ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shehbaz Sharif: ಭಾರತದ ವಿರುದ್ದ ಯುದ್ಧ ಗೆದ್ದಿರುವುದಾಗಿ ಬೊಗಳೆ ಬಿಟ್ಟ ಪಾಕ್‌ ಪ್ರಧಾನಿ ಶೆಹಬಾಜ್​ ಶರೀಫ್; ಕದನ ವಿರಾಮ ಉಲ್ಲಂಘನೆ ಬಗ್ಗೆ ಮೌನ

India Pakistan Ceasefire: ಪಾಕಿಸ್ತಾನ ಪ್ರಧಾನಿ ಶೆಹಬಾಜ್​ ಶರೀಫ್ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, ʼʼಭಾರತವು ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವ ಮೂಲಕ ಯುದ್ಧ ಮಾಡಿದೆ" ಎಂದು ಆರೋಪಿಸಿದರು. ಜತೆಗೆ ಭಾರತದ ವಿರುದ್ದ ಯುದ್ಧ ಗೆದ್ದಿರುವುದಾಗಿ ಸುಳ್ಳಿನ ಕಥೆ ಕಟ್ಟಿದರು.

ಭಾರತದ ವಿರುದ್ದ ಯುದ್ಧ ಗೆದ್ದಿರುವುದಾಗಿ ಸುಳ್ಳು ಹೇಳಿದ ಪಾಕ್‌ ಪ್ರಧಾನಿ

ಪಾಕಿಸ್ತಾನ ಪ್ರಧಾನಿ ಶೆಹಬಾಜ್​ ಶರೀಫ್.

Profile Ramesh B May 11, 2025 1:33 AM

ಇಸ್ಲಾಮಾಬಾದ್‌: ಪಾಕಿಸ್ತಾನ (Pakistan) ಕದನ ವಿರಾಮವನ್ನು ಉಲ್ಲಂಘಿಸಿ ಭಾರತದ (India) ಮೇಲೆ ಮತ್ತೆ ದಾಳಿ ಮಾಡಿದೆ. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಈ ನಡುವೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್​ ಶರೀಫ್ (Shehbaz Sharif)​ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, ʼʼಭಾರತವು ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವ ಮೂಲಕ ಯುದ್ಧ ಮಾಡಿದೆ" ಎಂದು ಆರೋಪಿಸಿದರು. ಜತೆಗೆ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನಾಯಕತ್ವ ವಹಿಸಿದ್ದಕ್ಕಾಗಿ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಭಾರತದ ವಿರುದ್ಧ ಯುದ್ಧ ಗೆದ್ದಿರುವುದಾಗಿಯೂ ಬೊಗಳೆ ಬಿಟ್ಟರು. ಆದರೆ ಈ ವೇಳೆ ಕದನ ವಿರಾಮ ಉಲ್ಲಂಘನೆ ಬಗ್ಗೆ ತುಟಿ ಬಿಚ್ಚಲಿಲ್ಲ.

ಪಾಕಿಸ್ತಾನ ಕೆಲವೇ ಗಂಟೆಗಳ ಹಿಂದೆ ಮಾಡಿಕೊಂಡ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಭಾರತ ಆರೋಪಿಸುದ ಬೆನ್ನಲ್ಲೇ ಷರೀಫ್ ಈ ಹೇಳಿಕೆ ನೀಡಿದ್ದಾರೆ. ಷರೀಫ್ ಅವರ ಹೇಳಿಕೆಗೆ ಭಾರತೀಯ ಅಧಿಕಾರಿಗಳು ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಶೆಹಬಾಜ್​ ಶರೀಫ್ ಭಾಷಣ:



ಶೆಹಬಾಜ್​ ಶರೀಫ್ ಹೇಳಿದ್ದೇನು?

"ಯಾರಾದರೂ ನಮ್ಮ ಸ್ವಾತಂತ್ರ್ಯಕ್ಕೆ ಸವಾಲು ಹಾಕಿದರೆ, ನಮ್ಮ ರಕ್ಷಣೆಗಾಗಿ ನಾವು ಏನು ಬೇಕಾದರೂ ಮಾಡುತ್ತೇವೆ. ನಮಗೆ ಜೀವಕ್ಕಿಂತ ಆತ್ಮಗೌರವ ಮುಖ್ಯ" ಎಂದು ಹೇಳಿದರು. ಭಾರತ ಆಪರೇಷನ್ ಸಿಂದೂರ್‌ ಕಾರ್ಯಾಚರಣೆ ಅಡಿಯಲ್ಲಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿಕೊಂಡು ಮುಗ್ಧ ನಾಗರಿಕರು, ಮಸೀದಿಗಳು ಮತ್ತು ನಗರ ಪ್ರದೇಶಗಳನ್ನು ಗುರಿಯಾಗಿಸಿಕೊಂಡ ದಾಳಿ ನಡೆಸಿದೆ ಎಂದು ಷರೀಫ್ ಆರೋಪಿಸಿದರು. "ಭಾರತವು ಪಹಲ್ಗಾಮ್ ಘಟನೆಯನ್ನು ನಮ್ಮ ಮೇಲೆ ಯುದ್ಧ ಮಾಡಲು ಒಂದು ನೆಪವನ್ನಾಗಿ ಮಾಡಿಕೊಂಡಿತು. ಮುಗ್ಧ ಜೀವಗಳು, ಮಸೀದಿಗಳು ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು" ಎಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ: Khawaja Asif: ಮತ್ತೆ ಎಡವಿದ ಪಾಕ್ ರಕ್ಷಣಾ ಸಚಿವ; ಖವಾಜಾ ಆಸಿಫ್ ಹೇಳಿಕೆಗಳು ಫುಲ್ ಟ್ರೋಲ್!

ಇದೇ ವೇಳೆ ಚೀನಾವನ್ನು ಅತ್ಯಂತ ಆತ್ಮೀಯ, ಅತ್ಯಂತ ವಿಶ್ವಾಸಾರ್ಹ ಸ್ನೇಹಿತ ಎಂದು ಬಣ್ಣಿಸಿದ ಅವರು, ಕಳೆದ 78 ವರ್ಷಗಳಿಂದ ಸಹಕಾರ ನೀಡುತ್ತಿದೆ ಎಂದರು. ಜತೆಗೆ ಅಂತಾರಾಷ್ಟ್ರೀಯ ಮಿತ್ರರಾಷ್ಟ್ರಗಳಿಗೆ ಕೃತಜ್ಞತೆ ಸಲ್ಲಿಸಿದರು. ಕದನ ವಿರಾಮ ಒಪ್ಪಂದದ ಮಧ್ಯಸ್ಥಿಕೆ ವಹಿಸಿದ ಅಮೆರಿಕ, ಸೌದಿ ಅರೇಬಿಯಾ, ಟರ್ಕಿ, ಕತಾರ್ ಮತ್ತು ಇಂಗ್ಲೆಂಡ್‌ನ ಪಾತ್ರಗಳನ್ನು ಅವರು ಶ್ಲಾಘಿಸಿದರು. "ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ವಿಶೇಷ ಕೃತಜ್ಞತೆಯನ್ನು ಅರ್ಪಿಸುತ್ತೇನೆ" ಎಂದು ಷರೀಫ್ ಹೇಳಿದರು. ಕದನ ವಿರಾಮ ಜಾರಿಗೆ ಮಹತ್ವದ ಪಾತ್ರ ವಹಿಸಿದ ವಾಷಿಂಗ್ಟನ್‌ ಅನ್ನು ಶ್ಲಾಘಿಸಿದರು.

"ಎಲ್ಲರ ಪ್ರಯೋಜನಕ್ಕಾಗಿ, ನಾವು ಈ ಕದನ ವಿರಾಮ ಒಪ್ಪಂದವನ್ನು ಮಾಡಿಕೊಂಡಿದ್ದೇವೆ ಮತ್ತು ನಾವು ಅದರ ಬಗ್ಗೆ ಸಕಾರಾತ್ಮಕವಾಗಿದ್ದೇವೆ" ಎಂದು ಹೇಳಿದರು.

ಅದಕ್ಕೂ ಮೊದಲು ಅವರು ಎಕ್ಸ್‌ನಲ್ಲಿ ಭಾರತದೊಂದಿಗೆ ಕದನ ವಿರಾಮವನ್ನು ಸುಗಮಗೊಳಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಧನ್ಯವಾದ ಅರ್ಪಿಸಿದ್ದರು. “ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗಾಗಿ ಶ್ರಮಿಸಿದ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆʼʼ ಎಂದು ಬರೆದುಕೊಂಡಿದ್ದರು.