ಗರ್ಭಾವಸ್ಥೆಯಲ್ಲಿ ನಿದ್ದೆಯ ಗುಣಮಟ್ಟ ಹೆಚ್ಚಿಸುವುದು ಹೇಗೆ?
Health Tips: ಗರ್ಭಾವಸ್ಥೆಯ ಕಡೆಯ ಮೂರು ತಿಂಗಳಲ್ಲಿ ಎದುರಾಗುವ ಹಲವು ಸವಾಲುಗಳಲ್ಲಿ ನಿದ್ರಾಹೀನತೆಯೂ ಒಂದು. ಹೇಗೆ ಮಲಗಿದರೂ ಸರಿಯಾಗದೆ, ಕ್ಷಣಕ್ಕೊಮ್ಮೆ ಮಗ್ಗುಲು ಬದಲಿಸುತ್ತಾ, ಒಮ್ಮೆ ನೋಯುವ ಬೆನ್ನು ನೀವಿಕೊಳ್ಳುತ್ತಾ, ಇನ್ನೊಮ್ಮೆ ನೋಯುವ ಕಾಲನ್ನು ಉಜ್ಜಿಕೊಳ್ಳುತ್ತಾ, ಮಂಪರಿನಲ್ಲೇ ಬಾತ್‌ರೂಂ ಓಡಾಟವನ್ನು ಮುಗಿಸುವಷ್ಟರಲ್ಲಿ ಬೆಳಗಾಗಿರುತ್ತದೆ. ಮುಂದಿನ ಕೆಲವು ದಿನಗಳಲ್ಲಿ ಅನಿಯಮಿತವಾಗಿ ನಿದ್ದೆಗೆಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ದೇಹಕ್ಕೆ, ಈ ಹಂತದಲ್ಲಿ ಎಷ್ಟು ನಿದ್ದೆ ಸಿಕ್ಕಿದರೂ ಬೇಕು. ಆದರೆ ಹೇಗೆ?ಹೀಗೇಕಾಗುತ್ತದೆ?
ಇಂಟರ್ ನೆಟ್ ಚಿತ್ರ -
ನವದೆಹಲಿ: ಗರ್ಭಾವಸ್ಥೆಯ (Pregnancy Health) ಕಡೆಯ ಮೂರು ತಿಂಗಳಲ್ಲಿ ಎದುರಾಗುವ ಹಲವು ಸವಾಲುಗಳಲ್ಲಿ ನಿದ್ರಾಹೀನತೆಯೂ ಒಂದು. ಹೇಗೆ ಮಲಗಿದರೂ ಸರಿಯಾಗದೆ, ಕ್ಷಣಕ್ಕೊಮ್ಮೆ ಮಗ್ಗುಲು ಬದಲಿ ಸುತ್ತಾ, ಒಮ್ಮೆ ನೋಯುವ ಬೆನ್ನು ನೀವಿಕೊಳ್ಳುತ್ತಾ, ಇನ್ನೊಮ್ಮೆ ನೋಯುವ ಕಾಲನ್ನು ಉಜ್ಜಿಕೊಳ್ಳುತ್ತಾ, ಮಂಪರಿನಲ್ಲೇ ಬಾತ್‌ರೂಂ ಓಡಾಟವನ್ನು ಮುಗಿಸುವಷ್ಟರಲ್ಲಿ ಬೆಳಗಾಗಿರುತ್ತದೆ. ಮುಂದಿನ ಕೆಲವು ದಿನಗಳಲ್ಲಿ ಅನಿಯಮಿತವಾಗಿ ನಿದ್ದೆಗೆಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ದೇಹಕ್ಕೆ, ಈ ಹಂತದಲ್ಲಿ ಎಷ್ಟು ನಿದ್ದೆ ಸಿಕ್ಕಿದರೂ ಬೇಕು. ಆದರೆ ಹೇಗೆ?ಹೀಗೇಕಾಗುತ್ತದೆ?: ಅದಕ್ಕೂ ಮೊದಲು ಕಡೆಯ ಮೂರು ತಿಂಗಳಲ್ಲಿ ನಿದ್ದೆ ಅಷ್ಟೊಂದು ತೊಡಕಾಗುವುದೇಕೆ ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ.
ಬೆಳೆಯುತ್ತಿರುವ ಶಿಶುವಿನಿಂದಾಗಿ ದೇಹದ ಗಾತ್ರವೂ ಹಿಗ್ಗುವುದು ಸಹಜ. ಹಾಗಾಗಿ ಒಂದೇ ಭಂಗಿಯಲ್ಲಿ ಸ್ವಲ್ಪ ಕಾಲ ಇದ್ದರೂ ಬೆನ್ನು, ಕಿಬ್ಬೊಟ್ಟೆ ಮತ್ತು ಕಾಲುಗಳ ಮೇಲೆ ಒತ್ತಡ ಹೆಚ್ಚುವುದು ಸಾಮಾನ್ಯ.
ಗರ್ಭಾವಸ್ಥೆಯ ಹಾರ್ಮೋನುಗಳು ಮತ್ತು ಹಿಗ್ಗುತ್ತಿರುವ ಗರ್ಭಕೋಶದಿಂದಾಗಿ ಮೂತ್ರಪಿಂಡಗಳ ಮೇಲೆ ಬೀಳುವ ಒತ್ತಡದ ಕಾರಣದಿಂದ ಆಗಾಗ ಬಾತ್‌ರೂಂ ಭೇಟಿ ಅನಿವಾರ್ಯ. ಹಾಗಾಗಿ ರಾತ್ರಿ ನಿಯಮಿತವಾಗಿ ನಿದ್ದೆ ಮಾಡುವುದಕ್ಕೆ ತೊಂದರೆಯಾಗುತ್ತದೆ.
ಚೋದಕಗಳು ಮತ್ತು ಜೀರ್ಣಾಂಗಗಳ ಮೇಲಿನ ಒತ್ತಡದಿಂದಾಗಿ ಆಸಿಡಿಟಿ ಮತ್ತು ಎದೆಯುರಿಯೂ ಸಾಮಾನ್ಯ. ಅದರಲ್ಲೂ ಊಟ ಆದ ಕೂಡಲೆ ಮಲಗಿದರೆ ಎದೆಯುರಿ ನಿಶ್ಚಿತ
ಶಿಶುವಿನ ಚಟುವಟಿಕೆ ಹೆಚ್ಚಿದಂತೆಲ್ಲಾ ತಾಯಿಯ ಅಸ್ವಸ್ಥತೆ ಸಾಮಾನ್ಯ. ವಿಶ್ರಾಂತಿಯ ಹೊತ್ತಿನಲ್ಲಿ ಮತ್ತು ಕೆಲವು ಭಂಗಿಗಳಲ್ಲಿ ಮಲಗಿದಾಗ ಈ ಚಟುವಟಿಕೆ ಹೆಚ್ಚು ಅನುಭವಕ್ಕೆ ಬರುತ್ತದೆ.
ಒತ್ತಡ ದೇಹದ ಮೇಲೆ ಮಾತ್ರವಲ್ಲ, ತಾಯಿಯ ಮನಸ್ಸಿನ ಮೇಲೂ ಹೆಚ್ಚುತ್ತದೆ. ಮುಂದೇನು, ಹೇಗೆ ಎಂಬ ಭಾವವೂ ನಿದ್ದೆ ಹಾಳಾಗುವುದಕ್ಕೆ ಕಾರಣವಾಗಬಲ್ಲದು.
Vishwavani health: ಮದುವೆ ಬಳಿಕ ಮಹಿಳೆ ದಪ್ಪಗಾಗಲು ಕಾರಣವೇನು? ಹೇಗೆ ಇದನ್ನು ನಿಯಂತ್ರಿಸುವುದು? ಇಲ್ಲಿದೆ ಟಿಪ್ಸ್
ನಿದ್ದೆ ಹೆಚ್ಚುವುದಕ್ಕೆ ಪೂರಕವಾಗಿ ಏನು ಮಾಡಬಹುದು?
ದೇಹದ ಹಲವು ಭಾಗಗಳಿಗೆ ಸೂಕ್ತವಾಗಿ ಆಧಾರ ನೀಡುವುದಕ್ಕೆ ಹಲವು ರೀತಿಯಲ್ಲಿ ದಿಂಬುಗಳನ್ನು ಬಳಸಿಕೊಳ್ಳಬಹುದು. ಇದಕ್ಕಾಗಿಯೇ ಮೀಸಲಾದ ಕೆಲವು ಪ್ರಗ್ನೆನ್ಸಿ ಪಿಲ್ಲೊಗಳು ಹೊಟ್ಟೆ, ಬೆನ್ನು, ಕುತ್ತಿಗೆ, ಮೊಣಕಾಲುಗಳಿಗೆಲ್ಲ ಆರಾಮ ನೀಡಬಲ್ಲವು.
ಬೆನ್ನಿನ ಮೇಲೆ ಮಲಗುವುದಕ್ಕಿಂದ ಯಾವುದಾದರೊಂದು ಮಗ್ಗುಲಲ್ಲಿ ಮಲಗುವುದಕ್ಕೆ ಪ್ರಯತ್ನಿಸಿ. ನಿದ್ದೆಯಲ್ಲಿ ಎಚ್ಚರಾದಾಗ ಬೆನ್ನಿನ ಮೇಲೆ ಅಂಗಾತ ಮಲಗಿದ್ದರೆ ಮಗ್ಗುಲಾಗಿ.
ಮಲಗುವ ಮುನ್ನ ಹೊಟ್ಟೆತುಂಬಾ ಊಟ ಮಾಡುವುದನ್ನು ತಪ್ಪಿಸಿ. ಒಂದೋ ಮಲಗುವ ಎರಡು ತಾಸು ಮೊದಲು ಊಟ ಮಾಡಿ ಅಥವಾ ಊಟವನ್ನೇ ಕಡಿಮೆ ಮಾಡಿ. ಇದರಿಂದ ಅಜೀರ್ಣ, ಹೊಟ್ಟೆಯುರಿಯನ್ನು ಕಡಿಮೆ ಮಾಡಬಹುದು.
ಕಾಫಿ, ಟೀ ಕುಡಿಯುವ ಅಭ್ಯಾಸವಿದ್ದರೆ ಸಂಜೆ ಐದರ ಮೇಲೆ ಕುಡಿಯಲೇಬೇಡಿ. ಉಳಿದಂತೆ ಕೆಫೀನ್ ಪೇಯಗಳನ್ನೂ ಮಿತಗೊಳಿಸಿ. ರಾತ್ರಿಯ ನಿದ್ದೆ ಮಾಡುವುದಕ್ಕೆ ಮತ್ತು ಏಳುವುದಕ್ಕೆ ಒಂದು ದಿನಚರಿಯನ್ನು ನಿಗದಿಗೊಳಿಸಿ. ಇದರಿಂದ ನಿದ್ದೆಯ ಸಮಯವನ್ನು ನಿಗದಿ ಮಾಡಿಕೊಳ್ಳುವುದಕ್ಕೆ ದೇಹಕ್ಕೂ ಅನುಕೂಲ. ಮಲಗುವ ಮುನ್ನ ಸ್ಕ್ರೀನ್ ನೋಡುವ ಬದಲಿಗೆ ಇಷ್ಟವಾಗುವ ಸಂಗೀತ ಕೇಳಿ, ಪುಸ್ತಕ ಓದಿ, ಬೆಚ್ಚಗಿನ ಸ್ನಾನ ಮಾಡಿ- ಇವೆಲ್ಲ ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುತ್ತವೆ.