ಸುಪ್ರೀಂ ಕೋರ್ಟ್ ಸೂಚಿಸಿದ ಸ್ಥಳದಲ್ಲಿ ದೀಪ ಬೆಳಗಿಲ್ಲವೇಕೆ? ತಮಿಳುನಾಡು ಮುಖ್ಯಮಂತ್ರಿ ವಿಜಯ್‌ಗೆ ರಾಜ್ಯಪಾಲರ ತರಾಟೆ
Karthigai Deepam: ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿರುವ ತಿರುಪ್ಪರಂಕುಂದ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗದ ವಿಚಾರಕ್ಕೆ ಸಂಬಂಧಿಸಿ ವಿವಾದ ಭುಗಿಲೆದ್ದಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ವಿವಾದಿತ ಕಲ್ಲಿನ ಸ್ತಂಭದಲ್ಲಿ (ದೀಪತ್ತೂಣ್) ದೀಪ ಬೆಳಗದೆ ವಿಜಯ್ ನೇತೃತ್ವದ ಸರ್ಕಾರದ ನಡೆಯನ್ನು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಪ್ರಶ್ನಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಚೆನ್ನೈ, ನ. 25: ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿರುವ ತಿರುಪ್ಪರಂಕುಂದ್ರಂ ಬೆಟ್ಟದ (Thirupparankundram hill) ಮೇಲೆ ಕಾರ್ತಿಕ ದೀಪ (Karthigai Deepam) ಬೆಳಗುವ ವಿಚಾರಕ್ಕೆ ಸಂಬಂಧಿಸಿ ರಾಜಕೀಯ ಕಚ್ಚಾಟ ಮುಂದುವರಿದಿದೆ. ಕಾರ್ತಿಕ ದೀಪೋತ್ಸವ ಪ್ರಯುಕ್ತ ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ವಿವಾದಿತ ಕಲ್ಲಿನ ಸ್ತಂಭದಲ್ಲಿ (ದೀಪತ್ತೂಣ್) ದೀಪ ಬೆಳಗದೆ ವಿಜಯ್ ನೇತೃತ್ವದ ಸರ್ಕಾರ ಉದ್ಧಟತನ ತೋರಿದ್ದು, ಇದಕ್ಕೆ ಬಿಜೆಪಿ ಕಿಡಿಕಾರಿದೆ. ಇದೀಗ ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ (Rajendra Arlekar) ರಂಗಕ್ಕಿಳಿದಿದ್ದು, ವಿವರಣೆ ಕೋರಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿ ದೀಪತ್ತೂಣ್‌ನಲ್ಲಿ ದೀಪ ಬೆಳಗಿಸದೇ ಇರುವುದಕ್ಕೆ ಕಾರಣ ಕೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ನವೆಂಬರ್ 24ರ ಸಂಜೆ ದೀಪತ್ತೂಣ್ ಬದಲಾಗಿ ಸಾಂಪ್ರದಾಯಿಕ ಸ್ಥಳವಾದ ಉಚ್ಚಿ ಪಿಳ್ಳೈಯಾರ್ ಮಂಟಪದಲ್ಲೇ ದೀಪ ಬೆಳಗಿಸಲಾಗಿದ್ದು, ಮಧುರೈನಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಭಾರತೀಯ ಸಂವಿಧಾನದ 167(ಬಿ) ವಿಧಿಯನ್ನು ಬಳಸಿ ಅರ್ಲೇಕರ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಇದರ ಪ್ರಕಾರ ರಾಜ್ಯದ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ರಾಜ್ಯಪಾಲರು ಕೇಳುವ ಮಾಹಿತಿಯನ್ನು ಒದಗಿಸುವ ಜವಾಬ್ದಾರಿ ಮುಖ್ಯಮಂತ್ರಿ ಮೇಲಿದೆ.
ದೀಪಸ್ತಂಭ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ವಿಜಯ್ ಸರ್ಕಾರ ಕ್ಷಮೆಯಾಚನೆ
ಸಮರ್ಥಿಸಿಕೊಂಡ ದೇಗುಲ ಆಡಳಿತ ಮಂಡಳಿ
ದೀಪತ್ತೂಣ್ ಬದಲು ಉಚ್ಚಿ ಪಿಳ್ಳೈಯಾರ್ ಮಂಟಪದಲ್ಲೇ ದೀಪ ಬೆಳಗಿಸಿರುವುದನ್ನು ದೇಗುಲ ಆಡಳಿತ ಮಂಡಳಿ ಸಮರ್ಥಿಸಿಕೊಂಡಿದೆ. "ಬೆಟ್ಟದ ಮೇಲಿರುವ ಉಚ್ಚಿ ಪಿಳ್ಳೈಯಾರ್ ದೇವಾಲಯದ ಬಳಿಯ ದೀಪ ಮಂಟಪದಲ್ಲಿ ಕಾರ್ತಿಕ ದೀಪವನ್ನು ಬೆಳಗಿಸುವುದು ವಾಡಿಕೆ" ಎಂದು ತಿಳಿಸಿದೆ.
ದೀಪವನ್ನು ಎಂದಿನಂತೆ ನಿಗದಿತ ಸ್ಥಳದಲ್ಲಿಯೇ ಬೆಳಗಿಸಬೇಕು ಮತ್ತು ಸಂಪ್ರದಾಯಗಳನ್ನು ಪಾಲಿಸಬೇಕು ಎನ್ನುವುದನ್ನು ಸರ್ವಾನುಮತದಿಂದ ನಿರ್ಣಯಿಸಲಾಯಿತು ಎಂದು ಹೇಳಿದೆ.
ಬುಧವಾರ ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲಿಸಲು ವಿಫಲವಾಗಿದ್ದಕ್ಕೆ ಕ್ಷಮೆ ಕೋರಿದರು. "ದೀಪಸ್ತಂಭದಲ್ಲಿ ದೀಪವನ್ನು ಬೆಳಗಿಸಲು ಸಾಧ್ಯವಾಗದಿರುವುದಕ್ಕೆ ನಾನು ಕ್ಷಮೆ ಕೋರುತ್ತೇನೆ" ಎಂದು ಹೇಳಿದರು. ನವೆಂಬರ್ 20ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ, ದೀಪಸ್ತಂಭದಲ್ಲಿ ದೀಪ ಬೆಳಗಲು ಎಲ್ಲ ಸಿದ್ಧತೆ ಕೈಗೊಂಡಿದ್ದಾಗಿ ತಿಳಿಸಿದರು.
ದಶಕಗಳಿಂದಲೂ ಬೆಟ್ಟದ ಕೆಳಭಾಗದ ಇಳಿಜಾರಿನಲ್ಲಿರುವ ಉಚ್ಚಿ ಪಿಳ್ಳೈಯಾರ್ ದೇವಾಲಯದ ಸಮೀಪವಿರುವ ದೀಪ ಮಂಟಪದಲ್ಲಿ ದೀಪವನ್ನು ಬೆಳಗಿಸಲಾಗುತ್ತಿದೆ. ಬೆಟ್ಟದ ಮೇಲ್ಭಾಗದಲ್ಲಿ ಹಜರತ್ ಸುಲ್ತಾನ್ ಸಿಕಂದರ್ ಬಾದೂಷಾ ಔಲಿಯಾ ದರ್ಗಾದಿಂದ ಸುಮಾರು 50 ಮೀಟರ್ ದೂರದಲ್ಲಿರುವ ದೀಪತ್ತೂಣ್ ಬಳಿ ದೀಪವನ್ನು ಬೆಳಗಿಸಲು ಹಿಂದೂ ಸಂಘಟನೆಗಳು ಅನುಮತಿ ಕೋರಿದ್ದವು. ಅದರಂತೆ ಸುಪ್ರೀಂ ಕೋರ್ಟ್ ಕೂಡ ಅನುಮತಿ ನೀಡಿತ್ತು.
ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ದೀಪತೂನ್‌ನಲ್ಲಿ ಜ್ಯೋತಿ ಬೆಳಗದ ವಿಜಯ್ ಸರ್ಕಾರ
ದೇಗುಲ ಮಂಡಳಿ ಮೇಲೆ ಗೂಬೆ ಕೂರಿಸಿದ ರಾಜ್ಯ ಸರ್ಕಾರ
ಸುಪ್ರೀಂ ಕೋರ್ಟ್‌ವ ಆದೇಶವನ್ನು ಉಲ್ಲಂಘಿಸಿರುವ ಈ ಪ್ರಕರಣದಿಂದ ನುಣುಚಿಕೊಳ್ಳಲು ವಿಜಯ್ ಸರ್ಕಾರ ಯತ್ನಿಸುತ್ತಿದೆ. ದೇಗುಲದ ಆಡಳಿತ ಮಂಡಳಿ ವಿರುದ್ಧವೇ ಗೂಬೆ ಕೂರಿಸಿದೆ. ದೇವಾಲಯದ ಟ್ರಸ್ಟಿ ಮಂಡಳಿಯು ಬೆಟ್ಟದ ಮೇಲೆ ಈ ಧಾರ್ಮಿಕ ವಿಧಿಯನ್ನು ನೆರವೇರಿಸಲು ಅನುಮತಿ ನೀಡಲು ನಿರಾಕರಿಸಿದ್ದಲ್ಲದೆ, ಉಚ್ಚಿ ಪಿಳ್ಳೈಯಾರ್ ದೇವಾಲಯದ ಸಮೀಪವಿರುವ ಸಾಂಪ್ರದಾಯಿಕ ಸ್ಥಳದಲ್ಲೇ ದೀಪ ಬೆಳಗಿಸಿದೆ ಎಂದು ತಿಳಿಸಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.