ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Summer Health Tips: ಏರುತ್ತಿರುವ ತಾಪಮಾನದಲ್ಲಿ ತಂಪಾಗಿರುವುದು ಹೇಗೆ?

ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯ ದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಬೇಸಿಗೆಯಲ್ಲಿ ಕಠಿಣವಾದ ಬಿಸಿಲು ಮತ್ತು ಏರುತ್ತಿರುವ ತಾಪಮಾನದಲ್ಲಿ, ಕೆಲವೊಂದು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಅವಶ್ಯಕವಾಗಿದೆ.ಈ ಬೇಸಿಗೆಯ ದಿನಗಳನ್ನು ತಂಪಾಗಿ ಕಳೆಯುವ ಬಗೆ ಹೇಗೆ? ಆರೋಗ್ಯ ಸಮಸ್ಯೆ ಉಂಟಾ ಗದಂತೆ, ನಿರ್ಜಲೀಕರಣಕ್ಕೆ ಒಳಗಾಗದಂತೆ ತಡೆಯಲು ಕೆಲವು ಟಿಪ್ಸ್ ಇಲ್ಲಿದೆ

ಬೇಸಿಗೆಯಲ್ಲಿ ದೇಹ ತಂಪಾಗಿಡಲು ಇಲ್ಲಿವೆ ತಜ್ಞರ ಸಲಹೆ!

summer health

Profile Pushpa Kumari Mar 4, 2025 5:00 AM

ನವದೆಹಲಿ: ಬೇಸಿಗೆಯ ಬಿಸಿ ನಿಧಾನವಾಗಿ ಏರುತ್ತಿದೆ. ಹಲವೆಡೆಗಳಲ್ಲಿ ಈಗಾಗಲೇ ಬಿಸಿಗಾಳಿಯ ಹೊಡೆತ ಆರಂಭವಾಗಿದೆ. ನಮ್ಮ ರಾಜ್ಯದಲ್ಲೇ ಕೆಲವು ಸ್ಥಳಗಳಲ್ಲಿ ಈಗಾಗಲೇ ೪೦ ಡಿಗ್ರಿ ಸೆ. ದಾಟಿದೆ ತಾಪ. ಮುಂಬರುವ ದಿನಗಳಲ್ಲಿ ಪಾದರಸ ಇನ್ನಷ್ಟು ಏರಿ, ಎಲ್ಲರನ್ನೂ ಕುದಿಯುವ ಬಿಂದುವಿನಲ್ಲಿ ನಿಲ್ಲಿಸಿದರೂ ಅಚ್ಚರಿಯಿಲ್ಲ. ಹಾಗಿರುವಾಗ, ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯ ದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಬೇಸಿಗೆ ಯಲ್ಲಿ ಕಠಿಣವಾದ ಬಿಸಿಲು ಮತ್ತು ಏರುತ್ತಿರುವ ತಾಪಮಾನದಲ್ಲಿ, ಕೆಲ ವೊಂದು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಅವಶ್ಯಕ ವಾಗಿದೆ. ಹಾಗಾಗಿ ಈ ಬೇಸಿಗೆಯ ದಿನಗಳನ್ನು ತಂಪಾಗಿ ಕಳೆಯುವ ಬಗೆ ಹೇಗೆ? ಆರೋಗ್ಯ ಸಮಸ್ಯೆ ಉಂಟಾಗದಂತೆ, ನಿರ್ಜಲೀಕರಣಕ್ಕೆ ಒಳ ಗಾಗದಂತೆ, ನಮ್ಮನ್ನು ನಾವು ಕ್ಷೇಮವಾಗಿ ಇರಿಸಿಕೊಳ್ಳುವುದು ಹೇಗೇ? (Summer Health Tips)

ಆಹಾರ ಹೇಗಿರಬೇಕು?: ದಿನದಲ್ಲಿ ಸಾಕಷ್ಟು ನೀರು ಕುಡಿಯುವುದು ಮುಖ್ಯ. ಅಗತ್ಯವಿದ್ದಲ್ಲಿ ಒಆರ್‌ಎಸ್‌ ಮತ್ತು ಇತರ ಎಲೆಕ್ಟ್ರೋಲೈಟಿಕ್‌ ದ್ರವಗಳನ್ನು ಸೇವಿಸಬೇಕು. ಮಾತ್ರವಲ್ಲ, ಋತುಮಾನಕ್ಕೆ ಸೂಕ್ತವಾದ, ನೀರಿನಂಶ ಹೆಚ್ಚಿರುವ ರಸಭರಿತ ಹಣ್ಣು ಮತ್ತು ತರಕಾರಿಗಳು ಆಹಾರದ ಭಾಗ ವಾಗಿರಬೇಕು. ಮನೆಯಲ್ಲೇ ತಯಾರಿಸಿದ ನಿಂಬೆಹಣ್ಣಿನ ಪಾನಕ, ಹಣ್ಣಿನ ರಸಗಳು, ಲಸ್ಸಿ ಅಥವಾ ಮಜ್ಜಿಗೆಯಂಥವು ದೇಹಕ್ಕೆ ಅಗತ್ಯ. ಇವುಗಳನ್ನು ಸೇವಿಸುವಾಗ ಅಲ್ಪ ಪ್ರಮಾಣದಲ್ಲಿ ಉಪ್ಪು ಸೇರಿಸಿಕೊಳ್ಳಬಹುದು.

ಅತಿಯಾಗಿ ಉಪ್ಪು ಮತ್ತು ಸಕ್ಕರೆ ಇರುವಂಥ ಆಹಾರಗಳಿಂದ ದೂರ ಇರುವುದು ಸೂಕ್ತ. ಅಲ್ಕೋಹಾಲ್‌, ಚಹಾ, ಕಾಫಿ ಮತ್ತು ಸೋಡಾ ಅಥವಾ ಕೋಲಾದಂಥ ಪೇಯಗಳು ಈಗ ಹವಾಮಾನಕ್ಕೆ ಸೂಕ್ತವಲ್ಲ. ಇಂಥಾ ಸಕ್ಕರೆಭರಿತ ಪೇಯಗಳಿಂದ ದೇಹದಲ್ಲಿ ನೀರಿನ ಪ್ರಮಾಣ ಮತ್ತಷ್ಟು ಕುಸಿಯುತ್ತದೆ. ಹೊಟ್ಟೆಯ ಸಮತೋಲವೂ ಹಾಳಾಗುತ್ತದೆ.

ಅತ್ಯಂತ ಹೆಚ್ಚು ಪ್ರೊಟೀನ್‌ ಹೊಂದಿದ, ಹಳೆಯ ಅಥವಾ ಹಳಸಿದ ಆಹಾರ ಪದಾರ್ಥಗಳಿಂದ ದೂರವಿರಿ. ಮಾಂಸಾಹಾರದಂಥ ಹೆಚ್ಚಿನ ಮಸಾಲೆ ಯುಕ್ತ ಮತ್ತು ಪ್ರೊಟೀನ್‌ಭರಿತ ಆಹಾರಗಳು ಜೀರ್ಣವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತವೆ. ಇದರಿಂದ ದೇಹದ ಉಷ್ಣತೆ ಹೆಚ್ಚಿ, ನೀರಿ ನಂಶ ಕಡಿಮೆಯಾಗುತ್ತದೆ. ಇದರಿಂದ ಹೊಟ್ಟೆಯಲ್ಲಿ ನೋವು, ಅಜೀರ್ಣದ ತೊಂದರೆಗಳು ಕಾಣಿಸಿಕೊಳ್ಳಬಹುದು. ಬದಲಿಗೆ, ಸುಲಭವಾಗಿ ಪಚನ ವಾಗುವ ಆಹಾರಗಳ ಸೇವನೆ ಯೋಗ್ಯ. ಮಜ್ಜಿಗೆ, ಎಳನೀರು ಮುಂತಾದವು ಅಗತ್ಯವಾಗಿ ದೇಹಕ್ಕೆ ಬೇಕು.

ಧಿರಿಸು: ತಿಳಿ ಬಣ್ಣದ, ಸಡಿಲವಾದ ಹತ್ತಿಯ ಬಟ್ಟೆಗಳನ್ನೇ ಧರಿಸಿ. ಮಧ್ಯಾಹ್ನ ೧೨ ಗಂಟೆ ಮತ್ತು ೩ ಗಂಟೆಯ ನಡುವಿನ ಅವಧಿಯಲ್ಲಿ ಸಾಧ್ಯವಾದಷ್ಟೂ ಬಿಸಿಲಿಗೆ ಹೊರಗೆ ಹೋಗದೆ ಜಾಗ್ರತೆ ಮಾಡಿ. ಹಾಗೆ ಹೋಗುವುದು ಅನಿ ವಾರ್ಯವಾದರೆ ತಲೆಗೆ ಟೋಪಿ, ಛತ್ರಿಗಳನ್ನು ಬಳಸಿ. ಮನೆಯೊಳಗೆ ನೇರವಾಗಿ ಬಿಸಿಲು ಬರುವಂಥ ಕಿಟಕಿ-ಬಾಗಿಲುಗಳನ್ನು ಹಗಲಿನಲ್ಲಿ ಮುಚ್ಚಿ, ಪರದೆ ಹಾಕುವುದು ಕ್ಷೇಮ. ರಾತ್ರಿ ತಂಪಾದ ನಂತರ ಈ ಕಿಟಕಿಗಳನ್ನು ತೆರೆಯುವುದು ಸೂಕ್ತ.

ತಂಪು ಪಾನೀಯಗಳು: ಬಿಸಿಲ ಬೇಗೆ ತಡೆಯಲು ಅನುಕೂಲವಾಗುವಂತೆ ಎಳನೀರು, ನಿಂಬೆ ಪಾನಕ, ಮಜ್ಜಿಗೆ ಅಥವಾ ಲಸ್ಸಿಗಳ ಸೇವನೆ ಒಳ್ಳೆ ಯದು. ಅದಲ್ಲದೆ, ಇನ್ನೂ ಕೆಲವು ತಂಪು ಪಾನೀಯಗಳನ್ನು ಹೀಗೆ ತಯಾರಿಸಬಹುದು.

ಪುದೀನಾ ಪಂಚ್:‌ ಒಂದು ಲೀಟರ್‌ನಷ್ಟು ನೀರಿಗೆ ಕೆಲವು ಸೌತೇಕಾಯಿ ಹೋಳುಗಳು, ಒಂದೆರಡು ಅನಾನಸ್‌ ತುಂಡುಗಳು ಮತ್ತು ಹಲವಾರು ಎಲೆ ಪುದೀನಾಗಳನ್ನು ಹಾಕಿಡಿ. ಒಂದು ತಾಸಿನ ನಂತರ ಘಮಘಮಿಸುವ ಪುದೀನಾ ಪಂಚ್‌ ಸಿದ್ಧ. ಇಂಥದ್ದೇ ಹಲವು ಬಗೆಯ ಪೇಯಗಳನ್ನು ನಿಮ್ಮ ರುಚಿಗೆ ತಕ್ಕಂತೆ ನೀವೇ ತಯಾರಿಸಿಕೊಳ್ಳಬಹುದು.

ತರಕಾರಿ ಜ್ಯೂಸ್‌: ಕ್ಯಾರೆಟ್‌, ಸೌತೇಕಾಯಿ, ಬೀಟ್‌ರೂಟ್‌ ಮುಂತಾದ ತರಕಾರಿಗಳನ್ನು ಉಪಯೋಗಿಸಿ ಜ್ಯೂಸ್‌ ತಯಾರಿಸಬಹುದು. ನಾನಾ ಹಣ್ಣುಗಳ ರಸವನ್ನೂ ಮನೆಯಲ್ಲೇ ಮಾಡಿಕೊಳ್ಳಬಹುದು. ಆದಷ್ಟೂ ಪ್ಯಾಕ್‌ ಮಾಡಿದ ಪೇಯಗಳನ್ನು ದೂರವಿರಿಸಿ. ಇವುಗಳು ಸೇವನೆಗೆ ಸುಲಭ ಹೌದಾದರೂ, ಆರೋಗ್ಯಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚು.

ಇದನ್ನು ಓದಿ: Health Tips: ಕಿಡ್ನಿ ಸಮಸ್ಯೆ ಇದ್ದವರು ಈ ಆಹಾರ ಕ್ರಮದಿಂದ ದೂರವಿರಿ

ಕೋಕಂ ಪಾನಕ: ಬೇಸಿಗೆಯ ಪಿತ್ತ ನಿವಾರಣೆಗೆ ಅತ್ತ್ಯುತ್ತಮ ಆಯ್ಕೆಯಿದು. ಎರಡು ಕೋಕಂ ಹಣ್ಣುಗಳನ್ನು ತೊಳೆದು ಬಿಡಿಸಿಕೊಳ್ಳಿ. ಹೊರಗಿನ ಸಿಪ್ಪೆ ಮತ್ತು ಒಳಗಿನ ಬೀಜದ ಸಮೇತ ಇಡೀ ಹಣ್ಣನ್ನು ಅರ್ಧ ಲೀಟರ್‌ ನೀರಲ್ಲಿ ನೆನೆಸಿ ಕಿವುಚಿಡಿ. ಅರ್ಧ ಗಂಟೆಯ ನಂತರ, ಹಣ್ಣು ತನ್ನ ಕೆಂಪಾದ ರಸ ವನ್ನು ನೀರಿಗೆ ಬಿಟ್ಟಿರುತ್ತದೆ. ಹಣ್ಣಿನ ಭಾಗಗಳನ್ನು ಸೋಸಿ ತೆಗೆಯಿರಿ. ಕೋಕಂ ರಸದ ನೀರಿಗೆ ರುಚಿಗೆ ಬೇಕಷ್ಟು ಬೆಲ್ಲ, ಚಿಟಿಕೆ ಉಪ್ಪು ಮತ್ತು ಏಲಕ್ಕಿ ಪುಡಿ ಬೆರೆಸಿ ಸೇವಿಸಿ.

ತಂಬುಳಿಗಳು: ಬ್ರಾಹ್ಮಿ ಅಥವಾ ಒಂದೆಲಗ, ನಿಂಬೆಹುಲ್ಲು, ಬಸಳೆ ಇಲ್ಲವೇ ಪಾಲಕ್‌ನಂಥ ಸೊಪ್ಪುಗಳು, ನೆಲ್ಲಿಕಾಯಿ, ಮುಂತಾದ ಹಲವಾರು ಅಡುಗೆ ಮನೆಯ ವಸ್ತುಗಳಿಂದ ಸುಲಭವಾಗಿ ತಂಪು ತಂಬುಳಿಗಳನ್ನು ತಯಾರಿಸಿ
ಕೊಳ್ಳಬಹುದು. ಇದಕ್ಕೆ ರುಚಿಗೆ ತಕ್ಕಂತೆ ಬೆಲ್ಲ, ಮಜ್ಜಿಗೆಗಳನ್ನು ಬೆರೆಸಿ ಕೊಂಡರೆ, ಕುಡಿಯುವುದಕ್ಕೆ ಮಾತ್ರವಲ್ಲ, ಅನ್ನದ ಜೊತೆಗೆ ಊಟಕ್ಕೂ ಉಪಯೋಗಿಸಬಹುದು.