ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶಿಗೆಲ್ಲಾ ಕಾಟಕ್ಕೆ ಕೇರಳಂ ಕಂಗಾಲು: ಜೂನ್‌ನಲ್ಲೇ 70 ಸೋಂಕು ಪ್ರಕರಣ ದಾಖಲು; ಏನಿದರ ಲಕ್ಷಣ?

Shigella: ಕೇರಳಂನಲ್ಲಿ ಈ ವರ್ಷ ಇದುವರೆಗೆ 146 ಶಿಗೆಲ್ಲಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಐವರು ಮೃತಪಟ್ಟಿದ್ದಾರೆ. ಜೂನ್ ತಿಂಗಳಲ್ಲೇ 70 ಪ್ರಕರಣಗಳು ವರದಿಯಾಗಿರುವುದು ಆತಂಕ ಹೆಚ್ಚಿಸಿದೆ. ಮಳೆಗಾಲದಲ್ಲಿ ನೀರಿನ ಕಲುಷಿತಗೊಂಡು ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ನಿಗಾ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಕೇರಳಂನಲ್ಲಿ ಶಿಗೆಲ್ಲಾ ಸೋಂಕಿನ ಅಬ್ಬರ: 146 ಪ್ರಕರಣ, 5 ಸಾವು

ಸಾಂದರ್ಭಿಕ ಚಿತ್ರ -

Profile
Sushmitha Jain Jun 22, 2026 4:06 PM

ತಿರುವನಂತಪುರಂ, ಜೂ. 22: ಕೇರಳಂನಲ್ಲಿ ಈ ವರ್ಷ ಇದುವರೆಗೆ 146 ಶಿಗೆಲ್ಲಾ (Shigella) ಸೋಂಕು ಪ್ರಕರಣಗಳು ದಾಖಲಾಗಿದ್ದು, ಕನಿಷ್ಠ ಐವರು ಮೃತಪಟ್ಟಿದ್ದಾರೆ. ಸೋಂಕು ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ನಿಗಾ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೀವ್ರಗೊಳಿಸಿದೆ. ಆರೋಗ್ಯ ಸಚಿವ ಕೆ. ಮುರಳೀಧರನ್ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ, ಮಾರ್ಚ್‌ನಲ್ಲಿ ಒಬ್ಬರು ಹಾಗೂ ಜೂನ್‌ನಲ್ಲಿ ನಾಲ್ವರು ಸಾವನ್ನಪ್ಪಿರುವ ಮಾಹಿತಿ ಬಹಿರಂಗಗೊಂಡಿದೆ. ಈ ವರ್ಷದ ಒಟ್ಟು 146 ಪ್ರಕರಣಗಳಲ್ಲಿ 70 ಪ್ರಕರಣಗಳು ಜೂನ್‌ನಲ್ಲೇ ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಜನವರಿಯಿಂದ ಜೂನ್‌ವರೆಗೆ ಕೋಝಿಕ್ಕೋಡ್‌ ಜಿಲ್ಲೆಯಲ್ಲಿ 74 ಪ್ರಕರಣಗಳು ದಾಖಲಾಗಿದ್ದು, ಅತಿ ಹೆಚ್ಚು ಸೋಂಕು ಕಂಡುಬಂದ ಜಿಲ್ಲೆ ಎನಿಸಿದೆ. ಮಲಪ್ಪುರಂ ಜಿಲ್ಲೆಯಲ್ಲಿ 25 ಪ್ರಕರಣಗಳು ಹಾಗೂ 2 ಸಾವುಗಳು ವರದಿಯಾಗಿವೆ. ತಿರುವನಂತಪುರಂ ಜಿಲ್ಲೆಯಲ್ಲಿ 25 ಪ್ರಕರಣಗಳು ದಾಖಲಾಗಿವೆ. ಪತ್ತನಂತಿಟ್ಟ, ಪಾಲಕ್ಕಾಡ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಈವರೆಗೆ ಯಾವುದೇ ಪ್ರಕರಣ ವರದಿಯಾಗಿಲ್ಲ.

ಶಿಗೆಲ್ಲಾ ಎಂದರೇನು?

ಶಿಗೆಲ್ಲಾ ಎನ್ನುವುದು ಬ್ಯಾಕ್ಟೀರಿಯಾದ ಒಂದು ಗುಂಪಾಗಿದ್ದು, ಇದು ಶಿಗೆಲ್ಲೋಸಿಸ್ (Shigellosis) ಎಂಬ ತೀವ್ರ ಅತಿಸಾರ ಸೋಂಕಿಗೆ ಕಾರಣವಾಗುತ್ತದೆ. ಕಲುಷಿತ ಆಹಾರ, ನೀರು ಮತ್ತು ಸೋಂಕಿತ ವ್ಯಕ್ತಿಗಳ ಸಂಪರ್ಕದ ಮೂಲಕ ಇದು ವೇಗವಾಗಿ ಹರಡುತ್ತದೆ.

ಸೋಂಕು ಹೆಚ್ಚಾಗಲು ಕಾರಣವೇನು?

ಮಳೆಗಾಲದಲ್ಲಿ ಕುಡಿಯುವ ನೀರಿನ ಮೂಲಗಳು ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚಾಗುವುದರಿಂದ ಶಿಗೆಲ್ಲಾ ಸೇರಿ ಹಲವು ನೀರಿನ ಮೂಲಕ ಹರಡುವ ರೋಗಗಳು ಹೆಚ್ಚಾಗುತ್ತವೆ. ಈ ಬಾರಿ ವಿಧಾನಸಭೆ ಚುನಾವಣೆಯ ಕಾರಣದಿಂದ ಮಳೆಗಾಲದ ಪೂರ್ವಭಾವಿ ಸ್ವಚ್ಛತಾ ಕಾರ್ಯಗಳು ಸಮರ್ಪಕವಾಗಿ ನಡೆಯದಿರುವುದು ಸೋಂಕು ಹೆಚ್ಚಲು ಕಾರಣವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಮನೆಯ ಬಾವಿಗಳಲ್ಲಿ ಸಮರ್ಪಕ ಕ್ಲೋರಿನೇಶನ್ ಇಲ್ಲದಿರುವುದು, ಕುಡಿಯುವ ನೀರಿನ ಮೂಲಗಳು ಶೌಚಾಲಯದ ಗುಂಡಿಗಳ ಸಮೀಪದಲ್ಲಿರುವುದು ಹಾಗೂ ಕೆಲವು ಹೋಟೆಲ್‌ಗಳಲ್ಲಿ ಕಲುಷಿತ ನೀರಿನ ಬಳಕೆ ಸೋಂಕು ಹರಡುವ ಪ್ರಮುಖ ಕಾರಣಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಗೆಲ್ಲಾ ಸೋಂಕಿನ ಲಕ್ಷಣಗಳು

  • ಅತಿಸಾರ (ಕೆಲವೊಮ್ಮೆ ರಕ್ತ ಮಿಶ್ರಿತ)
  • ಹೊಟ್ಟೆನೋವು ಮತ್ತು ಸೆಳೆತ
  • ಜ್ವರ
  • ವಾಂತಿ ಮತ್ತು ವಾಕರಿಕೆ
  • ಪದೇ ಪದೆ ಮಲ ವಿಸರ್ಜನೆ
  • ದೇಹದಲ್ಲಿ ನೀರಿನ ಕೊರತೆ (Dehydration)

ಬೇಸಿಗೆಯಿಂದ ಮಳೆಗಾಲಕ್ಕೆ: ತಪ್ಪಿಸಬೇಕಾದ ಹತ್ತು ಅಭ್ಯಾಸಗಳು

ಸೋಂಕು ಹೇಗೆ ಹರಡುತ್ತದೆ?

  • ಕಲುಷಿತ ಆಹಾರ ಸೇವನೆ
  • ಕಲುಷಿತ ಕುಡಿಯುವ ನೀರು
  • ಶೌಚಾಲಯ ಬಳಕೆಯ ನಂತರ ಕೈ ತೊಳೆಯದಿರುವುದು
  • ಸೋಂಕಿತ ವ್ಯಕ್ತಿಯ ಸಂಪರ್ಕ
  • ಸೋಂಕಿತ ಮೇಲ್ಮೈಗಳನ್ನು ಸ್ಪರ್ಶಿಸಿ ಬಾಯಿಗೆ ಕೈ ಹಾಕುವುದು

ಯಾರಿಗೆ ಹೆಚ್ಚು ಅಪಾಯ?

  • 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು
  • ವೃದ್ಧರು
  • ರೋಗನಿರೋಧಕ ಶಕ್ತಿ ಕಡಿಮೆ ಇರುವವರು
  • ಅಪೌಷ್ಟಿಕತೆಯಿಂದ ಬಳಲುವವರು
  • ತೀವ್ರ ನಿರ್ಜಲೀಕರಣಕ್ಕೊಳಗಾದವರು

ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ

ಬಹುತೇಕ ರೋಗಿಗಳು 5ರಿಂದ 7 ದಿನಗಳಲ್ಲಿ ಗುಣಮುಖರಾಗುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು, ORS ಸೇವನೆ ಹಾಗೂ ವಿಶ್ರಾಂತಿ ಮುಖ್ಯ. ಗಂಭೀರ ಪ್ರಕರಣಗಳಲ್ಲಿ ವೈದ್ಯರ ಸಲಹೆಯ ಮೇರೆಗೆ ಮಾತ್ರ ಆ್ಯಂಟಿಬಯಾಟಿಕ್‌ಗಳನ್ನು ಬಳಸಬೇಕು.

ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯುವುದು, ಸುರಕ್ಷಿತ ಕುಡಿಯುವ ನೀರು ಬಳಸುವುದು, ಸ್ವಚ್ಛ ಆಹಾರ ಸೇವಿಸುವುದು ಹಾಗೂ ಅಸ್ವಚ್ಛ ಪರಿಸರದಲ್ಲಿ ತಯಾರಿಸಿದ ಆಹಾರವನ್ನು ತಪ್ಪಿಸುವಂತೆ ಸಲಹೆ ನೀಡಿದೆ.