ಮೈ ಸುಡುವ ಬೇಸಗೆಯಲ್ಲಿ ದೇಹ ತಂಪಾಗಿರಿಸಲು ಈ ಹುರಿದ ಹಿಟ್ಟುಗಳನ್ನು ಬಳಸಿ
Health Tips: ಬೇಸಗೆ ದಿನಗಳಲ್ಲಿ ಊಟ ಮಾಡುವುದೇ ಬೇಡ ಎನಿಸುವಾಗ, ಕುಡಿಯುವುದಕ್ಕೆ ಏನಾದರೂ ಇದ್ದೆ ಸಾಕು ಎನಿಸುವಾಗ ಇಂಥ ಹುರಿಹಿಟ್ಟುಗಳು ದೇಹಕ್ಕೆ ಚೈತನ್ಯ ನೀಡುತ್ತವೆ. ಇವನ್ನು ಅಂಬಲಿಯಂತೆ ಮಾಡಿ ಕುಡಿಯಬಹುದು. ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪುಗಳನ್ನು ಸೇರಿಸಿ ಮಸಾಲೆಯ ಘಮ ಬರಿಸಿಕೊಳ್ಳಬಹುದು; ಹಾಲು ಸೇರಿಸಿ ಸೇವಿಸಬಹುದು; ಮಜ್ಜಿಗೆ ಬೆರೆಸಿ ಕುಡಿಯ ಬಹುದು. ಬೇರೆ ವ್ಯಂಜನಗಳೊಂದಿಗೆ ಬೆರೆಸಿ ಖೀರಿನಂತೆ ಮಾಡಿದರೆ ರುಚಿ ಹೆಚ್ಚು. ಇದರಿಂದ ಬೇಸಗೆಯ ದಿನಗಳಲ್ಲಿ ದೇಹಕ್ಕೆ ಬೇಕಾದ ಸತ್ವಗಳು ಸುಲಭವಾಗಿ ದೊರೆತು ಪಚನಕ್ಕೆ ಕಷ್ಟವಾಗುವುದಿಲ್ಲ.
ಸಾಂದರ್ಭಿಕ ಚಿತ್ರ -
ನವದೆಹಲಿ, ಏ. 21: ಹುರಿದ ಹಿಟ್ಟುಗಳು ಅಥವಾ ಹುರಿಟ್ಟುಗಳು ನಮಗೆ ಹೊಸದೇನಲ್ಲ. ಧಾನ್ಯಗಳು, ಸಿರಿಧಾನ್ಯಗಳು, ಕಾಳುಗಳನ್ನು ತೊಳೆದು, ಮೊಳಕೆ ಬರಿಸಿ, ಅದನ್ನು ಹುರಿದು, ಹಿಟ್ಟು ಮಾಡ ಲಾಗುತ್ತದೆ. ಈ ಪೌಷ್ಟಿಕ ಪುಡಿಯನ್ನು ಹಲವು ರೀತಿಯಲ್ಲಿ ಉಪಯೋಗಿಸಬಹುದು. ಅದರಲ್ಲೂ ಬೇಸಿಗೆ ದಿನಗಳಲ್ಲಿ ಊಟ ಮಾಡುವುದೇ ಬೇಡ ಎನಿಸುವಾಗ, ಕುಡಿಯುವುದಕ್ಕೆ ಏನಾದರೂ ಇದ್ದೆ ಸಾಕು ಎನಿಸುವಾಗ ಇಂಥ ಹುರಿಹಿಟ್ಟುಗಳು ದೇಹಕ್ಕೆ ಚೈತನ್ಯ ನೀಡುತ್ತವೆ. ಇದನ್ನು ಅಂಬಲಿಯಂತೆ ಮಾಡಿ ಕುಡಿಯಬಹುದು; ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪುಗಳನ್ನು ಸೇರಿಸಿ ಮಸಾಲೆಯ ಘಮ ಬರಿಸಿಕೊಳ್ಳಬಹುದು; ಹಾಲು ಸೇರಿಸಿ ಸೇವಿಸಬಹುದು; ಮಜ್ಜಿಗೆ ಬೆರೆಸಿ ಕುಡಿಯಬಹುದು. ಬೇರೆ ವ್ಯಂಜನಗಳೊಂದಿಗೆ ಬೆರೆಸಿ ಖೀರಿನಂತೆ ಮಾಡಿದರೆ ರುಚಿ ಹೆಚ್ಚು. ಇದರಿಂದ ಬೇಸಿಗೆಯ ದಿನಗಳಲ್ಲಿ ದೇಹಕ್ಕೆ ಬೇಕಾದ ಸತ್ವಗಳು ಸುಲಭವಾಗಿ ದೊರೆತು ಪಚನಕ್ಕೆ ಕಷ್ಟವಾಗುವುದಿಲ್ಲ. ಏನು ಈ ಹುರಿಹಿಟ್ಟಿನ (Fried flours) ಲಾಭಗಳು?
ಹಲವು ಬಗೆ: ಈ ಹಿಟ್ಟಿನಲ್ಲೇ ಹಲವು ಬಗೆಗಳಿವೆ. ಆದರೆ ಜನಪ್ರಿಯವಾಗಿ ಬಳಕೆಯಲ್ಲಿರುವುದು ರಾಗಿ ಹುರಿಹಿಟ್ಟು. ಅದಲ್ಲದೆ, ಕಡಲೆ, ಹೆಸರು, ಹುರುಳಿ ಮುಂತಾದ ಕಾಳುಗಳು, ಗೋದಿ, ಜೋಳದಂಥ ಧಾನ್ಯಗಳು, ಚಿಯಾ, ಅಗಸೆಯಂಥ ಬೀಜಗಳು, ಬಾದಾಮಿ, ಗೋಡಂಬಿ ಮುಂತಾದ ಯಾವುದನ್ನೂ ಈ ಹಿಟ್ಟಿಗೆ ಹುರಿದು ಸೇರಿಸಿಕೊಳ್ಳಬಹುದು. ಇದರಿಂದ ಪೌಷ್ಟಿಕಾಂಶ ಮತ್ತು ರುಚಿ ಹೆಚ್ಚುತ್ತದೆ. ಯಾವುದೆಲ್ಲ ಪರಿಕರಗಳನ್ನು ಇದಕ್ಕೆ ಸೇರಿಸಲಾಗಿದೆ ಎನ್ನುವುದರ ಮೇಲೆ ಇದರ ಸತ್ವಗಳ ಏನೇನು ಎಂಬುದು ನಿರ್ಧಾರವಾಗುತ್ತದೆ.
ಸ್ನಾಯುಗಳಿಗೆ ಬೇಕು: ಈ ಹಿಟ್ಟಿನಲ್ಲಿ ಪ್ರೊಟೀನ್ ಸಾಂದ್ರವಾಗಿದೆ. ಚಿಕನ್, ಮೊಟ್ಟೆ, ಪನೀರ್‌ನಂಥ ಹೆಚ್ಚು ಕೊಬ್ಬಿರುವ ಆಹಾರಗಳು ಕೆಲವೊಮ್ಮೆ ಬಿರುಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ. ಹಾಗೆಂದು ಪ್ರೊಟೀನ್ ಕಡಿಮೆಯಾದರೆ ದೇಹ ಸೊರಗುವುದು ಖಚಿತ. ಬದಲಿಗೆ, ಪ್ರೊಟಿನ್ಭರಿತವಾದ ಇಂಥ ಲಘು ಆಹಾರದ ಆಯ್ಕೆಗಳು ಬೇಸಿಗೆಗೆ ಸೂಕ್ತವಾದವು. ಇವು ದೇಹಕ್ಕೆ ಬೇಕಾದ ಪುಷ್ಟಿಯನ್ನು ನೀಡಿ, ದಿನವಿಡೀ ಚೈತನ್ಯಪೂರ್ಣವಾಗಿ ಇರುವಂತೆ ನೋಡಿಕೊಳ್ಳುತ್ತವೆ.
ಪಚನಕಾರಿ: ಧಾನ್ಯ, ಕಾಳುಗಳ ತೌಡಿನ ಜೊತೆಗೇ ಮಾಡಿರುವಂಥ ಪುಡಿಯಿದು. ಹಾಗಾಗಿ ಇದರಲ್ಲಿ ನಾರಿನಂಶವೂ ಹೇರಳ ವಾಗಿರುತ್ತದೆ. ಇದರಿಂದ ಜೀರ್ಣಾಂಗಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಈ ಮೂಲಕ ಸತ್ವಗಳ ಹೀರಿಕೊಳ್ಳುವಿಕೆ ಸಹ ಹೆಚ್ಚುತ್ತದೆ. ಜೊತೆಗೆ ಅಧಿಕ ನಾರಿನಂಶದ ಆಹಾರದಿಂದ ಮಲಬದ್ಧತೆಯೂ ದೂರಾಗುತ್ತದೆ.
ಮಧುಮೇಹಿಗಳಿಗೆ ಸೂಕ್ತ: ಹುರಿಹಿಟ್ಟುಗಳ ಗ್ಲೈಸೆಮಿಕ್ ಸೂಚಿ ಕಡಿಮೆ. ಜೊತೆಗೆ ನಾರು, ಪ್ರೊಟೀನ್ ಮತ್ತು ಸಂಕೀರ್ಣ ಪಿಷ್ಟಗಳಿರುವ ಆಹಾರಗಳು ಮಧುಮೇಹಿಗಳಿಗೆ ಒಳ್ಳೆಯದು. ಇದರಿಂದ ರಕ್ತದಲ್ಲಿ ಸಕ್ಕರೆಯಂಶ ದಿಢೀರ್ ಏರಿಕೆ ಆಗುವುದನ್ನು ತಡೆಯಬಹುದು. ಹುರಿಹಿಟ್ಟುಗಳಲ್ಲಿ ರಾಗಿ, ಜೋಳ ಮುಂತಾದ ಸಿರಿಧಾನ್ಯಗಳ ಪ್ರಮಾಣವನ್ನು ಹೆಚ್ಚಿಸಿದರೆ, ಅದನ್ನು ಪ್ರಮುಖ ಆಹಾರವಾಗಿಯೂ ಮಧುಮೇಹಿಗಳು ಬಳಸಬಹುದು.
ಹೃದಯದ ಮಿತ್ರ: ಇದರಲ್ಲಿರುವ ಕರಗಬಲ್ಲ ನಾರಿನಂಶವು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಜೊತೆಗೆ, ಮೆಗ್ನೀಶಿಯಂ, ಪೊಟಾಶಿಯಂನಂಥ ಖನಿಜಗಳು ರಕ್ತದೊತ್ತಡ ಕಡಿಮೆ ಮಾಡುವಲ್ಲಿ ನೆರವಾಗುತ್ತವೆ. ದೇಹದಲ್ಲಿರುವ ಅಧಿಕ ಕೊಬ್ಬಿನಂಶವನ್ನು ಕರಗಿಸಿ, ರಕ್ತದೊತ್ತಡವನ್ನೂ ನಿಯಂತ್ರಿಸಲು ನೆರವಾಗುವ ಮೂಲಕ, ಈ ಹಿಟ್ಟು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಬೇಸಗೆಯಲ್ಲಿ ಮೂಗಿನಲ್ಲಿ ರಕ್ತ ಬರುವುದೇಕೆ? ಇದಕ್ಕೇನು ಪರಿಹಾರ?
ಕೂದಲು, ಚರ್ಮಕ್ಕೆ: ಹುರಿಟ್ಟುಗಳು ಚರ್ಮ ಮತ್ತು ಕೂದಲಿನ ಆರೋಗ್ಯ ರಕ್ಷಣೆಯಲ್ಲಿ ಬಹಳಷ್ಟು ಸಹಾಯ ಮಾಡಬಲ್ಲವು. ಕಬ್ಬಿಣ ಮತ್ತು ಮೆಗ್ನೀಶಿಯಂ ಹೇರಳವಾಗಿರುವ ಇವು ಅನೀಮಿಯ ಕಡಿಮೆ ಮಾಡಿ, ಚರ್ಮದ ಕಾಂತಿ ಹೆಚ್ಚಿಸುವ ಸಾಮರ್ಥ್ಯ ಹೊಂದಿವೆ. ಇದರಲ್ಲಿರುವ ಪ್ರೊಟೀನ್ ಮತ್ತು ಖನಿಜಗಳ ಸಾಂದ್ರತೆಯಿಂದಾಗಿ, ಕೂದಲು ದುರ್ಬಲ ಆಗುವುದನ್ನು ತಡೆದು, ಕೂದಲಿನ ಹೊಳಪನ್ನು ವೃದ್ಧಿಸುತ್ತದೆ.
ತೂಕ ಇಳಿಕೆ: ಪ್ರೊಟೀನ್ ಮತ್ತು ನಾರು ಹೆಚ್ಚಿರುವ ಆಹಾರಗಳು ತೂಕ ಇಳಿಕೆಗೆ ಪೂರಕವಾದವು. ಇವುಗಳ ಜೊತೆಗೆ ಸರಳ ಪಿಷ್ಟದ ಆಹಾರದ ಬದಲಿಗೆ, ಸಂಕೀರ್ಣ ಪಿಷ್ಟವಿರುವ ಆಹಾರ ಬೇಕು. ಅವೆಲ್ಲವೂ ಹುರಿಹಿಟ್ಟಿನಲ್ಲಿ ಲಭ್ಯವಿದೆ. ಈ ಎಲ್ಲ ಅಂಶಗಳು ವಿಘಟನೆಗೊಂದು ರಕ್ತ ಸೇರಲು ಹೆಚ್ಚು ಕಾಲ ತೆಗೆದುಕೊಳ್ಳುತ್ತವೆ. ಅಂದರೆ ಬೇಗ ಹಸಿವಾಗುವುದಿಲ್ಲ. ಹೆಚ್ಚು ಆಹಾರ ತಿನ್ನದಿದ್ದರೂ, ದೀರ್ಘ ಸಮಯದವರೆಗೆ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತವೆ.