Saudi Arabia Bus Accident: ಸೌದಿ ಬಸ್ ಅಪಘಾತ; ಕೂದಲೆಳೆ ಅಂತರದಲ್ಲಿ ಪಾರಾದ 8 ಮಂದಿ, ಬದುಕುಳಿದವರ ಕಥೆ ಕೇಳಲೇಬೇಕು
ಸೌದಿ ಅರೇಬಿಯಾದಲ್ಲಿ ಸೋಮವಾರ ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತಕ್ಕೀಡಾದ ಬಸ್ ನಲ್ಲಿ 54 ಭಾರತೀಯರು ಪ್ರಯಾಣಿಸಬೇಕಿತ್ತು. ಆದರೆ ಇವರಲ್ಲಿ 8 ಮಂದಿ ಖಾಸಗಿ ಸಾರಿಗೆಯನ್ನು ಆಯ್ಕೆ ಮಾಡಿದ್ದರಿಂದ ದುರಂತದಿಂದ ಪಾರಾಗಿದ್ದಾರೆ. ಈ ಬಸ್ ಅಪಘಾತದಲ್ಲಿ 42 ಮಂದಿ ಭಾರತೀಯ ಉಮ್ರಾ ಯಾತ್ರಿಕರು ಸಜೀವವಾಗಿ ದಹನವಾಗಿದ್ದಾರೆ.
(ಸಂಗ್ರಹ ಚಿತ್ರ) -
ನವದೆಹಲಿ: ಸೌದಿ ಅರೇಬಿಯಾದಲ್ಲಿ (Saudi Arabian) ಸೋಮವಾರ ಮುಂಜಾನೆ ನಡೆದ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಬಸ್ ನಲ್ಲಿ 54 ಮಂದಿ ಭಾರತೀಯ ಯಾತ್ರಿಕರು (Indian pilgrims) ಪ್ರಯಾಣಿಸಬೇಕಿತ್ತು. ಆದರೆ ಅದೃಷ್ಟವಶಾತ್ ಅವರಲ್ಲಿ ಎಂಟು ಮಂದಿ ಅಪಾಯದಿಂದ ಪಾರಾಗಿದ್ದಾರೆ. ಅವರು ಈ ಬಸ್ ನಲ್ಲಿ ಪ್ರಯಾಣಿಸುವ ಬದಲು ಖಾಸಗಿ ಸಾರಿಗೆಯನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಸ್ ಅಪಘಾತದಲ್ಲಿ 42 ಮಂದಿ ಭಾರತೀಯ ಉಮ್ರಾ ಯಾತ್ರಿಕರು ಸಜೀವವಾಗಿ ದಹನವಾಗಿದ್ದಾರೆ.
ಹೈದರಾಬಾದ್‌ನ ಉನ್ನತ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಪ್ರಾಣಾಪಾಯದಿಂದ ಪಾರಾದ ಎಂಟು ಮಂದಿ ಯಾತ್ರಿಕರು ಮೆಕ್ಕಾದಿಂದ ಮದೀನಾಗೆ ಪ್ರಯಾಣ ಮಾಡಲು ಅದೇ ಪ್ರಯಾಣ ಕಂಪೆನಿಯಲ್ಲಿ ಬುಕ್ ಮಾಡಿದ್ದರು. ಕೊನೆ ಕ್ಷಣದಲ್ಲಿ ಅವರು ಖಾಸಗಿ ಸಾರಿಗೆಯನ್ನು ಆಯ್ಕೆ ಮಾಡಿಕೊಂಡು ತಮ್ಮ ಜೀವ ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Sheikh Hasina: ಶೇಖ್ ಹಸೀನಾಳಿಗೆ ಆಶ್ರಯ ನೀಡುತ್ತಿರುವುದು ತಪ್ಪು; ಹಸ್ತಾಂತರ ಪ್ರಕ್ರಿಯೆ ಕೋರಿ ಭಾರತಕ್ಕೆ ಬಾಂಗ್ಲಾ ಪತ್ರ
ಒಟ್ಟು 54 ಮಂದಿ ಒಂದೇ ಪ್ರಯಾಣ ಏಜೆಂಟ್ ಅನ್ನು ಬುಕ್ ಮಾಡಿದ್ದರು. ಇವರಲ್ಲಿ ಎಂಟು ಜನರು ಖಾಸಗಿ ಸಾರಿಗೆಯನ್ನು ಆಯ್ಕೆ ಮಾಡಿದರು.ಹೀಗಾಗಿ ಬಸ್ ನಲ್ಲಿ ಪ್ರಯಾಣಿಸುವ 46 ಮಂದಿಯ ಪಟ್ಟಿ ಸಿಕ್ಕಿದೆ. ಸೌದಿ ಅರೇಬಿಯಾ ಅಧಿಕಾರಿಗಳು ಮೃತರನ್ನು ಗುರುತಿಸುವ ಕಾರ್ಯ ನಡೆಸುತ್ತಿದ್ದಾರೆ. ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬಹುದು ಎಂದು ಅವರು ಹೇಳಿದರು.
ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಸೌದಿ ಅರೇಬಿಯಾದ ಮದೀನಾ ಬಳಿ ಸೋಮವಾರ ಬೆಳಗಿನ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಇದರಲ್ಲಿ 45 ಮಂದಿ ಸಜೀವವಾಗಿ ದಹನವಾಗಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರಲ್ಲಿ 42 ಮಂದಿ ಭಾರತೀಯರಾಗಿದ್ದು, ಹೆಚ್ಚಿನವರು ತೆಲಂಗಾಣದ ಹೈದರಾಬಾದ್ ಮೂಲದವರಾಗಿದ್ದಾರೆ. ಅಪಘಾತದಲ್ಲಿ ಮೊಹಮ್ಮದ್ ಅಬ್ದುಲ್ ಶೋಯಬ್ ಎಂಬಾತ ಬದುಕಿದ್ದು, ಆತನ ಸ್ಥಿತಿ ಯಾವ ರೀತಿ ಇದೆ ಎಂಬುದು ತಿಳಿದು ಬಂದಿಲ್ಲ.
ಬಸ್‌ಗೆ ಬೆಂಕಿ ಹೊತ್ತಿಕೊಂಡಾಗ ಪ್ರಯಾಣಿಕರು ನಿದ್ರಿಸುತ್ತಿದ್ದರು. ಇದರಿಂದ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಮೃತರನ್ನು ಗುರುತಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ ಎಂದು ರಕ್ಷಣಾ ತಂಡಗಳು ತಿಳಿಸಿವೆ.
ಘಟನೆಗೆ ಸಂಬಂಧಿಸಿ ಜೆಡ್ಡಾದ ಭಾರತೀಯ ಕಾನ್ಸುಲೇಟ್ ಜನರಲ್ 24x7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.
ಮೋದಿ, ಜೈಶಂಕರ್, ರಿಜಿಜು ಸಂತಾಪ
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು. ಜೆಡ್ಡಾದ ಭಾರತೀಯ ಕಾನ್ಸುಲೇಟ್ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.
Deeply saddened by the accident in Medinah involving Indian nationals. My thoughts are with the families who have lost their loved ones. I pray for the swift recovery of all those injured. Our Embassy in Riyadh and Consulate in Jeddah are providing all possible assistance. Our…
— Narendra Modi (@narendramodi) November 17, 2025
ಈ ಅಪಘಾತದಿಂದ ತೀವ್ರ ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ನಾವಿದ್ದೇವೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜೆಡ್ಡಾದ ದೂತಾವಾಸವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ. ನಮ್ಮ ಅಧಿಕಾರಿಗಳು ಸೌದಿ ಅರೇಬಿಯಾ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Saudi Arabia Bus Accident: ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ; ಹೈದರಾಬಾದ್‌ನ ಒಂದೇ ಕುಟುಂಬದ 18 ಮಂದಿ ಸಾವು
ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸೌದಿ ಅರೇಬಿಯಾದ ಮದೀನಾ-ಮೆಕ್ಕಾ ಹೆದ್ದಾರಿಯಲ್ಲಿ ಭಾರತೀಯ ಯಾತ್ರಿಕರ ಪ್ರಾಣ ಕಳೆದುಕೊಂಡ ದುರಂತ ಬಸ್ ಅಪಘಾತದಿಂದ ತಾನು ಆಘಾತಗೊಂಡಿದ್ದೇನೆ ಮತ್ತು ತೀವ್ರ ದುಃಖಿತನಾಗಿದ್ದೇನೆ. ದುಃಖಿತ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.