ಎನರ್ಜಿ ಡ್ರಿಂಕ್‌ಗಳ ಸೇವಿಸುತ್ತಿದ್ದೀರಾ? ಈ ಬಗ್ಗೆ ಎಚ್ಚರವಿರಲಿ!
Health Tips: ಎಲ್ಲದಕ್ಕೂ ನಮ್ಮ ಯುವಜನತೆ ಆಶ್ರಯಿಸುವುದು ಎನರ್ಜಿ ಡ್ರಿಂಕ್‌ಗಳನ್ನೇ. ಜಿಮ್‌ನಲ್ಲಿ ಸುಸ್ತಾಯಿತೇ? ರಾತ್ರಿಡೀ ಎಚ್ಚರಿದ್ದು ಓದಬೇಕೇ? ಆಫೀಸ್ ಕೆಲಸ ಮುಗಿಸಲು ರಾತ್ರಿ-ಬೆಳಗು ಕೂತಿರಬೇಕೇ? ಇಂಥ ಯಾವುದೇ ಕಾರಣಗಳಿದ್ದರೂ ಒಂದು ಎನರ್ಜಿ ಡ್ರಿಂಕ್ ಹೊಟ್ಟೆಗಿಳಿಸಿದರೆ ಮೆದುಳು ಜಾಗೃತವಾಗಿರುತ್ತದೆ, ದೇಹದ ಶಕ್ತಿಯೂ ಹೆಚ್ಚುತ್ತದೆ ಎನ್ನುವುದು ಬಹಳಷ್ಟು ಮಂದಿ ಕಂಡುಕೊಂಡ ಸತ್ಯ. ಆದರೆ ಅವರಿಗಿನ್ನೂ ಅರ್ಥವಾಗದ ಸತ್ಯವೇನು ಗೊತ್ತೇ? ಇಂಥ ಶಕ್ತಿವರ್ಧಕ ಪೇಯಗಳು ಮೂತ್ರಪಿಂಡಗಳ ಮೇಲೆ ಬೀರುವ ಪರಿಣಾಮ ಏನು ಎಂಬುದು, ಇವುಗಳ ಸೇವನೆಗೆ ಮಿತಿ ಎಂಬುದಿದ್ದರೆ ಅದು ಎಷ್ಟು? ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಇದು ಎನರ್ಜಿ ಡ್ರಿಂಕ್‌ಗಳ (Energy Drinks) ಕಾಲ. ಎಲ್ಲದಕ್ಕೂ ನಮ್ಮ ಯುವಜನತೆ ಆಶ್ರಯಿಸುವುದು ಎನರ್ಜಿ ಡ್ರಿಂಕ್‌ಗಳನ್ನೇ. ಜಿಮ್‌ನಲ್ಲಿ ಸುಸ್ತಾಯಿತೇ? ರಾತ್ರಿಡೀ ಎಚ್ಚರ ಇದ್ದು ಓದಬೇಕೇ? ಆಫೀಸ್ ಕೆಲಸ ಮುಗಿಸಲು ರಾತ್ರಿ-ಬೆಳಗು ಕೂತಿರಬೇಕೇ? ಇಂಥ ಯಾವುದೇ ಕಾರಣಗಳಿದ್ದರೂ ಒಂದು ಎನರ್ಜಿ ಡ್ರಿಂಕ್ ಹೊಟ್ಟೆಗಿಳಿಸಿದರೆ ಮೆದುಳು ಜಾಗೃತವಾಗಿರುತ್ತದೆ, ದೇಹದ ಶಕ್ತಿಯೂ ಹೆಚ್ಚುತ್ತದೆ ಎನ್ನುವುದು ಬಹಳಷ್ಟು ಮಂದಿ ಕಂಡುಕೊಂಡ ಸತ್ಯ. ಆದರೆ ಅವರಿಗಿನ್ನೂ ಅರ್ಥವಾಗದ ಸತ್ಯವೇನು ಗೊತ್ತೇ? ಇಂಥ ಶಕ್ತಿವರ್ಧಕ ಪೇಯಗಳು ಮೂತ್ರಪಿಂಡಗಳ ಮೇಲೆ ಬೀರುವ ಪರಿಣಾಮ ಏನು ಎಂಬುದು. ಇವುಗಳ ಸೇವನೆಗೆ ಮಿತಿ ಎಂಬುದಿದ್ದರೆ ಅದು ಎಷ್ಟು ಎಂಬುದು.
ಇರುವುದೇನು?: ಸಾಮಾನ್ಯವಾಗಿ ಈ ಪೇಯಗಳಲ್ಲಿರುವುದು ಕೆಫೇನ್, ಸಕ್ಕರೆ, ಟಾರೀನ್, ಜಿನ್‌ಸೆಂಗ್ ಮತ್ತು ವಿಟಮಿನ್ ಬಿ. ಈ ಎಲ್ಲವುಗಳ ಮಿಶ್ರಣವು ಅತ್ಯಂಗ ವೇಗವಾಗಿ ನಮ್ಮ ದೇಹ ಮತ್ತು ಮನಸ್ಸುಗಳನ್ನು ಚುರುಕಾಗಿಸುತ್ತದೆ ಮತ್ತು ಅವುಗಳಿಗೆ ಶಕ್ತಿ ತುಂಬುತ್ತದೆ. ಹಾಗಾಗಿಯೇ ಯುವಜನತೆಯ ಮೆಚ್ಚುಗೆಯನ್ನೂ ಅತಿ ವೇಗವಾಗಿಯೇ ಈ ಪೇಯಗಳು ಗಳಿಸಿವೆ.
ಈ ಎಲ್ಲವುಗಳನ್ನು ಒಂದು ನಿರ್ದಿಷ್ಟ ಮಿತಿಯಲ್ಲಿ ಸೇವಿಸಿದರೆ ಅಂಥ ವಿಪರೀತ ಪರಿಣಾಮಗಳನ್ನು ಮಾಡುವುದು ಕಡಿಮೆ. ಆದರೆ ಬೇಕು ಅನಿಸಿದಾಗೆಲ್ಲ ಇವುಗಳನ್ನು ಗಂಟಲಿಗೆ ಸುರಿದುಕೊಂಡರೆ ಆಗುವ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ನಮಗೆ ಅರಿವಿರಲೇಬೇಕು. ತಕ್ಷಣಕ್ಕೆ ಅನಿಸುವುದು ಶಕ್ತಿ ಹೆಚ್ಚಿದೆ ಎಂದು. ಆದರೆ ಅತಿ ತ್ವರಿತವಾಗಿ ದೇಹದ ಶಕ್ತಿ ಕುಸಿಯುತ್ತದೆ. ನಿರ್ಜಲೀಕರಣ ಕಾಡುತ್ತದೆ. ಮತ್ತೆ ಇದನ್ನೇ ಕುಡಿಯಬೇಕೆನಿಸುತ್ತದೆ. ಚಕ್ರ ಮುಂದುವರಿಯುತ್ತದೆ.
ಪರಿಣಾಮವೇನು?: ದೇಹದ ರಕ್ತದೊತ್ತಡ ಹೆಚ್ಚುತ್ತದೆ. ನಮ್ಮ ಮೂತ್ರಪಿಂಡಗಳ ಮೇಲೆ ಅತಿಯಾಗಿ ಒತ್ತಡ ಬಿದ್ದು, ಅವು ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ. ಇದೇ ಚಕ್ರ ದೀರ್ಘಕಾಲದಲ್ಲಿ ಮುಂದುವರಿದರೆ ಆಗುವ ಪರಿಣಾಮಗಳನ್ನು ಯಾರೂ ಊಹಿಸಬಹುದು. ಈ ಶಕ್ತಿವರ್ಧಕ ಪೇಯಗಳ ಶೇ. 50ಕ್ಕಿಂತ ಹೆಚ್ಚಿನ ಗ್ರಾಹಕರ ವಯೋಮಾನವು 18-35 ವರ್ಷಗಳು. ಈ ಕಿರಿಯ ವಯಸ್ಸಿನಲ್ಲಿ ಹೆಚ್ಚಿನ ಪ್ರಮಾಣದ ಎನರ್ಜಿ ಡ್ರಿಂಕ್‌ಗಳನ್ನು ದೇಹಕ್ಕೆ ನೀಡುತ್ತಿದ್ದರೆ, ಜೀವನಶೈಲಿಯ ರೋಗಗಳು ಕಿರಿಯ ವಯಸ್ಸಿನಲ್ಲೇ ಬರುವುದಕ್ಕೆ ತಡವಾಗುವುದಿಲ್ಲ.
ಮಳೆಗಾಲದಲ್ಲಿ ಕೂದಲು ಉದುರುತ್ತಿದೆಯೇ? ಶ್ಯಾಂಪೂ ಮಾತ್ರವಲ್ಲ, ಆಹಾರವೂ ಮುಖ್ಯ
ಯಾರಿಗೆ ಹಾನಿ?: ನಿಜವಾಗಿ ಹೇಳುವುದಾದರೆ ಎಲ್ಲರಿಗೂ. ಅದರಲ್ಲಿಯೂ ಹೆಚ್ಚು ಸಮಸ್ಯೆ ಆಗುವುದು ಹೃದ್ರೋಗಿಗಳಿಗೆ, ರಕ್ತದೊತ್ತಡ ಮತ್ತು ಮಧುಮೇಹದ ತೊಂದರೆ ಇರುವವರಿಗೆ, ಕಿಡ್ನಿ ಕಲ್ಲು ಅಥವಾ ಯಾವುದೇ ಬಗೆಯ ಕಿಡ್ನಿ ಸಮಸ್ಯೆ ಇರುವವರಿಗೆಲ್ಲ ಶಕ್ತಿವರ್ಧಕ ಪೇಯಗಳು ರೋಗವರ್ಧಕಗಳಾಗುವುದು ದಿಟ. ಇದಲ್ಲದೆ, ಕ್ಯಾನ್ಸರ್‌ನಂಥ ಮಾರಕ ರೋಗಗಳ ಚಿಕಿತ್ಸೆಯಲ್ಲಿ ಇರುವವರಿಗೂ ಇದು ಹಿನ್ನಡೆಯನ್ನೇ ನೀಡುತ್ತದೆ. ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳಿಗೆ ಇವುಗಳನ್ನು ನೀಡದಿರುವುದೇ ಒಳ್ಳೆಯದು.
ಮಿತಿ ಎಷ್ಟು?: ಒಂದೊಮ್ಮೆ ಇವುಗಳನ್ನು ಕುಡಿಯುವುದು ಅನಿವಾರ್ಯವೇ ಆದಂಥ ಸಂದರ್ಭದಲ್ಲಿ ಅದರ ಮಿತಿ ಎಷ್ಟು? ಕಾಫಿ-ಚಹಾ, ಡಾರ್ಕ್ ಚಾಕಲೇಟ್ ಮುಂತಾದ ಎಲ್ಲ ರೀತಿಯ ಕೆಫೇನ್‌ಗಳನ್ನು ಸೇರಿಸಿಯೂ ದಿನವೊಂದಕ್ಕೆ 300 ಎಂ.ಜಿ. ಮೀರುವಂತಿಲ್ಲ. ಇದರಲ್ಲಿ ಎನರ್ಜಿ ಡ್ರಿಂಕ್ ಸಹ ಸೇರಿದೆ. ಇದಕ್ಕಿಂತ ಹೆಚ್ಚಾಯಿತೋ, ಕಷ್ಟ ತಪ್ಪಿದ್ದಲ್ಲ.
ತಿಳಿಯುವುದು ಹೇಗೆ?: ಈ ಕೆಲವು ದೈಹಿಕ ಲಕ್ಷಣಗಳು ಕಂಡುಬಂದರೆ, ದೇಹಕ್ಕೆ ಕೆಫೇನ್ ಹೆಚ್ಚಾಯಿತು ಎಂದು ತಿಳಿಯಬಹುದು. ಆಗಾಗ ಕಾಡುವ ತಲೆನೋವು, ಎದೆ ಹೊಡೆದುಕೊಳ್ಳುವ ಅನುಭವ, ಬಾಯಾರಿಕೆ, ಗಾಢ ಬಣ್ಣದ ಮೂತ್ರ, ಸ್ನಾಯು ಸೆಳೆತ, ಹೊಟ್ಟೆ ತೊಳೆಸುವುದು, ಅತೀವ ಆಯಾಸ ಮುಂತಾದ ಯಾವುದೇ ಕಂಡರೂ, ಶಕ್ತಿವರ್ಧಕಗಳನ್ನು ಎಷ್ಟು ಸೇವಿಸುತ್ತಿದ್ದೀರಿ ಎಂಬುದನ್ನು ಪರಿಶೀಲಿಸಿಕೊಳ್ಳಿ.