ಕೋಟೆ ಪ್ರದೇಶದ ಕುಟುಂಬಗಳ ಸ್ಥಳಾಂತರ ಗೊಂದಲ: 282 ಮನೆಗಳ ಪುನರ್ವಸತಿ ಸಮಸ್ಯೆ
ನಗರದ ಐತಿಹಾಸಿಕ ಬಹಮನಿ ಕೋಟೆ ಸಂರಕ್ಷಣೆಗೆ ಸರಕಾರ ಮುಂದಾಗಿದ್ದು, ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಕೋಟೆ ಪ್ರದೇಶದಲ್ಲಿ ನಿರ್ಮಾಣ ಆಗಿರುವ ಮನೆಗಳ ಸ್ಥಳಾಂತರಕ್ಕೆ ಕೋರ್ಟ್ ಆದೇಶ ನೀಡಿದೆ. ಆದೆರೆ ಹಿತಾಸಕ್ತಿ ಕೊರತೆಯಿಂದ ಕುಟುಂಬಗಳ ಸ್ಥಳಾಂತರ ಆಮೆಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
-
ದೇವೇಂದ್ರ ಜಾಡಿ
ಕಲಬುರಗಿ: ನಗರದ ಐತಿಹಾಸಿಕ ಬಹಮನಿ ಕೋಟೆ ಸಂರಕ್ಷಣೆಗೆ ಸರಕಾರ ಮುಂದಾಗಿದ್ದು, ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಕೋಟೆ ಪ್ರದೇಶದಲ್ಲಿ ನಿರ್ಮಾಣ ಆಗಿರುವ ಮನೆಗಳ ಸ್ಥಳಾಂತರಕ್ಕೆ ಕೋರ್ಟ್ ಆದೇಶ ನೀಡಿದೆ. ಆದೆರೆ ಹಿತಾಸಕ್ತಿ ಕೊರತೆಯಿಂದ ಕುಟುಂಬಗಳ ಸ್ಥಳಾಂತರ ಆಮೆಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಆದೇಶವಿದೆ: ತೆರವು ಮಾತ್ರ ಬಾಕಿ: ಕೋಟೆಯ ಸಂರಕ್ಷಿತ ಪ್ರದೇಶದಲ್ಲಿರುವ ಮನೆಗಳನ್ನು ತೆರವು ಗೊಳಿಸಿ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ನ್ಯಾಯಾಲಯದ ನಿರ್ದೇಶನವಿದ್ದರೂ, ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಕೋಟೆ ಸಂರಕ್ಷಣೆ, ಸೌಂದರ್ಯೀಕರಣ ಹಾಗೂ ಪ್ರವಾ ಸೋದ್ಯಮ ಅಭಿವೃದ್ಧಿಯ ಯೋಜನೆಗಳಿಗೂ ಹಿನ್ನಡೆ ಯಾಗಿದೆ. ನಿವಾಸಿಗಳ ಸ್ಥಳಾಂತರಕ್ಕೂ ಮುನ್ನ ಪುನರ್ವ ಸತಿ, ಪರಿಹಾರ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಪ್ರಮುಖ ಸವಾಲಾಗಿದೆ.
62 ರಿಂದ 282 ಮನೆಗಳ ಲೆಕ್ಕ: ಕೋಟೆಯೊಳಗೆ ಹಿಂದೆ 62 ಮನೆಗಳು ಮಾತ್ರ ಅಧಿಕೃತವಾಗಿದ್ದವು ಎನ್ನಲಾಗುತ್ತಿದ್ದರೆ, ಇದೀಗ ಪುನರ್ವಸತಿಗಾಗಿ 282 ಮನೆಗಳನ್ನು ಗುರುತಿಸಲಾಗಿದೆ. ಸಂರಕ್ಷಿತ 100 ಮೀಟರ್ ವ್ಯಾಪ್ತಿಯಲ್ಲಿ ಅನಧಿಕೃತ ನಿವಾಸಿಗಳಿರುವುದಾಗಿಯೂ ಸರಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ವರ್ಷಗಳ ಅವಧಿಯಲ್ಲಿ ಮನೆಗಳ ಸಂಖ್ಯೆ ಹೆಚ್ಚಾದ ಬಗೆ, ದಾಖಲೆಗಳ ಸ್ಥಿತಿ ಹಾಗೂ ಒತ್ತುವರಿ ವಿಸ್ತರಣೆಗೆ ಕಾರಣವಾದ ಅಂಶಗಳ ಬಗ್ಗೆ ಸ್ಪಷ್ಟತೆ ಅಗತ್ಯವಾಗಿದೆ.
ಸೌಲಭ್ಯ ಕಲ್ಪಿಸಿದ್ದು ಹೇಗೆ?: ಸಂರಕ್ಷಿತ ಪ್ರದೇಶದಲ್ಲಿರುವ ಮನೆಗಳಿಗೆ ಮನೆ ಸಂಖ್ಯೆ, ವಿದ್ಯುತ್, ನೀರು ಹಾಗೂ ರಸ್ತೆ ಸೌಲಭ್ಯಗಳು ದೊರೆತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸ್ಮಾರಕ ಸಂರಕ್ಷಣೆಗೆ ನಿರ್ದಿಷ್ಟ ನಿಯಮಗಳಿದ್ದರೂ, ಒತ್ತುವರಿ ವಿಸ್ತರಣೆಯ ಹಂತದಲ್ಲಿ ಸಂಬಂಧಿಸಿದ ಇಲಾಖೆಗಳು ಏಕೆ ಕ್ರಮ ಕೈಗೊಳ್ಳಲಿಲ್ಲ ಎಂಬುದಕ್ಕೂ ಉತ್ತರ ಬೇಕಿದೆ.
ವೈಭವಕ್ಕೆ ವಸತಿ ಪ್ರದೇಶದ ತಡೆ: ಬಹುಮನಿ ಕಾಲದ ಜಾಮಿಯಾ ಮಸೀದಿ, ಬೃಹತ್ ತೋಪು ಗಳು ಸೇರಿದಂತೆ ಕೋಟೆಯೊಳಗಿನ ಐತಿಹಾಸಿಕ ಸಂಪತ್ತು ಪ್ರವಾಸಿಗರನ್ನು ಸೆಳೆಯುವ ಸಾಮರ್ಥ್ಯ ಹೊಂದಿದೆ. ಆದರೆ ವಸತಿ ಪ್ರದೇಶ, ಅಸಮರ್ಪಕ ನಿರ್ವಹಣೆ ಮತ್ತು ಸಮಗ್ರ ಅಭಿವೃದ್ಧಿಯ ಕೊರತೆಯಿಂದ ಕೋಟೆಯ ಐತಿಹಾಸಿಕ ವೈಭವ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸೋದ್ಯಮಕ್ಕೆ ತೆರೆದುಕೊಂಡಿಲ್ಲ.
ಪುನರ್ವಸತಿಯೇ ಪ್ರಮುಖ ಸವಾಲು: ಕೋಟೆ ಸಂರಕ್ಷಣೆ ಹೆಸರಿನಲ್ಲಿ ನಿವಾಸಿಗಳನ್ನು ಏಕಾಏಕಿ ತೆರವುಗೊಳಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಮನೆ ಕಳೆದುಕೊಳ್ಳುವ ಕುಟುಂಬಗಳಿಗೆ ಪರ್ಯಾಯ ವಸತಿ, ಮೂಲಸೌಕರ್ಯ, ಪರಿಹಾರ ಹಾಗೂ ಜೀವನೋಪಾಯದ ಭದ್ರತೆ ಕಲ್ಪಿಸಿ ಹಂತ ಹಂತವಾಗಿ ಸ್ಥಳಾಂತರಿಸುವ ಅಗತ್ಯವಿದೆ. ಜತೆಗೆ ಕೋಟೆಯ ಸಂರಕ್ಷಿತ ಪ್ರದೇಶದಲ್ಲಿ ಹೊಸ ಒತ್ತುವರಿಗೆ ಅವಕಾಶವಾಗದಂತೆ ಕಟ್ಟುನಿಟ್ಟಿನ ಕ್ರಮವೂ ಅಗತ್ಯ.
ಜಿಲ್ಲಾಡಳಿತದ ಲೇಔಟ್ ಸಿದ್ಧತೆ: ಕೋಟೆಯೊಳಗಿನ ನಿವಾಸಿಗಳ ಸ್ಥಳಾಂತರಕ್ಕಾಗಿ ಜಿಡಳಿತ ಪರ್ಯಾಯ ಲೇಔಟ್ ಗುರುತಿಸಿದೆ. ಲೇಔಟ್ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ಬಳಿಕ ನಿವಾಸಿಗಳನ್ನು ಹಂತ ಹಂತವಾಗಿ ಸ್ಥಳಾಂತರಿಸುವ ಪ್ರಕ್ರಿಯೆ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ. ಕೋಟೆಯೊಳಗೆ ಮೊದಲಿನಿಂದಲೂ 282 ಮನೆಗಳಿದ್ದು, ಅವರ ಪುನರ್ವಸತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೋಟೆಯ ಭವಿಷ್ಯಕ್ಕೆ ಕಾಲಮಿತಿ ಬೇಕು: ಬಹುಮನಿ ಕೋಟೆ ಕಲಬುರಗಿಯಷ್ಟೇ ಅಲ್ಲ, ಕರ್ನಾಟಕದ ಐತಿಹಾಸಿಕ ಪರಂಪರೆಯ ಪ್ರಮುಖ ಸ್ಮಾರಕ. ಹೀಗಾಗಿ ನಿವಾಸಿಗಳ ಬದುಕಿಗೆ ನ್ಯಾಯ ಒದಗಿಸುವ ಜತೆಗೆ ಸ್ಮಾರಕದ ಸಂರಕ್ಷಣೆಯನ್ನೂ ಖಚಿತಪಡಿಸುವ ದ್ವಿಮುಖ ಪರಿಹಾರ ಅಗತ್ಯ. ಪುನರ್ವಸತಿ, ತೆರವು ಹಾಗೂ ಸಂರಕ್ಷಣೆಯನ್ನು ಸಮನ್ವಯಗೊಳಿಸಿ ಕಾಲಮಿತಿಯಲ್ಲಿ ಯೋಜನೆ ಜಾರಿಗೊಳಿಸಿದಾಗ ಮಾತ್ರ ಕೋಟೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ದಾರಿ ತೆರೆದುಕೊಳ್ಳ ಲಿದೆ.
ಸ್ಮಾರಕದೊಳಗೆ ಸೌಲಭ್ಯ: ಸಂರಕ್ಷಣೆಗೆ ಸವಾಲು ಸಂರಕ್ಷಿತ ಪ್ರದೇಶದಲ್ಲಿರುವ ಮನೆಗಳಿಗೆ ವಿದ್ಯುತ್, ನೀರು, ರಸ್ತೆ ಹಾಗೂ ಮನೆ ಸಂಖ್ಯೆ ಸೌಲಭ್ಯಗಳು ದೊರೆತಿರುವುದು ಆಡಳಿತದ ಮೇಲೆಯೇ ಪ್ರಶ್ನೆ ಮೂಡಿಸಿದೆ. ಸ್ಮಾರಕದ ಸಂರಕ್ಷಣಾ ವ್ಯಾಪ್ತಿಯಲ್ಲಿ ಹೊಸ ನಿರ್ಮಾಣಗಳಿಗೆ ಕಡಿವಾಣ ಹಾಕಬೇಕಿದ್ದ ವ್ಯವಸ್ಥೆಯ ಒತ್ತುವರಿ ವಿಸ್ತರಣೆಗೆ ಅವಕಾಶ ಹೇಗೆ ಸಿಕ್ಕಿತು ಎಂಬುದಕ್ಕೆ ಸ್ಪಷ್ಟ ಉತ್ತರ ಅಗತ್ಯವಾಗಿದೆ.
ಕೋಟೆಯೊಳಗಿನ ಮನೆಗಳ ಲೆಕ್ಕದ ಗೊಂದಲ
ಕೋಟೆಯೊಳಗೆ ಹಿಂದೆ 62 ಮನೆಗಳು ಅಧಿಕೃತವಾಗಿದ್ದವು ಎನ್ನಲಾಗುತ್ತಿದ್ದು, ಪುನರ್ವಸತಿಗಾಗಿ 282 ಮನೆಗಳನ್ನು ಗುರುತಿಸಲಾಗಿದೆ. ಸಂರಕ್ಷಿತ 100 ಮೀಟರ್ ವ್ಯಾಪ್ತಿಯಲ್ಲಿ ಅನಧಿಕೃತ ನಿವಾಸಿಗಳಿರು ವುದಾಗಿಯೂ ಮಾಹಿತಿ ನೀಡಲಾಗಿದೆ. ಮನೆಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ದಾಖಲೆಗಳ ಪರಿಶೀಲನೆ ಹಾಗೂ ಒತ್ತುವರಿ ವಿಸ್ತರಣೆಗೆ ಕಾರಣವಾದ ಅಂಶಗಳ ಬಗ್ಗೆ ಸಮಗ್ರ ಪರಿಶೀಲನೆ ಅಗತ್ಯವಾಗಿದೆ.
![]()
ಕೋಟೆಯೊಳಗಿನ ನಿವಾಸಿಗಳ ಸ್ಥಳಾಂತರಕ್ಕೆ ಪರ್ಯಾಯ ಲೇಔಟ್ ಗುರುತಿಸಲಾಗಿದೆ. ಲೇಔಟ್ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ನಿವಾಸಿಗಳನ್ನು ಹಂತ ಹಂತವಾಗಿ ಸ್ಥಳಾಂತರಿಸಲಾಗುವುದು. ಕೋಟೆಯೊಳಗೆ ಮೊದಲಿನಿಂದಲೂ 282 ಮನೆಗಳಿದ್ದು, ಅವರ ಪುನರ್ವಸತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
- ಇಕ್ರಂ ಶರೀಫ್, ಜಿಲ್ಲಾಧಿಕಾರಿ, ಕಲಬುರಗಿ
![]()
ನ್ಯಾಯಾಲಯದ ಆದೇಶವಿದ್ದರೂ ಕೋಟೆ ಒತ್ತುವರಿ ತೆರವುಗೊಳಿ ಸದಿರುವುದು ಜಿಲ್ಲಾಡಳಿತದ ವೈಫಲ್ಯ. ವೋಟ್ ಬ್ಯಾಂಕ್ ರಾಜಕಾರಣ ಬಿಟ್ಟು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಕಾಲಮಿತಿಯಲ್ಲಿ ಒತ್ತುವರಿ ತೆರವು ಮಾಡಿ ಕೋಟೆ ಸಂರಕ್ಷಿಸದಿದ್ದರೆ ಅಭಿವೃದ್ಧಿ ಹೆಸರಿನಲ್ಲಿ ಗುತ್ತಿಗೆದಾರರಿಗಷ್ಟೇ ಲಾಭ.
-ಮುತ್ತಣ್ಣ ಎಸ್. ನಡಗೇರಿ, ಕಲ್ಯಾಣ ನಾಡು ವಿಕಾಸ ವೇದಿಕೆ ಕಲಬುರಗಿ ಅಧ್ಯಕ್ಷ