ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Donald Trump: ದಾಳಿ ನಡೆಸಿದ್ರೆ ಜಗತ್ತಿನಿಂದಲೇ ಅಳಿಸಿ ಹಾಕ್ತೇವೆ; ಇರಾನ್‌ಗೆ ಖಡಕ್‌ ಎಚ್ಚರಿಕೆ ನೀಡಿದ ಟ್ರಂಪ್‌

ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಕದನ ತಾರಕ್ಕೇರಿದೆ. ಇರಾನ್‌ ಮೇಲೆ ದಾಳಿ ಮಾಡಲು ತಾನು ಯಾವುದೇ ಕುಮ್ಮಕ್ಕು ನೀಡಿಲ್ಲ ಎಂದು ಅಮೆರಿಕ ಇದೀಗ ಸ್ಪಷ್ಟಪಡಿಸಿದೆ. ಇರಾನ್‌ಗೆ ಎಚ್ಚರಿಕೆ ನೀಡಿದ ಅವರು ಇರಾನ್ ನಮ್ಮ ಮೇಲೆ ಯಾವುದೇ ರೀತಿಯಲ್ಲಿ ದಾಳಿ ನಡೆಸಿದರೆ ಭಾರೀ ಬೆಲೆ ತೆತ್ತಬೇಕು ಎಂದು ಹೇಳಿದ್ದಾರೆ.

ದಾಳಿ ನಡೆಸಿದ್ರೆ  ಅಳಿಸಿ ಹಾಕ್ತೇವೆ; ಇರಾನ್‌ಗೆ ಟ್ರಂಪ್‌ ಎಚ್ಚರಿಕೆ

-

Vishakha Bhat Heggar
Vishakha Bhat Heggar Jun 15, 2025 5:58 PM

ವಾಷಿಂಗ್ಟನ್‌: ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಕದನ ತಾರಕ್ಕೇರಿದೆ. ಇರಾನ್‌ ಮೇಲೆ ದಾಳಿ ಮಾಡಲು ತಾನು ಯಾವುದೇ ಕುಮ್ಮಕ್ಕು ನೀಡಿಲ್ಲ ಎಂದು ಅಮೆರಿಕ ಇದೀಗ ಸ್ಪಷ್ಟಪಡಿಸಿದೆ. ಇರಾನ್ ಮೇಲೆ ಇಸ್ರೇಲ್ ರಾತ್ರೋರಾತ್ರಿ ನಡೆಸಿದ ದಾಳಿಯಲ್ಲಿ ಅಮೆರಿಕದ ಪಾತ್ರವಿಲ್ಲ ಎಂದು ಹೇಳಿದ ಟ್ರಂಪ್, (Donald Trump) ಭಾನುವಾರ ವಾಷಿಂಗ್ಟನ್ ಡಿಸಿ ಜೊತೆಗಿನ ಆರನೇ ಸುತ್ತಿನ ಪರಮಾಣು ಮಾತುಕತೆಯನ್ನು ಟೆಹ್ರಾನ್ ರದ್ದುಗೊಳಿಸಿದರೂ, "ಇರಾನ್ ಮತ್ತು ಇಸ್ರೇಲ್ ನಡುವೆ ಸುಲಭವಾಗಿ ಒಪ್ಪಂದ ಮಾಡಿಕೊಳ್ಳಬಹುದು ಮತ್ತು ಈ ಸಂಘರ್ಷವನ್ನು ಕೊನೆಗೊಳಿಸಬಹುದು" ಎಂದು ತಮ್ಮ ಟ್ರೂತ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇರಾನ್‌ಗೆ ಎಚ್ಚರಿಕೆ ನೀಡಿದ ಅವರು ಇರಾನ್ ನಮ್ಮ ಮೇಲೆ ಯಾವುದೇ ರೀತಿಯಲ್ಲಿ ದಾಳಿ ನಡೆಸಿದರೆ ಭಾರೀ ಬೆಲೆ ತೆತ್ತಬೇಕು ಎಂದು ಹೇಳಿದ್ದಾರೆ. ಅಮೆರಿಕದ ಸಶಸ್ತ್ರ ಪಡೆಗಳ ಸಂಪೂರ್ಣ ಶಕ್ತಿ ಮತ್ತು ಬಲವು ಹಿಂದೆಂದೂ ನೋಡಿರದ ಮಟ್ಟದಲ್ಲಿ ನಿಮ್ಮ ಮೇಲೆ ದಾಳಿ ನಡೆಸುತ್ತದೆ ಎಂದು ಅವರು ಹೇಳಿದ್ದಾರೆ. ಇಸ್ರೇಲ್ ಶನಿವಾರ ಟೆಹ್ರಾನ್‌ನಲ್ಲಿರುವ ಇರಾನ್‌ನ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಇರಾನ್‌ನ ಬುಶೆಹರ್ ಪ್ರಾಂತ್ಯದ ಪರ್ಷಿಯನ್ ಕೊಲ್ಲಿಯ ದಕ್ಷಿಣ ಪಾರ್ಸ್ ಅನಿಲ ಕ್ಷೇತ್ರಕ್ಕೆ ಸಂಪರ್ಕ ಹೊಂದಿದ ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಸಂಸ್ಕರಣಾ ಘಟಕದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಟ್ರಂಪ್ ಅವರ ಈ ಹೇಳಿಕೆಗಳು ಬಂದವು.

ಇರಾನ್ ಮತ್ತು ಕತಾರ್ ಹಂಚಿಕೊಂಡಿರುವ ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಸಂಸ್ಕರಣಾಗಾರದ ಮೇಲಿನ ಇಸ್ರೇಲ್ ದಾಳಿಯನ್ನು "ಒಂದು ಸ್ಪಷ್ಟ ಆಕ್ರಮಣಶೀಲತೆ ಮತ್ತು ಅತ್ಯಂತ ಅಪಾಯಕಾರಿ ಕೃತ್ಯ" ಎಂದು ಕರೆದ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ಇದು ಅಮೆರಿಕದೊಂದಿಗೆ ಇರಾನ್‌ ನಡೆಸುತ್ತಿರುವ ಪರಮಾಣು ಮಾತುಕತೆಗಳನ್ನು ಹಳಿತಪ್ಪಿಸುವ ಮತ್ತು ಯುದ್ಧವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Israel-Iran Conflict: ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಉಡೀಸ್‌; ಇರಾನ್‌-ಇಸ್ರೇಲ್‌ ಡೆಡ್ಲಿ ಅಟ್ಯಾಕ್‌ ವಿಡಿಯೊ ವೈರಲ್‌

ಇರಾನ್‌ನ ಪರಮಾಣು ಸೌಲಭ್ಯಗಳು, ವಿಜ್ಞಾನಿಗಳು ಮತ್ತು ಉನ್ನತ ಮಿಲಿಟರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡ ಇಸ್ರೇಲ್‌ನ ಆಪರೇಷನ್ ರೈಸಿಂಗ್ ಲಯನ್‌ಗೆ ಪ್ರತಿಕ್ರಿಯೆಯಾಗಿ, ಇರಾನ್‌ ಆಪರೇಷನ್ ಟ್ರೂ ಪ್ರಾಮಿಸ್ 3 ಅನ್ನು ಪ್ರಾರಂಭಿಸಿದೆ. ಇಸ್ರೇಲ್ ನಗರಗಳಾದ ತಮ್ರಾ, ಬ್ಯಾಟ್ ಯಾಮ್ ಮತ್ತು ರೆಹೊವೊಟ್‌ ಮೇಲೆ ಇರಾನ್‌ ದಾಳಿ ನಡೆಸಿದೆ. ದಾಳಿಯಲ್ಲಿ ಕನಿಷ್ಠ ಹತ್ತು ಜನರು ಸಾವನ್ನಪ್ಪಿದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.