ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Holi Skincare Tips: ಹೋಳಿ ಆಡಲು ಇಷ್ಟ: ತ್ವಚೆಗೆ ಕಷ್ಟವೇ? ಇಲ್ಲಿದೆ ಟಿಪ್ಸ್‌

Holi Skincare Tips: ಮಾರ್ಚ್‌ 14ರಂದು ರಂಗು ರಂಗಿನ ಹೋಳಿ ಹಬ್ಬ. ಈಗಾಗಲೇ ಹಲವರು ಈ ಬಣ್ಣದೋಕುಳಿಯಲ್ಲಿ ಮಿಂದೇಳಲು ಸಿದ್ದತೆ ಆರಂಭಿಸಿದ್ದಾರೆ. ಆದರೆ ರಂಗಿನಲ್ಲಿ ತೋಯ್ದರೆ ಕೆಲವರಿಗೆ ಚರ್ಮ ಕೆಂಪಾಗುವುದು, ಉರಿ, ತುರಿಕೆ, ಚರ್ಮವೆಲ್ಲ ಒಣಗಿದ, ಬಿರಿದ ಅನುಭವ-ಮುಂತಾದ ಸಮಸ್ಯೆ ಕಾಡುತ್ತದೆ. ಇದಕ್ಕೇನು ಮಾಡಬೇಕು? ಸಿಂಪಲ್‌: ಈ ಟಿಪ್ಸ್‌ ಫಾಲೋ ಮಾಡಿ.

ಹೋಳಿ ವೇಳೆ ತ್ವಚೆ ಸಂರಕ್ಷಣೆಗೆ ಈ ಟಿಪ್ಸ್‌ ಫಾಲೋ ಮಾಡಿ

ಸಾಂದರ್ಭಿಕ ಚಿತ್ರ.

Profile Ramesh B Mar 9, 2025 7:00 AM

ಬೆಂಗಳೂರು: ಹೋಳಿ (Holi) ಹಬ್ಬ ಸಮೀಪದಲ್ಲಿದೆ. ರಂಗಿನಾಟ ಆಡುವುದಕ್ಕೆ ಒಂದಿಷ್ಟು ತಯಾರಿಯಂತೂ ಬೇಕಲ್ಲವೇ? ಅಂಗಡಿಯಿಂದ ಬಣ್ಣದ ಪುಡಿ ಮತ್ತು ಒಂದಿಷ್ಟು ಸಿಹಿಗಳನ್ನು ತಂದರೆ ಮುಗಿಯಿತಲ್ಲ ತಯಾರಿ, ಇನ್ನೇನು? ಆದರೆ ಓಕುಳಿ ಆಟ ಶುರುವಾದರೆ ಸ್ವಲ್ಪಕ್ಕೆ ಮುಗಿಯುವುದಿಲ್ಲ, ಬಣ್ಣದ ಭೂತಗಳಂತೆ ಸರ್ವತ್ರ ಬಣ್ಣಗಳಲ್ಲಿ ಮಿಂದೆದ್ದಾಗಲೇ ಹೋಳಿ ಹಬ್ಬಕ್ಕೆ ಅರ್ಥ. ಆದರೆ ಈ ಪರಿಯಲ್ಲಿ ರಂಗಿನಲ್ಲಿ ತೋಯ್ದರೆ ಚರ್ಮದ ಗತಿಯೇನು? ಎಷ್ಟು ತೊಳೆದರೂ ಹೋಗದಿರುವ ಬಣ್ಣ, ಅಲ್ಲಲ್ಲಿ ಚರ್ಮ ಕೆಂಪಾಗುವುದು, ಉರಿ, ತುರಿಕೆ, ಚರ್ಮವೆಲ್ಲ ಒಣಗಿದ, ಬಿರಿದ ಅನುಭವ… (Holi Skincare Tips) ಬಣ್ಣದಾಟದ ನಂತರ ಇವೆಲ್ಲ ಆದರೆ ಏನು ಮಾಡುವುದು?

ಮೊದಲಿಗೆ ನೈಸರ್ಗಿಕ ಬಣ್ಣಗಳನ್ನೇ ರಂಗಿನಾಟಕ್ಕೆ ಆಯ್ದುಕೊಳ್ಳಿ. ಕಾರಣ, ಅಂಗಡಿಯಲ್ಲಿ ದೊರೆಯುವ ರಾಸಾಯನಿಕ ಬಣ್ಣಗಳು ಮತ್ತು ಕೆಲವು ಗಾಢ ವರ್ಣಗಳು ಚರ್ಮದ ರಂಧ್ರಗಳನ್ನೆಲ್ಲ ಮುಚ್ಚಿ ಹಾಕಿ, ತ್ವಚೆಗೆ ಉಸಿರಾಡುವುದಕ್ಕೇ ತೊಂದರೆ ತಂದು ಬಿಡುತ್ತವೆ. ಸೂಕ್ಷ್ಮ ಚರ್ಮದವರಿಗಂತೂ ಒಂದಿನ ಆಡಿದ ಬಣ್ಣದೋಕುಳಿಯು ವಾರಗಟ್ಟಲೆ ಚರ್ಮಕ್ಕೆ ಹೊಸ ರಂಗೇರಿಸಿಬಿಡುತ್ತದೆ. ಅಂದರೆ ಕೆಂಪಾಗಿಸಿ ಅಲರ್ಜಿ ತಂದು ಬಿಡುತ್ತದೆ. ಇದನ್ನೆಲ್ಲ ನೆನಪಿಸಿಕೊಂಡರೆ ಓಕುಳಿ ಆಡುವುದೇ ಬೇಡ ಎನಿಸಿದರೆ ಅಚ್ಚರಿಯಿಲ್ಲ. ಆದರೆ ಹೋಳಿ ಹಬ್ಬಕ್ಕೆ ಪೂರ್ವದಲ್ಲೇ ಕೆಲವು ಸಿದ್ಧತೆಗಳನ್ನು ಮಾಡಿಕೊಂಡರೆ, ಚರ್ಮಕ್ಕಾಗುವ ಹಾನಿಯಲ್ಲಿ ತಪ್ಪಿಸಬಹುದು. ಬಣ್ಣದಾಟವನ್ನೂ ಆಡಬಹುದು. ಅದಕ್ಕೇನು ಮಾಡಬೇಕು?

ಈ ಸುದ್ದಿಯನ್ನೂ ಓದಿ: Summer Health Tips: ಏರುತ್ತಿರುವ ತಾಪಮಾನದಲ್ಲಿ ತಂಪಾಗಿರುವುದು ಹೇಗೆ?

ಪೂರ್ವ ಸಿದ್ಧತೆ: ಹೋಳಿ ಹಬ್ಬಕ್ಕೆ ಒಂದು ವಾರ ಮೊದಲು ತ್ವಚೆಯನ್ನು ಲಘುವಾಗಿ ಎಕ್ಸ್‌ಫೋಲಿಯೇಟ್‌ ಮಾಡಿ. ಇದಕ್ಕಾಗಿ ಮಾರುಕಟ್ಟೆಯ ದುಬಾರಿ ವಸ್ತುಗಳನ್ನು ತರಬೇಕೆಂದಿಲ್ಲ. ಮನೆಯಲ್ಲೇ ಕಡಲೆಹಿಟ್ಟಿಗೆ ಮೊಸರು ಕಲೆಸಿ ಮುಖಕ್ಕೆ ನವಿರಾಗಿ ಮಸಾಜ್‌ ಮಾಡಬಹುದು. ಇದರಿಂದ ಮುಖದ ಮೇಲಿನ ನಿರ್ಜೀವ ಕೋಶಗಳನ್ನು ತೆಗೆಯಲು ಸಾಧ್ಯವಿದೆ. ಆ ನಂತರದ ನಿಮ್ಮ ಆರೈಕೆಯನ್ನು ಚರ್ಮ ಹೀರಿಕೊಳ್ಳಲು ಸುಲಭವಾಗುತ್ತದೆ. ಒಂದು ವಾರ ಮೊದಲಿನಿಂದಲೇ ಚರ್ಮಕ್ಕೆ ಬೇಕಾದ ತೇವವನ್ನು ಧಾರಾಳವಾಗಿ ನೀಡಿ. ಚೆನ್ನಾಗಿ ನೀರು ಕುಡಿಯಿರಿ. ಪರಿಮಳವಿಲ್ಲದ ಮೃದುವಾದ ಕ್ಲೆನ್ಸರ್‌ ಬಳಸಿ. ನಂತರ ಶುದ್ಧ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆಯಂಥ ತೈಲಗಳಿಂದ ವೃತ್ತಾಕಾರದಲ್ಲಿ ಚರ್ಮಕ್ಕೆ ಮಸಾಜ್‌ ಮಾಡಿ. ಸಾಮಾನ್ಯವಾಗಿ ಬಣ್ಣ ತಾಗುವಂಥ ದೇಹದ ಭಾಗಗಳಾದ ಕುತ್ತಿಗೆ, ಉಗುರು, ಕೈ, ತೋಳಿನಂಥ ಭಾಗಗಳಿಗೂ ಸಾಕಷ್ಟು ಮ್ಯಾಯಿಶ್ಚರೈಸರ್‌ ಹಚ್ಚಿ. ಹಬ್ಬಕ್ಕೆ ಒಂದೆರಡು ದಿನ ಮೊದಲು ಬಣ್ಣಕ್ಕೆ ತೆರೆದುಕೊಳ್ಳುವ ದೇಹದ ಭಾಗಗಳಿಗೆ ಸಾಕಷ್ಟು ತೈಲ ಲೇಪನ ಮಾಡಿ. ಇದರಿಂದ ಬಣ್ಣ ಮತ್ತು ನಿಮ್ಮ ಚರ್ಮದ ನಡುವೆ ರಕ್ಷಣಾ ಕವಚದಂತೆ ಈ ತೈಲದಂಶ ಕೆಲಸ ಮಾಡುತ್ತದೆ. ಅಂಟಿದ ಬಣ್ಣವನ್ನು ಸುಲಭವಾಗಿ ತೆಗೆಯುವುದಕ್ಕೆ ನೆರವಾಗುತ್ತದೆ.

ನಂತರ: ಮೈಮೇಲಿನ ಬಣ್ಣ ಒಣಗುವ ಮುನ್ನ ತೊಳೆಯಿರಿ. ಬೆಳಗಿನಿಂದ ಸಂಜೆಯವರೆಗೆ ಬಣ್ಣ ಬಳಿದುಕೊಂಡು ಊರು ಸುತ್ತುತ್ತಿದ್ದರೆ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಬಣ್ಣ ತೊಳೆಯುವಾಗ ಕಠೋರವಾದ ಸೋಪು, ಕ್ಲೆನ್ಸರ್‌ಗಳನ್ನು ಬಳಸಬೇಡಿ. ಆದಷ್ಟೂ ನೈಸರ್ಗಿಕ ವಸ್ತುಗಳಿಂದ ತಯಾರಾದ ಉತ್ಪನ್ನಗಳನ್ನೇ ಬಳಸಿ. ತೈಲಾಧಾರಿತ ಕ್ಲೆನ್ಸರ್‌ಗಳು ಈ ಹೊತ್ತಿನಲ್ಲಿ ಉಪಯುಕ್ತ. ಉಗುರು ಬಿಸಿ ನೀರಿನಲ್ಲೇ ಮುಖ ತೊಳೆಯಿರಿ. ಬಿಸಿ ನೀರನ್ನು ಉಪಯೋಗಿಸಿದರೆ ಚರ್ಮದ ನೈಸರ್ಗಿಕ ಎಣ್ಣೆಯಂಶ ಹೋಗಿ, ತ್ವಚೆ ಒಣಗಿ ಕೆಂಪಾಗಿ ಉರಿಯುತ್ತದೆ. ತೊಳೆದ ತಕ್ಷಣ ಕೊಬ್ಬರಿ ಎಣ್ಣೆ ಹಚ್ಚಿ.

Holi

ಹೆಚ್ಚಿನ ಕಾಳಜಿ: ಹ್ಯಾಲುರೋನಿಕ್‌ ಸೀರಂ ಬಳಸುವ ಅಭ್ಯಾಸವಿದ್ದರೆ, ಅದನ್ನು ಈಗ ಉಪಯೋಗಿಸುವುದು ಸೂಕ್ತ. ಕೇವಲ ಮ್ಯಾಯಿಶ್ಚರೈಸರ್‌ ಸಾಕು ಎನಿಸಿದರೆ, ಸೆರಮೈಡ್‌ಯುಕ್ತ ಕ್ರೀಮ್‌ ಬಳಸಿ. ಇದರಿಂದ ತ್ವಚೆಗೆ ಆಗಿರುವ ಹಾನಿಯನ್ನು ದುರಸ್ತಿ ಮಾಡುವುದಕ್ಕೆ ಅನುಕೂಲ. ಇಡೀ ದಿನ ಕನಿಷ್ಠ 3 ಲೀ. ನೀರು ಕುಡಿಯಲು ಮರೆಯಬೇಡಿ. ಅಲೋವೇರಾದಂಥ ನೈಸರ್ಗಿಕ ಉತ್ಪನ್ನಗಳಿರುವ ಪೋಷಣೆಯುಕ್ತ ಫೇಸ್‌ಮಾಸ್ಕ್‌ ಉಪಯೋಗಿಸುವುದು ಒಳ್ಳೆಯದು. ಬಣ್ಣ ತೊಳೆದ ಒಂದೆರಡು ತಾಸುಗಳಲ್ಲಿ ಇದನ್ನು ಬಳಸಬಹುದು. ಮನೆಯಲ್ಲೇ ನಿಮಗೆ ಬೇಕಾದ ಫೇಸ್‌ಪ್ಯಾಕ್‌ ಮಾಡಿಕೊಳ್ಳಲೂ ಬಹುದು. ಸೌತೇಕಾಯಿ, ಓಟ್‌ಮೀಲ್‌, ತೆಂಗಿನ ಹಾಲು ಮತ್ತು ಒಂದೆರಡು ಹನಿ ಜೇನುತುಪ್ಪ ಸೇರಿಸಿದ ಫೇಸ್‌ಮಾಸ್ಕ್‌ ಚರ್ಮಕ್ಕೆ ಅಗತ್ಯವಾದ ಸತ್ವಗಳನ್ನು ಒದಗಿಸುತ್ತದೆ. ಈ ಕ್ರಮಗಳನ್ನು ಅನುಸರಿಸಿದರೆ, ಓಕುಳಿ ಆಡಿದ್ದರಿಂದ ತ್ವಚೆ ಹಾಳಾಯಿತೆಂಬ ಕೊರಗಿಲ್ಲದಂತೆ ಸಂತೊಷದಿಂದ ಬಣ್ಣಗಳಲ್ಲಿ ಮಿಂದೇಳಬಹುದು.