ನಾರಾಯಣ ಹೆಲ್ತ್ ಆಸ್ಪತ್ರೆಯ ಅಪರೂಪದ ವೈದ್ಯಕೀಯ ಸಾಧನೆ: ಕೃತಕ ಹೃದಯ ಪಂಪ್ ನೆರವಿನಿಂದ ಮೂವರಿಗೆ ಮರುಜೀವ
ಬೆಂಗಳೂರಿನ ನಾರಾಯಣ ಹೆಲ್ತ್‌ನ ವೈದ್ಯರು ಸಾವಿನ ದವಡೆಯಲ್ಲಿದ್ದ ಮೂವರು ಹದಿಹರೆಯದವರಿಗೆ ಹೊಸ ಬದುಕು ನೀಡಿದ್ದಾರೆ. ಕೊನೆಯ ಹಂತದ ಹೃದಯ ವೈಫಲ್ಯದಿಂದ ಬಳಲುತ್ತಿದ್ದ ಈ ಯುವಕರಿಗೆ ಸೂಕ್ತ ದಾನಿಗಳಿಂದ ಹೃದಯ ಸಿಗುವವರೆಗೆ ಜೀವಂತವಾಗಿರಿಸಲು ಅತ್ಯಾಧುನಿಕ ಕೃತಕ ಹೃದಯ ಪಂಪ್‌ಗಳನ್ನು ಅಳವಡಿಸುವ ಮೂಲಕ ಅವರ ಪ್ರಾಣ ಉಳಿಸುವಲ್ಲಿ ವೈದ್ಯಕೀಯ ತಂಡ ಯಶಸ್ವಿಯಾಗಿದೆ.
-
ಬೆಂಗಳೂರು, ಮೇ 11: ನಾರಾಯಣ ಹೆಲ್ತ್‌ನ ವೈದ್ಯರು ಸಾವಿನ ದವಡೆಯಲ್ಲಿದ್ದ ಮೂವರು ಹದಿಹರೆಯದವರಿಗೆ ಹೊಸ ಬದುಕು ನೀಡಿದ್ದಾರೆ. ಕೊನೆಯ ಹಂತದ ಹೃದಯ ವೈಫಲ್ಯದಿಂದ ಬಳಲುತ್ತಿದ್ದ ಈ ಯುವಕರಿಗೆ ಸೂಕ್ತ ದಾನಿಗಳಿಂದ ಹೃದಯ ಸಿಗುವವರೆಗೆ ಜೀವಂತವಾಗಿರಿಸಲು ಅತ್ಯಾಧುನಿಕ ಕೃತಕ ಹೃದಯ ಪಂಪ್‌ಗಳನ್ನು ಅಳವಡಿಸುವ ಮೂಲಕ ಅವರ ಪ್ರಾಣ ಉಳಿಸುವಲ್ಲಿ ವೈದ್ಯಕೀಯ ತಂಡ ಯಶಸ್ವಿಯಾಗಿದೆ.
ನಾರಾಯಣ ಹೆಲ್ತ್‌ನ ತಜ್ಞ ವೈದ್ಯರ ತಂಡವು ಈ ರೋಗಿಗಳಿಗೆ ವೆಂಟ್ರಿಕ್ಯುಲರ್ ಅಸಿಸ್ಟ್ ಡಿವೈಸಸ್ (ವಿಎಡಿ) ಎಂಬ ಸುಧಾರಿತ ತಂತ್ರಜ್ಞಾನವನ್ನು ಬಳಸಿ ಜೀವ ರಕ್ಷಕ ಚಿಕಿತ್ಸೆ ಒದಗಿಸಿದೆ. ಅವರಿಗೆ ಸೂಕ್ತ ಹೃದಯ ಲಭ್ಯವಾಗುವವರೆಗಿನ ನಿರ್ಣಾಯಕ ಅವಧಿಯಲ್ಲಿ ಈ ಸಾಧನಗಳು ಜೀವನಾಡಿಯಾಗಿ ಕಾರ್ಯನಿರ್ವಹಿಸಿವೆ. ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಈ ಮೂವರು ಹದಿಹರೆಯದವರ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಪ್ರತ್ಯೇಕವಾಗಿ ದಾಖಲಾಗಿದ್ದ ಇವರಿಗೆ ತಕ್ಷಣದ ವೈದ್ಯಕೀಯ ನೆರವಿನ ಅಗತ್ಯವಿತ್ತು. ಇದೀಗ ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆಯ ನಂತರ, ಮೂವರೂ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ತಮ್ಮ ಮನೆಗಳಿಗೆ ಮರಳಿದ್ದಾರೆ.
ಬದುಕಿನ ಭರವಸೆಯ ಸೇತುವೆ
ಈ ಹದಿಹರೆಯದ ರೋಗಿಗಳು ಆಸ್ಪತ್ರೆಗೆ ದಾಖಲಾದಾಗ, ಅವರ ಹೃದಯಗಳು ಜೀವ ಉಳಿಸಿಕೊಳ್ಳಲು ಬೇಕಾದ ಕನಿಷ್ಠ ಶಕ್ತಿಯನ್ನೂ ಹೊಂದಿರಲಿಲ್ಲ. ಈ ಅಮೂಲ್ಯವಾದ ಸಮಯದಲ್ಲಿ ಅವರ ಜೀವ ಉಳಿಸಲು, ವೈದ್ಯರು ವಿಫಲವಾಗುತ್ತಿದ್ದ ಹೃದಯದ ಕೆಲಸವನ್ನು ನಿರ್ವಹಿಸುವ ಯಾಂತ್ರಿಕ ಪಂಪ್‌ಗಳನ್ನು ಅಳವಡಿಸಿದರು. ಈ ಸಾಧನಗಳು ಒಂದು ಸೇತುವೆಯಂತೆ ಕಾರ್ಯನಿರ್ವಹಿಸಿ, ಅವರ ಹೃದಯದ ಸ್ಥಿತಿಯನ್ನು ಸ್ಥಿರಗೊಳಿಸಿದವು. ಅಲ್ಲದೆ, ಹೃದಯ ಕಸಿಗಾಗಿ ಆದ್ಯತೆಯ ಪಟ್ಟಿಯಲ್ಲಿದ್ದ ಈ ಯುವ ರೋಗಿಗಳನ್ನು ಅಲ್ಲಿಯವರೆಗೆ ಜೀವಂತವಾಗಿರಿಸಲು ನೆರವಾದವು.
ಅಂಗಾಂಗ ದಾನಿಗಳ ಕೊರತೆ ಇರುವ ಮತ್ತು ಕಾಯುವ ಪಟ್ಟಿ ದೀರ್ಘವಾಗಿರುವ ಈ ಭಾಗದಲ್ಲಿ, ಕೇವಲ 28 ರಿಂದ 45 ದಿನಗಳ ಅವಧಿಯಲ್ಲಿ ಮೂವರೂ ರೋಗಿಗಳಿಗೆ ಸರಿಹೊಂದುವ ಹೃದಯಗಳು ದೊರೆತಿರುವುದು ವಿಶೇಷ.
ಮೂರು ಸ್ಫೂರ್ತಿದಾಯಕ ಕಥೆಗಳು
ಈ ಮೂರು ಪ್ರಕರಣಗಳು ಆಸ್ಪತ್ರೆಯ ಮಕ್ಕಳ ಹೃದಯ ವಿಭಾಗದ (ಪೀಡಿಯಾಟ್ರಿಕ್ ಹಾರ್ಟ್ ಪ್ರೋಗ್ರಾಮ್) ಕಾರ್ಯದಕ್ಷತೆ ಮತ್ತು ಯಶಸ್ಸನ್ನು ಸಾಬೀತುಪಡಿಸಿವೆ.
ಪ್ರಕರಣ 1: ಹೃದಯದ ತೀವ್ರ ಅಸಮರ್ಪಕ ಕಾರ್ಯನಿರ್ವಹಣೆ ಮತ್ತು ಅಪಾಯಕಾರಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಬಳಲುತ್ತಿದ್ದ ಹದಿಹರೆಯದ ರೋಗಿಗೆ, ಹೃದಯದ ಎರಡೂ ಭಾಗಗಳಿಗೆ ನೆರವು ನೀಡುವ ಯಾಂತ್ರಿಕ ವ್ಯವಸ್ಥೆಯನ್ನು (ಬಿಐವಿಎಡಿ) ಅಳವಡಿಸಲಾಗಿತ್ತು. 45 ದಿನಗಳ ಕಾಲ ಈ ಸಾಧನದ ಬೆಂಬಲದಲ್ಲಿದ್ದ ಅವರಿಗೆ ನಂತರ ಹೃದಯ ಕಸಿ ಮಾಡಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಕೇವಲ ಕೆಲವೇ ವಾರಗಳಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆಯಾದರು.
ಪ್ರಕರಣ 2: ಹೃದಯದ ಸ್ನಾಯುಗಳು ಹಿಗ್ಗುವ ಮತ್ತು ದುರ್ಬಲಗೊಳ್ಳುವ ಕಾಯಿಲೆಯಿಂದ ಬಳಲುತ್ತಿದ್ದ ಈ ಹದಿಹರೆಯದ ರೋಗಿಯನ್ನು ಯಾಂತ್ರಿಕ ಪಂಪ್ ಮೂಲಕ 28 ದಿನಗಳ ಕಾಲ ಜೀವಂತವಾಗಿರಿಸಲಾಗಿತ್ತು. ತದನಂತರ ಅವರಿಗೆ ಯಶಸ್ವಿಯಾಗಿ ಹೃದಯ ಕಸಿ ಮಾಡಲಾಯಿತು.
ಪ್ರಕರಣ 3: ಬಾಲ್ಯದಲ್ಲಿ ಕ್ಯಾನ್ಸರ್ ಗೆದ್ದು ಬಂದಿದ್ದ ಈ ಬಾಲಕ, ಈ ಹಿಂದೆ ಗೆಡ್ಡೆಯ ಕಾರಣದಿಂದ ಒಂದು ಕಿಡ್ನಿಯನ್ನು ಕಳೆದುಕೊಂಡಿದ್ದನು. ಈಗ ಹೃದಯ ವೈಫಲ್ಯದ ರೂಪದಲ್ಲಿ ಅವನಿಗೆ ಹೊಸ ಸವಾಲು ಎದುರಾಗಿತ್ತು. 30 ದಿನಗಳ ಕಾಲ ಕೃತಕ ಹೃದಯ ಪಂಪ್‌ನ ನೆರವಿನಲ್ಲಿದ್ದ ಈತನಿಗೆ ಯಶಸ್ವಿಯಾಗಿ ಹೃದಯ ಕಸಿ ಮಾಡಲಾಯಿತು. ಇದು ಎಲ್ಲಾ ಅಡೆತಡೆಗಳ ನಡುವೆಯೂ ಸಾಧಿಸಿದ ಅದ್ಭುತ ಚಿಕಿತ್ಸೆಯಾಗಿದೆ.
ಭಾರತದಲ್ಲಿ ವಿಶೇಷ ಚಿಕಿತ್ಸೆಯ ಹೊಸ ಅಧ್ಯಾಯ
ಆಸ್ಪತ್ರೆಯ ಈ ವೈದ್ಯಕೀಯ ಮೈಲಿಗಲ್ಲು ಭಾರತದಲ್ಲಿ ಲಭ್ಯವಿರುವ ಸುಧಾರಿತ ವೈದ್ಯಕೀಯ ಚಿಕಿತ್ಸೆಗಳಲ್ಲಿನ ಮಹತ್ವದ ಬದಲಾವಣೆಯನ್ನು ತೋರಿಸುತ್ತದೆ. ಈ ಹಿಂದೆ, ಇಂತಹ ಸಂಕೀರ್ಣ ಚಿಕಿತ್ಸೆಗಳು ಪ್ರಪಂಚದಾದ್ಯಂತ ಕೇವಲ ಬೆರಳಣಿಕೆಯಷ್ಟು ವಿಶೇಷ ಕೇಂದ್ರಗಳಲ್ಲಿ ಮಾತ್ರ ಲಭ್ಯವಿದ್ದವು.
ಈ ಕುರಿತು ನಾರಾಯಣ ಹೆಲ್ತ್‌ನ ಮಕ್ಕಳ ಹೃದಯ ವೈಫಲ್ಯ ವಿಭಾಗದ ಮುಖ್ಯಸ್ಥ ಡಾ. ಶಶಿರಾಯ್ ಸುಬ್ರಮಣ್ಯ ಎಚ್.ಎಸ್. ಮಾತನಾಡಿ, ʼಈ ಯುವ ರೋಗಿಗಳು ಬದುಕುವ ಸಾಧ್ಯತೆ ತೀರಾ ಕಡಿಮೆ ಇತ್ತು. ದಾನಿಗಳಿಂದ ಹೃದಯ ಲಭ್ಯವಾಗುವವರೆಗೆ ಅವರನ್ನು ಜೀವಂತವಾಗಿರಿಸಲು ಕೃತಕ ಪಂಪ್‌ಗಳನ್ನು ಬಳಸಿದ್ದು ದೇಶದ ಹೃದಯ ವೈಫಲ್ಯ ಚಿಕಿತ್ಸಾ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆʼ ಎಂದು ತಿಳಿಸಿದ್ದಾರೆ.
ನಾರಾಯಣ ಹೆಲ್ತ್‌ನ ಕಾರ್ಡಿಯಾಕ್ ಸರ್ಜರಿ ವಿಭಾಗದ ಹಿರಿಯ ಕನ್ಸಲ್ಟೆಂಟ್ ಆಗಿರುವ ಡಾ. ವರುಣ್ ಶೆಟ್ಟಿ ಮಾತನಾಡಿ, ʼಈ ಕಳೆದ ದಶಕಗಳಲ್ಲಿ ಈ ಹಿಂದೆ ಯಾವುದೇ ಆಯ್ಕೆಗಳಿಲ್ಲದ ಕುಟುಂಬಗಳಿಗೆ ಇಂತಹ ಸುಧಾರಿತ ತಂತ್ರಜ್ಞಾನಗಳು ಲಭ್ಯವಾಗುವಂತೆ ಮಾಡಲು ನಾವು ಶ್ರಮಿಸಿದ್ದೇವೆ. ಇಂದು ಉತ್ತಮ ವ್ಯವಸ್ಥೆಗಳು ಮತ್ತು ಕೈಗೆಟುಕುವ ದರದ ಚಿಕಿತ್ಸೆಯ ಮೇಲೆ ಗಮನ ಹರಿಸುವ ಮೂಲಕ, ಭಾರತದಲ್ಲಿ ಇಂತಹ ಜೀವ ಉಳಿಸುವ ಚಿಕಿತ್ಸೆಗಳು ಒದಗಿಸುವುದು ಸಾಧ್ಯವಾಗಿವೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಾಯಾರಿದಾಗ ಯಾವ ನೀರು ಉತ್ತಮ ?
ನಾರಾಯಣ ಹೆಲ್ತ್‌ನ ಪೀಡಿಯಾಟ್ರಿಕ್ ಇಂಟೆನ್ಸಿವ್ ಕೇರ್ ನಿರ್ದೇಶಕ ಡಾ. ರಿಯಾನ್ ಸುಕುಮಾರ್ ಶೆಟ್ಟಿ ಮಾತನಾಡಿ, ʼಈ ರೋಗಿಗಳು ಮೊದಲ ಬಾರಿಗೆ ಆಸ್ಪತ್ರೆಗೆ ಬಂದಾಗ, ಅವರು ಬದುಕುವುದು ಅಸಾಧ್ಯವೆಂಬಂತಿತ್ತು. ವಿಎಡಿ ಸಾಧನಗಳು ಜೀವ ಉಳಿಸುವ ಸೇತುವೆಗಳಂತೆ ಕಾರ್ಯನಿರ್ವಹಿಸಿ, ದಾನಿಗಳ ಹೃದಯ ಸಿಗುವವರೆಗೆ ಅವರನ್ನು ಕಾಪಾಡಿದವು. ಇಂದು ಅವರು ತಮ್ಮ ಕುಟುಂಬಗಳೊಂದಿಗೆ ನಗುನಗುತ್ತಾ ಮನೆಗೆ ಮರಳುತ್ತಿರುವುದನ್ನು ನೋಡುವುದು ನಮ್ಮ ಇಡೀ ತಂಡಕ್ಕೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆʼ ಎಂದು ಹೇಳಿದ್ದಾರೆ.