ಅತಿಯಾದ ಉಪವಾಸದಿಂದ ಹೃದಯದ ಆರೋಗ್ಯಕ್ಕೆ ಹಾನಿ? ಈ ಬಗ್ಗೆ ತಜ್ಞರ ಸಲಹೆ ಏನು?
Intermittent Fasting: ವೇಗವಾಗಿ ತೂಕ ಇಳಿಸುವ ನೆಪದಲ್ಲಿ ಆಹಾರ ತ್ಯಜಿಸುವುದು, ಅಪಾಯಕಾರಿ ಔಷಧ ಸೇವಿಸುವುದು ಇತ್ಯಾದಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನದಲ್ಲಿ ಇಂಟರ್ಮಿಟೆಂಟ್ ಫಾಸ್ಟಿಂಗ್ ಟ್ರೆಂಡ್ ಆಗಿದ್ದು ಇದು ಹೃದಯದ ಆರೋಗ್ಯಕ್ಕೆ ಸುರಕ್ಷಿತವೇ? ಎನ್ನುವ ಪ್ರಶ್ನೆ ಹಲವರಲ್ಲಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಮೇ 6: ಇತ್ತೀಚಿನ ದಿನದಲ್ಲಿ ತೂಕ ಇಳಿಸಬೇಕು ಎನ್ನುವ ಕಾರಣಕ್ಕೆ ಕೆಲವರು ನಾನಾ ಸಾಹಸಕ್ಕೆ ಮುಂದಾಗುತ್ತಾರೆ. ಜಿಮ್, ಡಯೆಟ್, ವರ್ಕೌಟ್ ಎಂದು ಅತಿಯಾದ ತೂಕ ನಷ್ಟಕ್ಕೆ ಒಳಗಾಗುತ್ತಾರೆ. ವೇಗವಾಗಿ ತೂಕ ಇಳಿಸುವ ನೆಪದಲ್ಲಿ ಆಹಾರ ತ್ಯಜಿಸುವುದು (Fasting), ಅಪಾಯಕಾರಿ ಔಷಧಗಳನ್ನು ಸೇವಿಸುವುದು ಇತ್ಯಾದಿ ಆರೋಗ್ಯದ ಮೇಲೆ ಸಮಸ್ಯೆ ಉಂಟು ಮಾಡಬಹುದು. ಅದರಲ್ಲೂ ಇತ್ತೀಚಿಗೆ ಇಂಟರ್ಮಿಟೆಂಟ್ ಫಾಸ್ಟಿಂಗ್ (Intermittent Fasting) ಜನಪ್ರಿಯವಾಗಿದ್ದು, ಇದು ಹೃದಯದ ಆರೋಗ್ಯಕ್ಕೆ ಸುರಕ್ಷಿತವೇ? ಎನ್ನುವ ಪ್ರಶ್ನೆ ಹಲವರಲ್ಲಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಉಪವಾಸವು ನಿಮ್ಮ ಹೃದಯಕ್ಕೆ ಒಳ್ಳೆಯದೇ?
ತಜ್ಞರ ಪ್ರಕಾರ ಉಪವಾಸವು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಮಾತ್ರವಲ್ಲದೆ ದೇಹವು ಶಕ್ತಿಯ ಮೂಲವಾಗಿ ಕೊಬ್ಬನ್ನು ಬಳಸಿಕೊಳ್ಳುವುದರಿಂದ ತೂಕ ಇಳಿಗೆ ಸಹಕಾರಿಯಾಗುತ್ತದೆ. ವ್ಯಾಯಾಮ ಮತ್ತು ಸಮತೋಲಿತ ಆಹಾರದಿಂದ ನಿಧಾನವಾಗಿ ತೂಕವನ್ನು ಇಳಿಸಿದರೆ ಹೃದಯದ ಆರೋಗ್ಯ ಸುಧಾರಿಸುತ್ತದೆ. ಆದರೆ ಆಹಾರವನ್ನು ತ್ಯಜಿಸಿ ವೇಗವಾಗಿ ತೂಕ ಇಳಿಸಿದರೆ ಅದು ಹೃದಯಕ್ಕೆ ಹಾನಿ ಉಂಟು ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಉಪವಾಸ ಮಾಡುವುದರಿಂದ ಆರೋಗ್ಯ ಲಾಭವೇನು?
- ಉಪವಾಸವು ಇದು ವ್ಯಕ್ತಿಯ ತೂಕ ನಷ್ಟ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಜತೆಗೆ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಆದಾಗ್ಯೂ, ದೀರ್ಘ ಕಾಲದವರೆಗೆ ಉಪವಾಸ ಮಾಡುವುದು ವಯಸ್ಸಾದವರಿಗೆ, ಮಧುಮೇಹ ಮತ್ತು ಹೃದಯ ಕಾಯಿಲೆ ಇರುವವರಿಗೆ ತೊಂದರೆಯಾಗಬಹುದು.
- ಉಪವಾಸವು ದೇಹದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ತಡೆದು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
- ದೇಹದ ಒಳಗಿನ ದೀರ್ಘಕಾಲದ ಉರಿಯೂತವು ಹೃದಯ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದ್ದು, ಉಪವಾಸವು ಊರಿಯುತ ನಿವಾರಣೆಗೆ ಸಹಕಾರಿ.
ಬೇಸಗೆಯಲ್ಲಿ ಮೂಗಿನಲ್ಲಿ ರಕ್ತ ಬರುವುದೇಕೆ? ಇದಕ್ಕೇನು ಪರಿಹಾರ?
ಪರಿಣಾಮವೇನು?
- ಹೃದಯಾಘಾತದ ಅಪಾಯ: ಅತೀಯಾಗಿ ಆಹಾರ ತ್ಯಜಿಸಿದರೆ ಹೃದಯ ಸಂಬಂಧಿ ಕಾಯಿಲೆಗಳಿಂದ ಮರಣ ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ.
- ಉಪವಾಸ ಮಾಡುವವರಲ್ಲಿ ಸ್ನಾಯುಗಳ ಶಕ್ತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
- ದೀರ್ಘಕಾಲದ ಉಪವಾಸದಿಂದ ನಿರ್ಜಲೀಕರಣ ಉಂಟಾಗಿ ಹೃದಯದ ಸಮಸ್ಯೆಗೆ ಕಾರಣ ವಾಗಬಹುದು. ಹಾಗಾಗಿ ಯಾವುದೇ ಉಪವಾಸ ಕಟ್ಟುಪಾಡುಗಳನ್ನು ಮಾಡುವ ಮೊದಲೇ ವೈದ್ಯರು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸುವುದು ಬಹಳ ಮುಖ್ಯ.
ಇಂಟರ್ಮಿಟೆಂಟ್ ಫಾಸ್ಟಿಂಗ್ ಎಂದರೇನು?
ಸಾಮಾನ್ಯವಾಗಿ ತೂಕ ಕಡಿಮೆ ಮಾಡಿಕೊಳ್ಳಲು ಎಲ್ಲರೂ ಡಯಟ್ ಮಾಡುತ್ತಾರೆ. ಜಂಕ್ ಫುಡ್, ಕೊಬ್ಬಿನ ಪದಾರ್ಥಗಳನ್ನು, ಸಿಹಿತಿಂಡಿಗಳನ್ನು ವರ್ಜಿಸುವುದು ಮತ್ತು ಅನ್ನ ಸೇವಿಸುವುದನ್ನು ಬಿಡುತ್ತಾರೆ. ಆದರೆ ಇಂಟರ್ಮಿಟೆಂಟ್ ಫಾಸ್ಟಿಂಗಿನಲ್ಲಿ ಹಾಗಲ್ಲ. ಒಂದು ದಿನದಲ್ಲಿ 16 ಗಂಟೆಗಳ ಕಾಲ ಉಪವಾಸವಿರುವುದು ಮತ್ತು ಉಳಿದ 8 ಗಂಟೆಗಳ ಕಾಲದಲ್ಲಿ ಮಾತ್ರ ಆಹಾರ ಸೇವಿಸುವುದೇ ಇಂಟರ್ಮಿಟೆಂಟ್ ಫಾಸ್ಟಿಂಗ್. ಉದಾಹರಣೆಗೆ ಸಂಜೆ ಆರು ಗಂಟೆ ಒಳಗೆ ಆಹಾರ ಸೇವಿಸಿ ಮರುದಿನ ಬೆಳಗ್ಗೆ 10 ಗಂಟೆಗೆ ತಿಂಡಿ ತಿಂದರೆ ಒಟ್ಟು 16 ಗಂಟೆ ಇಂಟರ್ಮಿಟೆಂಟ್ ಫಾಸ್ಟಿಂಗ್ ಮಾಡಿದಂತಾಗುತ್ತದೆ. ಆದರೆ ಈ ಅವಧಿಯಲ್ಲಿ ಯಾವುದೇ ರೀತಿಯ ಆಹಾರವನ್ನು ಸೇವಿಸುವಂತಿಲ್ಲ. ನೀರು ಮಾತ್ರ ಸೇವಿಸಬಹುದು. ಇದನ್ನು ವೈದ್ಯರ ಸಲಗೆ ಮೇರೇಗೆ ಮಾತ್ರವೇ ಮಾಡಬೇಕು.