News York Car Blast: ತಡರಾತ್ರಿ ಭೀಕರ ಕಾರು ಸ್ಫೋಟ; ಬೆಂಕಿ ತಗುಲಿ ಐವರ ಸ್ಥಿತಿ ಗಂಭೀರ
Massive car explosion: ನಿಂತಿದ್ದ ಕಾರು ಏಕಾಏಕಿ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿ ಉರಿದಿದ್ದು, ಪ್ರದೇಶದಾದ್ಯಂತ ಅಗ್ನಿಯ ಕೆನ್ನಾಲಿಗೆ ವ್ಯಾಪಿಸಿರುವ ಘಟನೆ ಅಮೆರಿಕದ ನ್ಯೂಯಾರ್ಕ್ (New York) ರಾಜ್ಯದ ದಿ ಬ್ರಾಂಕ್ಸ್ ಪ್ರದೇಶದಲ್ಲಿ ನಡೆದಿದೆ. ಬೆಂಕಿಯ ಭೀಕರ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 955 ವೆಸ್ಟ್‌ಚೆಸ್ಟರ್ ಅವೆನ್ಯೂ ಬಳಿ ನಿಲ್ಲಿಸಿದ್ದ ಕಾರು ಇದ್ದಕ್ಕಿದ್ದಂತೆ ಸ್ಫೋಟಗೊಂಡಿತು (Car explosion). ಸ್ಫೋಟದ ಪರಿಣಾಮವಾಗಿ ಭೀಕರ ಬೆಂಕಿ ಹೊತ್ತಿಕೊಂಡಿದ್ದು, ಹತ್ತಿರದ ಪ್ರದೇಶಗಳಲ್ಲಿ ಅಗ್ನಿ ವ್ಯಾಪಿಸಿದೆ. ಬೆಂಕಿ ನಂದಿಸುವ ವೇಳೆ ಐದು ಅಗ್ನಿಶಾಮಕ ದಳದ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅಮೆರಿಕದ ನ್ಯೂಯಾರ್ಕ್‌ನಲ್ಲಿ ತಡರಾತ್ರಿ ಭೀಕರ ಕಾರು ಸ್ಫೋಟಗೊಂಡಿದೆ -
Priyanka P
Nov 6, 2025 9:34 AM
ನ್ಯೂಯಾರ್ಕ್: ಬುಧವಾರ ತಡರಾತ್ರಿ ಅಮೆರಿಕದ ನ್ಯೂಯಾರ್ಕ್ ರಾಜ್ಯದ ದಿ ಬ್ರಾಂಕ್ಸ್ ಪ್ರದೇಶದಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, ವಾಹನವೊಂದು ಬೆಂಕಿಯಲ್ಲಿ ಹೊತ್ತಿ ಉರಿದಿದೆ. ಹಲವಾರು ಅಗ್ನಿಶಾಮಕ ದಳದ ಸಿಬ್ಬಂದಿ ಗಾಯಗೊಂಡರು ಮತ್ತು ನಿವಾಸಿಗಳು ಸುರಕ್ಷತೆಗಾಗಿ ಪರದಾಡಿದರು. 955 ವೆಸ್ಟ್‌ಚೆಸ್ಟರ್ ಅವೆನ್ಯೂ ಬಳಿ ಸ್ಫೋಟ ಸಂಭವಿಸಿದೆ. ಅಲ್ಲಿ ನಿಲ್ಲಿಸಿದ್ದ ಕಾರು ರಾತ್ರಿ 10.45 ರ ಸುಮಾರಿಗೆ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತು. ಬೆಂಕಿಯ ರೌದ್ರಾವತಾರದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಸ್ಫೋಟದ ಪರಿಣಾಮವಾಗಿ ಭೀಕರ ಬೆಂಕಿ ಹೊತ್ತಿಕೊಂಡಿದ್ದು, ಅದು ಬೇಗನೆ ಹರಡಿದೆ. ವಾಹನ ಮತ್ತು ಹತ್ತಿರದ ಪ್ರದೇಶಗಳಲ್ಲಿ ಅಗ್ನಿ ವ್ಯಾಪಿಸಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಕಿ ನಂದಿಸುವಾಗ ಕನಿಷ್ಠ ಐದು ಅಗ್ನಿಶಾಮಕ ದಳದ ಸಿಬ್ಬಂದಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ನ್ಯೂಯಾರ್ಕ್ ನಗರದ ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Plane Crash: 25 ಜನರಿದ್ಧ ಸರಕು ವಿಮಾನ ಪತನ- ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ- ಇಲ್ಲಿದೆ ಭಯಾನಕ ವಿಡಿಯೊ
ಬೆಂಕಿಯನ್ನು ನಿಯಂತ್ರಿಸಲು ಮತ್ತು ಪಕ್ಕದ ಕಟ್ಟಡಗಳಿಗೆ ಹರಡುವುದನ್ನು ತಡೆಯಲು ಸಿಬ್ಬಂದಿ ದಟ್ಟ ಹೊಗೆ ಮತ್ತು ತೀವ್ರವಾದ ಶಾಖದ ನಡುವೆಯೂ ಕೆಲಸ ಮಾಡಿದರು. ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಗಳು ಭೀತಿ ಮತ್ತು ಭೀಕರ ದೃಶ್ಯಗಳನ್ನು ವಿವರಿಸಿದರು. ಇಡೀ ಪ್ರದೇಶ ನಡುಗಿ ಹೋಗಿದೆ. ಅದು ನೋಡಲು ಚಲನಚಿತ್ರ ದೃಶ್ಯದಂತೆ ಕಂಡು ಬಂದರೂ, ನೈಜವಾಗಿಯೂ ಬೆಂಕಿ ಹೊತ್ತಿ ಉರಿಯುತ್ತಿತ್ತು. ಅಗ್ವಿಯ ಜ್ವಾಲೆಗಳು ಆಕಾಶದೆತ್ತರಕ್ಕೆ ಹಾರುವುದನ್ನು ನೋಡಿದ ಸ್ಥಳೀಯರು ನಿಜಕ್ಕೂ ಭೀತಿಗೊಂಡಿದ್ದಾರೆ.
ವಿಡಿಯೊ ವೀಕ್ಷಿಸಿ:
JUST IN: Car explodes during fire in New York City, injuring multiple firefighters pic.twitter.com/lKdsK7opzP
— BNO News (@BNONews) November 6, 2025
ಇನ್ನು ತನಿಖಾಧಿಕಾರಿಗಳು ಸ್ಫೋಟದ ಕಾರಣವನ್ನು ತನಿಖೆ ಮಾಡಲು ಪ್ರಾರಂಭಿಸಿದ್ದು, ತುರ್ತು ಸಿಬ್ಬಂದಿ ಪ್ರದೇಶವನ್ನು ಸುತ್ತುವರೆದರು. ಇದು ತನಿಖೆಯ ಹಂತದಲ್ಲಿದೆ. ಈ ಮಧ್ಯೆ, ರಾತ್ರಿಯಿಡೀ ಶುಚಿಗೊಳಿಸುವಿಕೆ ಮತ್ತು ಸುರಕ್ಷತೆಯನ್ನು ಕಾಯ್ದುಕೊಳ್ಳಲು ವೆಸ್ಟ್‌ಚೆಸ್ಟರ್ ಅವೆನ್ಯೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡದಂತೆ ಅಧಿಕಾರಿಗಳು ನಿವಾಸಿಗಳನ್ನು ಒತ್ತಾಯಿಸಿದರು.
ಪ್ರತ್ಯೇಕ ಘಟನೆಯಲ್ಲಿ, ಬುಧವಾರ ಮಿಸ್ಸಿಸ್ಸಿಪ್ಪಿಯ ಹೈಡ್ರೋಜನ್ ಮತ್ತು ಸಾರಜನಕ ಉತ್ಪನ್ನ ತಯಾರಕ ಸಂಸ್ಥೆಯಲ್ಲಿ ಸಂಭವಿಸಿದ ಸ್ಫೋಟದಿಂದ ಅಮೋನಿಯಾ ಸೋರಿಕೆಯಾಗಿ ಹತ್ತಿರದ ನಿವಾಸಿಗಳು ಸ್ಥಳಾಂತರಗೊಂಡರು. ಮಿಸ್ಸಿಸ್ಸಿಪ್ಪಿ ಗವರ್ನರ್ ಟೇಟ್ ರೀವ್ಸ್, ಯಾಜೂ ನಗರದ ಉತ್ತರಕ್ಕೆ ಇರುವ ಸಿಎಫ್ ಇಂಡಸ್ಟ್ರೀಸ್ ಸ್ಥಾವರದಲ್ಲಿ ಜಲರಹಿತ ಅಮೋನಿಯಾ ಸೋರಿಕೆಗೆ ರಾಜ್ಯದಾದ್ಯಂತದ ತುರ್ತು ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಯಾಜೂ ಸಿಟಿಯು ಒಂದು ಅಮೋನಿಯಾ ಸ್ಥಾವರ, ನಾಲ್ಕು ನೈಟ್ರಿಕ್ ಆಮ್ಲ ಸ್ಥಾವರಗಳು ಮತ್ತು ಇತರ ಸ್ಥಾವರಗಳನ್ನು ಒಳಗೊಂಡಿದೆ. ಇದು ಸುಮಾರು 48,000 ಟನ್ ಅಮೋನಿಯಾವನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಸ್ಫೋಟದಿಂದ ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ.
ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಬೆಂಕಿಯ ಕೆನ್ನಾಲಿಗೆಗೆ 19 ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುಟ್ಟು ಭಸ್ಮವಾಗಿತ್ತು. ಕನಕಪುರ ರಸ್ತೆ ಮೆಟ್ರೋ ನಿಲ್ದಾಣದ ಬಳಿ ಈ ದುರ್ಘಟನೆ ಸಂಭವಿಸಿತ್ತು. ಮೆಟ್ರೋ ನಿಲ್ದಾಣದ ಬಳಿಯ ಕಮರ್ಷಿಯಲ್ ಕಟ್ಟಡದ ನೆಲಮಹಡಿಯಲ್ಲಿ ಸ್ಥಾಪಿಸಲಾಗಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿತ್ತು.