ಹೊಸ ಸಾಮಾಜಿಕ ಮಾಧ್ಯಮ ನಿಯಮ: ಹೆಚ್-1ಬಿ ವೀಸಾ ಸಂದರ್ಶನ ಮುಂದೂಡಿಕೆ, ಅನೇಕ ಭಾರತೀಯರಿಗೆ ನಿರಾಸೆ
ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಮೇಲೆ ಅಫ್ಘಾನಿಸ್ತಾನದ ಪ್ರಜೆಯೊಬ್ಬ ಗುಂಡು ಹಾರಿಸಿದ ಬಳಿಕ ಯುಎಸ್ ವೀಸಾ ಅರ್ಜಿಗಳ ಮರು ಪರಿಶೀಲನೆ ನಡೆಸುತ್ತಿದೆ. ಈ ನಡುವೆ 19 ರಾಷ್ಟ್ರಗಳ ವಲಸಿಗರ ಮೇಲೆ ಬಿಗಿ ಕ್ರಮ ಕೈಗೊಂಡಿರುವ ಅಮೆರಿಕ ಸರ್ಕಾರ ಈ ದೇಶಗಳಿಂದ ವಲಸೆ ಬರುವ ಜನರಿಗೆ ಗ್ರೀನ್ ಕಾರ್ಡ್, ಯುಎಸ್ ಪೌರತ್ವ ಮತ್ತು ಇತರ ವಲಸೆ ಅರ್ಜಿಗಳನ್ನು ನೀಡುವುದನ್ನು ಈಗಾಗಲೇ ಸ್ಥಗಿತಗೊಳಿಸಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ: ಹೊಸ ಸಾಮಾಜಿಕ ಮಾಧ್ಯಮ ಪರಿಶೀಲನಾ ನೀತಿಯ ( New social media rule) ಅಡಿಯಲ್ಲಿ ಅಮೆರಿಕವು (US) ಭಾರತೀಯರು ಸೇರಿದಂತೆ ಅನೇಕರಿಗೆ ನೀಡಿದ್ದ ಹೆಚ್-1ಬಿ ವೀಸಾ (H-1B visa) ನೇಮಕಾತಿಯನ್ನು ಮುಂದೂಡಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಭಾರತದಲ್ಲಿರುವ ಯುಎಸ್ ರಾಯಭಾರ ಕಚೇರಿಯು (US Embassy) ಈ ಹಿಂದೆ ವೀಸಾ ನೇಮಕಾತಿಗೆ ನಿಗದಿಪಡಿಸಿದ ದಿನದಂದು ಸಂದರ್ಶನಕ್ಕೆ ಹಾಜರಾಗದಂತೆ ಸೂಚಿಸಿದೆ. ಸಂದರ್ಶನ ದಿನಾಂಕವನ್ನು ಮರು ಹಂಚಿಕೆ ಮಾಡಿದ ಬಳಿಕ ಸೂಚಿಸಲಾಗುವುದು. ಅದಕ್ಕೂ ಮೊದಲು ರಾಯಭಾರ ಕಚೇರಿಗೆ ಆಗಮಿಸುವವರಿಗೆ ಪ್ರವೇಶವನ್ನು ನಿರಾಕರಿಸಲಾಗುವುದು ಎಂದು ತಿಳಿಸಿದೆ.
ಯುಎಸ್ ನ ಹೊಸ ಸಾಮಾಜಿಕ ಮಾಧ್ಯಮ ಪರಿಶೀಲನಾ ನೀತಿಯು ಭಾರತದಲ್ಲಿ ಹೆಚ್-1ಬಿ ವೀಸಾ ಅರ್ಜಿದಾರರಿಗೆ ನಿರಾಶೆಯನ್ನು ಉಂಟು ಮಾಡಿದೆ. ಯಾಕೆಂದರೆ ಅನೇಕ ನೇಮಕಾತಿಗಳನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಈ ಕುರಿತು ಭಾರತದಲ್ಲಿನ ಯುಎಸ್ ರಾಯಭಾರ ಕಚೇರಿಯು ಮಂಗಳವಾರ ರಾತ್ರಿ ವೀಸಾ ಅರ್ಜಿದಾರರಿಗೆ ಸೂಚನೆಯನ್ನು ನೀಡಿದೆ.
ಅಫ್ಘಾನ್ ಸೇರಿದಂತೆ 19 ರಾಷ್ಟ್ರಗಳ ವಲಸಿಗರ ಮೇಲೆ ಬಿಗಿ ಕ್ರಮಕ್ಕೆ ಮುಂದಾದ ಡೊನಾಲ್ಡ್ ಟ್ರಂಪ್
ವೀಸಾ ನೇಮಕಾತಿ ದಿನಾಂಕವನ್ನು ಮರು ಹೊಂದಿಸಲಾಗಿದೆ. ಈ ಕುರಿತು ಸಂದರ್ಶನಕ್ಕೆ ಹಾಜರಾಗುವವರಿಗೆ ಇಮೇಲ್ ಕಳುಹಿಸಲಾಗಿದೆ. ಹೊಸ ನೇಮಕಾತಿ ದಿನಾಂಕದಂದು ನಿಮಗೆ ಸಹಾಯ ಮಾಡಲು ಮಿಷನ್ ಇಂಡಿಯಾ ಎದುರು ನೋಡುತ್ತಿದೆ. ಈ ಹಿಂದೆ ನಿಗದಿಪಡಿಸಿರುವ ದಿನಾಂಕದಂದು ಸಂದರ್ಶನಕ್ಕೆ ಹಾಜರಾಗುವವರಿಗೆ ರಾಯಭಾರ ಕಚೇರಿ ಅಥವಾ ದೂತಾವಾಸಕ್ಕೆ ಪ್ರವೇಶ ನಿರಾಕರಿಸಲಾಗುತ್ತದೆ ಎಂದು ರಾಯಭಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ATTENTION VISA APPLICANTS - If you have received an email advising that your visa appointment has been rescheduled, Mission India looks forward to assisting you on your new appointment date. Arriving on your previously scheduled appointment date will result in your being denied…
— U.S. Embassy India (@USAndIndia) December 9, 2025
ಹೆಚ್-1ಬಿ ವೀಸಾ ಅರ್ಜಿದಾರರು ಮತ್ತು ಅವರ ಹೆಚ್-4 ವೀಸಾ ಹೊಂದಿರುವ ಅವಲಂಬಿತರಿಗೆ ಪರಿಶೀಲನಾ ಕ್ರಮಗಳನ್ನು ವಿಸ್ತರಿಸಿರುವ ಯುಎಸ್ ಸರಕಾರ ಅವರ ಎಲ್ಲಾ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಲ್ಲಿ ಗೌಪ್ಯತಾ ಸೆಟ್ಟಿಂಗ್‌ಗಳನ್ನು "ಸಾರ್ವಜನಿಕ" ಎಂದು ಹೊಂದಿಸಲು ಸೂಚಿಸಿದೆ. ಈ ಮೂಲಕ ಅಮೆರಿಕದ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುರಕ್ಷತೆಗೆ ಬೆದರಿಕೆಯನ್ನು ಉಂಟು ಮಾಡುವವರನ್ನು ಗುರುತಿಸಲಾಗುತ್ತದೆ. ಡಿಸೆಂಬರ್ 15ರಿಂದ ಅಧಿಕಾರಿಗಳು ವೀಸಾ ಅರ್ಜಿದಾರರ ಆನ್‌ಲೈನ್ ಉಪಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
ಡಿಸೆಂಬರ್ ಮಧ್ಯದಿಂದ ಕೊನೆಯವರೆಗೆ ನಿಗದಿಯಾಗಿದ್ದ ಸಂದರ್ಶನಗಳನ್ನು ಮುಂದಿನ ವರ್ಷದ ಮಾರ್ಚ್‌ಗೆ ಮುಂದೂಡಲಾಗುತ್ತಿದೆ. ಆದರೆ ಎಷ್ಟು ಮಂದಿಗೆ ದಿನಾಂಕ ಮರು ಹೊಂದಿಕೆ ಮಾಡಲಾಗಿದೆ ಎನ್ನುವ ಕುರಿತು ನಿಖರ ಮಾಹಿತಿ ತಿಳಿದುಬಂದಿಲ್ಲ ಪ್ರತಿ ವೀಸಾ ತೀರ್ಪು ರಾಷ್ಟ್ರೀಯ ಭದ್ರತಾ ನಿರ್ಧಾರವಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಭಾರತದ ವಿಚಾರದಲ್ಲಿ ಮೃದುವಾಯ್ತಾ ಅಮೆರಿಕದ ಧೋರಣೆ? ವ್ಯಾಪಾರ ಒಪ್ಪಂದದ ಬಗ್ಗೆ ಅಧಿಕಾರಿ ಹೇಳಿದ್ದೇನು?
ನವೆಂಬರ್ ತಿಂಗಳಾಂತ್ಯದಲ್ಲಿ ಶ್ವೇತ ಭವನದ ಬಳಿ ನಡೆದ ಗುಂಡಿನ ದಾಳಿಯಲ್ಲಿ ರಾಷ್ಟ್ರೀಯ ಗಾರ್ಡ್ ಸದಸ್ಯೆಯೊಬ್ಬರು ಸಾವನ್ನಪ್ಪಿದ್ದರು. ಈ ಬಳಿಕ ವಲಸಿಗರ ಮೇಲೆ ಬಿಗಿ ಕ್ರಮಕ್ಕೆ ಮುಂದಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೃತೀಯ ಜಗತ್ತಿನ ದೇಶಗಳಿಂದ ವಲಸೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದರು. ಶ್ವೇತಭವನದ ಬಳಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿ ಅಫ್ಘಾನಿಸ್ತಾನ ಮೂಲದ ರಹಮಾನಲ್ಲಾ ಲಕನ್ವಾಲ್ ಎಂಬಾತನನ್ನು ಬಂಧಿಸಲಾಗಿತ್ತು.