಿಯಲ್ಲಿ ವಿಮಾನ ನಿಲ್ದಾಣದ ಸೌಲಭ್ಯಗಳ ಮೇಲೆ ದಾಳಿ ನಡೆಸಲಾಗಿತ್ತು. ಎರಡನೇ ದಾಳಿಯಲ್ಲಿ ಸೌದಿಯಾ ಏರ್‌ಲೈನ್ಸ್‌ನ ವಿಮಾನವನ್ನು ಗುರಿಯಾಗಿಸಲಾಗಿತ್ತು. ನೆಲದ ಮೇಲೆ ನಿಲುಗಡೆ ಮಾಡಲಾಗಿದ್ದ ಅದರ ಒಂದು ವಿಮಾನಕ್ಕೆ ಹಾನಿಯಾಗಿದೆ. ದಾಳಿ ನಡೆದ ಸಂದರ್ಭದಲ್ಲಿ ಆ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಎಂದು ಸೌದಿ ಗ್ರೂಪ್ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ಹೌತಿ ಬಂಡುಕೋರರು ಇತ್ತೀಚಿನ ವಾರಗಳಲ್ಲಿ ವಶಪಡಿಸಿಕೊಂಡಿರುವ ಯೆಮನ್‌ನ ಎಲ್ಲ ಪ್ರದೇಶಗಳನ್ನು ಸೌದಿ ಬೆಂಬಲಿತ ಯೆಮನ್ ಸರ್ಕಾರ ಮರಳಿ ಪಡೆಯಬೇಕು. ಅಲ್ಲಿಯವರೆಗೆ ಹೌತಿ ಬಂಡುಕೋರರೊಂದಿಗೆ ಕದನ ವಿರಾಮಕ್ಕೆ ಸೌದಿ ಅರೇಬಿಯಾ ಒಪ್ಪುವುದಿಲ್ಲ ಎಂದು ವರದಿಯಾಗಿದೆ.
ಹೌತಿ ಬಂಡುಕೋರರ ಮಿಲಿಟರಿ ಬೆದರಿಕೆಗೆ ಸೌದಿ ಅರೇಬಿಯಾ ಮಣಿಯುವುದಿಲ್ಲ ಎಂದು ತಿಳಿಸಿದೆ. ಈ ವಾರದ ಆರಂಭದಲ್ಲಿ, ಹೌತಿ ಬಂಡುಕೋರರ ವಿರುದ್ಧದ ಪ್ರತಿದಾಳಿಯಲ್ಲಿ ತಾನೂ ಸೇರಿಕೊಂಡಿರುವುದಾಗಿ ಸೌದಿ ನೇತೃತ್ವದ ಮೈತ್ರಿಕೂಟ ಘೋಷಿಸಿತ್ತು. ಯೆಮನ್ ಸರ್ಕಾರಕ್ಕೆ ಬೆಂಬಲ ನೀಡಲು 100 ಯುದ್ಧವಿಮಾನಗಳನ್ನು ನಿಯೋಜಿಸಿರುವುದಾಗಿ ತಿಳಿಸಿತ್ತು.
2022ರಲ್ಲಿ ಜಾರಿಯಲ್ಲಿದ್ದ ಕದನ ವಿರಾಮ ಮುರಿದುಬಿದ್ದ ಬಳಿಕ, ಜುಲೈಯಲ್ಲಿ ಸೌದಿ ಅರೇಬಿಯಾ ಮತ್ತು ಹೌತಿ ಬಂಡುಕೋರರ ನಡುವಿನ ಸಂಘರ್ಷ ಮತ್ತೆ ತೀವ್ರಗೊಂಡಿತು. ಕಳೆದ ತಿಂಗಳು ಹೌತಿ ಬಂಡುಕೋರರು ಕ್ಷಿಪ್ರ ದಾಳಿ ನಡೆಸಿ, ಯೆಮನ್‌ನ ಕೆಂಪು ಸಮುದ್ರದ ಸಂಪೂರ್ಣ ಕರಾವಳಿ ಪ್ರದೇಶವನ್ನು ವಶಪಡಿಸಿಕೊಂಡು, ಬಾಬ್ ಅಲ್-ಮಂದೆಬ್ ಜಲಸಂಧಿಯ ಮೇಲೂ ನಿಯಂತ್ರಣ ಸಾಧಿಸಿದ ಬಳಿಕ ಪರಸ್ಪರ ದಾಳಿಗಳನ್ನು ನಡೆಸುತ್ತಿವೆ.