Vishwavani Health: ಜೆನ್ ಝೀಗಳಲ್ಲಿ ಹೆಚ್ಚುತ್ತಿದೆ ಎಚ್ಐವಿ ಸೋಂಕಿತರ ಸಂಖ್ಯೆ; ಕಾರಣವೇನು?
ಅಸುರಕ್ಷಿತ ಲೈಂಗಿಕತೆಯಿಂದ ಬರುವ ಕಾಯಿಲೆಗಳ ಬಗ್ಗೆ ಅರಿವಿದ್ದರೂ ಜೆನ್ ಝೀಗಳಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಹಲವು ಕಾರಣಗಳಿದ್ದರೂ ಯುವ ಜನರಲ್ಲಿ ತೃಪ್ತಿ ಎಂಬುದು ಇಲ್ಲದೇ ಇರುವುದೇ ಮುಖ್ಯ ಕಾರಣ ಎಂದಿದ್ದಾರೆ ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ. ಜೆನ್ ಝೀಗಳಲ್ಲಿಎಚ್ಐವಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಅವರು ನೀಡಿರುವ ಕಾರಣಗಳು ಇಲ್ಲಿವೆ.
ಡಾ. ಸುತ್ತೂರು ಮಾಲಿನಿ -
ಬೆಂಗಳೂರು: ಇದು ಟೆಕ್ ಯುಗ. ಎಲ್ಲವು ಗೊತ್ತಿದೆ, ಬಯಸಿದ್ದೆಲ್ಲ ಸಿಗಬೇಕು ಎನ್ನುವ ಮಕ್ಕಳು ಎಲ್ಲೋ ಒಂದು ಕಡೆ ದಾರಿ ತಪ್ಪುತ್ತಿದ್ದಾರೆ. ಇದರ ಪರಿಣಾಮವೇ ಜೆನ್ ಝೀಗಳಲ್ಲಿ (Gen Z) ಎಚ್ಐವಿ (HIV) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಎನ್ನುತ್ತಾರೆ ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಮಾಲಿನಿ (Dr. Suttur Malini). ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್ ಚಾನೆಲ್‌ನಲ್ಲಿ ಸ್ವಾತಿ ಕೃಷ್ಣ ಆಚಾರ್ಯ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.
1997ರಿಂದ 2012ರ ಮಧ್ಯದ ಅವಧಿಯಲ್ಲಿ ಹುಟ್ಟಿರುವವರನ್ನು ಜೆನ್ ಝೀಗಳೆಂದು ಕರೆಯುತ್ತಾರೆ. ಇವರು ತಮ್ಮನ್ನು ತಾವು ತುಂಬಾ ಬುದ್ದಿವಂತರು ಎನ್ನುತ್ತಿದ್ದಾರೆ. ಸ್ಮಾರ್ಟ್ ಎಂದುಕೊಂಡು ಕೆಲವು ವಿಷಯಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಜೆನ್ ಝೀಗಳಲ್ಲಿ ಎಚ್ಚರಿಕೆ ತುಂಬಾ ಅಗತ್ಯ. ಯಾಕೆಂದರೆ ಎಚ್ಐವಿ ಸೋಂಕಿತರಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಲೈಂಗಿಕತೆಯಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಇರುವುದೇ ಯುವಜನರಲ್ಲಿ ಈ ಸೋಂಕು ಹೆಚ್ಚಾಗಲು ಮುಖ್ಯ ಕಾರಣ ಎಂದು ಅವರು ಹೇಳಿದರು.
ಡಾ. ಸುತ್ತೂರು ಮಾಲಿನಿ ಅವರೊಂದಿಗಿನ ಸಂದರ್ಶನ:
ಹೇಗೆ ಬಂತು?
ಎಲ್ಲ ವೈರಸ್ ಕಾಯಿಲೆಗಳಂತೆ ಎಚ್ಐವಿ ಸೋಂಕು ಕೂಡ ಪ್ರಾಣಿಗಳಿಂದಲೇ ಮನುಷ್ಯನಿಗೆ ಬಂದಿರುವುದು. ಇದರ ಉಗಮ ಆಫ್ರಿಕಾದಲ್ಲಿ ಆಗಿದೆ ಎನ್ನಲಾಗುತ್ತದೆ. ಆಫ್ರಿಕಾದ ಮಂಗಗಳಿಂದ ಇದು ಬಂದಿದೆ. ಕೆಲವೊಂದು ವೈರಸ್‌ಗಳಿಂದ ಪ್ರಾಣಿಗಳಿಗೆ ಏನೂ ಆಗುವುದಿಲ್ಲ. ಅವುಗಳ ದೇಹದ ಒಂದು ಅಂಗದಲ್ಲಿ ಅದು ಸೇರಿಕೊಂಡಿರುತ್ತದೆ. ಆದರೆ ಮನುಷ್ಯ ಆ ಪ್ರಾಣಿಗಳ ಸಂಪರ್ಕಕ್ಕೆ ಬಂದಾಗ ಅವನಿಗೆ ವೈರಸ್ ಸೋಂಕು ತಗಲುತ್ತದೆ. ಅದು ಅವನ ದೇಹದ ವಿವಿಧ ಅಂಗಾಂಗಗಳ ಮೇಲೆ ದಾಳಿ ನಡೆಸುತ್ತದೆ ಎಂದರು.
ತಾಯಿ ಹಾಲು ಮಕ್ಕಳಿಗೆ ಅಮೃತವೇಕೆ? ವಿಜ್ಞಾನ ಹೇಳುವುದೇನು?
ಎಚ್ಐವಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು 1900ರಲ್ಲಿ. 1930ರಲ್ಲಿ ಹೆಚ್ಚಾಗಿತ್ತು. ಬಳಿಕ ಅದು 1950ರಲ್ಲಿ ಪತ್ತೆಯಾಗಿತ್ತು. ಇದು ಕಾಡಿಗೆ ಬೇಟೆ ಹೋದವರಿಂದಾಗಿ ಮನುಷ್ಯರ ಸಂಪರ್ಕಕ್ಕೆ ಬಂದಿತ್ತು. ಸೋಂಕಿತ ಪ್ರಾಣಿ ಅಥವಾ ವ್ಯಕ್ತಿಯ ರಕ್ತ ತಾಗಿದರೆ ಕೂಡ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ಅವರು ತಿಳಿಸಿದರು.
ಎಚ್ಐವಿ ಸೋಂಕಿನ ವೈರಸ್ ಆರ್‌ಎನ್‌ಎ ಎಂದು ಗುರುತಿಸಲ್ಪಟ್ಟಿದೆ. ಇದು ಅನುವಂಶೀಯ ವೈರಸ್. ಇದು ರೂಪಾಂತರಗೊಳ್ಳುತ್ತಲೇ ಇರುವುದರಿಂದ ಅದಕ್ಕೆ ಸರಿಯಾದ ರೀತಿಯಲ್ಲಿ ಔಷಧವನ್ನು ಕೊಟ್ಟು ಗುಣಪಡಿಸಲು ಸಾಧ್ಯವಾಗುವುದಿಲ್ಲ ಎಂದರು.
ಕೆಲವೊಂದು ವೈರಸ್ ದೇಹದ ಕೆಲವೊಂದು ಭಾಗಗಳನ್ನು ಆಕ್ರಮಿಸಿಕೊಂಡು ಅಲ್ಲೇ ಬೆಳೆಯುತ್ತದೆ. ಎಚ್‌ಐವಿ ಎನ್ನುವುದು ಸಿಡಿ4 ಜೀವಕೋಶದಲ್ಲಿರುತ್ತದೆ. ಇದು ದೇಹದಲ್ಲಿ ರೋಗ ನಿರೋಧಕ ಪ್ರತಿರೋಧ ಶಕ್ತಿಯ ಮುಖ್ಯ ಕಮಾಂಡರ್. ಇದು ನಾಶವಾದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯೇ ಇರುವುದಿಲ್ಲ ಎಂದು ಅವರು ತಿಳಿಸಿದರು.
ಒಮ್ಮೆ ಎಚ್ಐವಿ ಸೋಂಕು ತಗಲಿತು ಎಂದರೆ ಅದನ್ನು ನಾಶ ಮಾಡಲು ಸಾಧ್ಯವಿಲ್ಲ. ಆದರೆ ಅದು ಹೆಚ್ಚಾಗದಂತೆ ತಡೆಯಬಹುದು. ಎಚ್‌ಐವಿ ಬಂದ ತಕ್ಷಣ ಅದು ಏಡ್ಸ್ ಆಗೋದಿಲ್ಲ. ಹೀಗಾಗಿ ಅದು ದೇಹದಲ್ಲಿ ಇದೆ ಎನ್ನುವುದು ತಿಳಿಯುವ ಮೊದಲೇ ಸಾಕಷ್ಟು ಮಂದಿಗೆ ಹರಡಿರುತ್ತದೆ ಎಂದು ಅವರು ವಿವರಿಸಿದರು.
ಎಚ್‌ಐವಿ ರೋಗಿಗಳನ್ನು ಚಿಕಿತ್ಸೆ ಮಾಡುವ ವೈದ್ಯರು, ದಾದಿಯರು ಇದರ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು. ಇದು ಹೆಚ್ಚಾಗಿ ಲೈಂಗಿಕ ಸಂಪರ್ಕ, ರಕ್ತ, ಸೂಜಿಗಳು, ತಾಯಿಯಿಂದ ಮಗುವಿಗೆ ಹರಡುವ ಸಾಧ್ಯತೆ ಇದೆ. ಇವತ್ತು ಜೆನ್ ಝೀಗಳು ನನ್ನಿಷ್ಟ ನನ್ನ ಜೀವನ ಎನ್ನುವಂತೆ ಬದುಕುತ್ತಿದ್ದಾರೆ. ಅವರಿಗೆ ಎಲ್ಲ ಗೊತ್ತಿರುತ್ತದೆ. ಆದರೆ ಲೈಂಗಿಕ ಸುರಕ್ಷತೆ ವಿಚಾರದಲ್ಲಿ ಅವರು ಎಡವುತ್ತಿದ್ದಾರೆ ಎಂದರು.
ಹೆಚ್ಚು ಜನರೊಂದಿಗೆ ಸೆಕ್ಸ್ ಮಾಡುವುದೇ ಸಾಧನೆ ಎನ್ನುತ್ತಿರುವ ಮನೋಭಾವವೇ ಇವತ್ತು ಎಚ್‌ಐವಿ ಹೆಚ್ಚಾಗಲು ಮುಖ್ಯ ಕಾರಣ. ಇದಕ್ಕೆ ಮುಖ್ಯವಾಗಿ ಪ್ರೇರಣೆ ನೀಡುತ್ತಿರುವುದು ಸಾಮಾಜಿಕ ಮಾಧ್ಯಮಗಳು. ಅಪರಿಚಿತರೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ತುಂಬಾ ಅಪಾಯಕಾರಿ ಎಂದು ಸುತ್ತೂರು ಮಾಲಿನಿ ತಿಳಿಸಿದರು.
ಹಿಂದೆಲ್ಲ ಭಾರತದಲ್ಲಿ ಲೈಂಗಿಕ ಕಾಯಿಲೆಗಳು ತುಂಬಾ ಕಡಿಮೆ ಇದ್ದವು. ಯಾಕೆಂದರೆ ಕುಟುಂಬಕ್ಕೆ ನಾವು ಹೆಚ್ಚಿನ ಆದ್ಯತೆ ಕೊಡುತ್ತಿದ್ದೆವು. ಒಂದು ಗಂಡಸಿಗೆ ಒಬ್ಬಳೇ ಮಹಿಳೆ ಎನ್ನುವುದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೆವು. ಲೈಂಗಿಕತೆಯನ್ನು ಕೂಡ ನಾವು ಭಕ್ತಿ ಎನ್ನುವಂತೆ ಕಾಣುತ್ತಿದ್ದೆವು ಹೀಗಾಗಿ ಇಂತಹ ಕಾಯಿಲೆಗಳು ಅಪರೂಪವಾಗಿದ್ದವು ಎಂದರು.
ಇವತ್ತು ಯುವಜನರಲ್ಲಿ ಮಾದಕ ವಸ್ತುಗಳ ಸೇವನೆ ಕೂಡ ಹೆಚ್ಚಾಗಿದೆ. ಇದನ್ನು ಸೇವಿಸಿದ ಬಳಿಕ ಅವರೇನು ಮಾಡುತ್ತಾರೆ ಎನ್ನುವ ಪ್ರಜ್ಞೆಯೇ ಅವರಲ್ಲಿ ಇರುವುದಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಯಾವುದರಲ್ಲೂ ಅವರಿಗೆ ತೃಪ್ತಿ ಇರುವುದಿಲ್ಲ. ಎಲ್ಲವನ್ನು ಲೆಕ್ಕಾಚಾರದಲ್ಲಿ ಅಳೆಯುತ್ತಾರೆ. ಡೊಕೋಮೈನ್ ಹಾರ್ಮೋನ್ ಸರಿಯಾಗಿ ಬಿಡುಗಡೆಯಾಗದೆ ತೃಪ್ತಿ ದೊರೆಯುವುದಿಲ್ಲ. ಇದರಲ್ಲಿ ದಿನಚರಿ, ಆಹಾರ ಪದ್ಧತಿ ಕೂಡ ಕಾರಣವಾಗಿರುತ್ತದೆ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಕಾಯಿಲೆಗೆ ತಕ್ಕಂತೆ ಆಹಾರ ವಿತರಿಸಲು ಆರೋಗ್ಯ ಇಲಾಖೆ ಚಿಂತನೆ
ಮುಂಭಾಗದ ಮೆದುಳು ಆಕ್ಟಿವೇಟ್ ಆಗದೇ ಇದ್ದರೆ ಈ ರೀತಿಯ ಅನಾಹುತಗಳು ಉಂಟಾಗುತ್ತದೆ. ಯಾವುದು ಕೂಡ ಶೇಕಡಾ 100ರಷ್ಟು ಸುರಕ್ಷತೆ ಒದಗಿಸುವುದಿಲ್ಲ. ಹೀಗಾಗಿ ಸ್ವಯಂ ನಿಯಂತ್ರಣ ಹೊಂದಿರುವುದು ಬಹಳ ಮುಖ್ಯ. ಯಾವುದೇ ಸಂಬಂಧದಲ್ಲಿ ಮುಂದುವರಿಯುವ ಮುನ್ನ ಅರಿವಿರಲಿ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ನಮ್ಮ ಬುದ್ಧಿ ನಮ್ಮ ಕೈಲಿರಲಿ ಎಂಬುದು ನೆನಪಿನಲ್ಲಿರಲಿ ಎನ್ನುತ್ತಾರೆ ಡಾ. ಸುತ್ತೂರು ಮಾಲಿನಿ.