ಟೆಲ್ ಅವೀವ್: ದೀರ್ಘಕಾಲದಿಂದ ನಡೆಯುತ್ತಿದ್ದ ಹಮಾಸ್ (Hamas) ಮತ್ತು ಇಸ್ರೆಲ್(Israel) ನಡುವಿನ ಯುದ್ಧ ಅಂತ್ಯವಾಗುವ ಕಾಲ ಕೂಡಿಬಂದಿದೆ. ಕಳೆದ ಎರಡು ವರ್ಷಗಳಿಂದ ಗಾಜಾದಲ್ಲಿ ಹಿಡಿದಿಟ್ಟುಕೊಂಡಿದ್ದ ಇಸ್ರೇಲಿ ಒತ್ತೆಯಾಳುಗಳನ್ನು(Israeli Hostages) ಹಮಾಸ್ ಬಿಡುಗಡೆ ಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ನಡೆದ ಮಹತ್ವದ ಕದನ ವಿರಾಮ ಒಪ್ಪಂದದ ನಂತರ ಹಮಾಸ್ ಸೆರೆಯಲ್ಲಿದ್ದ ಇಸ್ರೇಲಿ ಒತ್ತೆಯಾಳುಗಳನ್ನು ರೆಡ್ ಕ್ರಾಸ್ ವಶಕ್ಕೆ ನೀಡಲಾಗಿದೆ. ಒತ್ತೆಯಾಳುಗಳನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಮೊದಲ ಹಂತದಲ್ಲಿ 7 ಮತ್ತು ಎರಡನೇ ಹಂತದಲ್ಲಿ 13 ಮಂದಿಯನ್ನು ದಕ್ಷಿಣ ಗಾಜಾದ ಖಾನ್ ಯೂನಿಸ್‌ನಲ್ಲಿ ಹಸ್ತಾಂತರಿಸಲಾಗಿದೆ ಎಂದು ಇಸ್ರೇಲ್‌ನ ಸಾರ್ವಜನಿಕ ಪ್ರಸಾರ ಸಂಸ್ಥೆ ವರದಿ ಮಾಡಿದೆ.
ಸೆರೆಯಲ್ಲಿದ್ದವರ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಸ್ರೇಲ್‌ನಾದ್ಯಂತ ಸಾವಿರಾರು ಜನರು ದೊಡ್ಡ ದೊಡ್ಡ ಸ್ಕ್ರೀನ್‌ಗಳಲ್ಲಿ ಬಿಡುಗಡೆ ಪ್ರಕ್ರಿಯೆ ವೀಕ್ಷಿಸುತ್ತಾ ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ. ಮೊದಲ ಹಂತದಲ್ಲಿ ಬಿಡುಗಡೆಯಾದ 7 ಮಂದಿಯನ್ನು ರೀಮ್‌ನ ಐಡಿಎಫ್‌ಗೆ ಕರೆದುಕೊಂಡು ಬಂದಿದ್ದು, ಅಲ್ಲಿ ಅವರು ಕುಟುಂಬಸ್ಥರನ್ನು ಭೇಟಿಯಾಗಲಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಈ ಸುದ್ದಿಯನ್ನು ಓದಿ; Viral News: ಹೊರರಾಜ್ಯಕ್ಕೆ ಪ್ರವಾಸ ಹೋಗೋ ಮುನ್ನ ಎಚ್ಚರ... ಎಚ್ಚರ! ಕೂದಲೆಳೆ ಅಂತರದಲ್ಲಿ ಪಾರಾಯ್ತು ಈ ಕುಟುಂಬ
ಇಸ್ರೇಲ್ ಬಂಧನದಲ್ಲಿದ್ದ ನೂರಾರು ಒತ್ತೆಯಾಳುಗಳ ಬಿಡುಗಡೆಗಾಗಿ ಪ್ಯಾಲೆಸ್ತೀನಿಯನ್ನರು ಕಾಯುತ್ತಿದ್ದರು. ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯೊಂದಿಗೆ ನಡೆದ ಶಾಂತಿ ಒಪ್ಪಂದದ ಭಾಗವಾಗಿದೆ 2 ವರ್ಷಗಳ ನಂತರ ಬಂಧಿತರ ವಿನಿಮಯಕ್ಕೆ ಕಾಲ ಕೂಡಿಬಂದಿದೆ. ಶಾಂತಿ ಒಪ್ಪಂದ ಮತ್ತು ಯುದ್ಧಾನಂತರದ ಯೋಜನೆಗಳ ಬಗ್ಗೆ ಚರ್ಚಿಸಲು ಟ್ರಂಪ್ ಇತರ ನಾಯಕರೊಂದಿಗೆ ತೆಲ್ ಅವಿವ್ ಆಗಮಿಸಿದ್ದಾರೆ. ಇಸ್ರೇಲ್-ಹಮಾಸ್ ನಡುವಿನ ಯುದ್ಧದ ನಂತರ ಪ್ಯಾಲಸ್ಟೇನ್ ಸಂಪೂರ್ಣ ನಾಶವಾಗಿದ್ದು, ಗಾಜಾದ ಭವಿಷ್ಯದ ಕುರಿತು ಅನೇಕ ಪ್ರಶ್ನೆಗಳು ಎದ್ದಿವೆ. ಅಹಾರ ಕೊರತೆಯಿಂದ ಬಳಲುತ್ತಿರುವ ಗಾಜಾದಲ್ಲಿ ಲಕ್ಷಾಂತರ ಜನರು ಮನೆ ಕಳೆದುಕೊಂಡಿದ್ದು, ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಒತ್ತೆಯಾಳುಗಳ ಬಿಡುಗಡೆಯೊಂದಿಗೆ ಇಸ್ರೇಲ್‌ನ ನೋವಿನ ಅಧ್ಯಾಯಕ್ಕೆ ತೆರೆ ಬಿದ್ದಿದೆ. ಈ ಯುದ್ಧವು 2023ರ ಅಕ್ಟೋಬರ್ 7ರ ಹಮಾಸ್ ದಾಳಿಯಿಂದ ಆರಂಭವಾಗಿ, ಗಾಜಾದಲ್ಲಿ 66,000ಕ್ಕೂ ಹೆಚ್ಚು ಪ್ಯಾಲೆಸ್ಟೈನಿಯನ್ನರು ಬಲಿಯಾಗಿದ್ದಾರೆ. ಇಸ್ರೇಲ್‌ನಲ್ಲಿ 1,200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದೀಗ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಎರಡು ದೇಶಗಳ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದೆ. ಇನ್ನೂ ಯುದ್ದದಲ್ಲಿ ಸಾವನ್ನಪ್ಪಿ 28 ಜನರ ಪತ್ತೆಗಾಗಿ ಅಂತಾರಾಷ್ಟ್ರೀಯ ತಂಡವೊಂದು ಕಾರ್ಯಾರಂಭ ಮಾಡಲಿದ್ದು, ಮೃತದೇಹಗಳ ಹಿಂದಿರುಗುವ ಸಾಧ್ಯತೆ ಕಡೆಮೆ ಎಂದು ಇಸ್ರೇಲ್‌ನ ಒತ್ತೆಯಾಳುಗಳು ಮತ್ತು ಕಾಣೆಯಾದವರ ಸಂಯೋಜಕರಾದ ಗಾಲ್ ಹಿರ್ಷ್ ತಿಳಿಸಿದ್ದಾರೆ.
ಇನ್ನು ಇಸ್ರೇಲ್ ಈ ಬಂಧಿತರನ್ನು ಉಗ್ರರು ಎಂದು ಪರಿಗಣಿಸುತ್ತಿದ್ದರೆ, ಪ್ಯಾಲೆಸ್ತೀನಿಯರು ಅವರನ್ನು ಇಸ್ರೇಲ್ ದಾಳಿ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು ಎಂದಿದ್ದಾರೆ. ಇಸ್ರೇಲ್, ಪಶ್ಚಿಮ ತೀರದ ಪ್ರದೇಶದಲ್ಲಿ ಒತ್ತೆಯಾಳುಗಳ ಬಿಡುಗಡೆಯನ್ನು ಆಚರಿಸದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪ್ಯಾಲೆಸ್ತೀನಿಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.