ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗಲ್ಫ್ ಉದ್ವಿಗ್ನತೆ ಮಧ್ಯೆ ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್, ಕ್ಷಿಪಣಿ ದಾಳಿ: ಭಾರತೀಯ ಮೂಲದ ಪ್ರಜೆ ಸಾವು

Iran Launches Drone and Missile Attack: ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ. ಘಟನೆಯಲ್ಲಿ ಕನಿಷ್ಠ 63 ಜನರು ಗಾಯಗೊಂಡಿದ್ದಾರೆ.

ಕುವೈತ್ ಮೇಲೆ ಇರಾನ್ ದಾಳಿ: ಭಾರತೀಯ ಮೂಲದ ಪ್ರಜೆ ಸಾವು

ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್, ಕ್ಷಿಪಣಿ ದಾಳಿ -

Priyanka P
Priyanka P Jun 3, 2026 6:41 PM

ಕುವೈತ್ ಸಿಟಿ, ಜೂ. 3: ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kuwait Airport) ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ (Iran attack) ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ. ಗಲ್ಫ್ ಯುದ್ಧ (Gulf Tensions) ಮತ್ತೆ ಉಲ್ಬಣಗೊಂಡಾಗ ಈ ದಾಳಿ ಸಂಭವಿಸಿದೆ. ಇರಾನ್, ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಗುರಿಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿದರೆ, ಅಮೆರಿಕವು ಹೊರ್ಮುಜ್ ಜಲಸಂಧಿಯ (strait of Hormuz) ಸಮೀಪ ಮಿಲಿಟರಿ ಕಾರ್ಯಾಚರಣೆಗಳನ್ನು ಕೈಗೊಂಡಿತು.

ಈ ದಾಳಿಯಲ್ಲಿ ವಿಮಾನ ನಿಲ್ದಾಣದ ಕಾರ್ಮಿಕರು ಮತ್ತು ಪ್ರಯಾಣಿಕರು ಸೇರಿ ಕನಿಷ್ಠ 63 ಜನರು ಗಾಯಗೊಂಡಿದ್ದಾರೆ ಎಂದು ಕುವೈತ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ʼʼಇರಾನಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯು ವಿಮಾನ ನಿಲ್ದಾಣಕ್ಕೆ ಹಾನಿಯನ್ನುಂಟು ಮಾಡಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ದಾಳಿಯ ನಂತರ, ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದ ನಂತರ ಕುವೈತ್ ಏರ್‌ವೇಸ್‌ ಟರ್ಮಿನಲ್ 4ರಿಂದ ಕಾರ್ಯಾಚರಣೆಯನ್ನು ಪುನರಾರಂಭಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ನಂತರ ಘೋಷಿಸಿತು.

''ಮೊಜ್ತಾಬಾ ಖಮೇನಿ ಜೀವಂತವಾಗಿದ್ದಾರೆ”: ಇರಾನ್ ಸುಪ್ರೀಂ ಲೀಡರ್ ಬಗ್ಗೆ ಅಮೆರಿಕ ಹೇಳಿದ್ದೇನು?

ಇರಾನ್, ಅಮೆರಿಕದ ಐದನೇ ನೌಕಾಪಡೆಯ ಮುಖ್ಯ ಕಚೇರಿಯನ್ನು ಗುರಿಯಾಗಿಸಿಕೊಂಡಿದ್ದಾಗಿ ಹೇಳಿಕೆ ನೀಡಿದ ಬಳಿಕ, ಮೂರು ಕ್ಷಿಪಣಿಗಳು ಮತ್ತು ಹಲವು ಡ್ರೋನ್‌ಗಳನ್ನು ಯಶಸ್ವಿಯಾಗಿ ತಡೆದಿರುವುದಾಗಿ ಬಹ್ರೇನ್ ಸೇನೆಯು ತಿಳಿಸಿದೆ. ಇರಾನ್, ಬಹ್ರೇನ್‌ನಲ್ಲಿರುವ ಅಮೆರಿಕದ ಐದನೇ ನೌಕಾಪಡೆಯ ಮುಖ್ಯ ಕಚೇರಿ, ಒಂದು ವಾಯುನೆಲೆ ಹಾಗೂ ಮತ್ತೊಂದು ಪ್ರಾದೇಶಿಕ ದೇಶದಲ್ಲಿದ್ದ ಹೆಲಿಕಾಪ್ಟರ್‌ಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಹೇಳಿಕೊಂಡಿದೆ.

ಪದೇ ಪದೆ ದಾಳಿ

ಫೆಬ್ರವರಿ 28ರಂದು ಸಂಘರ್ಷ ಪ್ರಾರಂಭವಾದಾಗಿನಿಂದ ಇರಾನ್ ಅಮೆರಿಕದ ಮಿಲಿಟರಿ ನೆಲೆಗಳನ್ನು ಹೊಂದಿರುವ ಗಲ್ಫ್ ದೇಶಗಳಲ್ಲಿನ ನಾಗರಿಕ ಮತ್ತು ಮಿಲಿಟರಿ ಸೌಲಭ್ಯಗಳ ಮೇಲೆ ಪದೇ ಪದೆ ದಾಳಿ ನಡೆಸಿದೆ. ಕದನ ವಿರಾಮದ ಹೊರತಾಗಿಯೂ, ವಾಷಿಂಗ್ಟನ್ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಪ್ರಯತ್ನಿಸುತ್ತಿರುವುದರಿಂದ ಮತ್ತೆ ಯುದ್ಧದ ಕಾರ್ಮೋಡ ಮುಂದುವರಿದಿದೆ.

ಕಳೆದ ವಾರ ಇರಾನ್ ಮತ್ತು ಅಮೆರಿಕ, ಯುದ್ಧವನ್ನು ಕೊನೆಗೊಳಿಸುವ ಹಾಗೂ ಹೊರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವ ಉದ್ದೇಶದ ಪ್ರಾಥಮಿಕ ಒಪ್ಪಂದದತ್ತ ಪ್ರಗತಿ ಸಾಧಿಸಿರುವ ಸೂಚನೆ ನೀಡಿದವು. ಆದರೆ ಉಭಯ ದೇಶಗಳು ಇದುವರೆಗೆ ಅಂತಿಮ ಒಪ್ಪಂದವನ್ನು ಅಧಿಕೃತವಾಗಿ ಅಂತಿಮಗೊಳಿಸಿಲ್ಲ.

ಅಮೆರಿಕ ಸೇನೆಯು ಕುವೈತ್‌ನಲ್ಲಿರುವ ನಾಗರಿಕ ಹಡಗುಗಳು ಹಾಗೂ ಅಮೆರಿಕದ ಪಡೆಗಳನ್ನು ಗುರಿಯಾಗಿಸಿಕೊಂಡಿದ್ದ ಡ್ರೋನ್‌ಗಳನ್ನು ತಡೆದು ನಾಶಪಡಿಸಿರುವುದಾಗಿ ತಿಳಿಸಿದೆ. ಅಲ್ಲದೆ, ಇರಾನ್ ದಾಳಿಗೆ ಯತ್ನಿಸಿದೆ ಎಂದು ಆರೋಪಿಸಿದ ನಂತರ, ಹೊರ್ಮುಜ್ ಜಲಸಂಧಿಯ ಸಮೀಪದ ಇರಾನ್‌ನ ಖೆಶ್ಮ್ ದ್ವೀಪದ ಮೇಲೆ ದಾಳಿ ನಡೆಸಿರುವುದನ್ನೂ ದೃಢಪಡಿಸಿದೆ.

ಹೊರ್ಮುಜ್ ಬಳಿ ಇರಾನಿನ ಟ್ಯಾಂಕರ್ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತಿಯಾಗಿ, ಕ್ರಾಂತಿಕಾರಿ ಗಾರ್ಡ್‌ಗಳ ನೌಕಾಪಡೆಯು ಪನಾಯಾ ಎಂದು ಗುರುತಿಸಲಾದ ಹಡಗಿನ ಮೇಲೆ ಕ್ಷಿಪಣಿಗಳನ್ನು ದಾಳಿ ಮಾಡಿದೆ. ಹೊರ್ಮುಜ್ ಜಲಸಂಧಿಯಲ್ಲಿ ಭದ್ರತೆಯನ್ನು ಅಡ್ಡಿಪಡಿಸುವುದರಿಂದ ಅಮೆರಿಕದ ಮಿಲಿಟರಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಗಾರ್ಡ್‌ಗಳು ಎಚ್ಚರಿಸಿದ್ದಾರೆ ಎನ್ನಲಾಗಿದೆ.