Fitness Tips: ಹಬ್ಬದ ಸಿಹಿ ಊಟದ ನಂತರ ತೂಕ ಇಳಿಕೆ ಹೇಗೆ? ಸಿಂಪಲ್ಲಾಗಿ ಈ ಟಿಪ್ಸ್ ಫಾಲೋ ಮಾಡಿ
Health Tips: ಹಬ್ಬಕ್ಕಾಗಿ ನಡೆಸಿದ ಶಾಂಪಿಂಗ್ ಜತೆಗೆ ಮತ್ತೆ ಮತ್ತೆ ನೆನಪಾಗುವುದು ನಾವೆಷ್ಟು ತಿಂದು ತೇಗಿದ್ದೇವೆ ಎಂಬುದು! ಇದನ್ನೇ ನೆನಪಿಸಿಕೊಳ್ಳುತ್ತಾ ಹಬ್ಬಗಳ ಸಾಲಿನ ನಂತರ ʻಡಿಟಾಕ್ಸ್ʼ ಎನ್ನುತ್ತಾ ಊಟ ಬಿಡುತ್ತೇವೆ. ಬೆಳಗೆದ್ದು ನಾನಾ ಬಣ್ಣಗಳ ಪೇಯಗಳನ್ನು ಗಂಟಲಿಗೆ ಸುರಿಯುತ್ತೇವೆ; ದಿನವಿಡೀ ಉಪವಾಸವಿದ್ದು ಏನೇನೋ ಜ್ಯೂಸ್ಗಳನ್ನು ಕುಡಿದು ಹೈರಾಣಾಗುತ್ತೇವೆ. ಹಬ್ಬಗಳ ನಂತರ ಇಷ್ಟೆಲ್ಲ ಸರ್ಕಸ್ ಬೇಕೇ? ಇದೆಲ್ಲ ಎಷ್ಟು ಸರಿ?
ಸಾಂದರ್ಭಿಕ ಚಿತ್ರ -
ಬೆಂಗಳೂರು: ದಸರಾ ಮತ್ತು ದೀಪಾವಳಿಯ ನಂತರ ಅತಿಯಾಗಿ ನೆನಪಾಗುವ ಹಲವು ವಿಷಯಗಳಿವೆ. ನಮ್ಮ ಬಂಧುಗಳನ್ನು ಭೇಟಿಯಾಗಿದ್ದು, ಬೇರೆ ಊರಿಗೆ ಪ್ರಯಾಣಿಸಿದ್ದು, ಹಬ್ಬಕ್ಕಾಗಿ ನಡೆಸಿದ ಶಾಂಪಿಂಗ್ ಇತ್ಯಾದಿ ಜತೆಗೆ ಮತ್ತೆ ಮತ್ತೆ ನೆನಪಾಗುವುದು ನಾವೆಷ್ಟು ತಿಂದು ತೇಗಿದ್ದೇವೆ ಎಂಬುದು! ಇದನ್ನೇ ನೆನಪಿಸಿಕೊಳ್ಳುತ್ತಾ ಹಬ್ಬಗಳ ಸಾಲಿನ ನಂತರ ʻಡಿಟಾಕ್ಸ್ʼ ಎನ್ನುತ್ತಾ ಊಟ (Health Tips) ಬಿಡುತ್ತೇವೆ; ಬೆಳಗೆದ್ದು ನಾನಾ ಬಣ್ಣಗಳ ಪೇಯಗಳನ್ನು ಗಂಟಲಿಗೆ ಸುರಿಯುತ್ತೇವೆ; ದಿನವಿಡೀ ಉಪವಾಸವಿದ್ದು ಏನೇನೋ ಜ್ಯೂಸ್ಗಳನ್ನು ಕುಡಿದು ಹೈರಾಣಾ ಗುತ್ತೇವೆ. ಹಬ್ಬಗಳ ನಂತರ ಇಷ್ಟೆಲ್ಲ ಸರ್ಕಸ್ ಬೇಕೇ? ಇದೆಲ್ಲ ಎಷ್ಟು ಸರಿ?
ಈಗ ನಡೆಯುತ್ತಿರುವ ನವರಾತ್ರಿಯ ಸಾಲಿನಲ್ಲೇ ಎಷ್ಟೋ ಮಂದಿ ಉಪವಾಸ ಇರಿಸಿಕೊಳ್ಳುತ್ತಾರೆ ಅಥವಾ ಹಾಗೆಂದು ತಿಳಿಯುವವರಿದ್ದಾರೆ. ಹಗಲಿಡೀ ಏನೂ ತಿನ್ನದೆ ರಾತ್ರಿಯೆನ್ನುವಾಗ ಸೀಮೆ ಅಕ್ಕಿಯ ಕಿಚಡಿ, ವಡೆ, ಕರಿದ ಆಹಾರಗಳು, ನಾನಾ ಬಗೆಯ ಸಿಹಿ ತಿಂಡಿಗಳನ್ನು ಭರಪೂರ ಹೊಟ್ಟೆಗಿಳಿಸುವವರಿದ್ದಾರೆ. ಜೀರ್ಣಾಂಗಗಳಿಗೆ ಅಗತ್ಯವಾದ ವಿಶ್ರಾಂತಿಯನ್ನು ನೀಡಿದ್ದು ನಿಜ, ಆಮೇಲೆ ಸರ್ವಬಣ್ಣ ಮಸಿ ನುಂಗಿತು ಎಂಬಂತೆ ತಾರಾಮಾರಿ ತಿಂದು ಅವುಗಳನ್ನು ದಣಿಸಿದ್ದೂ ಹೌದು. ಇಂಥ ಅತಿರೇಕಗಳನ್ನು ಮಾಡದೆ, ಸಾಮಾನ್ಯವಾಗಿದ್ದರೆ ಸಾಕಾಗುತ್ತದೆ ಜೀರ್ಣಾಂಗಗಳ ಆರೋಗ್ಯ ರಕ್ಷಣೆಗೆ. ಹಾಗಾದರೆ ಹಬ್ಬದ ನಂತರದ ಡಿಟಾಕ್ಸ್ ಬೇಡವೇ ದೇಹಕ್ಕೆ?
ಆರೋಗ್ಯ ತಜ್ಞರು ಹೇಳೋದೇನು?: ಡಿಟಾಕ್ಸ್ ಎನ್ನುವ ಯಾವುದೇ ಸರ್ಕಸ್ನ ಅಗತ್ಯವಿಲ್ಲ. ಹಬ್ಬಗಳು ಮುಗಿದ ಮೇಲೆ ʻಜ್ಯೂಸುಪವಾಸʼ, ʻಪಂಚಕರ್ಮʼ ಎನ್ನುತ್ತಾ ನಾನಾ ಬಗೆಯ ಕರ್ಮಗಳಲ್ಲಿ ತೊಡಗುವ ಅನಿವಾರ್ಯತೆಯನ್ನು ಸೃಷ್ಟಿಸಿಕೊಳ್ಳುವುದು ನಾವೇ. ಸಾಮಾನ್ಯ ದಿನಗಳಿಗಿಂತ ಉಪವಾಸದ ದಿನಗಳಲ್ಲೇ ಹೊಟ್ಟೆ ಭಾರವಾಗುವಂತೆ ಮಾಡಿಕೊಂಡರೆ ಇದಕ್ಕೆ ನಾವೇ ಹೊಣೆಯಷ್ಟೆ.
ಅತಿಗಳು ಬೇಡ: ಒಂದೋ ಉಪವಾಸದ ನೆವದಲ್ಲಿ ದೇಹಕ್ಕೆ ಬೇಕಾದ ಕ್ಯಾಲರಿಗಳು ದೊರೆಯದಂತೆ ಮಾಡುವುದು ಅಥವಾ ಬೇಡದಷ್ಟು ಕ್ಯಾಲರಿಗಳನ್ನು ತುರುಕುವಂತೆ ಅತಿಯಾಗಿ ತಿನ್ನುವುದು- ಈ ಎರಡೂ ಅತಿಗಳು ಬೇಡ. ಉಪವಾಸದ ಸಂದರ್ಭದಲ್ಲಿ ಆರೋಗ್ಯಕರ ಆಯ್ಕೆಗಳನ್ನು ಇರಿಸಿಕೊಳ್ಳಿ; ಉಪವಾಸದ ನಂತರ ಅನಾರೋಗ್ಯಕರ ಆಯ್ಕೆಗಳನ್ನು ದೂರಮಾಡಿ. ಇದರಿಂದ ದೇಹದ ಹಾರ್ಮೋನುಗಳಲ್ಲಿ ಅತಿಯಾದ ಏರಿಳಿತಗಳನ್ನು ಕಡಿಮೆ ಮಾಡಬಹುದು.
ಕುಡಿಯುವ ನೀರಿನಿಂದಲೇ ಶುಗರ್ ಬರುತ್ತಾ? ಏನಂತಾರೆ ತಜ್ಞರು ?
ಡಿಟಾಕ್ಸ್ ಎಂಬುದು ಪ್ರತಿನಿತ್ಯ ನಮ್ಮ ದೇಹದಲ್ಲಿ ಆಗುತ್ತಲೇ ಇರುವ ಕ್ರಿಯೆ. ಅಂದರೆ ನಮ್ಮ ಯಕೃತ್ತು ಸತತವಾಗಿ ಮಾಡುತ್ತಲೇ ಇರುವ ಕೆಲಸವಿದು. ಇದನ್ನೇನೂ ಪ್ರತ್ಯೇಕವಾಗಿ ಮಾಡಬೇಕಿಲ್ಲ. ಇದಕ್ಕಾಗಿ ನಾವೇನಾದರೂ ಮಾಡುವುದಿದ್ದರೆ ಅದು ಸರಿಯಾದ ಆಹಾರವನ್ನು ತಿನ್ನುವುದು ಮಾತ್ರ. ಉಳಿದಿದ್ದನ್ನು ದೇಹ ತಾನೇ ನಿಭಾಯಿಸಿಕೊಳ್ಳುತ್ತದೆ. ಹಾಗೊಂದು ವೇಳೆ ಹಬ್ಬದ ನಂತರ ಡಿಟಾಕ್ಸ್ ಮಾಡಲೇಬೇಕಂದು ನಿಮ್ಮದೂ ಹಠವಿದ್ದರೆ, ಇಲ್ಲೊಂದಿಷ್ಟು ಸಲಹೆಗಳಿವೆ, ಪಾಲಿಸಿ.
ಲಘು ಆಹಾರ: ದಿನದ ಒಂದು ಹೊತ್ತಿನ ಆಹಾರವನ್ನು ಲಘುವಾಗಿ ಇರಿಸಿ. ದಿನವಿಡೀ ಉಪವಾಸ ಮಾಡಿ, ಶರೀರಕ್ಕೆ ಶಿಕ್ಷೆ ನೀಡುವ ಬದಲು ಒಂದು ಊಟವನ್ನು ಸತ್ವಯುತ ಮತ್ತು ಲಘು- ಎರಡೂ ಇರುವಂತೆ ನೋಡಿಕೊಳ್ಳಿ. ಉದಾಹರಣೆಗೆ, ಮಧ್ಯಾಹ್ನ ಊಟದ ಬದಲು ಮೊಳಕೆಕಾಳಿನ ಕೋಸಂಬರಿ ಮತ್ತು ಜೀರಿಗೆ ಬೆರಸಿದ ಮಜ್ಜಿಗೆ; ಅಥವಾ ರಾತ್ರಿ ಊಟದ ಬದಲು ಹಣ್ಣಿನ ಬೌಲ್ ಮತ್ತು ಹುರಿದ ಮಖನಾ ಬೀಜಗಳು. ಇಂಥ ಸಣ್ಣ ಬದಲಾವಣೆಗಳು ಜೀರ್ಣಾಂಗಗಳಿಗೆ ವಿರಾಮ ನೀಡುವುದರ ಜತೆಗೆ ಶರೀರಕ್ಕೆ ಸತ್ವವನ್ನೂ ಒದಗಿಸಬಲ್ಲವು.
ನಿಲ್ಲಿಸಬೇಡಿ: ದಾಂಡಿಯಾ ನೆವದಲ್ಲಿ ಒಂದಿಷ್ಟು ಕುಣಿದಾಡಿದ್ದು ಹೌದಾದರೆ, ಹಬ್ಬ ಮುಗಿದ ಮೇಲೆ ಕುಣಿತ ಜಾರಿಯಿಡಿ. ಅಂದರೆ ವ್ಯಾಯಾಮವನ್ನು ನಿಲ್ಲಿಸಬೇಡಿ, ಅದನ್ನು ಪ್ರತಿದಿನ ಮಾಡಿ. ಇದರಿಂದ ಹೆಚ್ಚಾಗಿದೆ ಎಂದು ನಿಮಗನ್ನಿಸಿದ ತೂಕವನ್ನು ಇಳಿಸಲು ಸಾಧ್ಯವಾಗುತ್ತದೆ.