ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಯಲ್ ಸಂಡೂರ್ ಮೆಡ್‌ಟೆಕ್ ಕ್ಷೇತ್ರಕ್ಕೆ ಪ್ರವೇಶ

ಕಂಪನಿಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರಾಯಲ್ ಸಂಡೂರ್ ಮೆಡ್‌ಟೆಕ್ ಪ್ರೈವೇಟ್ ಲಿಮಿಟೆಡ್, ವಿಶಾಖಪಟ್ಟಣಂನಲ್ಲಿರುವ ಆಂಧ್ರಪ್ರದೇಶ ಮೆಡ್‌ಟೆಕ್ ವಲಯದಲ್ಲಿ (AMTZ) ಉತ್ಪಾದನಾ ಘಟಕ ಸ್ಥಾಪಿಸಲು 6.2 ಎಕರೆ (ಸುಮಾರು 25,090 ಚದರ ಮೀಟರ್) ಭೂಮಿಯನ್ನು ದೀರ್ಘಾವಧಿ ಗುತ್ತಿಗೆಗೆ ಪಡೆದುಕೊಂಡಿದೆ.

ರಾಯಲ್ ಸಂಡೂರ್ ಮೆಡ್‌ಟೆಕ್ ಕ್ಷೇತ್ರಕ್ಕೆ ಪ್ರವೇಶ

-

Profile
Ashok Nayak Oct 27, 2026 2:36 PM

ರಾಯಲ್ ಸಂಡೂರ್ ಗ್ರೂಪ್‌ನ ಪ್ರಮುಖ ಸಂಸ್ಥೆ ದಿ ಸಂಡೂರ್ ಮ್ಯಾಂಗನೀಸ್ ಅಂಡ್ ಐರನ್ ಓರ್ಸ್ ಲಿಮಿಟೆಡ್ (SMIORE), ವೈದ್ಯಕೀಯ ಸಾಧನಗಳು ಮತ್ತು ಉಪಭೋಗ್ಯ ವಸ್ತುಗಳ ಉತ್ಪಾದನಾ ಕ್ಷೇತ್ರಕ್ಕೆ ಪ್ರವೇಶಿಸುವ ಮೂಲಕ ತನ್ನ ವ್ಯವಹಾರ ವೈವಿಧ್ಯೀಕರಣ ಕಾರ್ಯತಂತ್ರದಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಕಂಪನಿಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರಾಯಲ್ ಸಂಡೂರ್ ಮೆಡ್‌ಟೆಕ್ ಪ್ರೈವೇಟ್ ಲಿಮಿಟೆಡ್, ವಿಶಾಖಪಟ್ಟಣಂನಲ್ಲಿರುವ ಆಂಧ್ರಪ್ರದೇಶ ಮೆಡ್‌ಟೆಕ್ ವಲಯದಲ್ಲಿ (AMTZ) ಉತ್ಪಾದನಾ ಘಟಕ ಸ್ಥಾಪಿಸಲು 6.2 ಎಕರೆ (ಸುಮಾರು 25,090 ಚದರ ಮೀಟರ್) ಭೂಮಿಯನ್ನು ದೀರ್ಘಾವಧಿ ಗುತ್ತಿಗೆಗೆ ಪಡೆದುಕೊಂಡಿದೆ.

2026ರ ಅಕ್ಟೋಬರ್ 19ರಂದು ಆಂಧ್ರಪ್ರದೇಶ ಮೆಡ್‌ಟೆಕ್ ವಲಯ ಲಿಮಿಟೆಡ್ ಮತ್ತು ರಾಯಲ್ ಸಂಡೂರ್ ಮೆಡ್‌ಟೆಕ್ ನಡುವೆ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಆಂಧ್ರಪ್ರದೇಶ ಸರ್ಕಾರದ ಅಧೀನದಲ್ಲಿರುವ AMTZ, ವೈದ್ಯಕೀಯ ತಂತ್ರಜ್ಞಾನ ಉತ್ಪಾದನೆಗೆ ಅಗತ್ಯವಾದ ಸಾಮಾನ್ಯ ಉತ್ಪಾದನಾ ಮತ್ತು ವೈಜ್ಞಾನಿಕ ಸೌಲಭ್ಯಗಳನ್ನು ಒದಗಿಸುತ್ತದೆ. ಯೋಜನೆಯ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುವಂತೆ ಕಂಪನಿಯು ವರ್ಲ್ಡ್ ಟ್ರೇಡ್ ಸೆಂಟರ್ AMTZನಲ್ಲಿ ಕಚೇರಿ ಸ್ಥಳವನ್ನೂ ಪಡೆದುಕೊಂಡಿದೆ.

ಇದನ್ನೂ ಓದಿ: Medical Camp: ಆರೋಗ್ಯ ತಪಾಸಣೆ, ವೈದ್ಯಕೀಯ ಸಲಹೆ; ಅಗತ್ಯವಿರುವವರಿಗೆ ಉಚಿತ ಕನ್ನಡಕ, ವಾಕಿಂಗ್ ಸ್ಟಿಕ್ ವಿತರಣೆ

ಭೂಮಿಯ ಗುತ್ತಿಗೆ ಅವಧಿ 33 ವರ್ಷಗಳಾಗಿದ್ದು, ವ್ಯವಹಾರ ಆರಂಭವಾದ ದಿನಾಂಕದಿಂದ 10 ವರ್ಷಗಳ ನಂತರ ಗುತ್ತಿಗೆ ಹಕ್ಕುಗಳನ್ನು ಸಂಪೂರ್ಣ ಸ್ವಾಮ್ಯಕ್ಕೆ ಪರಿವರ್ತಿಸಿಕೊಳ್ಳುವ ವಿಶೇಷ ಅವಕಾಶವನ್ನೂ ಕಂಪನಿ ಹೊಂದಿದೆ. ಭೂಮಿಯಲ್ಲಿ ರಸ್ತೆ, ವಿದ್ಯುತ್, ನೀರು ಮತ್ತು ತ್ಯಾಜ್ಯನೀರಿನ ಮೂಲಸೌಕರ್ಯ ಸೌಲಭ್ಯಗಳು ಲಭ್ಯವಿವೆ.

ಈ ಕುರಿತು ಮಾತನಾಡಿದ SMIORE ವ್ಯವಸ್ಥಾಪಕ ನಿರ್ದೇಶಕ ಬಹಿರ್ಜಿ ಎ. ಘೋರ್ಪಡೆ, “ಗಣಿಗಾರಿಕೆ ಮತ್ತು ಲೋಹಗಳ ಕ್ಷೇತ್ರದ ಜೊತೆಗೆ ಹೊಸ ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ವೈವಿಧ್ಯೀಕರಣ ಕಾರ್ಯತಂತ್ರದ ಉದ್ದೇಶವಾಗಿದೆ. ವೈದ್ಯಕೀಯ ಸಾಧನಗಳ ಕ್ಷೇತ್ರದಲ್ಲಿ ದೇಶೀಯ ಉತ್ಪಾದನೆಗೆ ಉತ್ತಮ ಅವಕಾಶಗಳಿವೆ. AMTZ ಈ ಕ್ಷೇತ್ರಕ್ಕೆ ಹೊಸದಾಗಿ ಪ್ರವೇಶಿಸುವ ಸಂಸ್ಥೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಸೂಕ್ತ ವೇದಿಕೆಯಾಗಿದೆ.

ಭೂಮಿ ಸ್ವಾಧೀನಪಡಿಸಿ ಕೊಂಡಿರುವುದು ನಮ್ಮ ಈ ಹೊಸ ಪ್ರಯಾಣದ ಮೊದಲ ಮಹತ್ವದ ಹೆಜ್ಜೆಯಾಗಿದೆ. ಏಳು ದಶಕಗಳಿಗೂ ಹೆಚ್ಚು ಕಾಲ ನಮ್ಮ ಸಂಸ್ಥೆಯನ್ನು ಮುನ್ನಡೆಸಿರುವ ಶಿಸ್ತು ಮತ್ತು ಬದ್ಧತೆಯೊಂದಿಗೆ ಈ ಯೋಜನೆಯನ್ನು ಮುಂದುವರಿಸಲಿದ್ದೇವೆ” ಎಂದು ತಿಳಿಸಿದರು.

AMTZ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಂಸ್ಥಾಪಕ ಸಿಇಒ ಡಾ. ಜಿತೇಂದ್ರ ಶರ್ಮಾ ಅವರು ರಾಯಲ್ ಸಂಡೂರ್ ಮೆಡ್‌ಟೆಕ್ ಸಂಸ್ಥೆಯನ್ನು ಸ್ವಾಗತಿಸಿ, ಈ ಹೂಡಿಕೆಯು ಭಾರತದ ವೈದ್ಯಕೀಯ ತಂತ್ರಜ್ಞಾನ ಉತ್ಪಾದನಾ ಸಾಮರ್ಥ್ಯದ ಮೇಲಿನ ಉದ್ಯಮ ವಲಯದ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದರು. ಇಂತಹ ಹೂಡಿಕೆಗಳು ಸ್ವದೇಶಿ ಉತ್ಪಾದನೆ, ನಾವೀನ್ಯತೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ನೆರವಾಗಲಿವೆ ಎಂದು ಹೇಳಿದರು.

ಯೋಜನೆಯ ಬಂಡವಾಳ ವೆಚ್ಚ ಮತ್ತು ಅನುಷ್ಠಾನದ ಕಾಲಮಿತಿಯ ವಿವರಗಳನ್ನು ಕಂಪನಿ ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ.