ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೌದಿ ಅರೇಬಿಯಾದಲ್ಲಿ ಸಿಲುಕಿದ ಕರ್ನಾಟಕದ ಉಮ್ರಾ ಯಾತ್ರಿಕರನ್ನು ಕರೆತರಲು ಕೇಂದ್ರಕ್ಕೆ ಸಿಎಂ ಡಿಕೆಶಿ ಪತ್ರ; ಸಹಾಯವಾಣಿ ಆರಂಭ

Helpline for Karnataka's Umrah pilgrims: ಕರ್ನಾಟಕ ಸರ್ಕಾರವು ಉಮ್ರಾ ಯಾತ್ರಿಕರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡಲು ಸನ್ನದ್ಧವಾಗಿದೆ. ನಮ್ಮ ಯಾತ್ರಿಕರ ಸುರಕ್ಷತೆ, ಘನತೆ ಮತ್ತು ಯೋಗಕ್ಷೇಮವೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸೌದಿಯಲ್ಲಿ ಸಿಲುಕಿದ ಕನ್ನಡಿಗರನ್ನು ಕರೆತರಲು ಕೇಂದ್ರಕ್ಕೆ ಸಿಎಂ ಪತ್ರ

-

Prabhakara R
Prabhakara R Oct 23, 2026 9:20 PM

ಬೆಂಗಳೂರು: ಸೌದಿ ಅರೇಬಿಯಾದಲ್ಲಿ (Saudi Arabia) ಸಿಲುಕಿರುವ ಕರ್ನಾಟಕದ ಸುಮಾರು 600ಕ್ಕೂ ಹೆಚ್ಚು ಉಮ್ರಾ ಯಾತ್ರಿಕರನ್ನು (Umrah pilgrims) ತಾಯ್ನಾಡಿಗೆ ವಾಪಸ್‌ ಕರೆತರಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರಿಗೆ ಸಿಎಂ ಡಿ.ಕೆ.ಶಿವಕುಮಾರ್‌ (CM DK Shivakumar) ಅವರು ಪತ್ರ ಬರೆದಿದ್ದಾರೆ. ಅಲ್ಲದೇ ಯಾತ್ರಿಕರಿಗೆ ಅಗತ್ಯ ನೆರವು ಒದಗಿಸಲು ರಾಜ್ಯ ಸರ್ಕಾರದಿಂದ ಸಹಾಯವಾಣಿ ಸಂಖ್ಯೆ ಆರಂಭಿಸಲಾಗಿದೆ.

ಈ ಕುರಿತು ಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ವಿಮಾನ ಕಾರ್ಯಾಚರಣೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಮಕ್ಕಾ ಮತ್ತು ಮದೀನಾದಲ್ಲಿ ಸಿಲುಕಿರುವ 600 ಕ್ಕೂ ಹೆಚ್ಚು ಕರ್ನಾಟಕದ ಉಮ್ರಾ ಯಾತ್ರಿಕರನ್ನು ಸುರಕ್ಷಿತವಾಗಿ ಹಾಗೂ ಶೀಘ್ರವಾಗಿ ತಾಯ್ನಾಡಿಗೆ ಕರೆತರಲು ತುರ್ತು ಮಧ್ಯಪ್ರವೇಶ ಕೋರಿ ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದೇನೆ.



ಭಾರತೀಯ ರಾಜತಾಂತ್ರಿಕ ಕಚೇರಿಗಳು ಮತ್ತು ಸೌದಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು, ಅಗತ್ಯವಿದ್ದರೆ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಲು ಹಾಗೂ ಯಾತ್ರಿಕರು ಹಿಂದಿರುಗುವವರೆಗೆ ಅವರಿಗೆ ಸೂಕ್ತ ವಸತಿ, ಆಹಾರ ಮತ್ತು ಮಧ್ಯಂತರ ನೆರವು ಖಚಿತಪಡಿಸಲು ಕೇಂದ್ರ ವಿದೇಶಾಂಗ ಸಚಿವಾಲಯವನ್ನು ಒತ್ತಾಯಿಸಿದ್ದೇನೆ.

ಕರ್ನಾಟಕ ಸರ್ಕಾರವು ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡಲು ಸನ್ನದ್ಧವಾಗಿದೆ. ನಮ್ಮ ಯಾತ್ರಿಕರ ಸುರಕ್ಷತೆ, ಘನತೆ ಮತ್ತು ಯೋಗಕ್ಷೇಮವೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಕನ್ನಡಿಗರ ನೆರವಿಗಾಗಿ ಸಹಾಯವಾಣಿ ಆರಂಭ

ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕನ್ನಡಿಗರೊಂದಿಗೆ ನಾವಿದ್ದೇವೆ, ನಿಮ್ಮ ಸುರಕ್ಷಿತ ವಾಪಸಾತಿ ನಮ್ಮ ಆದ್ಯತೆಯಾಗಿದೆ ಎಂದು ಸಿಎಂ ಡಿಕೆಶಿ ತಿಳಿಸಿದ್ದಾರೆ. ಕರ್ನಾಟಕದ ಸುಮಾರು 600ಕ್ಕೂ ಹೆಚ್ಚು ಉಮ್ರಾ ಯಾತ್ರಿಕರು ಸುರಕ್ಷಿತವಾಗಿ ಮತ್ತು ಶೀಘ್ರವಾಗಿ ತಾಯ್ನಾಡಿಗೆ ಮರಳುವುದನ್ನು ಖಚಿತಪಡಿಸಲು ನಮ್ಮ ಕರ್ನಾಟಕ ಸರ್ಕಾರವು ಭಾರತ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಯಾತ್ರಿಕರಿಗೆ ಅಗತ್ಯ ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಯಾತ್ರಿಕರಿಗಾಗಿ ಸಹಾಯವಾಣಿ ಸಂಖ್ಯೆಗಳು:

  • ಕರ್ನಾಟಕ ಹಜ್‌ ಇಲಾಖೆ: 9483503132 | 7899707775
  • ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC): 1070 | 080-22253707



ಸೌದಿಯಲ್ಲಿ ಸಿಲುಕಿರುವ 4,000 ಭಾರತೀಯ ಹಜ್ ಯಾತ್ರಿಕರು: ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಓವೈಸಿ ಮನವಿ

ವಿಮಾನ ಹಾರಾಟದ ಮಾಹಿತಿಗಾಗಿ ತಮ್ಮ ವಿಮಾನಯಾನ ಸಂಸ್ಥೆ ಅಥವಾ ಪ್ರವಾಸ ಆಯೋಜಕರನ್ನು ಸಂಪರ್ಕಿಸಿ. ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ (ರಿಯಾದ್‌) ಮತ್ತು ಜೆಡ್ಡಾದಲ್ಲಿರುವ ಭಾರತೀಯ ಕಾನ್ಸುಲೇಟ್‌ ಜನರಲ್‌ ನೀಡುವ ಅಧಿಕೃತ ಸೂಚನೆಗಳನ್ನು ಪಾಲಿಸುವಂತೆ ರಾಜ್ಯದ ಯಾತ್ರಿಕರಲ್ಲಿ ಸಿಎಂ ಮನವಿ ಮಾಡಿದ್ದಾರೆ.