ಕುತೂಹಲ ಕೆರಳಿಸಿದ ಡೊನಾಲ್ಡ್ ಟ್ರಂಪ್ ಹಂಚಿಕೊಂಡ ಅಮೆರಿಕ ಧ್ವಜವಿರುವ ಗಲ್ಫ್ ನಕ್ಷೆ: ಮಧ್ಯಪ್ರಾಚ್ಯದಲ್ಲಿ ಹೆಚ್ಚಾಯ್ತು ಯುದ್ಧದ ಭೀತಿ
Donald Trump: ಅಮೆರಿಕ ಅಧ್ಯಕ್ಷ ಟ್ರಂಪ್ ಗಲ್ಫ್ ಪ್ರದೇಶದ ಮೇಲೆ ಅಮೆರಿಕ ಧ್ವಜ ಮತ್ತು ಇರಾನ್ ಕಡೆಗೆ ತೋರಿಸುವ ಕೆಂಪು ಬಾಣಗಳಿರುವ ನಕ್ಷೆಯನ್ನು ಹಂಚಿಕೊಂಡಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಹೆಚ್ಚಿಸಿದೆ. ಇರಾನ್ ವಿರುದ್ಧ ಕಠಿಣ ಎಚ್ಚರಿಕೆ ನೀಡಿರುವ ಟ್ರಂಪ್, ಶಾಂತಿ ಮಾತುಕತೆ ವಿಫಲವಾದರೆ ಗಂಭೀರ ಪರಿಣಾಮಗಳಾಗಬಹುದು ಎಂದು ಹೇಳಿದ್ದಾರೆ. ಈ ಪೋಸ್ಟ್ ಅಮೆರಿಕದ ಮಿಲಿಟರಿ ಸಿದ್ಧತೆಗಳ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) -
ವಾಚಿಂಗ್ಟನ್, ಮೇ 18: ಯುದ್ಧೋನ್ಮದದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಸದ್ಯಕ್ಕೆ ಶಾಂತಗೊ‍್ಳುವ ಲಕ್ಷಣ ತೋರಿಸುತ್ತಿಲ್ಲ. ತಮ್ಮ ಟ್ರುತ್ ಸೋಶಿಯಲ್ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಯಾವುದೇ ಶೀರ್ಷಿಕೆ ಇಲ್ಲದ ಅತ್ಯಂತ ನಕ್ಷೆಯೊಂದನ್ನು ಹಂಚಿಕೊಳ್ಳುವ ಮೂಲಕ ಮಧ್ಯಪ್ರಾಚ್ಯದಲ್ಲಿ (Middle East) ಮತ್ತೊಮ್ಮೆ ಜಾಗತಿಕ ಸಂಘರ್ಷ ತೀವ್ರಗೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಪ್ರಸ್ತುತ ಸ್ಥಗಿತಗೊಂಡಿರುವ ಮಾತುಕತೆಗಳು ಮತ್ತು ಮುರಿದುಬೀಳುವ ಹಂತದಲ್ಲಿರುವ ಕದನ ವಿರಾಮದ ನಡುವೆ, ಇರಾನ್ ವಿರುದ್ಧ ವಾಷಿಂಗ್ಟನ್ ತನ್ನ ಕಠಿಣ ನಿಲುವನ್ನು ಜಗತ್ತಿಗೆ ಪ್ರದರ್ಶಿಸಲು ಈ ವಿಶಿಷ್ಟ ಚಿತ್ರವನ್ನು ಬಳಸಿದೆ ಎಂದು ರಾಜತಾಂತ್ರಿಕ ವಲಯಗಳಲ್ಲಿ ತೀವ್ರವಾಗಿ ವಿಶ್ಲೇಷಿಸಲಾಗುತ್ತಿದೆ.
ಟ್ರಂಪ್ ಹಂಚಿಕೊಂಡಿರುವ ಈ ವಿವಾದಾತ್ಮಕ ನಕ್ಷೆಯಲ್ಲಿ ಇಡೀ ಮಧ್ಯಪ್ರಾಚ್ಯ ಪ್ರದೇಶವನ್ನು ಅಮೆರಿಕದ ರಾಷ್ಟ್ರಧ್ವಜದಿಂದ ಸಂಪೂರ್ಣವಾಗಿ ಮುಚ್ಚಲಾಗಿದ್ದು, ಹಲವು ಕೆಂಪು ಬಾಣದ ಗುರುತುಗಳು ಇರಾನ್ ದೇಶದ ಕಡೆಗೆ ಮುಖ ಮಾಡಿವೆ. ಇದು ಇರಾನ್ ಅನ್ನು ಅಮೆರಿಕ ಎಲ್ಲ ಕಡೆಯಿಂದಲೂ ಮಿಲಿಟರಿ ಶಕ್ತಿಯಿಂದ ಸುತ್ತುವರಿದಿರುವುದನ್ನು ಮತ್ತು ಅದರ ಮೇಲಿನ ರಾಜತಾಂತ್ರಿಕ ಹಾಗೂ ಆರ್ಥಿಕ ಒತ್ತಡವನ್ನು ಜಾಗತಿಕ ಮಟ್ಟಕ್ಕೆ ಸಾರುವಂತೆ ಬಿಂಬಿಸಲಾಗಿದೆ. ಇರಾನ್ ಮೇಲಿನ ಕಠಿಣ ನಿರ್ಬಂಧಗಳು ಮತ್ತು ಪರಮಾಣು ನಿಯಂತ್ರಣದ ಕುರಿತಾದ ಹೊಸ ಶಾಂತಿ ಪ್ರಸ್ತಾಪಗಳನ್ನು ಉಭಯ ದೇಶಗಳು ಜಂಟಿಯಾಗಿ ತಿರಸ್ಕರಿಸಿದ ಬೆನ್ನಲ್ಲೇ ಈ ಪೋಸ್ಟ್ ಪ್ರಕಟವಾಗಿರುವುದು ತೀವ್ರ ಆತಂಕ ಮೂಡಿಸಿದೆ.
ಡೊನಾಲ್ಡ್ ಟ್ರಂಪ್ ಹಂಚಿಕೊಂಡ ನಕ್ಷೆ:
TRUMP: Posts map of U.S. flag over Iran and Middle East with arrows toward Tehran pic.twitter.com/ie6k9joFQm
— Trump Truths (@trumptruthsbot) May 17, 2026
ಇರಾನ್ ವಿರುದ್ಧ ಟ್ರಂಪ್ ತೀಕ್ಷ್ಣ ವಾಗ್ದಾಳಿ
ಇತ್ತೀಚಿನ ಸರಣಿ ಹೇಳಿಕೆಗಳಲ್ಲಿ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಅತ್ಯಂತ ಕಠಿಣ ಪದಗಳನ್ನು ಬಳಸಿದ್ದಾರೆ. "ಒಂದು ವೇಳೆ ಶಾಂತಿ ಮಾತುಕತೆಗಳು ಸಂಪೂರ್ಣವಾಗಿ ವಿಫಲವಾದರೆ, ಇರಾನ್‌ನಲ್ಲಿ ಭವಿಷ್ಯದಲ್ಲಿ ಏನೂ ಉಳಿಯುವುದಿಲ್ಲ" ಎಂದು ಅವರು ನೇರ ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ಚಾಲ್ತಿಯಲ್ಲಿರುವ ಕದನ ವಿರಾಮವು ಕೇವಲ ಶೇಕಡಾ ಒಂದರಷ್ಟು ಮಾತ್ರ ಜೀವಂತವಾಗಿದೆ ಮತ್ತು ಅದು ಸದ್ಯದಲ್ಲೇ ಅಂತ್ಯಗೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕವು ಇರಾನ್‌ನಿಂದ ನೂರಾರು ಕಿಲೋ ಗ್ರಾಂ ಉತ್ಕೃಷ್ಟ ಯುರೇನಿಯಂ ಅನ್ನು ತಕ್ಷಣವೇ ವಶಪಡಿಸಿಕೊಳ್ಳಲು ಮತ್ತು ಅದರ ಪರಮಾಣು ಮೂಲಸೌಕರ್ಯಗಳನ್ನು ನಿರ್ಬಂಧಿಸಲು ಗಡುವು ವಿಧಿಸಿದೆ.
ಇರಾನ್ ಯುದ್ಧ ಟ್ರಂಪ್ ಪಾಲಿನ ಪವಿತ್ರ ಯುದ್ಧವೇ ?
'ಆಪರೇಷನ್ ಎಪಿಕ್ ಫ್ಯೂರಿ 2.0' ಸಿದ್ಧತೆ?
ಈ ನಕ್ಷೆಯು ಕೇವಲ ಸಾಂಕೇತಿಕವಲ್ಲ, ಬದಲಿಗೆ ಅಮೆರಿಕದ ರಕ್ಷಣಾ ಇಲಾಖೆಯಾದ ಪೆಂಟಗನ್ ಇರಾನ್ ವಿರುದ್ಧ ಮತ್ತೊಂದು ಸುತ್ತಿನ ಬೃಹತ್ ವಾಯುದಾಳಿ ಅಥವಾ ಮಿಲಿಟರಿ ಕಾರ್ಯಾಚರಣೆಗೆ ತೀವ್ರ ಸಿದ್ಧತೆ ನಡೆಸುತ್ತಿರುವುದರ ಸ್ಪಷ್ಟ ಸೂಚನೆ ಎಂದು ಭೂರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿ ಪ್ರದೇಶದಲ್ಲಿ ಈಗಾಗಲೇ ಉದ್ವಿಗ್ನತೆ ಹೆಚ್ಚಾಗಿದ್ದು, ರಾಜತಾಂತ್ರಿಕ ಹಾದಿಗಳು ಮುಚ್ಚಿ ಹೋಗುತ್ತಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಬೃಹತ್ ಯುದ್ಧದ ಭೀತಿ ಎದುರಾಗಿದೆ.