ದೇಶದಾದ್ಯಂತ ಯುಗಾದಿ
ದೇಶದಾದ್ಯಂತ ಯುಗಾದಿ
Vishwavani News
March 31, 2022
ನಮ್ಮ ದೇಶದ ಬಹುಪಾಲು ಎಲ್ಲಾ ಪ್ರದೇಶಗಳಲ್ಲೂ ಯುಗಾದಿಯನ್ನು ವಿಭಿನ್ನ ಹೆಸರುಗಳಿಂದ ಆಚರಿಸುವುದು ನಿಜಕ್ಕೂ ವಿಶೇಷ. ಯುಗಾದಿ ಎಂದಾಕ್ಷಣ ಇದು ದಕ್ಷಿಣ ಭಾರತದ ಹಬ್ಬ ಎಂಬ ಅಭಿಪ್ರಾಯವಿದ್ದರೂ, ಇದೇ ಹಬ್ಬವನ್ನು ಉತ್ತರ ಭಾರತ ದಲ್ಲಿ, ನೇಪಾಳದಲ್ಲಿ, ಬಾಂಗ್ಲಾದೇಶದಲ್ಲಿ ಮತ್ತು ಪಾಕಿಸ್ತಾನದಲ್ಲಿ ಸಹ ಬೇರೆ ಬೇರೆ ಹೆಸರುಗಳಿಂದ ಆಚರಿಸುತ್ತಾರೆ.
ಋತುಮಾನದಲ್ಲಾಗುವ ಬದಲಾವಣೆಯನ್ನು ಗುರುತಿಸಿ, ನಮ್ಮ ದೇಶದ ಎಲ್ಲಾ ಜನರೂ ಈ ಹಬ್ಬವನ್ನು ತಮ್ಮ ಸಂಸ್ಕೃತಿಯ, ಸಂಪ್ರದಾಯದ ಭಾಗವನ್ನಾಗಿಸಿಕೊಂಡಿದ್ದು ಗಮನಾರ್ಹ. ನಮ್ಮ ರಾಜ್ಯದ ಕರಾವಳಿಯ ಜನರು ಯುಗಾದಿಯನ್ನು ‘ಬಿಶು’ ಎಂದು ಆಚರಿಸಿದರೆ, ಕೇರಳದಲ್ಲಿ ‘ವಿಶು’ ಎನ್ನುತ್ತಾರೆ. ಇದನ್ನು ಅಲ್ಲಿ ಸೌರಮಾನ ಯುಗಾದಿಯ ದಿನ ಅಂದರೆ ಪ್ರತಿವರ್ಷ ಎಪ್ರಿಲ್ ೧೩ ಅಥವಾ ೧೪ ರಂದು ಆಚರಿಸುವುದು ವಿಶೇಷ. ಮಹಾರಾಷ್ಟ್ರ ಮತ್ತು ಗುಜರಾತ್‌ನ ಭಾಗಗಳಲ್ಲಿ ಗುಡಿಪಡ್ವ ಎಂಬ ಹೆಸರಿಟ್ಟು, ಬಹಳ ಸಂಭ್ರಮದಿಂದ ಇದೇ ದಿನ ಹಬ್ಬದಾಚರಣೆ ಇದೆ. ತಮಿಳುನಾಡಿನ ಹೊಸ ವರ್ಷದಾ ಚರಣೆಯು ಸಹ ಯುಗಾದಿಯ ಒಂದು ರೂಪ ತಾನೆ!
ಉತ್ತರ ಭಾರತದಲ್ಲಿ, ಪಂಜಾಬ್, ಹರ್ಯಾಣಾ ಮೊದಲಾದ ಭಾಗಗಳಲ್ಲಿ ಬಹು ಸಂಭ್ರಮ, ಉತ್ಸಾಹದಿಂದ ಆಚರಿಸುವ ಬೈಸಾಕಿ ಅಥವಾ ವೈಶಾಕಿ ಹಬ್ಬವರು ಯುಗಾದಿಗೆ ಸಂವಾದಿ ಎನಿಸಿದ್ದು, ಅದನ್ನು ಅವರು ಸೌರಮಾನ ಪಂಚಾಂಗದ ಪ್ರಕಾರ ಪ್ರತಿವರ್ಷ ಎಪ್ರಿಲ್ ೧೩ ಅಥವಾ ೧೪ರಂದು ಆಚರಿ ಸುತ್ತಾರೆ. ಬ್ರಿಟಿಷರು ಪಂಜಾಬ್‌ನ ಜನರನ್ನು ಬಗ್ಗುಬಡಿಯ ಬೇಕೆಂದು, ೧೯೧೯ರಲ್ಲಿ ಇದೇ ದಿನ ಶಸರಹಿತ ಜನರ ಮೇಲೆ ಗುಂಡು ಹಾರಿಸಿ ೪೦೦ಕ್ಕೂ ಹೆಚ್ಚು ಜನರನ್ನು ಸಾಯಿಸಿದ ಪ್ರಸಂಗವೂ ಬೈಸಾಕಿಯೊಂದಿಗೆ ತಳುಕುಹಾಕಿಕೊಂಡಿದೆ.
ಹರಿದ್ವಾರದ ಗಂಗಾ ನದಿ ತಟದಲ್ಲಿ ನಡೆಯುವ ಬೈಸಾಕಿ ಹಬ್ಬಕ್ಕೆ ಲಕ್ಷಾಂತರ ಜನರು ಬರುವುದು ವಿಶೇಷ. ಪಂಜಾಬ್ ವಿಭಜನೆ ಯಾಗುವ ಮೊದಲು ಕಾಟಸ್ ರಾಜ್ ದೇಗುಲದಲ್ಲಿ ಸಾವಿರಾರು ಜನರು ಬೈಸಾಕಿ ಆಚರಿಸುತ್ತಿದ್ದರು. ಇಂದು ಪಂಜಾಬ್‌ನ
ಪ್ರಮುಖ ಹಬ್ಬವಿದು. ಜಮ್ಮುವಿನ ಡೋಗ್ರಾ ಮತ್ತು ಇತರ ಜನರಿಗೆ ಇದೊಂದು ವಿಶೇಷ ಹಬ್ಬ. ನದಿ ಸ್ನಾನ, ಪೂಜೆ, ದೇವತೆಗಳಿಗೆ ನೈವೇದ್ಯ ಸಮರ್ಪಿಸುವುದು ಇಂದಿನ ವಿಶೇಷ.
ನೇಪಾಳದಲ್ಲಿ ಹೊಸ ವರ್ಷವನ್ನು ಸ್ವಾಗತಿಸುವುದು ವೈಶಾಖಿ ಹಬ್ಬದ ದಿನ. ಸಾವಿರಾರು ಜನರು ದೇಗುಲಗಳಲ್ಲಿ ಸೇರಿ, ಈ ಹಬ್ಬವನ್ನು ಅಲ್ಲಿ ಆಚರಿಸುತ್ತಾರೆ. ಬಾಂಗ್ಲಾದೇಶದಲ್ಲಿ ‘ಪೊಹೆಲಾ ಬೋಯ್‌ಶಾಖ್’ (ವೈಶಾಖದ ಮೊದಲ ದಿನ) ಹಬ್ಬದಾಚರಣೆ ಇದೆ! ಇದರ ಆಚರಣೆ ಸಾಮಾನ್ಯವಾಗಿ ಎಪ್ರಿಲ್ ೧೪ ರಂದು. ತ್ರಿಪುರಾ, ಪಶ್ಚಿಮ ಬಂಗಾಳ ಮೊದಲಾದ ಪ್ರದೇಶಗಳಲ್ಲೂ ಇದೇ ದಿನ ವೈಶಾಕಿ ಹಬ್ಬದಾಚರಣೆಯು, ರಂಗು ತುಂಬುತ್ತದೆ.