ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ಅಂತಾರಾಷ್ಟ್ರೀಯ ಸಂಬಂಧಗಳಿಗೆ ಹಾನಿಕಾರಕ: ವ್ಲಾಡಿಮಿರ್ ಪುಟಿನ್
ರಷ್ಯಾದೊಂದಿಗೆ ಭಾರತದ ಪಾಲುದಾರಿಕೆಯನ್ನು ಶ್ಲಾಘಿಸಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಯಾವುದೇ ರೀತಿಯ ಒತ್ತಡ ಹೇರುವುದು ಅಂತಾರಾಷ್ಟ್ರೀಯ ಸಂಬಂಧಗಳಿಗೆ ಹಾನಿಕಾರಕ ಎಂದು ತಿಳಿಸಿದ್ದಾರೆ. ನವದೆಹಲಿಯು ತನ್ನದೇ ಆದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಸೇಂಟ್ ಪೀಟರ್ಸ್‌ಬರ್ಗ್: ರಷ್ಯಾದೊಂದಿಗೆ (Russia) ಭಾರತ ಕಡಿಮೆ ವ್ಯವಹಾರ ನಡೆಸಲು ಒತ್ತಾಯಿಸುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೇಲೆ ಒತ್ತಡ ಹೇರುವುದು ಅಂತಾರಾಷ್ಟ್ರೀಯ ಸಂಬಂಧಗಳಿಗೆ ಹಾನಿಕಾರಕವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (russian president Vladimir Putin) ಹೇಳಿದರು. ಅವರು ಗುರುವಾರ ಜಾಗತಿಕ ಸುದ್ದಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿ, ನವದೆಹಲಿಯೊಂದಿಗೆ ಮಾಸ್ಕೋದ ಕಾರ್ಯತಂತ್ರ ಪಾಲುದಾರಿಕೆ ಹಾಗೂ ಭಾರತದ ಆರ್ಥಿಕ ಬೆಳವಣಿಗೆ ಮತ್ತು ಸ್ವತಂತ್ರ ವಿದೇಶಾಂಗ ನೀತಿ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.
ರಷ್ಯಾದೊಂದಿಗೆ ಭಾರತ ಸಹಕಾರ ಕಡಿಮೆ ಮಾಡುವಂತೆ ಒತ್ತಾಯಿಸುವುದು ಪಾಶ್ಚಿಮಾತ್ಯ ರಾಷ್ಟ್ರಗಳ ವ್ಯರ್ಥ ಪ್ರಯತ್ನ. ಇದು ಜಾಗತಿಕ ಸ್ಥಿರತೆಗೆ ಹಾನಿಕಾರಕವಾಗಿದೆ. ಭಾರತವು ರಷ್ಯಾದೊಂದಿಗೆ ಆರ್ಥಿಕ ವ್ಯವಹಾರವನ್ನು ವಿಸ್ತರಿಸುವ ದೃಢನಿರ್ಧಾರವನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಆಂಧ್ರ ರಾಜ್ಯಸಭಾ ಸ್ಥಾನವನ್ನು ಬಿಟ್ಟುಕೊಟ್ಟ ಬಿಜೆಪಿ! ಕಾರಣವೇನು?
ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತ ಪ್ರಸ್ತುತ ತೀವ್ರವಾಗಿ ಅಭಿವೃದ್ಧಿ ಕಾಣುತ್ತಿದೆ. ಮುಂಬರುವ ವರ್ಷಗಳಲ್ಲಿ ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು 100 ಬಿಲಿಯನ್ ಯುಎಸ್ ಡಾಲರ್ ಮೈಲಿಗಲ್ಲನ್ನು ತಲುಪುವ ನಿರೀಕ್ಷೆ ಇದೆ ಎಂದು ಹೇಳಿದರು.
ಭಾರತವು ಅತಿ ಹೆಚ್ಚು ಆರ್ಥಿಕ ಬೆಳವಣಿಗೆ ದರವನ್ನು ಪ್ರದರ್ಶಿಸುತ್ತಿದ್ದು, ಇದು ಏಕಾಏಕಿ ಬರುವಂತದ್ದಲ್ಲ. ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಆಡಳಿತದ ಕಠಿಣ ಪರಿಶ್ರಮವಿದೆ ಎಂದು ಹೇಳಿದರು.
ಅಮೆರಿಕದೊಂದಿಗೆ ಭಾರತದ ರಾಜತಾಂತ್ರಿಕ ಸಂಬಂಧವು ರಷ್ಯಾದೊಂದಿಗಿನ ಸಂಬಂಧಕ್ಕೆ ಅಡ್ಡಿಯಾಗುವುದಿಲ್ಲ. ಇದು ನಮ್ಮಿಬ್ಬರ ಸಂಬಂಧಗಳನ್ನು ದುರ್ಬಲಗೊಳಿಸುವುದಿಲ್ಲ ಎಂದು ಹೇಳಿದ ಅವರು, ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮುಖ್ಯವೆನಿಸುವ ಎಲ್ಲಾ ದೇಶಗಳೊಂದಿಗೆ ಸಂಬಂಧವನ್ನು ಅಭಿವೃದ್ಧಿಪಡಿಸುತ್ತಿರುವುದು ಸಂತೋಷ ಎಂದು ತಿಳಿಸಿದರು.
ರಷ್ಯಾದೊಂದಿಗೆ ಭಾರತದ ಸಹಕಾರದ ವಿಷಯದಲ್ಲಿ ಒತ್ತಡ ಹೇರಲು ಪಾಶ್ಚಿಮಾತ್ಯ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಮೇಲಿನ ಒತ್ತಡವು ಅಂತಾರಾಷ್ಟ್ರೀಯ ಸಂಬಂಧಗಳಿಗೆ ಹಾನಿಕಾರಕವಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.
ಭಾರತ ರಷ್ಯಾದ ಅತ್ಯಂತ ವಿಶ್ವಾಸಾರ್ಹ ಪಾಲುದಾರ. ಹೀಗಾಗಿ ಇತರ ದೇಶದೊಂದಿಗೆ ಅದರ ಪಾಲುದಾರಿಕೆಯು ದ್ವಿಪಕ್ಷೀಯ ಸಂಬಂಧಗಳ ಮೇಲೆ ಯಾವುದೇ ಋಣಾತ್ಮಕ ಪರಿಣಾಮಗಳನ್ನು ಬೀರುವುದಿಲ್ಲ. ಹೀಗಾಗಿ ರಷ್ಯಾ ಅದರೊಂದಿಗೆ ತನ್ನ ಸಂಬಂಧವನ್ನು ವಿಸ್ತರಿಸುವುದನ್ನು ಮುಂದುವರಿಸಲಿದೆ ಎಂದರು.