ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆದ ‘ಗಂಧದಗುಡಿ ಸಿನಿಹಬ್ಬ’; ನಟಿ ಸುಧಾರಾಣಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವ

ಮೈಸೂರು ಸಿನಿಮಾ ಸೊಸೈಟಿಯು ಇದೇ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ‘ಗಂಧದಗುಡಿ ಸಿನಿಹಬ್ಬ’ ಎಂಬ ಹೆಸರಿನಲ್ಲಿ ಎರಡು ದಿನಗಳ ಭವ್ಯ ಕಿರುಚಿತ್ರೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಈ ಸಿನಿಹಬ್ಬದಲ್ಲಿ ಶ್ರೀಮುರಳಿ, ಕಾರುಣ್ಯಾ ರಾಮ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

‘ಗಂಧದಗುಡಿ ಸಿನಿಹಬ್ಬʼದಲ್ಲಿ ಸುಧಾರಾಣಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

-

Avinash GR
Avinash GR Nov 24, 2026 4:55 PM

ಕಳೆದ ಐದು ವರ್ಷಗಳಿಂದ ಮೈಸೂರನ್ನು ಕೇಂದ್ರವಾಗಿರಿಸಿಕೊಂಡು ಸಿನಿಮಾ ಕ್ಷೇತ್ರದಲ್ಲಿ ನಿರಂತರವಾಗಿ ಸಕ್ರಿಯವಾಗಿರುವ ‘ಮೈಸೂರು ಸಿನಿಮಾ ಸೊಸೈಟಿ’, ಇದೇ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ‘ಗಂಧದಗುಡಿ ಸಿನಿಹಬ್ಬ’ ಎಂಬ ಹೆಸರಿನಲ್ಲಿ ಎರಡು ದಿನಗಳ ಭವ್ಯ ಕಿರುಚಿತ್ರೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಿತ್ತು.

2026ರ ನವೆಂಬರ್ 21 ಮತ್ತು 22ರಂದು ಬೆಂಗಳೂರಿನ ಎಫ್.ಕೆ.ಸಿ.ಸಿ.ಐ ಆವರಣದಲ್ಲಿರುವ ‘ಸರ್.ಎಂ. ವಿಶ್ವೇಶ್ವರಯ್ಯ ಆಡಿಟೋರಿಯಂ’ನಲ್ಲಿ ನಡೆದ ಈ ಸಿನಿಹಬ್ಬಕ್ಕೆ ‘ರೋರಿಂಗ್ ಸ್ಟಾರ್’ ಶ್ರೀಮುರಳಿ, ನಟಿ ಕಾರುಣ್ಯಾ ರಾಮ್ ಹಾಗೂ ಹಿರಿಯ ನಟ ಶ್ರೀನಿವಾಸ ಮೂರ್ತಿ ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಿದರು.

ಸುಧಾರಾಣಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’

ಎರಡು ದಿನಗಳ ಕಾಲ ನಡೆದ ಈ ಚಿತ್ರೋತ್ಸವದಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದ 30ಕ್ಕೂ ಹೆಚ್ಚು ವೈವಿಧ್ಯಮಯ ಕಿರುಚಿತ್ರಗಳು ಪ್ರದರ್ಶನಗೊಂಡು ಸಿನಿಪ್ರಿಯರ ಮೆಚ್ಚುಗೆ ಗಳಿಸಿದವು. ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರಿಂದ ಆಯ್ಕೆಯಾದ ಸುಮಾರು 12 ವಿಭಾಗಗಳ ಅತ್ಯುತ್ತಮ ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಪ್ರೋತ್ಸಾಹಿಸಲಾಯಿತು. ಇದೇ ವೇದಿಕೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಕಳೆದ ನಾಲ್ಕು ದಶಕಗಳಿಂದ ಸಲ್ಲಿಸಿರುವ ಅಪಾರ ಸೇವೆಯನ್ನು ಪರಿಗಣಿಸಿ, ಹಿರಿಯ ನಟಿ ಸುಧಾರಾಣಿ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸಿನಿಮಾ ಪ್ರಭಾವಶಾಲಿ ಮಾಧ್ಯಮ

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ, "ಸಿನಿಮಾ ಎಂಬುದು ಸಮಾಜ ಮತ್ತು ಜನರ ಮೇಲೆ ಅತ್ಯಂತ ಗಾಢವಾದ ಪರಿಣಾಮ ಬೀರುವ ಪ್ರಭಾವಶಾಲಿ ಮಾಧ್ಯಮ. ನಮ್ಮ ನಾಡಿನ ಸಂಸ್ಕೃತಿ, ಜಾನಪದ ಹಾಗೂ ಸಾಹಿತ್ಯವನ್ನು ಇಡೀ ವಿಶ್ವಕ್ಕೆ ಸಿನಿಮಾ ಮೂಲಕ ತಲುಪಿಸಲು ವಿಪುಲ ಅವಕಾಶಗಳಿವೆ. ‘ಮೈಸೂರು ಸಿನಿಮಾ ಸೊಸೈಟಿ’ ಇಂತಹ ಪರಿಣಾಮಕಾರಿ ಮಾಧ್ಯಮವನ್ನು ಬಳಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Sri Gandhada Gudi Serial: ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ʼಶ್ರೀ ಗಂಧದ ಗುಡಿ’

ಚಿತ್ರರಂಗಕ್ಕೆ ಬಂದು ನಲವತ್ತು ವರ್ಷಗಳಾಯಿತು

‘ಜೀವಮಾನ ಸಾಧನೆ ಪ್ರಶಸ್ತಿ’ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ ಹಿರಿಯ ನಟಿ ಸುಧಾರಾಣಿ, "ಮೈಸೂರು ಮತ್ತು ಸಿನಿಮಾ ನಡುವೆ ಮೊದಲಿನಿಂದಲೂ ಒಂದು ಅವಿನಾಭಾವ ಹಾಗೂ ನಿಕಟ ಸಂಬಂಧವಿದೆ. ಅಂತಹ ಮೈಸೂರಿನ ಸಿನಿಮಾ ಸೊಸೈಟಿಯಿಂದ ಈ ಗೌರವ ಸಿಗುತ್ತಿರುವುದು ನನಗೆ ಅತೀವ ಸಂತಸ ತಂದಿದೆ. ನಾನು ನಿರ್ವಹಿಸಿದ ಪ್ರತಿಯೊಂದು ಪಾತ್ರವೂ ನನಗೆ ಜೀವ ತುಂಬಿದೆ ಮತ್ತು ನನ್ನ ಜೀವನಕ್ಕೆ ಹೊಸ ಅಧ್ಯಾಯವನ್ನು ಬರೆದಿದೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದು ನಲವತ್ತು ವರ್ಷಗಳು ಕಳೆದರೂ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರೀತಿ, ಅಭಿಮಾನ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ಪ್ರೀತಿಗೆ ನಾನು ಸದಾ ಚಿರಋಣಿಯಾಗಿದ್ದು, ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ" ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪ್ರವೀಣ್ ಕೃಪಾಕರ್, "ಸಮಾಜದ ಆರೋಗ್ಯಕರ ಬೆಳವಣಿಗೆಗೆ ಸಿನಿಮಾ ಸೊಸೈಟಿಗಳು ಪೂರಕವಾಗಿ ಕೆಲಸ ಮಾಡುತ್ತಿವೆ. ಇಂತಹ ಸೊಸೈಟಿಗಳಿಂದ ಸದಭಿರುಚಿಯ ಪ್ರೇಕ್ಷಕ ವರ್ಗ ಸೃಷ್ಟಿಯಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ಕಿರುಚಿತ್ರಗಳನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ನೂರಾರು ಹೊಸ ಕಲಾವಿದರು ಮತ್ತು ತಂತ್ರಜ್ಞರಿಗೆ ‘ಮೈಸೂರು ಸಿನಿಮಾ ಸೊಸೈಟಿ’ ಮನ್ನಣೆ ನೀಡುತ್ತಿದೆ. ಕನ್ನಡ ಚಿತ್ರರಂಗವನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಸಂಸ್ಥೆಗಳ ಅಗತ್ಯವಿದ್ದು, ಈ ವೇದಿಕೆಯನ್ನು ಕಲಾವಿದರು ಸಮರ್ಥವಾಗಿ ಬಳಸಿಕೊಳ್ಳಬೇಕು" ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ನಿರ್ದೇಶಕರಾದ ನಂದಕಿಶೋರ್, ಚೇತನ್ ಕುಮಾರ್, ಮಯೂರ್ ರಾಘವೇಂದ್ರ, ನಟಿಯರಾದ ಹರಿಣಿ ಶ್ರೀಕಾಂತ್, ಐಶ್ವರ್ಯಾ ನಾಗ್, ರೆಮೋಲಾ, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹಾಗೂ ‘ಮೈಸೂರು ಸಿನಿಮಾ ಸೊಸೈಟಿ’ ಅಧ್ಯಕ್ಷ ಚೇತನ್ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಹಲವು ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.