ಕಾಯಕ ನಿಷ್ಠೆಯೇ ಆತ್ಮೋನ್ನತಿಗೆ ದಾರಿ
ಕಾಯಕ ನಿಷ್ಠೆಯೇ ಆತ್ಮೋನ್ನತಿಗೆ ದಾರಿ
Vishwavani News
May 19, 2022
ರವಿ ರಾ. ಕಂಗಳ
ಜೀವನ ಎಂಬ ಮೂರಕ್ಷರದಲ್ಲಿ ಜೀವ ವೈವಿಧ್ಯದ ಸೌಂದರ್ಯದ ರಸಸ್ವಾದವಿದೆ, ಸಂಕೋಲೆಗಳ ಬಂಧನವಿದೆ, ಕಷ್ಟ ಸುಖಗಳೆಂಬ ಬೇವು ಬೆಲ್ಲದ ರಸಪಾಕವಿದೆ. ನಮಗಾಗಿ ನಾವು ಜೀವಿಸುವುದಕ್ಕಿಂತ ನಾವು ಬೇರೆಯವರಿಗಾಗಿ ಜೀವಿಸಬೇಕು.
ವ್ಯಕ್ತಿಯ ಜೀವಿತ ಕಾಲದಲ್ಲಿ ಪ್ರತಿ ಕ್ಷಣವನ್ನು ದೇವರು ಕರುಣಿಸಿದ ವರವೆಂದು ಪರಿಭಾವಿಸಿ ನವೋಲ್ಲಾಸ ದಿಂದ ನವಚೈತನ್ಯವನ್ನು ಪಡೆಯುತ್ತಾ ಆನಂದಿಸುವುದೇ ಜೀವನವಾಗಿದೆ. ಇದೊಂದು ಲೌಕಿಕ ಜಗತ್ತಿನ ವ್ಯವಹಾರವಾಗಿದ್ದು ಹುಟ್ಟು ಮತ್ತು ಸಾವಿನ ನಡುವೆ ಬಿಟ್ಟು ಹೋಗುವ ಭಾವನಾತ್ಮಕ ಸಂಬಂಧಗಳ ಬೆಸುಗೆಯಾಗಿದೆ.
ಜೀವನ ಎಂಬ ಮೂರಕ್ಷರದಲ್ಲಿ ಜೀವ ವೈವಿಧ್ಯದ ಸೌಂದರ್ಯದ ರಸಸ್ವಾದವಿದೆ, ಸಂಕೋಲೆಗಳ ಬಂಧನ ವಿದೆ, ಕಷ್ಟ ಸುಖಗಳೆಂಬ ಬೇವು ಬೆಲ್ಲದ ರಸಪಾಕವಿದೆ. ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ ಎಂಬ ಕವಿವಾಣಿಯಂತೆ ನಮಗಾಗಿ ನಾವು ಜೀವಿಸುವುದಕ್ಕಿಂತ ನಾವು ಬೇರೆಯವರಿಗಾಗಿ ಜೀವಿಸಿ, ನಮ್ಮ ನೋವನ್ನು ಮರೆತು ಆ ನೋವಿನೊಳಗೆ ಬೇರೆಯವರ ನಲಿವನ್ನು ಕಾಣುವುದೇ ಜೀವನವಾಗಿದೆ. ಹಸಿದು ಅನ್ನ ಉಣ್ಣು ವುದು ಪ್ರಕೃತಿಯಾದರೆ, ಇನ್ನೊಬ್ಬರ ಅನ್ನವನ್ನು ಕಸಿದು ತಿನ್ನುವುದು ವಿಕೃತಿ, ತಾನು ಹಸಿದಿದ್ದರೂ ಹಸಿದವರಿಗೆ ಅನ್ನ ನೀಡುವುದು ಸಂಸ್ಕೃತಿಯಾಗಿದೆ.
ಪ್ರತಿಯೊಬ್ಬರು ತಮ್ಮ ಪಾಲಿನ ಅನ್ನವನು ಪಡೆಯುವುದು ಹಕ್ಕಾದರೂ, ಅದನ್ನು ಸಂಪಾದಿಸಲು ಸಾಮರ್ಥ್ಯಕ್ಕನುಸಾರವಾಗಿ ದೇಹವನ್ನು ದಂಡಿಸಿ ದುಡಿಯಲೇಬೇಕಾಗುತ್ತದೆ. ಈ ಸಂದರ್ಭದಲ್ಲಿಯೇ ಕೆಲವೊಮ್ಮೆ ಸೋಮಾರಿತನದ ಸೋಗಲಾಡಿ ಮನಸ್ಸು ಜೀವನ ಎಂದರೆ ಇಷ್ಟೆ, ದುಡಿಯುವುದು, ತಿನ್ನುವುದು ಎಂಬ ಸಂಕುಚಿತ ಮನೋಭಾವದ ಜಿಗುಪ್ಸೆ ಮೂಡಿ, ಸುಂದರ ಜೀವನವನ್ನು ನರಕ ಮಾಡಿಕೊಂಡು ನರಳುವವರನು ಕಂಡಾಗ, ಬಹುಷಃ ಅವರು ತಮಗಿಂತ ಮೇಲಿರುವವರನ್ನು ಕಂಡು ಹೊಟ್ಟೆ ಉರಿಸಿಕೊಳ್ಳುತ್ತಾ ಹೊಟ್ಟೆ ಹೊರೆಯುವುದೇ ಜೀವನ ಧರ್ಮ ಎಂಬುದನ್ನು ಮರೆತಿರುತ್ತಾರೆ.
ದುಡ್ಡು ಸಂಪಾದಿಸಿ, ಧನಿಕನಾದವನ ಹಿಂದಿನ ಶ್ರಮ, ದುಡಿಮೆಯ ಪರಿಜ್ಞಾನ ಇದಾವುದು ಇಂಥವರಿಗೆ ಅನುಭವಕ್ಕೆ ಬರುವುದಿಲ್ಲ. ಶುದ್ಧ ಸೋಮಾರಿ
ಯಾಗಿದ್ದ ಒಬ್ಬನುಯಾವುದೇ ಕೆಲಸ ಕಾರ್ಯ ಮಾಡದೆಯೇ ತಾನಿರುವಲ್ಲಿಯೇ ಎಲ್ಲವೂ ಸುಲಭವಾಗಿ ದಕ್ಕಬೇ ಕೆಂದು ಹಟ ಹಿಡಿಯುತ್ತಿದ್ದ. ಕೈ ಕೆಸರಾ ಗದೆ ಬಾಯಿ ಮೊಸರು ಮಾಡಿಕೊಳ್ಳುವ ಗುಣ ಸ್ವಭಾವದವನಾಗಿ ಹೆತ್ತವರಿಗೆ ಭಾರವಾಗಿದ್ದ. ಬುದ್ಧಿವಾದ ಹೇಳಿದರೂ ಕೇಳದವನಾಗಿ ನಿತ್ಯವೂ ಊಟ ನಿದ್ರೆಯನ್ನು ಮಾಡುವು ದನ್ನು ಬಿಟ್ಟರೆ ಬೇರೆ ಕಾಯಕ ಗೊತ್ತಿರಲಿಲ್ಲ.
ಹೀಗಿದ್ದಾಗ ಹೆತ್ತವರು ತೀರಿ ಹೋದ ಬಳಿಕ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಬಂದೊದಗಿತ್ತು. ಅಷ್ಟಕ್ಕೂ ಹುಟ್ಟಿಸಿದ ದೇವರು ಹುಲ್ಲು ಮೇಯಿಸ ಲಾರನೆಂಬ ಉಡಾಫೆಯ ಮಾತಿಗೇನು ಕಮ್ಮಿಯಿರಲಿಲ್ಲ. ಇವನ ಪರಿಸ್ಥಿತಿಯನ್ನು ನೋಡಿ ಕನಿಕರದಿಂದ ಊರಿನ ಜನತೆ ಊಟಕ್ಕೆ ತಂದು ಕೊಡುತ್ತಿದ್ದರು. ದುಡಿಯದೆ ತಿಂದು ಗೂಳಿಯಂತಾದ ಸಿದ್ಧನನ್ನು ಕಂಡ ಜನತೆ ಈತನಿಗೆ ಬುದ್ಧಿ ಕಲಿಸಲು ನಿರ್ಧರಿಸಿ ಆತನಿಗೆ ಊಟ ಕೊಡುವುದನ್ನು ನಿಲ್ಲಿಸಿದರು. ಊಟ ಸಿಗದೆ ನಿತ್ರಾಣವಾದ ಸಿದ್ಧನನ್ನು ಕಂಡ ಈತನ ಸ್ನೇಹಿತ ‘ಪಕ್ಕದ ಊರಿನ ಜಾತ್ರೆಗೆ ಹೊರಟಿ ದ್ದೇನೆ ಬರುವೆಯಾ? ಅಲ್ಲಿ ನಿನ್ನ ಹಸಿವು ನೀಗುತ್ತದೆ’ ಎಂದು ಹೇಳಿ ಆತನನ್ನು ಕರೆದುಕೊಂಡು ಹೋಗುತ್ತಾನೆ.
ತುಂಬಾ ಹಸಿವೆಯಿಂದ ಬಳಲಿದ್ದ ಸಿದ್ಧನು ‘ಅಲ್ಲಿ ಹೋದ ತಕ್ಷಣ ನನಗೆ ತಿನ್ನಲು ಏನು ಸಿಗುತ್ತದೆ ?’ ಎಂದನು. ‘ರಥ ಸಾಗುವ ಬೀದಿಯಲ್ಲಿ ಸೇರಿದವರೆಲ್ಲ ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆಯುತ್ತಾರೆ. ಅವುಗಳನ್ನೆ ತಿನ್ನುವಂತೆ, ರಾತ್ರಿ ಪ್ರಸಾದದ ವ್ಯವಸ್ಥೆ ಇರುತ್ತದೆ ಚೆನ್ನಾಗಿ ಊಟ ಮಾಡುವಂತೆ’ ಎಂದನು.
ಶತ ಸೋಮಾರಿ
ಮರು ಪ್ರಶ್ನೆ ಮಾಡಿದ ಸೋಮಾರಿ ಸಿದ್ಧನು ‘ಬಾಳೆಹಣ್ಣು ರಥಕ್ಕೆ ಎಸೆಯುತ್ತಾರೆ ಎಂದೆಯಲ್ಲ, ಇಡಿಯಾಗಿ ಬಾಳೆಹಣ್ಣು ಎಸೆಯು ತ್ತಾರೋ? ಅಥವಾ ಸಿಪ್ಪೆ ಸುಲಿದು ಎಸೆಯುತ್ತಾರೋ?’ ಎಂದು ಪ್ರಶ್ನಿಸಿದಾಗ, ಈತನಿಗೆ ಈ ಜನ್ಮದಲ್ಲಿ ಬುದ್ಧಿ ಬರುವುದಿಲ್ಲವೆಂದು ಹೇಳಿ ಮೌನಿಯಾ ಗುತ್ತಾನೆ.
ನಾವಂದುಕೊಂಡಂತೆ ಎಲ್ಲವೂ ಸುಲಭವಾಗಿ ದಕ್ಕಬೇಕೆಂಬ ಮನೋಭಾವವುಳ್ಳವರೆಲ್ಲ ಜಡವಸ್ತುವಾಗಿ ಯಾರಿಗೂ ಉಪಯೋಗಕ್ಕೆ ಬರದೆ ಕಾಲವಾಗಿ
ಬಿಡುತ್ತಾರೆ. ಜೀವನ ಜಯಿಸಲು ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಾ, ಕಷ್ಟ ಸುಖಗಳನ್ನು ಸಮಚಿತ್ತದಿಂದ ಎದುರಿಸುತ್ತ ಕೈಲಾದ ಮಟ್ಟಿಗೆ ಶ್ರಮ ಸಂಸ್ಕೃತಿಯ ಸಂಸ್ಕಾರದಿಂದ ದುಡಿದು ಜೀವನ ಸಾಗಿದರೆ ಮಾತ್ರ ಜೀವನದಲ್ಲಿ ಯಶಸ್ಸು ದೊರೆತು, ಆನಂದವನ್ನು ಪಡೆಯಲು ಸಾಧ್ಯವಾಗುತ್ತದೆ.
ಆಸೆಗೆ ಮಿತಿ ಇರಲಿ
ನಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಯೋಗ್ಯತೆ ಮಿರಿ ಆಸೆ ಪಡಬಾರದು. ಹಾಗೊಂದು ವೇಳೆ ಆಸೆ ಪಟ್ಟಿದ್ದಾದಲ್ಲಿ ಸನ್ಮಾನಗಳಿಗಿಂತ ಅವಮಾನಗಳೇ ಜಾಸ್ತಿಯಾಗಿ ಕೀಳಿರಿಮೆಯುಂಟಾಗುತ್ತದೆ. ನಾವು ಮಾಡುವ ಕಾರ್ಯ ಚಿಕ್ಕದಿರಲಿ ದೊಡ್ಡದಿರಲಿ ಅದರ ಬಗ್ಗೆ ಚಿಂತಿಸದೆ ಆ ಕಾರ್ಯದ ಪ್ರತಿಫಲದಿಂದ ಸಂತೃಪ್ತಿ ಸಿಗಬೇಕು.
ಗೌರವಿಸು ಜೀವನವ, ಗೌರವಿಸು ಚೇತನವ |
ಆರದೊ ಜಗವೆಂದು ಭೇದವೆಣಿಸದಿರು ||
ಹೋರುವುದೆ ಜೀವನ ಸಮೃದ್ಧಿಗೋಸುಗ ನಿನಗೆ |
ದಾರಿಯಾತ್ಮೋನ್ನತಿಗೆ ಮಂಕುತಿಮ್ಮ ||
ಎಂಬ ಡಿವಿಜಿಯವರ ಕಗ್ಗದ ಆಶಯದಂತೆ ಜಗತ್ತು ತನ್ನಂತೆ ತಾನು ನಡೆಯುತ್ತಿದೆ. ನನಗೂ ಈ ಪ್ರಾಪಂಚಿಕ ಜಗತ್ತಿಗೂ ಯಾವುದೇ ಸಂಬಂಧವಿಲ್ಲವೆಂದು ತಿಳಿಯಬೇಡಿ.
ತಿನ್ನುವುದಕ್ಕಾಗಿ ಬದುಕದೆ ಬದುಕುವುದಕ್ಕಾಗಿ ತಿನ್ನುವುದನ್ನು ರೂಢಿಸಿಕೊಳ್ಳೋಣ. ದುಡಿಮೆಯ ಬೆವರಿನಲಿ ಬೆಂದ ಅನ್ನವನು ಉಂಡು ಸುಖಿಸೋಣ.
ಜೀವನದ ಪ್ರತಿಕ್ಷಣಗಳನ್ನು ಸತ್ಕಾರ್ಯದಲ್ಲಿ ತೊಡಗಿಸಿ ಆನಂದಿಸೋಣ.