ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Health Tips: ಹೊರಾಂಗಣ vs ಒಳಾಂಗಣ: ನಡಿಗೆಗೆ ಯಾವುದು ಸೂಕ್ತ?

ತೂಕವನ್ನುಇಳಿಸಲು, ದೇಹವನ್ನು ಹದಗೊಳಿಸಿ ಶರೀರದ ಆಕಾರವನ್ನೂ ಸರಿಪಡಿಸಲು ನಡಿಗೆ ಸಹಕಾರಿ, ಆದರೆ ವಾಕಿಂಗ್ ಅಂತ ಬಂದಾಗ ಮನೆಯ ಟೆರೇಸ್‌ ಮೇಲೆ ನಡೆಯುವವರು, ಥ್ರೆಡ್‌ಮಿಲ್‌ ಮೇಲೆ ನಡೆಯುವವರು…ಹೀಗೆ ನಡಿಗೆಯ ಉತ್ಸಾಹಿಗಳು ಹಲವು ರೀತಿಯಲ್ಲಿ ಇರಬಹುದು ,ಹಾಗಾಗಿ ಒಳಾಂಗಣ ನಡಿಗೆ ಉತ್ತಮವೋ ಅಥವಾ ಹೊರಾಂಗಣ ನಡಿಗೆಯೋ ಎನ್ನುವ ಗೊಂದಲ ನಿಮಗಿದ್ದರೆ ಇಲ್ಲಿದೆ ಸಲಹೆ

ವಾಕಿಂಗ್‌ ಮಾಡಲು ಹೊರಾಂಗಣ, ಒಳಾಂಗಣ- ಯಾವುದು ಬೆಸ್ಟ್?

walking

Profile Pushpa Kumari Feb 28, 2025 7:00 AM

ನವದೆಹಲಿ: ವ್ಯಾಯಾಮ ಎನ್ನುತ್ತಿದ್ದಂತೆ ಹೆಚ್ಚಿನವರು ಮನೆಗೆ ಸಮೀಪವಿರುವ ಉದ್ಯಾನವನಕ್ಕೆ ತೆರಳುತ್ತಾರೆ. ದಿನಕ್ಕಿಷ್ಟು ಹೆಜ್ಜೆಗಳು ಎಂದೋ ಅಥವಾ ಇಷ್ಟು ಸಮಯ ಎಂದೋ ಅಥವಾ ಇದಿಷ್ಟು ಗಾಸಿಪ್ಪುಗಳು ಮುಗಿಯುವವರೆಗೆ ಎಂದೋ ಅಂತೂ ಅವರವರ ಅಳತೆಗೆ ತಕ್ಕಂತೆ ವಾಕಿಂಗ್‌ ಮಾಡಿ ಬರುತ್ತಾರೆ. ಇದಲ್ಲದೆ ಮನೆಯ ಟೆರೇಸ್‌ ಮೇಲೆ ನಡೆಯುವವರು, ಥ್ರೆಡ್‌ಮಿಲ್‌ ಮೇಲೆ ನಡೆಯುವವರು… ಹೀಗೆ ನಡಿಗೆಯ ಉತ್ಸಾಹಿಗಳು ಹಲವು ರೀತಿಯಲ್ಲಿ ಇರಬಹುದು (Health Tips). ಆದರೆ ಒಳಾಂಗಣದಲ್ಲಿ ನಡೆಯುವುದು ಸರಿಯೋ ಅಥವಾ ಹೊರಾಂಗಣದ ನಡಿಗೆ ಸೂಕ್ತವೋ?

ಈ ಎರಡಕ್ಕೂ ಅದರದ್ದೇ ಆದ ಗುಣಾವಗುಣಗಳಿವೆ. ಯಾವುದೇ ರೀತಿಯ ವ್ಯಾಯಾಮವೂ ಆರೋಗ್ಯಕ್ಕೆ ಒಳ್ಳೆಯದೇ. ಆದರೆ ಅದರಲ್ಲಿ ಆಯ್ಕೆಗಳಿದ್ದು, ಯಾವುದನ್ನು ತೆಗೆದುಕೊಳ್ಳಬೇಕು ಎನ್ನುವಾಗ, ಹೆಚ್ಚಿನ ಮಾಹಿತಿ ಹೊಂದುವುದು ಉಪಯುಕ್ತ. ಇದಕ್ಕಾಗಿ ಇಕೊಸೈಕಾಲಜಿ ಎನ್ನುವ ನಿಯತಕಾಲಿಕದಲ್ಲಿ ವಿವರವಾದ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ. ಒಂದೆಡೆ ಪ್ರಕೃತಿ ಸಹಜವಾದ ತಾಣದಲ್ಲಿ ನಡೆಯುವವರಿದ್ದರೆ, ಇನ್ನೊಂದೆಡೆ ಕೃತಕವಾದ ಒಳಾಂಗಣ ಪರಿಸರದಲ್ಲಿ ನಡೆಯುವವರಿದ್ದಾರೆ. ಇದಕ್ಕಾಗಿ ಕಾಲೇಜಿನ 74 ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿತ್ತು. ಅವರೆಲ್ಲರೂ ತಂತಮ್ಮ ವೇಗದಲ್ಲಿ ನಡೆಯುತ್ತಿದ್ದರು ಹಾಗೂ ನೈಸರ್ಗಿಕ ದಾರಿಯ ಏರಿಳಿವುಗಳನ್ನು ಥ್ರೆಡ್‌ಮಿಲ್‌ಗಳ ಮೇಲೆ ಯಥಾವತ್‌ ಸೃಷ್ಟಿಸಲಾಗಿತ್ತು. ಅವರೆಲ್ಲ ವಾಕಿಂಗ್‌ ಮಾಡಿದ ಸಮಯದಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ.

ಪ್ರಯೋಗದಲ್ಲಿ ಪಾಲ್ಗೊಂಡವರ ದೇಹ ಮತ್ತು ಮನಸ್ಸಿನ ಮೇಲೆ ಒಳಾಂಗಣ ಮತ್ತು ಹೊರಾಂಗಣದ ನಡಿಗೆಯು ಬೀರಿದ ಪರಿಣಾಮವೇನು ಎಂಬುದನ್ನು ಅಳೆಯುವುದು ಇಡೀ ಅಧ್ಯಯನದ ಮುಖ್ಯ ಉದ್ದೇಶವಾಗಿತ್ತು. ನಡೆಯುವಾಗ ಸುತ್ತಲಿರುವ ಪರಿಸರವು ನಿಶ್ಚಿತವಾಗಿಯೂ ವ್ಯಾಯಾಮ ಮಾಡುವವರ ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನದಲ್ಲಿ ಸೂಚಿಸಲಾಗಿದೆ. ನಡಿಗೆಯ ದೂರ, ವೇಗ, ಏರಿಳಿತ ಎಲ್ಲವೂ ಒಂದೇ ಆಗಿದ್ದರೂ, ಹೊರಗೆ ನಡೆಯುತ್ತಿದ್ದವರ ಹೃದಯ ಬಡಿತ ತೀವ್ರವಾಗಿ ಏರಿಕೆಯಾಗಿತ್ತು. ಅಂದರೆ ದೇಹಕ್ಕಾದ ಶ್ರಮದ ಪ್ರಮಾಣ ಹೆಚ್ಚಾಗಿತ್ತು. ಈ ಮೂಲಕ ಕರಗಿದ ಕ್ಯಾಲರಿಗಳೂ ಹೆಚ್ಚಾಗಿದ್ದವು.

ಒಳಗೆ ನಡೆಯುತ್ತಿದ್ದವರು ತಮ್ಮ ಚೈತನ್ಯದ ಮಟ್ಟದಲ್ಲಿ ಯಾವುದೇ ವ್ಯತ್ಯಾಸವನ್ನು ತೋರಿಸಲಿಲ್ಲ. ಮಾತ್ರವಲ್ಲ ಮಾನಸಿಕ ಒತ್ತಡ ಕಡಿಮೆಯಾದ ಅನುಭವವೂ ದೊರೆಯಲಿಲ್ಲ ಎಂಬುದಾಗಿ ತಿಳಿಸಿದರು. ಇತ್ತ ಹೊರಗೆ ನಡೆಯುತ್ತಿದ್ದವರು ದೇಹದ ಚೈತನ್ಯ ಹೆಚ್ಚಿದ್ದಷ್ಟೇ ಅಲ್ಲ, ಮನಸ್ಸೂ ಹಗುರಾಗಿದೆ ಎಂಬುದನ್ನು ಒತ್ತಿ ಹೇಳಿದರು. ಕುತೂಹಲದ ವಿಷಯವೆಂದರೆ, ಥ್ರೆಡ್‌ಮಿಲ್‌ ಮೇಲೆ ನಡೆದವರಿಗೆ ಮತ್ತು ಹೊರಗೆ ನಡೆದವರಿಗೆ ಏಕಪ್ರಕಾರದ ಶ್ರಮದ ಅನುಭವವಾಗಿತ್ತು. ಆದರೆ ಹೃದಯ ಬಡಿತ ಮಾತ್ರ ಹೊರಗೆ ನಡೆದವರದ್ದೇ ಹೆಚ್ಚಾಗಿತ್ತು. ಅಂದರೆ ಅವರ ಅರಿವಿಗೆ ಬಾರದೆಯೇ ಹೆಚ್ಚಿನ ಕ್ಯಾಲರಿಗಳು ಕರಗುತ್ತಿದ್ದವು.

ಹೊರಗೆ ನಡೆಯುವವರಲ್ಲಿ ಧನಾತ್ಮಕ ಅನುಭವಗಳು ಹೆಚ್ಚಾಗಿ ಕಾಣುವುದಕ್ಕೆ ಬಹಳಷ್ಟು ಕಾರಣಗಳಿದ್ದವು. ತಾಜಾ ಗಾಳಿ ಮತ್ತು ಬಿಸಿಲು ಅಥವಾ ಸೂರ್ಯನ ಬೆಳಕು ಮೈಮೇಲೆ ಬೀಳುವುದು ಎಲ್ಲಕ್ಕಿಂತ ಮುಖ್ಯವಾದ ಕಾರಣವಾಗಿತ್ತು. ಜೊತೆಗೆ, ಹಕ್ಕಿಗಳ ಕಲರವ, ಗಾಳಿಯ ಮೊರೆತ ಮುಂತಾದ ನಿಸರ್ಗ ಸಹಜ ಶಬ್ದಗಳೆಲ್ಲ ಅವರ ಮೇಲೆ ಪೂರಕ ಪರಿಣಾಮವನ್ನು ಬೀರಿದ್ದವು. ಹಾಗಾಗಿಯೇ ಮಾನಸಿಕ ಒತ್ತಡ ಕಡಿಮೆಯಾಗಿತ್ತು ಮತ್ತು ಚೈತನ್ಯದ ಪ್ರಮಾಣ ಏರಿಕೆಯಾಗಿತ್ತು.

ಇದನ್ನು ಓದಿ: Summer Health Tips: ಸುಡುವ ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ!

ಪಾರ್ಕ್‌ನಲ್ಲಿ, ಯಾವುದೋ ಗುಡ್ಡದ ಮೇಲೆ, ಕಾಡಿನಲ್ಲಿ, ಸಮುದ್ರದ ತೀರ ಸೇರಿದಂತೆ ಯಾವುದೇ ಬಗೆಯ ನೈಸರ್ಗಿಕ ತಾಣಗಳಲ್ಲಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಒಟ್ಟಾರೆ ಯಾಗಿ ಆರೋಗ್ಯದ ಮೇಲೆ ಹೆಚ್ಚಿನ ಧನಾತ್ಮಕ ಪರಿಣಾಮ ಆಗಬಹುದು ಎಂಬುದನ್ನು ಈ ಮೂಲಕ ಅಧ್ಯಯನ ಸೂಚಿಸಿದೆ. ಸ್ವಾಸ್ಥ್ಯ ಎಂಬುದು ಕೇವಲ ಬೆವರು ಹರಿಸುವಷ್ಟಕ್ಕೆ ಅಥವಾ ಕ್ಯಾಲರಿ ಕರಗಿಸುವಷ್ಟಕ್ಕೆ ಸೀಮಿತವಲ್ಲ. ಅದು ದೇಹ ಮತ್ತು ಮನಸ್ಸುಗಳೆರಡೂ ಚೈತನ್ಯಪೂರ್ಣವಾಗಿ ಇರುವುದನ್ನು ಗುರಿಯಾಗಿಸಿಕೊಳ್ಳಬೇಕು ಎಂಬುದನ್ನು ಈ ಅಧ್ಯಯನ ಹೇಳುತ್ತದೆ.