ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೊರ್ಮುಜ್ ಜಲಸಂಧಿ ದಾಟಲು ಭಾರತ ಸೇರಿ 5 ರಾಷ್ಟ್ರಗಳಿಗೆ ಇರಾನ್‌ನಿಂದ ಅನುಮತಿ

Strait of Hormuz: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ ಸಾಗಲು ಭಾರತ ಸೇರಿ 5 ಸ್ನೇಹಿ ರಾಷ್ಟ್ರಗಳ ಹಡಗುಗಳಿಗೆ ಅನುಮತಿ ನೀಡಿದೆ. ಈ ನಿರ್ಧಾರದಿಂದ ಭಾರತಕ್ಕೆ ಎಲ್‌ಪಿಜಿ ಪೂರೈಕೆಯಲ್ಲಿ ಸುಧಾರಣೆ ಕಂಡಿದ್ದು, ಇಂಧನ ಬಿಕ್ಕಟ್ಟಿನ ಆತಂಕ ತಗ್ಗಿದೆ.

ಭಾರತಕ್ಕೆ ಬಿಗ್‌ ರಿಲೀಫ್‌; ಹೊರ್ಮುಜ್ ಜಲಸಂಧಿ ದಾಟಲು ಸಿಕ್ತು ಅನುಮತಿ

ಹೊರ್ಮುಜ್ ಜಲಸಂಧಿ (ಸಂಗ್ರಹ ಚಿತ್ರ) -

Profile
Sushmitha Jain Mar 26, 2026 2:30 PM

ನವದೆಹಲಿ, ಮಾ. 26: ಮಧ್ಯಪ್ರಾಚ್ಯದಲ್ಲಿ (Middle East) ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಇರಾನ್ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ಆಯಕಟ್ಟಿನ ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಸಾಗಲು ಭಾರತ ಸೇರಿ ಐದು ಸ್ನೇಹಿ ರಾಷ್ಟ್ರಗಳ ಹಡಗುಗಳ ಮೇಲೆ ಯಾವುದೇ ದಿಗ್ಬಂಧನ ಹೇರುವುದಿಲ್ಲ ಎಂದು ಇರಾನ್ ತಿಳಿಸಿದೆ. ಭಾರತದ ಜತೆಗೆ ರಷ್ಯಾ (Russia), ಚೀನಾ (China), ಪಾಕಿಸ್ತಾನ (Pakistan) ಮತ್ತು ಇರಾಕ್ (Iraq) ದೇಶಗಳ ಹಡಗುಗಳಿಗೆ ಈ ಸಂಘರ್ಷ ಪೀಡಿತ ಪ್ರದೇಶದ ಮೂಲಕ ಸುರಕ್ಷಿತವಾಗಿ ಸಂಚರಿಸಲು ಅನುಮತಿ ನೀಡಲಾಗಿದೆ.

ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಸರ್ಕಾರಿ ಸ್ವಾಮ್ಯದ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ, ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿಲ್ಲ ಮತ್ತು ಇರಾನ್‌ನೊಂದಿಗೆ ಉತ್ತಮ ಸಂಬಂಧ ಹೊಂದಿರುವ ರಾಷ್ಟ್ರಗಳ ಹಡಗುಗಳ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅನೇಕ ಹಡಗು ಮಾಲಕರು ಮತ್ತು ರಾಷ್ಟ್ರಗಳು ತಮ್ಮ ಹಡಗುಗಳ ಸುರಕ್ಷಿತ ಪ್ರಯಾಣಕ್ಕಾಗಿ ಇರಾನ್ ಅನ್ನು ಸಂಪರ್ಕಿಸಿದ್ದು, ಸ್ನೇಹಿ ರಾಷ್ಟ್ರಗಳ ಮನವಿಗೆ ಸ್ಪಂದಿಸಿ ಇರಾನ್ ಸಶಸ್ತ್ರ ಪಡೆಗಳು ರಕ್ಷಣೆ ಒದಗಿಸುತ್ತಿವೆ ಎಂದು ಅವರು ಹೇಳಿದ್ದಾರೆ. ವಿಶೇಷವಾಗಿ ಚೀನಾ, ರಷ್ಯಾ, ಪಾಕಿಸ್ತಾನ, ಇರಾಕ್ ಮತ್ತು ಭಾರತದ ಹಡಗುಗಳಿಗೆ ಈ ವಿನಾಯಿತಿ ನೀಡಲಾಗಿದ್ದು, ಇತ್ತೀಚೆಗಷ್ಟೇ ಭಾರತದ ಎರಡು ಹಡಗುಗಳು ಸುರಕ್ಷಿತವಾಗಿ ಈ ಮಾರ್ಗವನ್ನು ದಾಟಿವೆ.

ಸುಸ್ತಾಗಿ ಸಂಧಾನಕ್ಕೆ ಮುಂದಾದ ಟ್ರಂಪ್‌, ತಾತ್ಕಾಲಿಕ ಯುದ್ಧ ವಿರಾಮಕ್ಕೆ ಪ್ರಸ್ತಾವನೆ

ಆದರೆ ಅಮೆರಿಕ, ಇಸ್ರೇಲ್ ಮತ್ತು ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಭಾಗಿಯಾಗಿರುವ ಗಲ್ಫ್ ರಾಷ್ಟ್ರಗಳ ಹಡಗುಗಳಿಗೆ ಯಾವುದೇ ಕಾರಣಕ್ಕೂ ಈ ಮಾರ್ಗದಲ್ಲಿ ಸಂಚರಿಸಲು ಅನುಮತಿ ನೀಡುವುದಿಲ್ಲ ಎಂದು ಅರಾಗ್ಚಿ ಖಡಕ್ಕಾಗಿ ಹೇಳಿದ್ದಾರೆ. ಪ್ರಸ್ತುತ ಪ್ರದೇಶವು ಯುದ್ಧ ವಲಯವಾಗಿರುವುದರಿಂದ ಶತ್ರು ರಾಷ್ಟ್ರಗಳಿಗೆ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ದಾರಿ ಮಾಡಿಕೊಡುವ ಅಗತ್ಯವಿಲ್ಲ ಎಂಬುದು ಇರಾನ್‌ನ ವಾದ. ಈ ದಿಗ್ಬಂಧನವು ಇರಾನ್‌ನ ಶಕ್ತಿ ಮತ್ತು ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ಮಿಲಿಟರಿ ಕಾರ್ಯಾಚರಣೆಯ ನಂತರ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ಭಾಗಶಃ ದಿಗ್ಬಂಧನವನ್ನು ಘೋಷಿಸಿತ್ತು. ಇದರಿಂದಾಗಿ ಜಾಗತಿಕ ಇಂಧನ ಬಿಕ್ಕಟ್ಟು ಉಂಟಾಗಿದ್ದು, ವಿಶ್ವದ ಶೇಕಡಾ 20ರಷ್ಟು ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಮೇಲೆ ಪರಿಣಾಮ ಬೀರಿದೆ. ಭಾರತವು ತನ್ನ ಬಳಕೆಯ ಸುಮಾರು ಶೇಕಡಾ 90ರಷ್ಟು ಎಲ್‌ಪಿಜಿಯನ್ನು ಈ ಮಾರ್ಗದ ಮೂಲಕವೇ ಆಮದು ಮಾಡಿಕೊಳ್ಳುವುದರಿಂದ, ಆರಂಭದಲ್ಲಿ ದೇಶದಲ್ಲಿ ಅಡುಗೆ ಅನಿಲದ ತೀವ್ರ ಕೊರತೆ ಕಂಡುಬಂದಿತ್ತು. ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ಹೋಟೆಲ್ ಮಾಲಕರವರೆಗೆ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಇತ್ತೀಚೆಗೆ ಭಾರತದ 'ನಂದಾದೇವಿ' ಮತ್ತು 'ಶಿವಾಲಿಕ್' ನಂತಹ ಹಡಗುಗಳಿಗೆ ಇರಾನ್ ಮುಕ್ತ ಹಾದಿ ಕಲ್ಪಿಸಿದ್ದರಿಂದ ಭಾರತದಲ್ಲಿ ಎಲ್‌ಪಿಜಿ ಪೂರೈಕೆ ಪರಿಸ್ಥಿತಿ ಸುಧಾರಿಸಿದೆ.