ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Health Tips: ಕಿಡ್ನಿ ಸಮಸ್ಯೆ ಇದ್ದವರು ಈ ಆಹಾರ ಕ್ರಮದಿಂದ ದೂರವಿರಿ

ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮೂತ್ರಪಿಂಡಕ್ಕೆ ಅಪಾಯಕಾರಿ. ಮೂತ್ರಪಿಂಡಗಳು ಸರಿ ಯಾಗಿ ಕೆಲಸ ನಿರ್ವಹಿಸದೇ ಇದ್ದಲ್ಲಿ ಆಹಾರದಿಂದ ಉತ್ಪನ್ನವಾಗುವ ತ್ಯಾಜ್ಯವು ರಕ್ತದಲ್ಲಿ ಸಂಗ್ರಹ ಆಗುತ್ತದೆ. ಇದರಿಂದ ಅಪಾಯ ಹೆಚ್ಚಿದ್ದು ಈ ಮೊದಲೇ ಎಚ್ಚೆತ್ತುಕೊಂಡು ಕೆಲವು ಆಹಾರ ಕ್ರಮವನ್ನು ಅಳವಡಿಸಿಕೊಳ್ಳಬೇಕು. ಅದೇ ರೀತಿ ಕೆಲವು ಆಹಾರ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು. ಈ ಕುರಿತಾದ ವಿವರ ಇಲ್ಲಿದೆ.

ಕಿಡ್ನಿ ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಅಳವಡಿಸಿ

kidney

Profile Pushpa Kumari Mar 1, 2025 7:00 AM

ಬೆಂಗಳೂರು: ಕಿಡ್ನಿ ಅಥವಾ ಮೂತ್ರಪಿಂಡವು ನಮ್ಮ ದೇಹದ ಬಹು ಮುಖ್ಯ ಅಂಗಗಳಲ್ಲಿ ಒಂದು ಎನಿಸಿಕೊಂಡಿದೆ. ನಾವು ಸೇವಿಸುವ ಕೆಟ್ಟ ಆಹಾರ ಕ್ರಮಗಳು ಕಿಡ್ನಿಯ ಆರೋಗ್ಯಕ್ಕೆ ಪರಿಣಾಮ ಬೀರುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮೂತ್ರಪಿಂಡಕ್ಕೆ ಅಪಾಯಕಾರಿಯಾಗುತ್ತದೆ. ಮೂತ್ರಪಿಂಡಗಳು ಸರಿಯಾಗಿ ಕೆಲಸ ನಿರ್ವಹಿಸದೇ ಇದ್ದಲ್ಲಿ ಆಹಾರದಿಂದ ಉತ್ಪನ್ನವಾಗುವ ತ್ಯಾಜ್ಯವು ರಕ್ತದಲ್ಲಿ ಸಂಗ್ರಹ ಆಗುತ್ತದೆ (Health Tips). ಇದರಿಂದ ಅಪಾಯ ಹೆಚ್ಚಿದ್ದು, ಈ ಮೊದಲೇ ಎಚ್ಚೆತ್ತುಕೊಂಡು ಕೆಲವು ಆಹಾರ ಕ್ರಮವನ್ನು ಅಳವಡಿಸಿ ಕೊಳ್ಳಬೇಕು. ಅದೇ ರೀತಿ ಕೆಲವು ಆಹಾರ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕಿದ್ದು ಸೋಡಿಯಂ, ಪ್ರೋಟೀನ್, ಪೊಟ್ಯಾಸಿಯಮ್ ಮತ್ತು ಫಾಸ್ಫರಸ್ ಕಡಿಮೆ ಇರುವ ಆಹಾರಗಳ ಸೇವನೆ ಕಿಡ್ನಿ ಸಮಸ್ಯೆ ತಡೆಯಲು ಸಹಕಾರಿಯಾಗುತ್ತದೆ.

ಸೋಡಿಯಂ ಆಹಾರಗಳನ್ನು ತಪ್ಪಿಸಿ

ಮೂತ್ರಪಿಂಡದ ಕಾಯಿಲೆ ಇರುವವರು ಸೋಡಿಯಂ ಇರುವ ಆಹಾರ ಕಡಿಮೆ ಮಾಡಬೇಕು‌. ಮೂತ್ರಪಿಂಡಗಳು ಸೋಡಿಯಂ ಸಮತೋಲನವನ್ನು ನಿಯಂತ್ರಿಸುತ್ತದೆ. ಹೆಚ್ಚುವರಿ ಸೋಡಿಯಂ ಅಧಿಕ ರಕ್ತದೊತ್ತಡ ಮತ್ತು ಊತಕ್ಕೆ ಕಾರಣವಾಗಬಹುದು. ಹಾಗಾಗಿ ಸೋಡಿಯಂ ಮಟ್ಟವನ್ನು ಕಾಪಾಡಲು ಕಡಿಮೆ ಸೋಡಿಯಂ ಅಥವಾ ಕಮ್ಮಿ ಉಪ್ಪು ಸೇರಿಸಿದ ಉತ್ಪನ್ನಗಳನ್ನು ಆಯ್ಕೆ ಮಾಡಿ.

ಹೆಚ್ಚಿನ ರಂಜಕ ಆಹಾರಗಳ ಸೇವನೆ ಬೇಡ

ಹೆಚ್ಚಿನ ಫಾಸ್ಫರಸ್ ಮಟ್ಟದ ಆಹಾರವು ಮೂತ್ರಪಿಂಡದ ಕಾಯಿಲೆ ಇರುವವರಿಗೆ ಮೂಳೆ ಮತ್ತು ಹೃದಯ ರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಮೂಳೆಗಳು ಮತ್ತು ರಕ್ತನಾಳಗಳನ್ನು ರಕ್ಷಿಸಲು ಕಡಿಮೆ ರಂಜಕಯುಕ್ತ ಆಹಾರ ಸೇವಿಸಿ. ನೀವು ಕಿಡ್ನಿ ಸಮಸ್ಯೆ ಹೊಂದಿದ್ದರೆ ರಂಜಕವು ನಿಮ್ಮ ರಕ್ತದಲ್ಲಿ ಸಂಗ್ರಹಗೊಂಡು ನಿಮ್ಮ ಮೂಳೆಗಳಿಂದ ಕ್ಯಾಲ್ಸಿಯಂ ಅನ್ನು ಸೆಳೆಯುತ್ತದೆ. ನಿಮ್ಮ ಮೂಳೆಗಳನ್ನು ತೆಳ್ಳಗೆ, ದುರ್ಬಲಗೊಳ್ಳುವಂತೆ ಮಾಡಿ ಅಪಾಯ ತಂದೊಡ್ಡಬಹುದು. ಅನೇಕ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಿಗೆ ರಂಜಕವನ್ನು ಸೇರಿಸಲಾಗುತ್ತದೆ. ಮಾಂಸ, ಧಾನ್ಯಗಳು ಮೀನು, ಬೀನ್ಸ್, ಮೊಸರು, ಬೀಜಗಳು, ಡೈರಿ ಉತ್ಪನ್ನದಲ್ಲಿ ಹೆಚ್ಚಿನ ರಂಜಕ ಇರುತ್ತದೆ. ಹೀಗಾಗಿ ತಾಜಾ ಹಣ್ಣುಗಳು, ತರಕಾರಿಗಳ ಸೇವನೆ ಮಾಡಿ.

ಪೊಟ್ಯಾಸಿಯಮ್ ಭರಿತ ಆಹಾರಗಳು

ಸ್ನಾಯುಗಳ ಕಾರ್ಯ ಮತ್ತು ಹೃದಯದ ಆರೋಗ್ಯಕ್ಕೆ ಪೊಟ್ಯಾಸಿಯಮ್ ಅತ್ಯಗತ್ಯವಾಗಿದ್ದರೂ, ಅತಿಯಾದ ಸೇವನೆ ಮೂತ್ರಪಿಂಡದ ಕಾಯಿಲೆ ಇರುವ ವರಿಗೆ ಬಹಳಷ್ಟು ಹಾನಿಕಾರಕ. ಮೂತ್ರ ಪಿಂಡಗಳು ಪೊಟ್ಯಾಸಿಯಮ್ ಮಟ್ಟವನ್ನು ನಿಯಂತ್ರಿಸುತ್ತದೆ. ಅವು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ, ಪೊಟ್ಯಾಸಿಯಮ್ ರಕ್ತದಲ್ಲಿ ಸಂಗ್ರಹಗೊಳ್ಳುತ್ತದೆ. ಇದು ಹೃದಯದ ಸಮಸ್ಯೆ ಗಳಿಗೆ ಕಾರಣವಾಗುತ್ತದೆ.

ಪ್ರೋಟೀನ್ ಭರಿತ ಆಹಾರಗಳು

ತೂಕ ನಷ್ಟ, ಸ್ನಾಯುಗಳ ಬಲ, ಮೂಳೆಗಳನ್ನು ಬಲವಾಗಿಸುವುದು ಇತ್ಯಾದಿಗಳಿಗೆ ಪ್ರೋಟೀನ್ ಅತ್ಯಗತ್ಯವಾಗಿದ್ದರೂ, ಅತಿಯಾದ ಸೇವನೆಯು ಮೂತ್ರಪಿಂಡಗಳಿಗೆ ವಿಶೇಷವಾಗಿ ಮೂತ್ರಪಿಂಡದ ಕಾಯಿಲೆ ಇರುವವರಲ್ಲಿ ಒತ್ತಡವನ್ನು ಉಂಟು ಮಾಡುತ್ತದೆ. ದೀರ್ಘಾವಧಿಯ ಅಧಿಕ ಪ್ರೋಟೀನ್ ಆಹಾರವು ಅಧಿಕ ರಕ್ತ ದೊತ್ತಡಕ್ಕೆ ಕಾರಣವಾಗುತ್ತದೆ ಮತ್ತು ಮೂತ್ರಪಿಂಡದ ಕಾಯಿಲೆಯನ್ನು ಹೆಚ್ಚು ಮಾಡಬಹುದು. ಸಸ್ಯ ಮತ್ತು ಮಾಂಸಾಹಾರ ಆಹಾರಗಳಲ್ಲಿ ಹೆಚ್ಚಿನ ಪ್ರೋಟೀನ್ ಕಂಡುಬರುತ್ತದೆ. ಹಾಗಾಗಿ ಕೋಳಿ, ಮೀನು, ಡೈರಿ ಉತ್ಪನ್ನಗಳನ್ನು ಮಿತಿಯಾಗಿ ಸೇವಿಸಿ.

ಆಕ್ಸಲೇಟ್ ಹೊಂದಿರುವ ಆಹಾರಗಳಿಂದ ದೂರವಿರಿ

ಮೂತ್ರಪಿಂಡದ ಸಮಸ್ಯೆ ಇದ್ದಲ್ಲಿ ಬೀಟ್‌ರೂಟ್, ಕ್ಯಾರಟ್, ಆಲೂಗಡ್ಡೆ ಮತ್ತು ಪಾಲಕ್‌ನಂತಹ ತರಕಾರಿಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಇದರಲ್ಲಿ ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಇರುತ್ತದೆ. ಇದು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೆಚ್ಚು ಮಾಡಲಿದೆ.

ಇದನ್ನು ಓದಿ: Health Tips: ಹೊರಾಂಗಣ vs ಒಳಾಂಗಣ: ನಡಿಗೆಗೆ ಯಾವುದು ಸೂಕ್ತ?

ಮೂತ್ರಪಿಂಡದ ಕಾಯಿಲೆ ತಡೆಯಲು ಇತರ ಸಲಹೆಗಳು

*ಮೂತ್ರಪಿಂಡಗಳು ತ್ಯಾಜ್ಯವನ್ನು ಫಿಲ್ಟರ್ ಮಾಡಲು ಸಹಾಯ ಮಾಡಲು ಸಾಕಷ್ಟು ಪ್ರಮಾಣದ ನೀರನ್ನು ಕುಡಿಯಿರಿ.

*ನಿಮ್ಮ ರಕ್ತದೊತ್ತಡವನ್ನು ನಿಯಮಿತವಾಗಿ ಪರಿಶೀಲನೆ ಮಾಡಬೇಕು. ಮೂತ್ರಪಿಂಡದ ಕಾಯಿಲೆಯು ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು.

*ನೀವು ಮಧುಮೇಹ ಹೊಂದಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ಬಹಳ ಮುಖ್ಯ.

*ಆಹಾರದ ಲೇಬಲ್‌ಗಳಲ್ಲಿ ಸೋಡಿಯಂ, ಪೊಟ್ಯಾಸಿಯಮ್ ಮತ್ತು ರಂಜಕದ ಅಂಶವನ್ನು ಪರಿಶೀಲಿಸಿ.