ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇರಾನ್ ಸುಪ್ರೀಂ ಲೀಡರ್ ಖಮೇನಿಯ ಹತ್ಯೆ ನಡೆದಿದ್ದು ಹೇಗೆ? ರಾಜಕೀಯ ಚಿತ್ರಣವನ್ನೇ ಬದಲಿಸಿದ ಟ್ರಂಪ್-ನೆತನ್ಯಾಹು ನಡುವಿನ ಆ ಒಂದು ಫೋನ್ ಕರೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ನಿರ್ಣಾಯಕ ಫೋನ್ ಕರೆ, ಇರಾನ್ ವಿರುದ್ಧದ ಸೈನಿಕ ದಾಳಿಗೆ ತಿರುವು ನೀಡಿತು ಎಂಬ ವರದಿ ಹೊರಬಂದಿದೆ. ಇದು ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಮೇಲೆ ದಾಳಿ ನಡೆಸಲು ಸೂಕ್ತ ಸಮಯ ಎಂದು ನೆತನ್ಯಾಹು ಟ್ರಂಪ್ ಅವರನ್ನು ಮನವೊಲಿಸಿದ್ದರು ಎನ್ನಲಾಗಿದೆ. ಇದರ ಫಲವಾಗಿ ‘ಆಪರೇಷನ್ ಎಪಿಕ್ ಫ್ಯೂರಿ’ ಪ್ರಾರಂಭವಾಗಿ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಆರಂಭವಾಯಿತು.

ಟ್ರಂಪ್-ನೆತನ್ಯಾಹು ಕರೆ ಬಳಿಕ ಇರಾನ್ ಮೇಲೆ ದಾಳಿ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) -

Profile
Sushmitha Jain Mar 24, 2026 12:12 PM

ವಾಷಿಂಗ್ಟನ್, ಮಾ. 24: ಇರಾನ್‌ನ (Iran) ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಮೇಲೆ ಅಮೆರಿಕದ ಸೇನೆ ಭೀಕರ ದಾಳಿ ನಡೆಸುವ ಕೇವಲ 48 ಗಂಟೆಗಳ ಮೊದಲು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನಡುವೆ ನಡೆದ ಒಂದು ನಿರ್ಣಾಯಕ ದೂರವಾಣಿ ಕರೆಯು ಇಡೀ ಕಾರ್ಯಾಚರಣೆಯ ದಿಕ್ಕನ್ನೇ ಬದಲಿಸಿತ್ತು ಎಂಬ ಸ್ಫೋಟಕ ಮಾಹಿತಿ ಈಗ ಹೊರಬಿದ್ದಿದೆ.

ರಾಯಿಟರ್ಸ್ ವರದಿಯ ಪ್ರಕಾರ, ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಟ್ರಂಪ್ ಆಡಳಿತವು ಅದಾಗಲೇ ಒಪ್ಪಿಗೆ ನೀಡಿತ್ತು. ಆದರೆ ದಾಳಿಯ ಸಮಯ ಮತ್ತು ಅದರ ವ್ಯಾಪ್ತಿಯ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿರಲಿಲ್ಲ. ಈ ಸಂದರ್ಭದಲ್ಲಿ ಟ್ರಂಪ್‌ಗೆ ಕರೆ ಮಾಡಿದ ನೆತನ್ಯಾಹು, ಇರಾನ್ ನಾಯಕತ್ವದ ಮೇಲೆ ನಿರ್ಣಾಯಕ ಪ್ರಹಾರ ಮಾಡಲು ಇದು ಸಕಾಲ ಎಂದು ಬಲವಾಗಿ ಪ್ರತಿಪಾದಿಸಿದರು. ಇರಾನ್‌ನ ಸುಪ್ರೀಂ ಲೀಡರ್ ಖಮೇನಿ ಮತ್ತು ಅವರ ಆಪ್ತ ಸಲಹೆಗಾರರು ಒಂದು ಕಡೆ ಸೇರುತ್ತಿರುವ ಬಗ್ಗೆ ತಾಜಾ ಗುಪ್ತಚರ ಮಾಹಿತಿ ಇದೆ ಎಂದು ನೆತನ್ಯಾಹು ವಿವರಿಸಿದರು. "ಖಮೇನಿ ಅವರನ್ನು ಹತ್ಯೆ ಮಾಡಲು ಇದಕ್ಕಿಂತ ಉತ್ತಮ ಅವಕಾಶ ಮತ್ತೆ ಸಿಗಲಿಕ್ಕಿಲ್ಲ" ಎಂದು ಅವರು ಟ್ರಂಪ್‌ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.

ನಷ್ಟ ಪರಿಹಾರ ಸಿಗುವ ತನಕ ಯುದ್ಧ ಮುಂದುವರಿಯಲಿದೆ; ಅಮೆರಿಕದ ಕದನ ವಿರಾಮಕ್ಕೆ ಷರತ್ತು ವಿಧಿಸಿದ ಇರಾನ್‌

ಆಪರೇಷನ್ ಎಪಿಕ್ ಫ್ಯೂರಿ

ಈ ದೂರವಾಣಿ ಸಂಭಾಷಣೆಯು ಟ್ರಂಪ್ ಅವರ ಅಂತಿಮ ನಿರ್ಧಾರಕ್ಕೆ ಕಿಚ್ಚು ಹಚ್ಚಿತು. ನೆತನ್ಯಾಹು ಅವರ ವಾದ ಮತ್ತು ಇರಾನ್ ನಾಯಕತ್ವದ ದುರ್ಬಲ ಕ್ಷಣದ ಮಾಹಿತಿಯನ್ನು ಆಧರಿಸಿ 'ಆಪರೇಷನ್ ಎಪಿಕ್ ಫ್ಯೂರಿ'ಗೆ ಚಾಲನೆ ನೀಡಲಾಯಿತು. ಹೀಗೆ ಫೆಬ್ರವರಿ 28ರಂದು ಮೊದಲ ದಾಳಿ ನಡೆಯಿತು ಮತ್ತು ನಂತರ ಖಮೇನಿ ಹತ್ಯೆಯಾಗಿರುವುದನ್ನು ಟ್ರಂಪ್ ಅಧಿಕೃತವಾಗಿ ಘೋಷಿಸಿದರು. ಇರಾನ್‌ನ ಕ್ಷಿಪಣಿ ಸಾಮರ್ಥ್ಯವನ್ನು ನಾಶಪಡಿಸುವುದು ಮತ್ತು ಆ ದೇಶ ಎಂದಿಗೂ ಅಣ್ವಸ್ತ್ರ ಹೊಂದದಂತೆ ತಡೆಯುವುದು ಈ ಕಾರ್ಯಾಚರಣೆಯ ಉದ್ದೇಶವಾಗಿತ್ತು ಎಂದು ವೈಟ್ ಹೌಸ್ ಸ್ಪಷ್ಟಪಡಿಸಿದೆ.

ಪರಿಣಾಮ ಮತ್ತು ಪ್ರತಿಕ್ರಿಯೆ

ಇಸ್ರೇಲ್ ಒತ್ತಡಕ್ಕೆ ಮಣಿದು ಅಮೆರಿಕ ಯುದ್ಧಕ್ಕೆ ಮುಂದಾಗಿದೆ ಎಂಬ ವದಂತಿ ನೆತನ್ಯಾಹು ತಳ್ಳಿಹಾಕಿದ್ದು, "ಟ್ರಂಪ್ ಅವರಿಗೆ ಏನು ಮಾಡಬೇಕೆಂದು ಯಾರೂ ಹೇಳಿಕೊಡುವ ಅಗತ್ಯವಿಲ್ಲ, ಇದು ಅವರದ್ದೇ ನಿರ್ಧಾರ" ಎಂದು ಹೇಳಿದ್ದಾರೆ. ಈ ದಾಳಿಯ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಇರಾನ್ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿದೆ ಮತ್ತು ಜಾಗತಿಕವಾಗಿ ತೈಲ ಬೆಲೆಗಳು ಏರಿಕೆಯಾಗುತ್ತಿವೆ. ಈ ಒಂದು ಫೋನ್ ಕರೆ ಇಡೀ ವಿಶ್ವದ ಭೂರಾಜಕೀಯ ಚಿತ್ರಣವನ್ನೇ ಬದಲಿಸಿದೆ.