Health Tips: ಚಹಾ ಕುಡಿಯದಿದ್ದರೆ ತಲೆನೋವು ಬರುವುದು ಹೌದೇ?
ಬೆಳಗಿನ ಚಹಾ ದೊರೆಯಲಿಲ್ಲ ಎನ್ನುವುದಕ್ಕಾಗಿ ಗೋಳಾಡುವವರನ್ನು ನಾವೆಲ್ಲ ಕಂಡಿರುತ್ತೇವೆ; ಅಥವಾ ನಾವೇ ಆ ಜನರ ಸಾಲಿಗೆ ಸೇರಿರುತ್ತೇವೆ. ಚಹಾದ ಚಟಕ್ಕಾಗಿ ಕುಡಿಯುತ್ತಾರೆ ಎಂದು ಅವರನ್ನು ದೂಷಿಸುವಂತೆಯೂ ಇಲ್ಲ. ಕಾರಣ, ಚಹಾ ಪ್ರಿಯರು ದಿನಕ್ಕಿಷ್ಟು ಎಂದು ನಿಗದಿ ಪಡಿಸಿಕೊಂಡಿರುವಷ್ಟು ಚಹಾ ಹೀರದಿದ್ದರೆ, ಅವತ್ತಿನ ದಿನವೇ ಹಾಳು ಎಂಬಷ್ಟು ಪರದಾಡುತ್ತಾರೆ. ಚಹಾ ಇಲ್ಲದಿದ್ದಕ್ಕೇ ತಲೆನೋವು ಎಂದು ಗೊಣಗುತ್ತಾ, ಹತ್ತಿರದಲ್ಲಿ ಎಲ್ಲಿ ಚಹಾ ದೊರೆಯುತ್ತದೆ ಎಂದು ಪರಾಂಬರಿಸುತ್ತಾರೆ. ಆದರೆ ತಲೆನೋವಿಗೂ ಚಹಾಗೂ ಇರುವ ನಂಟೇನು?


ನವದೆಹಲಿ: ʻಸುಖದ ದುಃಖʼ ಎಂಬ ನುಡಿಗಟ್ಟೊಂದಿದೆ. ಅಂದರೆ, ಎಲ್ಲಾ ಸುಖಗಳಿದ್ದರೂ ಏನಾದರೊಂದು ಸಣ್ಣ ಕಾರಣಕ್ಕೆ ಸಂಕಟ ಪಡುತ್ತಾರೆ(Health Tips). ಉದಾಹರಣೆಗೆ, ಎಷ್ಟೇ ಸವಲತ್ತುಗಳಿದ್ದರೂ ಬೆಳಗಿನ ಚಹಾ ದೊರೆಯಲಿಲ್ಲ ಎನ್ನುವುದಕ್ಕಾಗಿ ಗೋಳಾಡುವವರನ್ನು ನಾವೆಲ್ಲ ಕಂಡಿರುತ್ತೇವೆ ಅಥವಾ ನಾವೇ ಆ ಜನರ ಸಾಲಿಗೆ ಸೇರಿರುತ್ತೇವೆ. ಚಹಾದ ಚಟಕ್ಕಾಗಿ ಕುಡಿಯುತ್ತಾರೆ ಎಂದು ಅವರನ್ನು ದೂಷಿಸುವಂತೆಯೂ ಇಲ್ಲ. ಕಾರಣ, ಚಹಾ ಪ್ರಿಯರು ದಿನಕ್ಕಿಷ್ಟು ಎಂದು ನಿಗದಿ ಪಡಿಸಿಕೊಂಡಿರುವಷ್ಟು ಚಹಾ ಹೀರದಿದ್ದರೆ, ಅವತ್ತಿನ ದಿನವೇ ಹಾಳು ಎಂಬಷ್ಟು ಪರದಾಡುತ್ತಾರೆ. ಚಹಾ ಇಲ್ಲದಿದ್ದಕ್ಕೇ ತಲೆನೋವು ಎಂದು ಗೊಣಗುತ್ತಾ, ಹತ್ತಿರದಲ್ಲಿ ಎಲ್ಲಿ ಚಹಾ ದೊರೆಯುತ್ತದೆ ಎಂದು ಪರಾಂಬರಿಸುತ್ತಾರೆ. ಆದರೆ ತಲೆನೋವಿಗೂ ಚಹಾಗೂ ಇರುವ ನಂಟೇನು? ಚಹಾ ಕುಡಿಯದಿರುವುದಕ್ಕೇ ತಲೆ ನೋಯುತ್ತಿದೆ ಎಂಬ ಅಪವಾದ ಎಷ್ಟು ಸರಿ?
ಕೆಫೇನ್ ಕೆಲಸ: ತಜ್ಞರ ಪ್ರಕಾರ, ಕುಡಿಯದಿದ್ದರೆ ತಲೆನೋವು ಬರಿಸುವ, ಕುಡಿದ ತಕ್ಷಣ ಹೋಗ ಲಾಡಿಸುವ ಯಾವುದೇ ಮಾಯೆಯೂ ಚಹಾ ದಲ್ಲಿಲ್ಲ. ನೇರವಾಗಿ ಇವೆರಡಕ್ಕೂ ಯಾವುದೇ ನಂಟಿಲ್ಲ. ಆದರೆ ಚಹಾದಲ್ಲಿರುವ ಕೆಫೇನ್‌ನಿಂದಾಗಿ ಈ ಲಕ್ಷಣಗಳು ಕಾಣಬಹುದು. ಹಾಗೆಂದು ಚಹಾ ಕುಡಿಯುವುದನ್ನು ತಪ್ಪಿಸಿದ ಎಲ್ಲರಿಗೂ ತಲೆನೋವು ಬರುತ್ತದೆ ಎನ್ನುವಂತಿಲ್ಲ. ಹಾಗಾಗಿ ಯಾರ ಶರೀರ ಅದೊಂದು ಸಣ್ಣ ಡೋಸ್ ಕೆಫೇನ್‌ಗೆ ಹೊಂದಿಕೊಂಡಿರುತ್ತದೋ, ಅವರಿಗೆ ತಲೆನೋವು ಕಾಣುವುದು ಸಹಜ. ಅಂದಹಾಗೆ, ಒಂದು ದೊಡ್ಡ ಕಪ್ (೧೫೦ ಎಂ.ಎಲ್) ಫಿಲ್ಟರ್ ಕಾಫಿಯಲ್ಲಿ ಸುಮಾರು ೮೦-೧೨೦ ಎಂ.ಜಿ. ಕೆಫೇನ್ ದೊರಕೀತು ದೇಹಕ್ಕೆ. ಅಷ್ಟೇ ಪ್ರಮಾಣದ ಚಹಾದಲ್ಲಿ ೩೦-೧೬ ಎಂ.ಜಿ. ಕೆಫೇನ್ ದೇಹ ಸೇರುತ್ತದೆ. ಹೆಚ್ಚು ಕೆಫೇನ್ ದೇಹ ಸೇರಿದಷ್ಟೂ ಅದನ್ನು ನಾವು ಹೆಚ್ಚು ಅವಲಂಬಿಸುತ್ತೇವೆಯೇ ಹಾಗಾದರೆ? ಮಾಮೂಲಿ ಡೋಸ್ ಕೆಫೇನ್ ದೇಹ ಸೇರುತ್ತಿದ್ದ ಕೆಲವೇ ಹೊತ್ತಿನಲ್ಲಿ ತಲೆನೋವು ಮಾಯವಾಗುವುದಕ್ಕೆ ಇದೇ ಕಾರಣ ಇರಬಹುದು.
ಅದಲ್ಲದಿದ್ದರೆ, ದಿನದ ಆ ಹೊತ್ತಿನಲ್ಲಿ ಅದಷ್ಟು ಪೇಯ ಅಥವಾ ದ್ರವಾ ಹಾರ ಹೊಟ್ಟೆ ಸೇರುತ್ತದೆ. ಚಹಾ ಕುಡಿದಿಲ್ಲ ಎಂಬ ಕಾರಣ ನೀಡಿ, ನೀರನ್ನಂತೂ ಕುಡಿಯುವುದಿಲ್ಲ ನಾವು. ಹೀಗೆ ಪಾನೀಯಗಳು ಯಾವುವೂ ಹೊಟ್ಟೆ ಸೇರದಿದ್ದಾಗ, ಆ ಹೊತ್ತಿನ ನಿಗದಿತ ನೀರಿನಂಶ ಕಡಿಮೆಯಾಗಿಯೂ ತಲೆನೋವು ಬರುವ ಸಾಧ್ಯತೆಯಿದೆ. ಆದರೆ ಟೀ ಬದಲಿಗೆ ಒಂದಿಡೀ ಲೋಟ ಬಿಸಿನೀರನ್ನೋ ಕಷಾಯವನ್ನೋ ಕುಡಿದು ಪ್ರಯೋಗ ಮಾಡಿದ್ದರೆ, ನಮಗೆ ತಲೆನೋವು ಬಂದಿದ್ದು ಇದೇ ಕಾರಣಕ್ಕೆ ಹೌದೇ ಎಂಬುದನ್ನು ಪರಿಶೀಲಿಸಲು ಸಾಧ್ಯವಾಗುತ್ತಿತ್ತು. ಹಾಗಲ್ಲದೆ, ಚಹಾವನ್ನು ಹುಡುಕಿಯಾದರೂ ಕುಡಿದು ತಲೆನೋವಿನಿಂದ ಮುಕ್ತರಾಗುತ್ತೇವೆ ನಾವು. ಆದರೆ ಕೆಫೇನ್ ಇಲ್ಲದಿರುವ ಹರ್ಬಲ್ ಚಹಾ ಕುಡಿದರೂ ಹೀಗಾದರೆ…? ಇದಕ್ಕೇನರ್ಥ?
ಹರ್ಬಲ್ ಟೀಗಳು: ಕೆಲವೊಮ್ಮೆ ಇಂಗ್ಲಿಷ್ ಚಹಾ ಮಾತ್ರವಲ್ಲದೆ, ಹರ್ಬಲ್ ಅಥವಾ ಗ್ರೀ ಟೀ ಕುಡಿಯುವವರಿಗೂ ಈ ಲಕ್ಷಣಗಳು ತೋರಬಹುದು. ಇದಕ್ಕೂ ಕಾರಣಗಳು ಇಲ್ಲದಿಲ್ಲ. ಶುಂಠಿ ಚಹಾ, ಏಲಕ್ಕಿ ಚಹಾ, ದಾಲ್ಚಿನ್ನಿ ಚಹಾ ಮುಂತಾದ ಮಸಾಲೆ ಚಹಾಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೋವು ಕಡಿಮೆ ಮಾಡುವ ಗುಣಗಳಿವೆ. ಅದರಲ್ಲೂ ಮೈಗ್ರೇನ್ ಕಾಡುತ್ತಿದ್ದರೆ ಈ ಚಹಾಗಳಲ್ಲಿರುವ ಘಮವೇ ಅರೋಮಥೆರಪಿಯ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದಕ್ಕೆ ನಿಂಬೆ ಚಹಾ, ಪುದೀನಾ ಚಹಾ, ಕ್ಯಾಮೊಮೈಲ್ ಚಹಾ ಮುಂತಾದ ಯಾವುದೇ ಪರಿಮಳದ ಚಹಾ ಪರಿಹಾರ ನೀಡಬಲ್ಲದು. ಇದು ಮೈಗ್ರೇನ್‌ಗೆ ಮಾತ್ರವೇ ಅಲ್ಲ, ಮಾನಸಿಕ ಒತ್ತಡದಿಂದ, ಜೀರ್ಣಾಂಗದ ಸಮಸ್ಯೆಯಿಂದ ತಲೆನೋವು ಕಾಡುತ್ತಿದ್ದರೂ ಅದಕ್ಕೆ ಉಪಶಮನ ನೀಡಬಲ್ಲದು.
ಇದನ್ನು ಓದಿ: Health Tips: ಒಂದೇ ತಿಂಗಳಿನಲ್ಲಿ 10 ಕೆಜಿ ತೂಕ ಇಳಿಸಿಕೊಳ್ಳಬೇಕೆ? ಇಲ್ಲಿದೆ ತಜ್ಞರ ಸಲಹೆ!
ತಲೆನೋವು ತಂದೀತು!: ಚಹಾ ಕುಡಿಯುವುದರಿಂದ ತಲೆನೋವು ಹೋಗುವುದಷ್ಟೇ ಅಲ್ಲ, ಬರಲೂಬಹುದು. ಹೌದು, ಚಹಾ ಕುಡಿಯುವುದು ಮಿತಿಮೀರಿದರೆ ತೊಂದರೆಯನ್ನು ಆಹ್ವಾನಿಸಿದಂತೆ. ದಿನಕ್ಕೆ ಒಂದೆರಡು ಕಪ್ ಚಹಾ ಕುಡಿಯುವುದು ಸಮಸ್ಯೆ ತರುವುದು ಅನುಮಾನ. ಆದರೆ ಮೂರು ಕಪ್‌ಗಿಂತ ಹೆಚ್ಚು ಚಹಾ ಕುಡಿಯುವುದನ್ನು ನಿಯಮಿತವಾಗಿ ರೂಢಿಸಿಕೊಂಡರೆ, ಹೊಟ್ಟೆ ಹಸಿದಾಗ ಚಹಾ ಕುಡಿದರೆ, ನಿದ್ದೆಗೆಡುವುದಕ್ಕೆ ಚಹಾ ಕುಡಿದರೆ… ಆಸಿಡಿಟಿ ಅಥವಾ ಗ್ಯಾಸ್ಟ್ರೈಟಿಸ್ ಸಂಬಂಧಿ ತೊಂದರೆಗಳನ್ನು ತರಬಹುದು. ಆಸಿಡಿಟಿ ಹೆಚ್ಚಾದರೂ ಮೈಗ್ರೇನ್ ರೀತಿಯ ತಲೆನೋವು ಕಾಡುತ್ತದೆ. ಹಾಗಾಗಿ ಕಲ್ಪಿಸಿದರೆ ಬಾದರಾಯಣ ಸಂಬಂಧವೊಂದು ಚಹಾಗೂ ತಲೆನೋವಿಗೂ ಇಲ್ಲದಿಲ್ಲ. ಆದರೂ, ಚಹಾ ಮಿತಿಯಲ್ಲಿದ್ದರೆ ಆಪತ್ತೇನಿಲ್ಲ.