ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಕ್ಕಳಲ್ಲಿ ಹೆಚ್ಚುತ್ತಿರುವ ಆತಂಕಕಾರಿ ಅಭ್ಯಾಸಗಳು ಇವು

Health Tips: ಎಳೆಯ ವಯಸ್ಸಿನಲ್ಲಿ ಬೆಳೆಸಿಕೊಳ್ಳುವ ಅಭ್ಯಾಸಗಳು ಬದುಕಿನ ಕಡೆಯವರೆಗೂ ಪರಿಣಾಮ ಬೀರುತ್ತವೆ ಎನ್ನುವುದು ತಿಳಿಯದ ವಿಷಯವೇನಲ್ಲ. ಅದರಲ್ಲೂ ಆಹಾರದ ಅಭ್ಯಾಸಗಳಲ್ಲಿ ಬಾಲ್ಯಾವಸ್ಥೆಯಲ್ಲೇ ಶಿಸ್ತು ಇರಬೇಕಾದ್ದು ಅಗತ್ಯ. ಅದಿಲ್ಲದಿದ್ದರೆ ಬದುಕಿನ ಮುಂದಿನ ಹಂತಗಳಲ್ಲಿ ನಾನಾ ರೀತಿಯ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಈಗ ಕಳೆದುಹೋಗುತ್ತಿರುವ 2025ನೇ ವರ್ಷದಲ್ಲಿ ಮಕ್ಕಳಲ್ಲಿ ಕಂಡುಬಂದ ಅನಾರೋಗ್ಯಕರ ಪ್ರವೃತ್ತಿಗಳೇನು?

ಮಕ್ಕಳಲ್ಲಿನ ಈ ಆತಂಕಕಾರಿ ಅಭ್ಯಾಸಗಳ ಬಗ್ಗೆ ಜಾಗೃತರಾಗಿರಿ

ಸಾಂದರ್ಭಿಕ ಚಿತ್ರ. -

Profile
Pushpa Kumari Dec 22, 2025 7:00 AM

ನವದೆಹಲಿ, ಡಿ. 22: ಆಡುವ ಮಕ್ಕಳ ಜೀವ ಅಂಗಳದಲ್ಲಿ ಎಂಬ ಮಾತಿದೆ. ಸದಾ ಕಾಲ ಆಟದತ್ತಲೇ ಗಮನವಿರುವ ಮಕ್ಕಳಿಗೆ ಬೇರಾವುದರ ಬಗ್ಗೆಯೂ ಆಸಕ್ತಿ ಇರುವುದಿಲ್ಲ ಎಂಬರ್ಥದ ಮಾತಿದು. ಆದರೆ ಅಂಗಳಕ್ಕಿಳಿದು ಆಡುವ ಮನಸ್ಥಿತಿಯೇ ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ಇತ್ತೀಚಿನ ವರ್ಷಗಳ ವಾಸ್ತವ. ಹೀಗೆ ದೈಹಿಕವಾಗಿ ಸಕ್ರಿಯರಾಗಿಲ್ಲದ, ಸದಾ ಒಂದಿಲ್ಲೊಂದು ಮೆಲ್ಲುತ್ತಿರುವ ಅಥವಾ ಫೋನ್‌ ಪರದೆಗೇ ಅಂಟಿಕೊಂಡಿರುವ ಮಕ್ಕಳಿಗೆ ಆಗುತ್ತಿರುವ ತೊಂದರೆಗಳಿಗೆ ಹಲವು ಮುಖಗಳು ತೋರುತ್ತಿವೆ. ಈಗ ಕಳೆದುಹೋಗುತ್ತಿರುವ 2025ನೇ ವರ್ಷದಲ್ಲಿ ಮಕ್ಕಳಲ್ಲಿ (Children Health) ಕಂಡುಬಂದ ಅನಾರೋಗ್ಯಕರ ಪ್ರವೃತ್ತಿಗಳೇನು?

ಎಳೆಯ ವಯಸ್ಸಿನಲ್ಲಿ ಬೆಳೆಸಿಕೊಳ್ಳುವ ಅಭ್ಯಾಸಗಳು ಬದುಕಿನ ಕಡೆಯವರೆಗೂ ಪರಿಣಾಮ ಬೀರು ತ್ತದೆ ಎನ್ನುವುದು ತಿಳಿಯದ ವಿಷಯವೇನಲ್ಲ. ಅದರಲ್ಲೂ ಆಹಾರದ ಅಭ್ಯಾಸದಲ್ಲಿ ಬಾಲ್ಯಾವಸ್ಥೆಯಿಂದಲೇ ಶಿಸ್ತು ಇರಬೇಕಾದ್ದು ಅಗತ್ಯ. ಅದಿಲ್ಲದಿದ್ದರೆ, ಬದುಕಿನ ಮುಂದಿನ ಹಂತಗಳಲ್ಲಿ ನಾನಾ ರೀತಿಯ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಮಕ್ಕಳಿದ್ದಾಗ ಬೆಳಗಿನ ತಿಂಡಿ ತಿನ್ನದ, ಕರಿದ ಅಥವಾ ಸಿಹಿ ತಿಂಡಿಗಳನ್ನು ಹೆಚ್ಚಾಗಿ ತಿನ್ನುವ ಮಕ್ಕಳು ಪ್ರೌಢಾವಸ್ಥೆಯಲ್ಲಿ ಜೀವನಶೈಲಿಯ ರೋಗಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತವೆ ಅಧ್ಯಯನಗಳು. ಈ ಎಲ್ಲ ಕಾರಣಗಳಿಂದ ಮಕ್ಕಳ ಅಭ್ಯಾಸಗಳು ಕೆಲವೊಮ್ಮೆ ಪಾಲಕರ ಚಿಂತೆಗೆ ಕಾರಣವಾಗುತ್ತವೆ.

ಜಡ ಜೀವನ

ಮಕ್ಕಳಲ್ಲೂ ಬೊಜ್ಜಿನ ಸಮಸ್ಯೆ ಹೆಚ್ಚುತ್ತಿದೆ. ಕಾರಣ, ಶಾಲೆಯಲ್ಲಿ ಕೂತು ಕಳೆಯುವುದು ಅನಿವಾರ್ಯ. ಅಲ್ಲಿಯೂ ಆಟದ ಬಿಡುವಿನಲ್ಲಿ ಆಡದಿರುವ ಮಕ್ಕಳು ಎಷ್ಟೋ ಮಂದಿ. ಇನ್ನು ಮನೆಗೆ ಮರಳಿದ ಮೇಲೂ ಆಟಕ್ಕೆ ಹೋಗದ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಟಿವಿ, ಮೊಬೈಲ್‌, ಟ್ಯಾಬ್ಲೆಟ್‌ ಅಥವಾ ಲ್ಯಾಪ್‌ಟಾಪ್‌ ಮುಂದೆ ಹೊತ್ತು ಕಳೆಯುವ ಮಕ್ಕಳ ಸಂಖ್ಯೆ ಮಿತಿಮೀರುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಮಕ್ಕಳಲ್ಲಿನ ಅತಿತೂಕ, ಬೊಜ್ಜಿನ ಸಮಸ್ಯೆಗಳು ಪಾಲಕರ ಆತಂಕಕಕ್ಕೆ ಕಾರಣವಾಗಿವೆ.

ಅನಾರೋಗ್ಯಕರ ಆಹಾರಾಭ್ಯಾಸಗಳು

ಚಿತ್ರಮಂದಿರಲ್ಲಿ ಕೂತು ಶೇಂಗಾ, ಪಾಪ್‌ಕಾರ್ನ್‌ ಮೆಲ್ಲುವುದು ಹಳೆಯ ಅಭ್ಯಾಸ. ಇತ್ತೀಚಿನ ದಿನಗಳಲ್ಲಿ ಆ ಜಾಗವನ್ನು ಫ್ರೆಂಚ್‌ ಫ್ರೈಸ್‌, ಸಮೋಸಾ ಮುಂತಾದವು ಆಕ್ರಮಿಸಿವೆ. ಇದೀಗ ಮನೆಗೊಳಗಿನ ಸ್ಕ್ರೀನ್‌ ಸಮಯಕ್ಕೂ ಅನ್ವಯವಾಗುತ್ತಿದೆ. ಒಮ್ಮೆ ಪರದೆಯ ಎದುರು ಕೂತ ಮಕ್ಕಳು ಏನನ್ನು ಮತ್ತು ಎಷ್ಟು ತಿನ್ನುತ್ತಾರೆ ಎಂಬ ಪರಿವೆಯೇ ಇರುವುದಿಲ್ಲ. ಈ ಎಲ್ಲ ಕಾರಣಗಳಿಗಾಗಿ ಎಳವೆಯಲ್ಲಿ ಟೈಪ್‌-2 ಮಧುಮೇಹ ಗಂಟು ಬೀಳುತ್ತಿದೆ. ಮಾತ್ರವಲ್ಲ, ಎಳೆಯ ವಯಸ್ಸಿನಲ್ಲೇ ಮಕ್ಕಳು ದೈಹಿಕವಾಗಿ ಪ್ರೌಢರಾಗುತ್ತಿದ್ದಾರೆ.

ನಿದ್ರಾಹೀನತೆ

ಮಕ್ಕಳ ನಿದ್ದೆಯೆಂದರೆ ಸಾಮಾನ್ಯವಾಗಿ ಗಾಢವಾದದ್ದು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಪರೀತ ತೊಡಗಿಸಿಕೊಂಡಿರುವ ಮಕ್ಕಳು ತಮ್ಮ ನಿದ್ದೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಬೆಳೆಯುವ ವಯಸ್ಸಿನಲ್ಲಿ ದೇಹಕ್ಕೆ ಸಾಕಷ್ಟು ವಿಶ್ರಾಂತಿ ದೊರೆಯದೆ ಹೋಗುವುದರ ಅಡ್ಡ ಪರಿಣಾಮಗಳು ಸಿಕ್ಕಾಪಟ್ಟೆ ಇವೆ. ಚಟುವಟಿಕೆ ಇಲ್ಲದೆ, ತಿನ್ನುವ ವಿಷಯದಲ್ಲಿ ನಿಗಾ ಇಲ್ಲದೆ, ನಿದ್ದೆಯೂ ಸಾಲದೆ ಹೋದಾಗ ಮಕ್ಕಳ ಆರೋಗ್ಯದ ಮೇಲಿನ ಪರಿಣಾಮಗಳು ಅತ್ಯಂತ ಗಂಭೀರವಾಗುತ್ತಿವೆ.

ಚಳಿಗಾಲದಲ್ಲಿ ಕೂದಲಿನ ಆರೈಕೆ ಹೇಗೆ?

ಒತ್ತಡ

ಲೋಕದ ಪರಿವೆಯನ್ನೇ ಮಾಡದೆ, ಚಿಟ್ಟೆಯಂತೆ ಹಾರಾಡಿಕೊಂಡಿರಬೇಕಾದ ಮಕ್ಕಳು ಒತ್ತಡಕ್ಕೆ ಈಡಾಗುತ್ತಿದ್ದಾರೆ. ಇದಕ್ಕಿಂತ ಆತಂಕಕಾರಿಯೆಂದರೆ ಖಿನ್ನತೆಗೆ ಜಾರುತ್ತಿದ್ದಾರೆ. ಇವೆಲ್ಲ ಹೆಚ್ಚಿರುವ ಗೆಜೆಟ್‌ ವ್ಯಸನದ ದುಷ್ಪರಿಣಾಮಗಳು. ಈ ಒತ್ತಡ ನಿವಾರಣೆಗೆ ಬಹಳ ಮಕ್ಕಳು ತಮ್ಮಿ ಷ್ಟದ ತಿನಿಸುಗಳಲ್ಲಿ ಸಮಾಧಾನ ಹುಡುಕಲು ಯತ್ನಿಸುತ್ತಾರೆ. ಗೆಜೆಟ್‌ ಇರಲಿ, ಗುಜರಿ ತಿನಿಸು ಗಳಿರಲಿ- ಎರಡೂ ಮಕ್ಕಳ ಆರೋಗ್ಯಕ್ಕೆ ಅನಾರೋಗ್ಯಕರ. ಒಂದರ ಬದಲಿಗೆ ಇನ್ನೊಂದು ಎನ್ನುವ ಅಭ್ಯಾಸಗಳಿಂದ ಮಕ್ಕಳ ಸುತ್ತಲಿನ ವಿಷವೃತ್ತ ಮುಂದುವರಿಯುತ್ತದೆ.

ಕೌಟುಂಬಿಕ ಸಮಯ ನಷ್ಟ

ಸಾಮಾನ್ಯವಾಗಿ ಊಟ-ತಿಂಡಿಗಳ ಸಮಯವನ್ನು ಒಟ್ಟಾಗಿ ಕಳೆಯುವ ಪದ್ಧತಿ ಬಹಳಷ್ಟು ಕುಟುಂಬಗಳಲ್ಲಿತ್ತು. ಆದರೀಗ ಎಲ್ಲವೂ ಏರುಪೇರಾಗುತ್ತಿದೆ. ಮಕ್ಕಳ ಊಟ-ತಿಂಡಿಗೆ ಸಮಯವೆಂಬುದೇ ಇರುವುದಿಲ್ಲ. ಯಾವಾಗಲೋ ಅನಿಯಮಿತವಾಗಿ ಒಂದಿಷ್ಟು ತಿಂದರೆ ಮುಗಿಯಿತು. ಇದರಿಂದ ಕುಟುಂಬದ ಸದಸ್ಯರ ನಡುವಿನ ಬಾಂಧವ್ಯವೂ ಕಡಿಮೆ ಯಾಗುತ್ತಿದೆ. ಎಲ್ಲರ ನಡುವೆ ಇದ್ದೂ ಒಂಟಿಯಾಗುತ್ತಿದ್ದಾರೆ. ಸಂಕಷ್ಟಗಳನ್ನು ಹೇಳಿಕೊಳ್ಳುವಂಥ ವಿಶ್ವಾಸದ ಜೀವವನ್ನು ಮಕ್ಕಳು ಹುಡುಕುವಂತಾಗಿರುವುದು ನಿಜಕ್ಕೂ ಆತಂಕಕಾರಿ ಸಂಗತಿ.