ಮರೆಯ ಸತ್ಯ ಮರೆಯಬಾರದ ಸತ್ಯ
ಮರೆಯ ಸತ್ಯ ಮರೆಯಬಾರದ ಸತ್ಯ
Vishwavani News
March 31, 2022
ಡಾ. ಆರ್.ಪಿ.ಬಂಗಾರಡ್ಕ ಪುತ್ತೂರು
‘ಇನ್ನೊಬ್ಬರು ನಮ್ಮನ್ನು ತಿರಸ್ಕಾರದಿಂದ ಕಾಣುವುದು ನಮ್ಮ ಪೂರ್ವಜನ್ಮದ ಪುಣ್ಯ ಫಲ.’
ಅಂದು ದೇವದಾಸ ನಾಯಕ್ ಅವರ ಕ್ಲಿನಿಕ್ಕಿನಲ್ಲಿ ಕುಳಿತಿದ್ದೆ. ಅನಿರೀಕ್ಷಿತ ಎನ್ನುವ ಹಾಗೆ ಪೂಜ್ಯಅಜ್ಜ ಮಹಾತ್ಮರು ಆಗಮಿಸಿ ದರು. ದೇವದಾಸ ನಾಯಕರ ಎದುರಿನ ಕುರ್ಚಿಯಲ್ಲಿ ಕುಳಿತವರು ‘ಡಾಕ್ಟ್ರೇ, ಮತ್ತೆ ಹೇಗುಂಟು ಎ?’ ಎಂದು ರೂಢಿಯಂತೆ
ಮಾತನಾಡಿದರು. ನಂತರ ಸ್ವಲ್ಪ ಹೊತ್ತು ಮೌನವಾಗಿದ್ದರು.
ನಂತರ ಇದ್ದಕ್ಕಿದ್ದ ಹಾಗೆ ಎದ್ದವರೇ, ‘ಬಾ.. ಹೋಗೋಣ’ ಎಂದು ನನ್ನಲ್ಲಿ ಹೇಳಿದರು. ಡಾ. ದೇವದಾಸ್ ನಾಯಕರು ನಸುನಗೆಯ
ಮುಖ ಮುದ್ರೆಯೊಂದಿಗೆ ನನ್ನನ್ನೇ ನೋಡುತ್ತಿದ್ದರು. ಅಜ್ಜನವರು ಹೇಳಿದಾಗ ಎಲ್ಲಿಗೆ ಎಂದು ಕೇಳದೆ ಅವರನ್ನು ಹಿಂಬಾಲಿಸಿ ಕ್ಲಿನಿಕ್ಕಿನ ಮೆಟ್ಟಲುಗಳನ್ನು ಇಳಿದೆ. ಸೀದಾ ಬಸ್ಟ್ಯಾಂಡ್ ಕಡೆಗೆ ಮುಖಮಾಡಿ ನಡೆದರು. ನಾನು ಹಿಂಬಾಲಿಸಿದೆ. ಅವರು ನೇರವಾಗಿ ಕರೆದುಕೊಂಡು ಹೋದದ್ದು ಪುತ್ತೂರಿನ ಬಸ್ಟ್ಯಾಂಡಿನ ಬಳಿ ಇರುವ ಪೂಜಾ ಹೋಟೆಲಿಗೆ. ಅಲ್ಲಿ ‘ನಿನಗೆ ಎಂತ ಆಗಬಹುದು?’ ಎಂದು ಪ್ರಶ್ನಿಸಿದರು. ನನಗೆ ಏನು ಹೇಳುವುದಕ್ಕೂ ತೋಚಲಿಲ್ಲ. ಅವರೇ ಕೇಳಿದರು, ‘ಇಡ್ಲಿ-ಸಾಂಬಾರ್ ಆಗಬಹುದಾ?’, ‘ಆಗಬಹುದು’ ಎಂದೆ.
ಪುತ್ತೂರು ಅಜ್ಜ
ಅದು ಮಹಾತ್ಮರಾದ ಪುತ್ತೂರು ಅಜ್ಜನವರ ಸಂಪರ್ಕವಾದ ಆರಂಭದ ದಿನಗಳು. ದಾಕ್ಷಿಣ್ಯ ಹಾಗೂ ಭಯ ಬೆರೆತ ವಿಚಿತ್ರ ಸಲುಗೆ ಅವರಲ್ಲಿ ಉಂಟಾಯಿತು. ಇಡ್ಲಿ ಸಾಂಬಾರು ತಿಂದು, ಕಾಫಿ ಕುಡಿದ ನಂತರ ಹೊಟೇಲ್ ಬಿಲ್ಲು ಟೇಬಲ್ ಮೇಲೆ ಬಂತು. ನಾನು ಬಿಲ್ಲನ್ನು ಎತ್ತಿಕೊಂಡೆ. ಅಂದೆ. ಅಜ್ಜನವರು ಗಂಭೀರರಾಗಿ ‘ಎಂಥಾ... ನಾವು ಕೊಡಬಾರದಾ! ಬಿಲ್ಲು ಇಲ್ಲಿ ಕೊಡು’ ಎಂದು ಗಟ್ಟಿಯಾಗಿ ಹೇಳಿದರು.
ಅವರ ಮಾತಿನ ತೀಕ್ಷಣತೆಗೆ,ನನ್ನ ಕೈಯಿಂದ ಬಿಲ್ಲು ಅವರ ಕೈಸೇರಿತು. ಹಾಗೆಯೇ ಹೊರ ನಡೆದು ಪುತ್ತೂರು ಬಸ್ಸು ನಿಲ್ದಾಣದ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ನಾವಿಬ್ಬರೂ ದಾಟಬೇಕಿತ್ತು. ಆದರೆ ನಿರಂತರವಾಗಿ ವಾಹನಗಳು ಬರುತ್ತಲೇ ಇದ್ದುದರಿಂದ ದಾಟುವುದಕ್ಕೆ ಅವಕಾಶವಾಗಲಿಲ್ಲ. ನಾವಿಬ್ಬರೂ ರಸ್ತೆಯ ಒಂದು ಬದಿಯಲ್ಲಿ ನಿಂತಿದ್ದೆವು.
ಆ ಒಂದು ಕ್ಷಣದಲ್ಲಿ ಅಜ್ಜರು ನನ್ನನ್ನು ನೋಡಿ ಕೇಳಿದ ಒಂದು ಮಾತು- ‘ಹೇಗೆ, ಸತ್ಯವನ್ನು ಹೊರಗೆ ಹಾಕುವುದಾ?’ ಆಗ ನಾನು ಕೂಡ ಅತ್ಯಂತ ಉತ್ಸುಕತೆಯಿಂದ- ‘ಹೌದು ಅಜ್ಜಾ, ಹೊರಹಾಕಿ’ ಎಂದೆ. ಅಂದರೆ ಅಜ್ಜನವರ ಅಂತರಂಗದ ಸತ್ಯವನ್ನು, ಜಗತ್ತಿಗೆ ಗೊತ್ತಿರದೆ ಇರುವ ಅಜ್ಜನವರ ಅಂತರ್ಮುಖವನ್ನು ಪ್ರಕಟಿಸಿ ಎಂಬ ಅರ್ಥದಲ್ಲಿ ನಾನು ಹೇಳಿದ ಮಾತು.
ಅದಕ್ಕೆ ಅಜ್ಜನವರು ನಗುತ್ತಾ ಕೊಟ್ಟ ಉತ್ತರವೇನು ಗೊತ್ತೇ? ‘ನಾವು ಅಡಗುತ್ತೇವೆ ಮಾರಾಯ’ (ನಾವು ಅಡಗುತ್ತು ಮಾರಾಯ- ಹವ್ಯಕ ಭಾಷೆಯಲ್ಲಿ). ನಾನು ಹೆಚ್ಚಿನ ಎಲ್ಲಾ ಸಂದರ್ಭದಲ್ಲಿ ಅವರಲ್ಲಿ ಮಾತಾಡುವಾಗ ಹವ್ಯಕ ಭಾಷೆಯನ್ನು ಬಳಸುತ್ತಿದ್ದೆ. ಆದರೆ ವಿಷಯ ಮಾತ್ರ ಆಧ್ಯಾತ್ಮಿಕ ಬಿಟ್ಟು ಬೇರಾವುದೂ ಇರುತ್ತಿರಲಿಲ್ಲ.
ಅಡಗುವುದು
ಮೇಲೆ ಅಜ್ಜನವರು ಹೇಳಿದ ಅಡಗುವುದು ಎಂಬ ಮಾತು ಇದೆಯಲ್ಲ, ಇದು ಪ್ರಾಮುಖ್ಯವಾದದ್ದು. ಏಕೆಂದರೆ ಶ್ರುತಿಗಳಲ್ಲಿ ಹೇಳಿರುವಂತೆ ದೇವಾಃ ಪರೋಕ್ಷ ಪ್ರಿಯಾಃ, ದೇವರು ಪರೋಕ್ಷ ಪ್ರಿಯನೆಂದು. ದೇವರು ಮರೆಯಲ್ಲಿ ಇರುವುದಕ್ಕೆ ಇಷ್ಟಪಡುವ ಸ್ವಭಾವದವನೆಂದು. ಇದೊಂದು ಸತ್ಯದ ವಿಚಿತ್ರ ಗುಣ. ತಾನು ಪ್ರಕಟವಾಗಬೇಕೆಂಬ, ತನ್ನನ್ನು ಜಗತ್ತು ಗುರುತಿಸಬೇಕೆಂಬ ಯಾವ ಹಪಾಹಪಿಯು ಇಲ್ಲದ ಕಾರಣದಿಂದ ಸತ್ಯವು ಭ್ರಷ್ಟ ವಾಗದೆ ಉಳಿದಿದೆ.
ತಮ್ಮನ್ನು ಪ್ರದರ್ಶಿಸಬೇಕೆಂಬ ಸಾಮಾನ್ಯ ಮನುಷ್ಯರಾದ ನಮ್ಮ ಆತ್ಮರತಿಯು, ಆತ್ಮದಲ್ಲಿ ಸ್ಥಿತವಾದ ಜ್ಞಾನಿಯ ಆತ್ಮರತ
ಸ್ಥಿತಿಗಿಂತ ತೀರಾ ಭಿನ್ನವಾದದ್ದು ಎಂಬುದನ್ನಷ್ಟೇ ನಾವು ತಿಳಿದುಕೊಳ್ಳಬೇಕು. ಜಗತ್ತು ಗುರುತಿಸದಿದ್ದರೂ ಅದು ಪರಿಪೂರ್ಣ ವೆಂಬ ಅರಿವು ಅದಕ್ಕೆ ಇರುವುದರಿಂದಲೇ, ಗುರುತಿಸುವಿಕೆಯ ಹಂಗು ಒಂದಿನಿತೂ ಅದಕ್ಕೆ ಇಲ್ಲ. ಪ್ರಕಟ ಆಗಬೇಕೆಂಬ ಧಾವಂತವೂ ಅದಕ್ಕೆ ಇಲ್ಲ. ಹಾಗೆ ಇರುವ ಕಾರಣದಿಂದಲೇ ಸತ್ಯವು ಸದಾಕಾಲ ಕಾಯುತ್ತಿರುತ್ತದೆ. ತನ್ನನ್ನು ಗುರುತಿಸದೇ ಇದ್ದರೂ ಅದು ಜಗತ್ತನ್ನು ಕಾಯುತ್ತಿರುತ್ತದೆ.
ಏಕೆಂದರೆ ಅದು ಸತ್ಯ ಆಗಿರುವುದರಿಂದ. ಪ್ರದರ್ಶನ ಪ್ರಿಯತೆಯ, ಪ್ರಕಟವಾಗುವಿಕೆಯ ಅವಸರಕ್ಕೆ ಒಳಗಾದರೆ ಕಾಯುವಿಕೆ ಸಾಧ್ಯವಿಲ್ಲ. ಇದೇ ಕಾರಣಕ್ಕೆ - ಜಗತ್ತು ತನ್ನನ್ನು ಗುರುತಿಸಬೇಕು, ಸನ್ಮಾನಿಸಬೇಕು, ತಾನು ಜಗತ್ತಿನ ಮುಂದೆ ಪ್ರಕಟವಾಗಬೇಕು ಎಂಬ ಮನಸ್ಸುಗಳಿಗೆ ಸತ್ಯವು ಎಟಕುವುದು ಕಷ್ಟ.
ಇದನ್ನೇ ದಾಸರು ಇನ್ನೊಂದು ರೀತಿಯಲ್ಲಿ ಹೇಳಿದರು- ಆರೂ ಅರಿಯದಿರಲಿ ಎನ್ನ, ಮುರಾರಿಯ ಒಳಗೆ ಪ್ರಸನ್ನ. ಶಂಕರಾ ಚಾರ್ಯರು ತಮ್ಮ ಸರ್ವ ವೇದಾಂತ ಸಾರ ಸಂಗ್ರಹದಲ್ಲಿ ಮಾನ ಅನಾಸಕ್ತಿ ಎಂಬುದಾಗಿ ಇದನ್ನು ಕರೆದರು. ಮಾನದ ಕುರಿತಾದ ಆಸಕ್ತಿಯನ್ನು ಮಟ್ಟಹಾಕಲು ಅಪಮಾನವಾದರೆ ಒಳಿತು,ಅಪರೂಪ ಹರಿನಾಮ ಜಪಿಸುವ ಮನುಜಗೆ, ದೀನ ರಕ್ಷಕ ನಮ್ಮ ಪುರಂದರವಿಠಲನೆ, ಏನೂ ಬೇಡ ಎನಗೆ ಅಪಮಾನವೇ ಇರಲಿ .. ಎಂದು ತಮಗೆ ಅಪಮಾನವೇ ಆಗಲಿ ಎಂದು ಭಗವಂತನಲ್ಲಿ ಹಾರೈಸಿದರು.
ಮಾನ ಸನ್ಮಾನಗಳನ್ನು ಬಯಸುವ ನಮ್ಮ ಸಾಮಾನ್ಯ ಮರ್ತ್ಯ ಮಾನಸಿಕತೆಗಿಂತ ಇದು ಯಾವ ರೀತಿ ಭಿನ್ನ ವಾಗಿದೆ ಗಮನಿಸಿ. ಅಂತೂ ಈ ರೀತಿಯಲ್ಲಿ ಪ್ರಪಂಚವು ಮತ್ತು ನಮ್ಮವರು ಎಂದು ನಾವು ನಂಬಿದವರು ನಮ್ಮನ್ನು ಅವಮಾನಿಸಿದಾಗ ಅದನ್ನು ಒಳಿತೆಂದು ಭಾವಿಸುವುದು, ಅಷ್ಟೇ ಅಲ್ಲ,ಅವಮಾನಿಸಿದ ವರನ್ನು ತಿರುಗಿ ಅವಮಾನಿಸದಿರುವುದು ಸತ್ಯಕ್ಕೆ ತನ್ನ ಮನಸ್ಸನ್ನು ಒಗ್ಗಿಸಿಕೊಂಡ ಮನುಷ್ಯನಿಗೆ ಮಾತ್ರ ಸಾಧ್ಯ.
ಪೂಜ್ಯ ಅಜ್ಜನವರ ಬಳಿ ನಾನು ಒಮ್ಮೆ ಕೇಳಿದ್ದೇ ‘ನನ್ನನ್ನು ಕೆಲವರು ತುಚ್ಚವಾಗಿ, ನಮ್ಮನ್ನು ತಿರಸ್ಕಾರದಿಂದ, ಅವಮಾನದಿಂದ ಕಂಡರೆ ಎಂತ ಮಾಡುವುದು ಅಜ್ಜಾ?’. ಅದಕ್ಕೆ ಅಜ್ಜನವರು ಕೊಟ್ಟ ಉತ್ತರವು ಅಧ್ಯಾತ್ಮ ಸಾಧಕನಿಗೆ ಅಥವಾ ಯೋಗ ಮಾರ್ಗದಲ್ಲಿ ಹೋಗಬೇಕೆಂದು ಇದ್ದವನಿಗೆ ಇದು ಮಾರ್ಗದರ್ಶಿ. ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಮಾತುಗಳು. ಅವರು ಏನೆಂದರು ಗೊತ್ತೇ? ‘ಇನ್ನೊಬ್ಬರು ನಮ್ಮನ್ನು ತಿರಸ್ಕಾರದಿಂದ ಕಾಣುವುದು ನಮ್ಮ ಪೂರ್ವಜನ್ಮದ ಪುಣ್ಯ ಫಲ!’ ಆ ಮಾತನ್ನು ಕೇಳಿದ ನಂತರ ಇಂದಿಗೂ ಕೂಡ ಅವಮಾನಗಳ ಕುರಿತಾಗಿ ನಾನು ತಲೆಕೆಡಿಸಿಕೊಂಡದ್ದಿಲ್ಲ.
ಪುರಸ್ಕಾರ, ಸನ್ಮಾನಗಳು ನಮ್ಮ ಅಹಂಕಾರವನ್ನು ಬೆಳೆಸುವುದಕ್ಕೆ ಇರುವ ಕಾರಣಗಳು. ಎಷ್ಟೋ ಸಲ ಏನೊಂದೂ ಕಾರಣ ವಿಲ್ಲದೆ ಅಹಂಕಾರ ಆಕಾಶದೆತ್ತರಕ್ಕೆ ಬೆಳೆಯುವ ಜಗತ್ತಿನ ಈ ಒಂದು ಸುಳಿಯ ಮಧ್ಯೆ, ಅದನ್ನು ಬೆಳೆಯಗೊಡದಂತೆ ತಡೆಯುವ ಅವಮಾನವನ್ನು ಬಯಸುವುದು ಇದೆಯಲ್ಲ, ಇದು ಸತ್ಯಕ್ಕೆ ಮುಖ ಮಾಡಿದವನ ಲಕ್ಷಣವೂ ಹೌದು, ಆತ್ಮದಲ್ಲಿ ಅಥವಾ ಸತ್ಯದಲ್ಲಿ ನೆಲೆನಿಂತವನ ಸ್ವಭಾವವೂ ಹೌದು. ನನ್ನನ್ನು ನನ್ನ ಸುತ್ತಮುತ್ತಲಿರುವ ನನ್ನದೇ ಸಮಾಜದಲ್ಲಿ ಬೇರೆಯದೇ ಆದ ನಕಾರಾತ್ಮಕ ರೀತಿಯಲ್ಲಿ ವ್ಯಾಖ್ಯಾನಿಸಿದ ಪ್ರಸಂಗಗಳು ನನ್ನನ್ನು ಖೇದಗೊಳಿಸಿತು.
ಎಷ್ಟೋ ಸಲ ಏನಾಗುತ್ತದೆ ಎಂದರೆ, ಶಂಕರಾಚಾರ್ಯರನ್ನು ನಮಗೆ ಗೊತ್ತಿದೆ ಎನ್ನುತ್ತೇವೆ. ಎಷ್ಟರಮಟ್ಟಿಗೆ ಗೊತ್ತಿದೆ ಎಂದರೆ, ಶಂಕರಾಚಾರ್ಯರ ಫೋಟೋ ನೋಡಿ ಇದು ಶಂಕರಾಚಾರ್ಯರ ಫೋಟೋ ಎಂದು ಹೇಳುವ ಅಷ್ಟಕ್ಕೆ ಮಾತ್ರ ನಮ್ಮ ಜ್ಞಾನ ಸೀಮಿತವಾಗಿರುತ್ತದೆ. ಮಿಕ್ಕಿದ್ದು ಅಷ್ಟಕ್ಕಷ್ಟೆ.
ಅನಾರೋಗ್ಯ ಸ್ಥಿತಿ ಅಲ್ಲ!
ಆದಕಾರಣ ಶಂಕರಾಚಾರ್ಯರು ಉಪದೇಶಿಸಿದ ಸಂಗತಿಗಳನ್ನೇ ನಾವು ಹೇಳಿದರೂ, ಹೇಳಿದ ತತ್ವಗಳನ್ನೇ ನಾವು ಅನುಸಂಧಾನ ಮಾಡಿದರೂ, ನಮ್ಮನ್ನು ಬೇರೆ ರೀತಿಯಲ್ಲಿ ಸಮೀಕರಿಸುವ ಅಥವಾ ಗಮನಿಸುವ ಸಂಗತಿಗಳು ಸಮಾಜದಲ್ಲಿ ಘಟಿಸುತ್ತಿರುತ್ತವೆ. ಇದಕ್ಕೆ ಮಹಾತ್ಮರು ಕೂಡ ಹೊರತಲ್ಲ, ಬ್ರಹ್ಮಜ್ಞಾನಿಗಳು ಕೂಡ ಹೊರತಲ್ಲ ಎಂಬುದಕ್ಕೆ, ಅಜ್ಜ ನವರನ್ನು, ಅವರ ಶೋಧನೆಯ ಆರಂಭದ ದಿನಗಳಲ್ಲಿ ಮತ್ತು ನಂತರವೂ ಕೂಡ ಅಸ್ವಾಭಾವಿಕ ಸ್ಥಿತಿ, ಅನಾರೋಗ್ಯ ಸ್ಥಿತಿ ಎಂಬ ಹಣೆಪಟ್ಟಿ ಹಚ್ಚಿ ಅವರ ಆಸುಪಾಸಿನ ಜನರು ನೋಡಿದ್ದು ಸಾಕ್ಷಿ.
ಅಂದರೆ ಈ ರೀತಿಯ ವಿಪರೀತ ದೃಷ್ಟಿಗಳು, ಸತ್ಯವನ್ನು ಅಸತ್ಯವೆಂದು ನೋಡುವುದು, ಅವರ ಕುರಿತಾಗಿಯೂ ಜಗತ್ತು ಬಿಟ್ಟಿಲ್ಲವೆಂದ ಮೇಲೆ, ಇನ್ನೂ ಅಸತ್ಯದಲ್ಲಿ ಮುಳುಗಿರುವ ನಮ್ಮನ್ನು ಬಾಧಿಸದೇ ಇರುತ್ತದೆಯೇ? ಎಂಬಲ್ಲಿಗೆ ಆಶ್ಚರ್ಯ ಚಿಹ್ನೆ.
ಒಂದು ಸಂದರ್ಭದಲ್ಲಿ ನಾನವರಲ್ಲಿ ಕೇಳಿದ್ದೆ. ಸಮಾಜದಲ್ಲಿ ಬೇರೆಯವರು ನನ್ನನ್ನು ಈ ರೀತಿ ನಕಾರಾತ್ಮಕವಾಗಿ ಹೇಳುತ್ತಾರೆ, ಸರಿ ಇಲ್ಲವೆಂದು ಹೇಳುತ್ತಾರೆ ಎಂದು. ಆಗ ಅಜ್ಜನವರು ಕೊಟ್ಟ ಉತ್ತರ ನಿಜಕ್ಕೂ ಮನನೀಯ. ಅವರು ಗಂಭೀರವಾಗಿ ಖಡಕ್ಕಾಗಿ
ಕೊಟ್ಟ ಉತ್ತರ- ‘ಉಳಿದವರು ಏನು ಹೇಳುತ್ತಾರೆ ಎಂಬುದು ನಮಗೆ ಲಗಾವು ಇಲ್ಲ.’ ಆಗ ನನಗೆ ನೆನಪಾದದ್ದು ದಾಸರ ಪದ್ಯದ ಸಾಲುಗಳು- ಮಂದಿಯ ಮಾತಿಗೆ ಎಂದೆಂದೂ ಮರುಗದೆ ಮುಂದಣ ಗತಿಯನೆ ನೋಡೋ.. .... ಅಂದರೆ ಉಳಿದವರ ಅಭಿಪ್ರಾಯಗಳು ಸತ್ಯದ ನಮ್ಮ ಬಗೆಗಿನ ದೃಷ್ಟಿಕೋನವನ್ನು ಭ್ರಷ್ಟಗೊಳಿಸುವುದಿಲ್ಲ.
ಅಂದರೆ ಸತ್ಯವು ಯಾರ ಕಡೆಗೆ ಮುಖ ಮಾಡಬೇಕೆಂಬುದನ್ನು ಸಾಮಾಜಿಕವಾಗಿ ರೂಪಿತವಾದ ಅಭಿಪ್ರಾಯಗಳು ತೀರ್ಮಾನಿಸು ವುದು ಸಾಧ್ಯವಿಲ್ಲ. ಸಮಾಜದ ತೀರ್ಪುಗಳಿಗೆ ಸತ್ಯವು ಬದ್ಧವಲ್ಲ. ಏಕೆಂದರೆ ಜಗತ್ತು ತೀರ್ಪು ನೀಡುವುದು ಅದು ಈಗಾಗಲೇ ಭ್ರಷ್ಟವಾದ ಅಸತ್ಯಕ್ಕೆ ಅಂಟಿಕೊಂಡ ಅದೇ ಮನಸ್ಸಿನಿಂದ ತಾನೇ? ಮಹಾತ್ಮರನ್ನು ಕೂಡ ಹುಚ್ಚರೆಂದು ಗುರುತಿಸುವ ಕಾಲಘಟ್ಟದಲ್ಲಿ, ಹಗ್ಗವನ್ನು ಹಾವೆಂದು, ಹಾವನ್ನು ಹಗ್ಗವೆಂದು ಭಾವಿಸುವ ವಿಚಿತ್ರ ಮನೋಸ್ಥಿತಿಯಲ್ಲಿ ಜಗತ್ತು ಮುಳುಗಿರ ಬೇಕಾದರೆ, ಹೀಗಲ್ಲದೆ ಮತ್ತೇನನ್ನು ನಿರೀಕ್ಷಿಸುವುದಕ್ಕೆ ಸಾಧ್ಯ? ಒಟ್ಟಿನಲ್ಲಿ ಬಿಡುಗಡೆಯೋ, ಸತ್ಯ ದರ್ಶನವೋ ಯಾವುದಾದರೂ ಇರಲಿ.
ಅದು ಸಮಾಜವು ಒಬ್ಬನ ಕುರಿತಾಗಿ ಏನು ಹೇಳುತ್ತದೆ ಎಂಬುದನ್ನು ಅವಲಂಬಿಸಿರದೆ, ಅವನು ಏನು ಆಗಿದ್ದಾನೆ ಎಂಬುದನ್ನಷ್ಟೇ ಅವಲಂಬಿಸಿದೆ. ಶಂಕರಾಚಾರ್ಯರನ್ನು ಒಪ್ಪಿಕೊಂಡವರು ಕೂಡ, ಶಂಕರಾಚಾರ್ಯರು ಹೇಳಿದ ಬ್ರಹ್ಮಜ್ಞಾನದ ಪ್ರತ್ಯಕ್ಷ ನಿದರ್ಶನ ಕಣ್ಮುಂದೆ ಇzಗ, ನೆಟ್ಟಾರು ರಾಮಚಂದ್ರ ಭಟ್ಟ ಎಂದು ಕರೆಸಿಕೊಳ್ಳುತ್ತಿದ್ದ ದೇಹದಲ್ಲಿ ನಡೆದ ಶಕ್ತಿಯ ಆಟವನ್ನು, ಅಲ್ಲಿಯ ಬೆಳಕನ್ನು ಗುರುತಿಸಲಾರದೆ, ಹುಚ್ಚು ಎಂದು ಗುರುತಿಸಿದ್ದು ಅತ್ಯಂತ ದೊಡ್ಡ ಆಭಾಸ.
ಸಮಾಜವು ತಮ್ಮ ಅಭಿಪ್ರಾಯಗಳಿಗೆ ಅನುಸಾರ ಒಬ್ಬನನ್ನು ಹುಚ್ಚನೆಂದೇ ಗುರುತಿಸಬಹುದು. ಆದರೆ ಅವನು ಪರಮ eನಿಯೂ ಆಗಿರಬಹುದು. ಅಂದಮಾತ್ರಕ್ಕೆ ಹುಚ್ಚರೆಲ್ಲರೂ ಜ್ಞಾನಿಗಳಲ್ಲ. ಆದರೆ ಜ್ಞಾನಿಗಳು ಮಾತ್ರ ಜಗತ್ತಿನ ಅಜ್ಞಾನಕ್ಕೆ ಹುಚ್ಚರಂತೆ ಕಾಣಿಸಿಕೊಳ್ಳಬಹುದು. ನಮ್ಮ ಹುಚ್ಚು ನೀಗುವ ತನಕ.