ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತವನ್ನು ನಂಬರ್ ಒನ್ ಪಾಲುದಾರ ಎಂದು ಬಣ್ಣಿಸಿದ ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೀವರ್

Bart De Wever: ಆರ್ಥಿಕ ಅವಲಂಬನೆಗಳ ಅಪಾಯದ ಬಗ್ಗೆ ಭಾರತ ಬಹಳ ಹಿಂದೆಯೇ ಯುರೋಪ್‌ಗೆ ಎಚ್ಚರಿಕೆ ನೀಡಿತ್ತು, ಆದರೆ ಆಗ ಅದನ್ನು ನಿರ್ಲಕ್ಷಿಸಲಾಗಿತ್ತು ಎಂದು ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೀವರ್ ಹೇಳಿದ್ದಾರೆ. ಭಾರತ ಮತ್ತು ಯುರೋಪ್‌ ಒಂದೇ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದು, ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಮತ್ತು ಪೂರೈಕೆ ಸರಪಳಿ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಬೇಕು ಎಂದಿದ್ದಾರೆ.

ಭಾರತವೇ ಯುರೋಪ್‌ನ ನಂಬರ್ ಒನ್ ಪಾಲುದಾರ

ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೀವರ್ ಮತ್ತು ಪ್ರಧಾನಿ ನರೇಂದ್ರ ಮೋದಿ -

Profile
Sushmitha Jain Sep 5, 2026 3:24 PM

ನವದೆಹಲಿ, ಸೆ. 5: ಜಾಗತಿಕ ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿನ ಅವಲಂಬನೆಗಳ ಅಪಾಯದ ಬಗ್ಗೆ ಭಾರತ (India) ಹಲವು ವರ್ಷಗಳ ಹಿಂದೆಯೇ ಯುರೋಪ್‌ಗೆ ಎಚ್ಚರಿಕೆ ನೀಡಿತ್ತು. ಆದರೆ ಆಗ ಆ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಗಿತ್ತು ಎಂದು ಬೆಲ್ಜಿಯಂ (Belgium) ಪ್ರಧಾನಿ ಬಾರ್ಟ್ ಡಿ ವೀವರ್ (Bart De Wever) ಹೇಳಿದ್ದಾರೆ. CII ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಯುರೋಪ್‌ ಒಂದೇ ರೀತಿಯ ಸವಾಲುಗಳನ್ನು ಎದುರಿಸುತ್ತಿವೆ. ಜಾಗತಿಕ ವ್ಯಾಪಾರ ಮತ್ತು ಭೌಗೋಳಿಕ ರಾಜಕೀಯದಲ್ಲಿ ಆರ್ಥಿಕ ಅವಲಂಬನೆಗಳನ್ನು ಇತರ ರಾಷ್ಟ್ರಗಳು ಒತ್ತಡ ಹೇರುವ ಅಸ್ತ್ರವಾಗಿ ಬಳಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

“ನಾವು ಈಗ ಕೇಳುತ್ತಿದ್ದೇವೆ. ಭಾರತ ಬಹಳ ಹಿಂದೆಯೇ ಈ ಅಪಾಯವನ್ನು ಗುರುತಿಸಿತ್ತು. ನಿಮ್ಮ ಪ್ರಧಾನಿ ಯುರೋಪ್‌ಗೆ ಬಹಳ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಆದರೆ ನಾವು ಅದನ್ನು ಕೇಳಲಿಲ್ಲ. ಈಗ ಕೇಳುತ್ತಿದ್ದೇವೆ. ಯುರೋಪ್‌ಗೆ ಈ ಎಚ್ಚರಿಕೆ ಸ್ವಲ್ಪ ತಡವಾಗಿ ಬಂದಿರಬಹುದು, ಆದರೆ ಜಾಗೃತಿ ಮೂಡುತ್ತಿದೆ” ಎಂದು ಬಾರ್ಟ್ ಡಿ ವೀವರ್ ತಿಳಿಸಿದರು.

ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೀವರ್ ಜತೆ ಮೋದಿ ಮಾತುಕತೆ:



ವಿದೇಶಿ ದೇಶಗಳ ಉತ್ಪಾದನಾ ಹೆಚ್ಚುವರಿಯನ್ನು ಕಡಿಮೆ ಬೆಲೆಗೆ ತನ್ನ ಮಾರುಕಟ್ಟೆಗೆ ಪ್ರವೇಶಿಸಲು ಅವಕಾಶ ನೀಡಿದ್ದರಿಂದ ಯುರೋಪ್ ತನ್ನ ಕೈಗಾರಿಕಾ ಸಾಮರ್ಥ್ಯವನ್ನು ದುರ್ಬಲಗೊಳಿಸಿಕೊಂಡಿದೆ. ಈ ಅನುಭವವನ್ನು ಅವರು ಕಠಿಣ ಎಚ್ಚರಿಕೆ (Rude Awakening) ಎಂದು ಬಣ್ಣಿಸಿದರು. ಈ ಬೆಳವಣಿಗೆಯಿಂದ ಹೆಚ್ಚು ಲಾಭ ಪಡೆದ ದೇಶ ಯುರೋಪ್‌ನ ಸಮೀಪದಲ್ಲೇ ಇದೆ ಎಂದು ಹೇಳುವ ಮೂಲಕ ಅವರು ಚೀನಾವನ್ನು ಪರೋಕ್ಷವಾಗಿ ಉಲ್ಲೇಖಿಸಿದರು.

ಭಾರತ ಮತ್ತು ಯುರೋಪ್‌ ನಡುವೆ ದೀರ್ಘಕಾಲಿಕ ಕಾರ್ಯತಂತ್ರದ ಪಾಲುದಾರಿಕೆಗೆ ಸಾಕಷ್ಟು ಅವಕಾಶಗಳಿವೆ ಎಂದು ಅವರು ಹೇಳಿದರು. ಬಹುಪಕ್ಷೀಯತೆ, ಪರಸ್ಪರ ಗೌರವ ಮತ್ತು ಬಲಪ್ರಯೋಗವಿಲ್ಲದ ಸಹಕಾರಕ್ಕೆ ಬದ್ಧವಾಗಿರುವ ರಾಷ್ಟ್ರಗಳೊಂದಿಗೆ ಯುರೋಪ್‌ ಪಾಲುದಾರಿಕೆ ಬಯಸುತ್ತಿದೆ ಎಂದರು.

ಭಾರತವನ್ನು ವಿಶ್ವದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಬಣ್ಣಿಸಿದ ಬಾರ್ಟ್ ಡಿ ವೀವರ್, ಭಾರತದ ದೊಡ್ಡ ಪ್ರತಿಭಾ ಸಂಪತ್ತು ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಮತ್ತು ಪೂರೈಕೆ ಸರಪಳಿ ಸ್ಥಿರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯುರೋಪ್‌ಗೆ ಸಹಕಾರದ ಅವಕಾಶಗಳನ್ನು ನೀಡುತ್ತದೆ ಎಂದರು.

9 ದಿನಗಳಿಂದ ಸುರಂಗದೊಳಗೆ ಸಿಲುಕಿ ಹರಿ ನಾಮ ಸ್ಮರಿಸುತ್ತಿದ್ದ ಕಾರ್ಮಿಕರ ರಕ್ಷಣೆ

ಜಾಗತಿಕ ಮಾರುಕಟ್ಟೆಗಳಿಗೆ ಮುಕ್ತವಾಗಿರುವುದು ಎಂದರೆ ಕಾರ್ಯತಂತ್ರದ ಅವಲಂಬನೆಗಳನ್ನು ನಿರ್ಲಕ್ಷಿಸುವುದಲ್ಲ ಎಂದು ಅವರು ಅಭಿಪ್ರಾಯಪಟ್ಟರು. ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವುದು ಮುಕ್ತ ವ್ಯಾಪಾರಕ್ಕೆ ಅಗತ್ಯವಾದ ಪರಸ್ಪರ ನಂಬಿಕೆಯನ್ನು ಉಳಿಸಿಕೊಳ್ಳಲು ಮುಖ್ಯ ಎಂದರು. ಭಾರತವು ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ನವೀನತೆಯಲ್ಲಿ ಮುಂಚೂಣಿಯಲ್ಲಿದೆ ಮತ್ತು ಮುಕ್ತ ಹಾಗೂ ಸಮೃದ್ಧ ಜಗತ್ತಿನ ನಿರ್ಮಾಣದಲ್ಲಿ ಅದರ ಧ್ವನಿ ಇರಲೇಬೇಕು ಎಂದು ಬಾರ್ಟ್ ಡಿ ವೀವರ್ ಹೇಳಿದರು.

“ಹಲವು ದೇಶಗಳು ಒಂದು ಬಣವನ್ನು ಆಯ್ಕೆ ಮಾಡುವಂತೆ ಒತ್ತಾಯಿಸಲ್ಪಡುತ್ತಿರುವ ಜಗತ್ತಿನಲ್ಲಿ, ಭಾರತ ಮತ್ತು ಯುರೋಪ್‌ ನಿರ್ಣಾಯಕವಾಗಿ ಪಾಲುದಾರಿಕೆಯನ್ನು ಆಯ್ಕೆ ಮಾಡುತ್ತವೆ” ಎಂದು ಅವರು ಹೇಳಿದರು.