ಗಂಟಲು ಕೆರೆತ, ಕಿರಿಕಿರಿ ಸಮಸ್ಯೆಯೇ? ಇಲ್ಲಿದೆ ನೋಡಿ ಮನೆಯಲ್ಲೇ ತಯಾರಿಸಿಬಹುದಾದ ಸುಲಭ ಮನೆಮದ್ದುಗಳು
ಚಳಿಗಾಲ ಮತ್ತು ವಾಯುಮಾಲಿನ್ಯದ ಪರಿಣಾಮ ಕೆಮ್ಮು, ನೆಗಡಿ ಹಾಗೂ ಗಂಟಲು ಕೆರೆತ, ಕಿರಿಕಿರಿಯಂತಹ ಸಮಸ್ಯೆಗಳು ಪ್ರತಿಯೊಬ್ಬರನ್ನು ಕಾಡುವುದು ಸಾಮಾನ್ಯ. ಈ ವೇಳೆ ಪ್ರತಿ ಬಾರಿ ವೈದ್ಯರ ಬಳಿ ಹೋಗುವ ಮುನ್ನ ಮನೆಯಲ್ಲೇ ಸಿಗುವ ಕೆಲವು ಸರಳ ಪದಾರ್ಥಗಳ ಮೂಲಕ ಇದಕ್ಕೆ ತಕ್ಷಣದ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿದೆ ನೋಡಿ ಕೆಲವು ಮನೆಮದ್ದುಗಳ ಮಾಹಿತಿ.
ಸಂಗ್ರಹ ಚಿತ್ರ -
ಬೆಂಗಳೂರು, ನ.14: ಚಳಿಗಾಲದ ಆಗಮನದ ಜೊತೆಗೆ ವಾಯುಮಾಲಿನ್ಯ (Smog) ಹೆಚ್ಚಾಗುತ್ತಿರುವುದರಿಂದ ಗಾಳಿಯ ಗುಣಮಟ್ಟ ಕುಸಿದಿದ್ದು, ಸಾರ್ವಜನಿಕರಲ್ಲಿ ಗಂಟಲು ನೋವು (Sore Throat Problems), ಕೆರೆತ ಮತ್ತು ಉಸಿರಾಟದ ಕಿರಿಕಿರಿಯಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಕಲುಷಿತ ಗಾಳಿಯಲ್ಲಿರುವ ಧೂಳಿನ ಕಣಗಳು ಗಂಟಲಿನ ಒಳಪದರಕ್ಕೆ ಹಾನಿ ಮಾಡುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ವೈದ್ಯರ ಬಳಿ ಹೋಗುವ ಮುನ್ನ, ಮನೆಯ ಅಡುಗೆಮನೆಯಲ್ಲಿರುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿ ಗಂಟಲು ನೋವಿಗೆ ಸುಲಭವಾಗಿ ಪರಿಹಾರ ಪಡೆಯಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಪ್ರತಿದಿನದ ಆಹಾರ ಮತ್ತು ಜೀವನಶೈಲಿಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.
ಗಂಟಲು ನೋವು ನಿವಾರಿಸುವ 6 ಸುಲಭ ಮನೆಮದ್ದುಗಳು
ಶುಂಠಿ ಚಹಾ
ಕೆಮ್ಮು ಮತ್ತು ಗಂಟಲು ನೋವಿನ ಸಮಸ್ಯೆಗೆ ಅತಿ ಹೆಚ್ಚು ಬಳಸುವ ಮನೆಮದ್ದು ಶುಂಠಿ ಚಹಾ. ಮನೆಯಲ್ಲೇ ಅತ್ಯಂತ ಸುಲಭವಾಗಿ ಇದನ್ನು ತಯಾರಿಸಬಹುದು. ಶುಂಠಿ ಚಹಾ ತಯಾರಿಸಲು, ಒಂದು ಕಪ್ ನೀರಿಗೆ ಕೆಲವು ತುಂಡು ತಾಜಾ ಶುಂಠಿಯನ್ನು ಸೇರಿಸಿ 5ರಿಂದ 10 ನಿಮಿಷ ಕುದಿಯಲು ಬಿಡಿ. ನಂತರ ಸ್ವಲ್ಪ ಬಿಸಿ ಇರುವಾಗಲೇ ಸೋಸಿ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಗಂಟಲು ಕಿರಿಕಿರಿಯನ್ನು ಶಮನಗೊಳಿಸಬಹುದು.
ತುಳಸಿ ಚಹಾ
ಸಾಂಪ್ರದಾಯಿಕವಾಗಿ ಭಾರತೀಯ ಮನೆಗಳಲ್ಲಿ ತುಳಸಿಯನ್ನು ಬಳಸುವುದು ಸಾಮಾನ್ಯ. ತುಳಸಿಯು ಆರೋಗ್ಯ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದಿದೆ. 5 ರಿಂದ 6 ತುಳಸಿ ಎಲೆಗಳನ್ನು ಒಂದು ಕಪ್ ನೀರಿನಲ್ಲಿ ಕೆಲವು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ, ಸೋಸಿದ ಮೇಲೆ ಬೆಚ್ಚಗೆ ಇರುವಾಗಲೇ ಕುಡಿಯುವುದರಿಂದ ಗಂಟಲು ಸಂಬಂಧಿ ಸಮಸ್ಯೆಗಳನ್ನು ಸುಧಾರಿಸಬಹುದು.
ಚಳಿಗಾಲದಲ್ಲಿ ತ್ವಚೆ ಆರೈಕೆ ಹೇಗಿರಬೇಕು? ಒಣ ಚರ್ಮದ ಸಮಸ್ಯೆಗೆ ಪರಿಹಾರವೇನು?
ಅರಿಶಿನ ಹಾಲು
ಅರಿಶಿನವು ಉರಿಯೂತ ನಿವಾರಕ ಗುಣಗಳನ್ನು ಹೊಂದಿರುವ ಕರ್ಕ್ಯುಮಿನ್ ಎಂಬ ಅಂಶವನ್ನು ಹೊಂದಿದ್ದು, ಒಂದು ಕಪ್ ಬೆಚ್ಚಗಿನ ಹಾಲಿಗೆ ಅರ್ಧ ಚಮಚ ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮಲಗುವ ಮುನ್ನ ಕುಡಿಯುವುದರಿಂದ ಗಂಟಲಿನ ಕಿರಿಕಿರಿ ಶಮನಗೊಳ್ಳುತ್ತದೆ.
ಜೇನುತುಪ್ಪ ಮತ್ತು ನಿಂಬೆರಸ
ಜೇನುತುಪ್ಪ ಗಂಟಲು ಕಿರಿಕಿರಿ ಮತ್ತು ಕೆಮ್ಮಿಗೆ ಜನಪ್ರಿಯ ಮನೆಮದ್ದು. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಅಥವಾ ಹಾಲಿನಲ್ಲಿ ಒಂದರಿಂದ ಎರಡು ಚಮಚ ಜೇನುತುಪ್ಪದೊಂದಿಗೆ ಕೆಲವು ಹನಿ ನಿಂಬೆರಸ ಸೇರಿಸಿ ಕುಡಿಯುವುದರಿಂದ ಗಂಟಲು ನೋವನ್ನು ನಿವಾರಿಸಬಹುದು. ಒಂದು ವರ್ಷದೊಳಗಿನ ಮಕ್ಕಳಿಗೆ ಜೇನುತುಪ್ಪ ಬೆರೆಸಬೇಡಿ.
ಕ್ಯಾಮೊಮೈಲ್ ಚಹಾ
ಕ್ಯಾಮೊಮೈಲ್ ಚಹಾ ಕೆಫೀನ್ ಮುಕ್ತ ಗಿಡಮೂಲಿಕೆ ಆಗಿದ್ದು, ಇದು ನಮ್ಮ ಗಂಟಲು ಒಣಗಿದಾಗ ಅಥವಾ ಕಿರಿಕಿರಿ ಅನುಭವವಾದಾಗ ಇದನ್ನು ಕುಡಿಯುವುದರಿಂದ ಗಂಟಲಿಗೆ ಹಿತವೆನಿಸುತ್ತದೆ. ಕ್ಯಾಮೊಮೈಲ್ ಅನ್ನು ಒಂದು ಕಪ್ ಬಿಸಿ ನೀರಿನಲ್ಲಿ 5 ನಿಮಿಷಗಳ ಕಾಲ ನೆನಸಿಟ್ಟು ನಂತರ ಕುಡಿಯುವುದರಿಂದ ಗಂಟಲಿಗೆ ಆರಾಮದಾಯಕ ಅನುಭವವಾಗುತ್ತದೆ.
ಚಳಿಗಾಲದಲ್ಲಿ ಚರ್ಮ ಒಣಗುತ್ತಿದೆಯೇ? ನಿಮ್ಮ ಆಹಾರ ಮತ್ತು ಸ್ಕಿನ್ ಕೇರ್ ಅದಕ್ಕೆ ಕಾರಣವಾಗಿರಬಹುದು
ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು
ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಅರ್ಧ ಚಮಚ ಉಪ್ಪು ಬೆರೆಸಿ ದಿನಕ್ಕೆ ಎರಡು-ಮೂರು ಬಾರಿ ಬಾಯಿ ಮುಕ್ಕಳಿಸಿ. ಇದು ಗಂಟಲಿನ ನೋವನ್ನು ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಿ, ಬ್ಯಾಕ್ಟೀರಿಯಾ ಹಾಗೂ ಧೂಳಿನ ಕಣಗಳನ್ನು ಸ್ವಚ್ಛಗೊಳಿಸುತ್ತದೆ.