ʼʼನಮ್ಮ ನೆಲದಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗೆ ಅವಕಾಶವಿಲ್ಲʼʼ: ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಭರವಸೆ; ಚೀನಾಕ್ಕೆ ಪರೋಕ್ಷ ಎಚ್ಚರಿಕೆ?
Anura Kumara Dissanayake: ಉಭಯ ದೇಶಗಳ ನಡುವಿನ ಸಮುದ್ರ ಮತ್ತು ರಕ್ಷಣಾ ಪಾಲುದಾರಿಕೆಯನ್ನು ಬಲಪಡಿಸುವ ಮೂರು ದಿನಗಳ ಅಧಿಕೃತ ಭೇಟಿಗಾಗಿ ರಾಜನಾಥ್ ಸಿಂಗ್ ಶ್ರೀಲಂಕಾಕ್ಕೆ ಭೇಟಿ ನೀಡಿದ್ದಾರೆ. ಭಾರತದ ಭದ್ರತಾ ಹಿತಾಸಕ್ತಿಗಳಿಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಗಳಿಗೆ ತನ್ನ ಭೂಪ್ರದೇಶವನ್ನು ಬಳಸಿಕೊಳ್ಳಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಈ ವೇಳೆ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಭರವಸೆ ನೀಡಿದ್ದಾರೆ.
ರಾಜನಾಥ್ ಸಿಂಗ್ ಹಾಗೂ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ -
ಕೊಲೊಂಬೊ, ಸೆ. 9: ಭಾರತದ ಭದ್ರತಾ ಹಿತಾಸಕ್ತಿಗಳಿಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಗಳಿಗೆ ತನ್ನ ಭೂಪ್ರದೇಶವನ್ನು ಬಳಸಿಕೊಳ್ಳಲು ಎಂದಿಗೂ, ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ (Anura Kumara Dissanayake) ಹೇಳಿದ್ದಾರೆ. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರೊಂದಿಗಿನ ಭೇಟಿಯ ವೇಳೆ ಲಂಕಾ ಅಧ್ಯಕ್ಷರು ಭಾರತಕ್ಕೆ ಈ ಭರವಸೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಉಭಯ ದೇಶಗಳು ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಮೂರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ. ಇದರಲ್ಲಿ ಶ್ರೀಲಂಕಾ ವಾಯುಪಡೆ ಬಳಸುತ್ತಿರುವ, ಭಾರತ ಪೂರೈಸಿದ್ದ ವಾಯು ರಕ್ಷಣಾ ಗನ್‌ಗಳನ್ನು ಆಧುನೀಕರಿಸುವ ಒಪ್ಪಂದವೂ ಸೇರಿದೆ.
ಶ್ರೀಲಂಕಾದ ಹಂಬಂತೋಟ ಬಂದರಿನ ಕಹಿ ಅನುಭವದ ಹಿನ್ನೆಲೆಯಲ್ಲಿ, ಚೀನಾದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಾಲದ ನೆರವಿನೊಂದಿಗೆ ಕೈಗೊಳ್ಳಲಾಗುತ್ತಿರುವ ಬೃಹತ್ ಮೂಲಸೌಕರ್ಯ ಯೋಜನೆಗಳ ಬಗ್ಗೆ ಭಾರತ ದೀರ್ಘಕಾಲದಿಂದಲೂ ತೀವ್ರ ಆತಂಕ ಹಾಗೂ ಆಕ್ಷೇಪಗಳನ್ನು ಹೊಂದಿದೆ.
ಶ್ರೀಲಂಕಾದಲ್ಲಿ ಮಹತ್ವದ ಸಭೆ ನಡೆಸಿದರಾಜನಾಥ್ ಸಿಂಗ್:
Defence Minister @rajnathsingh holds #BilateralMeeting with Sri Lanka's President @anuradisanayake. @PMOIndia @DefenceMinIndia @MEAIndia pic.twitter.com/MU2ens2mZF
— Upendrra Rai (@UpendrraRai) September 9, 2026
ಕೊಲೊಂಬೊ ತಾನು ಪಡೆದಿದ್ದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ 2017ರಲ್ಲಿ ಹಂಬಂತೋಟ ಬಂದರನ್ನು 99 ವರ್ಷಗಳ ಗುತ್ತಿಗೆಯ ಅಡಿಯಲ್ಲಿ ಚೀನಾದ ನಿಯಂತ್ರಣಕ್ಕೆ ವಹಿಸಿಕೊಡಬೇಕಾಯಿತು. ಈ ಬಂದರು ಸೌಲಭ್ಯದ ಜತೆಗೆ ಅದರ ಸುತ್ತಮುತ್ತಲಿನ ಒಟ್ಟು 15,000 ಎಕರೆ ಪ್ರದೇಶವನ್ನೂ ಚೀನಾಕ್ಕೆ ಹಸ್ತಾಂತರಿಸಲಾಗಿತ್ತು.
ಬಹು ಹಂತದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯೇ ಮಿಷನ್ ಸುದರ್ಶನ ಚಕ್ರ: ರಾಜನಾಥ್ ಸಿಂಗ್
ಅಲ್ಲದೆ, ಉಭಯ ನಾಯಕರು ಭಾರತೀಯ ಸೇನೆಯು ಶ್ರೀಲಂಕಾದಲ್ಲಿ ನಿರ್ಮಿಸಿರುವ ಮೂರು ಬೈಲಿ ಸೇತುವೆಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಜಂಟಿಯಾಗಿ ಉದ್ಘಾಟಿಸಿದರು. ಶ್ರೀಲಂಕಾ ವಾಯುಪಡೆಗಾಗಿ ಎಲ್-70 ಗನ್‌ಗಳನ್ನು ಆಧುನೀಕರಿಸುವ ಕುರಿತು ಮತ್ತು ಉಭಯ ದೇಶಗಳ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಹಾಗೂ ರಾಷ್ಟ್ರೀಯ ರಕ್ಷಣಾ ಕಾಲೇಜುಗಳ ನಡುವಿನ ಸಹಕಾರದ ಕುರಿತು ಉಭಯ ದೇಶಗಳು ಒಡಂಬಡಿಕೆಗಳನ್ನು ವಿನಿಮಯ ಮಾಡಿಕೊಂಡವು ಎಂದು ಭಾರತೀಯ ರಕ್ಷಣಾ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಉಭಯ ದೇಶಗಳ ನಡುವಿನ ಸಮುದ್ರ ಮತ್ತು ರಕ್ಷಣಾ ಪಾಲುದಾರಿಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಮೂರು ದಿನಗಳ ಅಧಿಕೃತ ಭೇಟಿಗಾಗಿ ರಾಜನಾಥ್ ಸಿಂಗ್ ಶ್ರೀಲಂಕಾಕ್ಕೆ ಭೇಟಿ ನೀಡಿದ್ದಾರೆ. ಚಂಡಮಾರುತ ದಿತ್ವಾ ತಂದಿಟ್ಟ ವಿನಾಶದ ನಂತರ ಭಾರತವು ಆಪರೇಷನ್ ಸಾಗರ್ ಬಂಧು ಅಡಿಯಲ್ಲಿ ನೀಡಿದ ತುರ್ತು ನೆರವಿಗಾಗಿ ಹಾಗೂ ಶ್ರೀಲಂಕಾದಾದ್ಯಂತ ಪುನರ್‌ನಿರ್ಮಾಣ ಕಾರ್ಯಗಳಿಗೆ ಬೆಂಬಲ ನೀಡಲು ಭಾರತದ ಒದಗಿಸಿದ ಪುನರ್ವಸತಿ ಪ್ಯಾಕೇಜ್‌ಗಾಗಿ ಅಧ್ಯಕ್ಷ ದಿಸ್ಸಾನಾಯಕೆ ಕೃತಜ್ಞತೆ ಸಲ್ಲಿಸಿದರು.